ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಕೊಲೆ ಆರೋಪಿ ನಟ ದರ್ಶನ್, ಕುಖ್ಯಾತ ರೌಡಿ ಶೀಟರ್‌ಗಳ ಜತೆಗೆ ಕುರ್ಚಿಯಲ್ಲಿ ಕುಳಿತು ಸಿಗರೇಟ್ ಸೇವಿಸುತ್ತಾ ಹರಟುವ ಫೋಟೋವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದ ವ್ಯಕ್ತಿ ರೌಡಿ ಶೀಟರ್ ವೇಲು ಎಂದು ಗುರುತಿಸಲಾಗಿದೆ.
ಬೆಂಗಳೂರು (ಆ.28): ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಕೊಲೆ ಆರೋಪಿ ನಟ ದರ್ಶನ್, ಕುಖ್ಯಾತ ರೌಡಿ ಶೀಟರ್‌ಗಳ ಜತೆಗೆ ಕುರ್ಚಿಯಲ್ಲಿ ಕುಳಿತು ಸಿಗರೇಟ್ ಸೇವಿಸುತ್ತಾ ಹರಟುವ ಫೋಟೋವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದ ವ್ಯಕ್ತಿ ರೌಡಿ ಶೀಟರ್ ವೇಲು ಎಂದು ಗುರುತಿಸಲಾಗಿದೆ. ಈ ವೇಲು ರೌಡಿ ವಿಲ್ಸನ್ ಗಾರ್ಡನ್ ನಾಗನ ಸಹಚರ ಎನ್ನಲಾಗಿದೆ. ಸದ್ಯ ವೇಲು ಸಹ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿದ್ದಾನೆ.
ಇದೇ ತಿಂಗಳ 22ರಂದು ಸಂಜೆ ಕೊಲೆ ಆರೋಪಿ ನಟ ದರ್ಶನ್, ಸಹಚರ ನಾಗರಾಜ್, ರೌಡಿ ಶೀಟರ್‌ಗಳಾದ ವಿಲ್ಸನ್ ಗಾರ್ಡನ್ ನಾಗ ಹಾಗೂ ರೌಡಿ ಕುಳ್ಳ ಸೀನ ಈ ನಾಲ್ವರು ಕಾರಾಗೃಹದ ಆವರಣದಲ್ಲಿ ಕುರ್ಚಿಯಲ್ಲಿ ಕುಳಿತು ಹರಟುತ್ತಿದ್ದರು. ಈ ವೇಳೆ ದರ್ಶನ್ ಒಂದು ಕೈಯಲ್ಲಿ ಸಿಗರೇಟ್ ಮತ್ತೊಂದು ಕೈಯಲ್ಲಿ ಟೀ ಕಪ್ ಹಿಡಿದುಕೊಂಡು ಚರ್ಚೆಯಲ್ಲಿ ತೊಡಗಿದ್ದರು.
ಈ ವೇಳೆ ರೌಡಿ ವೇಲು ಮೊಬೈಲ್‌ನಲ್ಲಿ ಫೋಟೋ ತೆಗೆದು, ತನ್ನ ಪತ್ನಿಗೆ ವಾಟ್ಸಾಪ್‌ನಲ್ಲಿ ಕಳುಹಿಸಿದ್ದ. ಡಿ ಬಾಸ್ ದರ್ಶನ್ ಅವರು ನಮ್ಮ ಬಾಸ್ ವಿಲ್ಸನ್ ಗಾರ್ಡನ್ ನಾಗ ಅವರನ್ನು ಭೇಟಿಯಾಗಿದ್ದಾರೆ ಎಂದು ತಿಳಿಸಿದ್ದ. ಬಳಿಕ ಆತನ ಪತ್ನಿಯಿಂದ ಫೋಟೋ ಬೇರೆಯವರಿಗೆ ಹಂಚಿಕೆಯಾಗಿ ವೈರಲ್ ಆಗಿದೆ ಎಂದು ತಿಳಿದು ಬಂದಿದೆ. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ದರ್ಶನ್‌ಗೆ ರಾಜಾತಿಥ್ಯದಿಂದ ಶಾಕ್ ಆಗಿದೆ: ಕೊಲೆ ಆರೋಪಿ ದರ್ಶನ್ ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡುತ್ತಿರುವ ಸಂಗತಿ ಕೇಳಿ ನನಗೆ ಭಯಂಕರ ಶಾಕ್ ಆಗಿದೆ ಎಂದು ಮೃತ ರೇಣುಕಾಸ್ವಾಮಿಯ ತಂದೆ ಕಾಶಿನಾಥಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಆತ ಜೈಲಿನಲ್ಲಿದ್ದಾನೋ, ರೆಸಾರ್ಟ್‌ನಲ್ಲಿದ್ದಾನೋ ಎಂಬುದೇ ಅರ್ಥ ಆಗುತ್ತಿಲ್ಲ. ದರ್ಶನ್ ಕುಳಿತ ಸ್ಟೈಲ್, ಸಿಗರೇಟ್ ಹಿಡಿದಿದ್ದನ್ನು ನೋಡಿ ನೋವುಂಟಾಗಿದೆ. ಟೇಬಲ್ ಇಟ್ಟುಕೊಂಡು ಚರ್ಚೆ ಮಾಡುತ್ತಿರುವುದು ಆಕ್ರೋಶ ತರಿಸಿದೆ. ಎಲ್ಲಿ ಲೋಪ ಆಗಿದೆ ಎಂಬುದು ಅರ್ಥ ಆಗುತ್ತಿಲ್ಲ. ಸರ್ಕಾರ, ನ್ಯಾಯಾಂಗ, ಪೊಲೀಸರನ್ನು ನಂಬಿದ್ದೇವೆ. ಈ ಘಟನೆಯಿಂದ ನಮಗೆ ತುಂಬಾ ನೋವಾಗಿದೆ. ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳಿಂದ ಈ ತನಿಖೆ ಆಗಲಿ ಎಂದು ಅವರು ಆಗ್ರಹಿಸಿದರು.