ಕೆವೈಸಿ ಅಪ್‌ಡೇಟ್‌ಗಾಗಿ ಪ್ಯಾನ್ ಕಾರ್ಡ್ ಅಪ್‌ಡೇಟ್ ಮಾಡುವಂತೆ ಬಂದಿದ್ದ ಸಂದೇಶ ನಂಬಿ ವ್ಯಕ್ತಿಯೊಬ್ಬರು 2.21 ಲಕ್ಷ ಕಳೆದುಕೊಂಡಿದ್ದಾರೆ. ರಿಚ್ಮಂಡ್‌ಟೌನ್ ನಿವಾಸಿ ಪಾಲ್ ರೊಸಾರಿಯೋ ರೋಡ್ರಿಗ್ರಸ್ (83) ಹಣ ಕಳೆದುಕೊಂಡವರು.
ಬೆಂಗಳೂರು (ಸೆ.30): ಕೆವೈಸಿ ಅಪ್‌ಡೇಟ್‌ಗಾಗಿ ಪ್ಯಾನ್ ಕಾರ್ಡ್ ಅಪ್‌ಡೇಟ್ ಮಾಡುವಂತೆ ಬಂದಿದ್ದ ಸಂದೇಶ ನಂಬಿ ವ್ಯಕ್ತಿಯೊಬ್ಬರು 2.21 ಲಕ್ಷ ಕಳೆದುಕೊಂಡಿದ್ದಾರೆ. ರಿಚ್ಮಂಡ್‌ಟೌನ್ ನಿವಾಸಿ ಪಾಲ್ ರೊಸಾರಿಯೋ ರೋಡ್ರಿಗ್ರಸ್ (83) ಹಣ ಕಳೆದುಕೊಂಡವರು. ಇತ್ತೀಚೆಗೆ ಅಪರಿಚಿತ ವ್ಯಕ್ತಿಯ ಮೊಬೈಲ್‌ನಿಂದ ಕೆವೈಸಿ ಅಪ್‌ಡೇಟ್‌ಗಾಗಿ ಪ್ಯಾನ್ ಕಾರ್ಡ್ ಅಪ್‌ಡೇಟ್ ಮಾಡಿ ಎಂಬ ಮೆಸೇಜ್ ಬಂದಿದೆ.
ಈ ಮೆಸೇಜ್‌ನಲ್ಲಿ ನೀಡಿದ್ದ ಲಿಂಕ್ ಬಳಸಿ ಪಾಲ್ ಪ್ಯಾನ್ ಕಾರ್ಡ್ ಅಪ್‌ಡೇಟ್‌ಗಾಗಿ ಒಟಿಪಿ ನಮೂದಿಸಿದ್ದಾರೆ. ಈ ವೇಳೆ ಅವರ ಎಸ್‌ಬಿಐ ಬ್ಯಾಂಕ್ ಖಾತೆಯಲ್ಲಿದ್ದ 2.21 ಲಕ್ಷ ಕಡಿತವಾಗಿದೆ. ಈ ವೇಳೆ ಸೈಬರ್ ವಂಚನೆಗೆ ಒಳಗಾಗಿರುವುದು ಅರಿವಿಗೆ ಬಂದಿದೆ. ಬಳಿಕ ಕೇಂದ್ರ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಸೈಬರ್ ಕ್ರೈಂ ಪೊಲೀಸರು, ವಂಚಕನ ಬಂಧನಕ್ಕೆ ಬಲೆ ಬೀಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಲಿಕಾನ್ ಸಿಟಿಯ 5 ಪಿಎಫ್‌ಐ ಕಚೇರಿಗಳಿಗೆ ಖಾಕಿ ಬೀಗ: ಆಯುಕ್ತರ ಆದೇಶದಂತೆ ಕಾರ್ಯಾಚರಣೆ
ನೌಕರಿ ಡಾಟ್ ಕಾಂ ಹೆಸರಿನಲ್ಲಿ ದೋಖಾ: ಮತ್ತೊಂದು ಪ್ರಕರಣದಲ್ಲಿ ಕೆಲಸಕ್ಕೆ ಆಯ್ಕೆಯಾಗಿದ್ದೀರಿ ಎಂದು ಯುವತಿಯನ್ನು ನಂಬಿಸಿ ಭದ್ರತಾ ಠೇವಣಿ ಹೆಸರಿನಲ್ಲಿ 1.17 ಲಕ್ಷ ಪಡೆದು ವಂಚಿಸಿರುವ ಸಂಬಂಧ ಕೇಂದ್ರ ಸೈಬರ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಅಶೋಕ ನಗರದ ಜೆ.ಕಲ್ಯಾಣಿ ಹಣ ಕಳೆದುಕೊಂಡವರು. ವ್ಯಾಸಂಗ ಮುಗಿಸಿ ಕೆಲಸಕ್ಕಾಗಿ ಹುಡುಕಾಡುತ್ತಿದ್ದ ಕಲ್ಯಾಣಿ, ನೌಕರಿ ಡಾಟ್ ಕಾಮ್‌ನಲ್ಲಿ ಕೆಲಸಕ್ಕೆ ನೋಂದಣಿ ಮಾಡಿಕೊಂಡಿದ್ದರು. ಇತ್ತೀಚೆಗೆ ಅಪರಿಚಿತ ವ್ಯಕ್ತಿಯ ಮೊಬೈಲ್ ಸಂಖ್ಯೆಯಿಂದ ಕರೆ ಬಂದಿದ್ದು, ‘ನೌಕರಿ ಡಾಟ್ ಕಾಮ್‌ನಿಂದ ಕರೆ ಮಾಡುತ್ತಿದ್ದೇವೆ. ನೀವು ಕೆಲಸಕ್ಕೆ ಆಯ್ಕೆಯಾಗಿದ್ದೀರಿ. ಭದ್ರತಾ ಠೇವಣಿಗೆ ಕೊಂಚ ಹಣ ಪಾವತಿಸಬೇಕು’ ಎಂದು ಅಪರಿಚಿತ ವ್ಯಕ್ತಿ ಹೇಳಿದ್ದಾನೆ.
ಈ ಮಾತನು ನಂಬಿದ ಕಲ್ಯಾಣಿ ಅಪರಿಚಿತ ನೀಡಿದ ಬ್ಯಾಂಕ್ ಖಾತೆಗೆ 1.17 ಲಕ್ಷ ವರ್ಗಾಯಿಸಿದ್ದಾರೆ. ಹಣ ವರ್ಗಾವಣೆ ಬಳಿಕ ಆ ಅಪರಿಚಿತ ವ್ಯಕ್ತಿ ಕಲ್ಯಾಣಿ ಅವರ ಕರೆ ಸ್ವೀಕರಿಸದೆ ಸ್ಥಗಿತಗೊಳಿಸಿದ್ದಾನೆ. ಹತ್ತಾರು ಬಾರಿ ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ವೇಳೆ ತಾನು ಸೈಬರ್ ವಂಚನೆಗೆ ಒಳಗಾಗಿರುವುದು ಕಲ್ಯಾಣಿಗೆ ಗೊತ್ತಾಗಿದೆ. ಈ ಸಂಬಂಧ ಕೇಂದ್ರ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ. ಈ ದೂರು ಆಧರಿಸಿ ವಂಚಕನ ಪತ್ತೆಗೆ ಪ್ರಯತ್ನಿಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಸೊಸೈಟಿ ಸಿಇಒ 60 ಲಕ್ಷ ವಂಚನೆ: ಹೂಡಿಕೆದಾರರಿಗೆ ಹಣ ಮರುಪಾವತಿಸಲು ಸಾಧ್ಯವಾಗದೇ ಮನನೊಂದು ಕಾಮಧೇನು ಕ್ರೆಡಿಟ್ ಕೋ ಆಪರೇಟೀವ್ ಸೊಸೈಟಿಯ ಅಧ್ಯಕ್ಷ ಮರಣಪತ್ರ ಬರೆದಿಟ್ಟು ಕಚೇರಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೊಮ್ಮನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬೊಮ್ಮನಹಳ್ಳಿ ಹಳೇ ಕೆಇಬಿ ರಸ್ತೆ ಬಿಬಿಎಂಪಿ ಕಚೇರಿ ಹಿಂಭಾಗ ಕಾಮಧೇನು ಕ್ರೆಡಿಟ್ ಕೋ ಆಪರೇಟೀವ್ ಸೊಸೈಟಿಯ ಅಧ್ಯಕ್ಷ ಬಿ.ಎಂ.ರಾಮಕೃಷ್ಣ(55) ಆತ್ಮಹತ್ಯೆಗೆ ಶರಣಾದ ದುರ್ದೈವಿ. ಕಳೆದ ಭಾನುವಾರ ಈ ದುರ್ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಐದು ವರ್ಷದ ಹಿಂದೆ ಕಾಮಧೇನು ಕ್ರೆಡಿಟ್ ಕೋ ಆಪರೇಟೀವ್ ಸೊಸೈಟಿ ತೆರೆಯಲಾಗಿತ್ತು. ಈ ಸೊಸೈಟಿಗೆ ಬಿ.ಎಂ.ರಾಮಕೃಷ್ಣ ಅಧ್ಯಕ್ಷರಾಗಿದ್ದರು. ಕಳೆದ ಭಾನುವಾರ ಕಚೇರಿಗೆ ರಜೆಯಿದ್ದ ಹಿನ್ನೆಲೆಯಲ್ಲಿ ಕಚೇರಿಗೆ ಬಂದಿರುವ ರಾಮಕೃಷ್ಣ ಅವರು ಸೀಲಿಂಗ್ ಫ್ಯಾನ್‌ಗೆ ಹಗ್ಗ ಕಟ್ಟಿಕೊಂಡು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾರನೇ ದಿನ ಸೋಮವಾರ ಈ ಘಟನೆ ಬೆಳಕಿಗೆ ಬಂದಿದೆ.
ಹಬ್ಬದ ಸಂದರ್ಭದಲ್ಲಿ ದುಪ್ಪಟ್ಟು ದರ ಕೇಳಿದರೆ ಬಸ್ ಪರ್ಮಿಟ್ ರದ್ದು..!
ಘಟನಾ ಸ್ಥಳದಲ್ಲಿ ಮರಣಪತ್ರ ಸಿಕ್ಕಿದೆ. ಸಂಸ್ಥೆಯ ಹಿಂದಿನ ಸಿಇಒ ಗಂಗಾಧರ್, ಮ್ಯಾನೇಜರ್ ನರೇಶ್ ಹಾಗೂ ಪಿಗ್ಮಿ ವಸೂಲಿ ಮಾಡುತ್ತಿದ್ದ ಯೋಗೇಶ್ ಸೇರಿಕೊಂಡು ಸಂಸ್ಥೆಗೆ ಸೇರಿದ .60 ಲಕ್ಷ ನಷ್ಟವುಂಟು ಮಾಡಿದ್ದಾರೆ. ಸಾಲಗಳು ವಸೂಲಿಯಾಗದೆ, ಹೂಡಿಕೆದಾರರಿಗೆ ಹಣ ಮರುಪಾವತಿ ಮಾಡಲು ಸಾಧ್ಯವಾಗದೇ ಹೂಡಿಕೆದಾರರಿಗೆ ಮೋಸವಾಗಿದೆ. ನನ್ನ ಆತ್ಮಹತ್ಯೆಗೆ ಗಂಗಾಧರ್, ನರೇಶ್ ಮತ್ತು ಯೋಗೇಶ್ ಕಾರಣ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೂವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಮೂವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.