ನಾದಿನಿ ಮೇಲಿನ ಮೋಹಕ್ಕೆ ಆಕೆ ಪತಿಯ ಕೊಲೆ ಮಾಡಿಸಿದ!

By Kannadaprabha News  |  First Published Feb 20, 2020, 7:48 AM IST

ಟೆಕಿಯ ಹತ್ಯೆಗೆ ಷಡ್ಡಕನಿಂದಲೇ ಸುಪಾರಿ!| ನಾದಿನಿ ಮೇಲಿನ ಮೋಹಕ್ಕೆ ಆಕೆ ಪತಿಯ ಕೊಲೆ ಮಾಡಿಸಿದ, 9 ಮಂದಿಯ ಬಂಧನ


ಬೆಂಗಳೂರು[ಫೆ.20]: ಇತ್ತೀಚೆಗೆ ನಡೆದಿದ್ದ ಸಾಫ್ಟ್‌ವೇರ್‌ ಉದ್ಯೋಗಿ ಲಕ್ಷ್ಮಣ್‌ ಕುಮಾರ್‌ ಕೊಲೆ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿರುವ ಮಹದೇವಪುರ ಠಾಣೆ ಪೊಲೀಸರು, ಮೃತನ ಷಡ್ಡಕ ಹಾಗೂ ಮಹಿಳೆ ಸೇರಿದಂತೆ ಒಂಭತ್ತು ಮಂದಿ ಸುಪಾರಿ ಹಂತಕರನ್ನು ಬಂಧಿಸಿದ್ದಾರೆ.

ತನ್ನ ನಾದಿನಿ ಓಲೈಸಿಕೊಳ್ಳಲು ಹೈದರಾಬಾದ್‌ ಮೂಲದ ಸಾಫ್ಟ್‌ವೇರ್‌ ಉದ್ಯೋಗಿ ಸತ್ಯಪ್ರಸಾದ್‌ ವೆಂಕಟರಂಗ ನುನೆ ಅಲಿಯಾಸ್‌ ಸತ್ಯ, .15 ಲಕ್ಷಕ್ಕೆ ತನ್ನ ಷಡ್ಡಕ ಲಕ್ಷ್ಮಣ್‌ನ ಹತ್ಯೆಗೆ ಸುಪಾರಿ ನೀಡಿದ್ದ ಸ್ಫೋಟಕ ಸಂಗತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

Tap to resize

Latest Videos

ಹೊಸಕೋಟೆ ತಾಲೂಕಿನ ಗಿಡ್ಡಪ್ಪನಹಳ್ಳಿ ಎನ್‌.ದಿನೇಶ್‌, ಪತ್ನಿ ಸಯೀದಾ ಅಲಿಯಾಸ್‌ ಸವಿತಾ ಹಾಗೂ ಸುಪಾರಿ ಹಂತಕರಾದ ಹಳೇ ಬೈಯಪ್ಪನಹಳ್ಳಿ ನಿವಾಸಿ ಜಿ.ಪ್ರಶಾಂತ್‌ ಅಲಿಯಾಸ್‌ ಪಪ್ಪಿ, ಕಗ್ಗದಾಸಪುರದ ಜಿ.ಪ್ರೇಮ್‌ ಕುಮಾರ್‌, ಶಿಡ್ಲಘಟ್ಟತಾಲೂಕಿನ ಕಲ್ಯಾಪುರದ ಲೋಕೇಶ್‌, ಕಗ್ಗದಾಸಪುರದ ಕುಶಾಂತ್‌ ಕುಮಾರ್‌, ಸಂತೋಷ್‌ ಹಾಗೂ ಮಲ್ಲೇಶನಪಾಳ್ಯದ ರವಿ ಬಂಧಿತರಾಗಿದ್ದಾರೆ. ತಪ್ಪಿಸಿಕೊಂಡಿರುವ ಮತ್ತೊಬ್ಬ ಆರೋಪಿ ಭರತ್‌ಗೆ ಹುಡುಕಾಟ ನಡೆದಿದ್ದು, ಆರೋಪಿಗಳಿಂದ 3 ಕಾರು, ಸ್ಕೂಟರ್‌ ಹಾಗೂ ಚಾಕು ಸೇರಿದಂತೆ ಇನ್ನಿತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಮಹದೇವಪುರದ ರಿಂಗ್‌ ರೋಡ್‌ನಲ್ಲಿ ಫೆ.3ರಂದು ಬೆಳಗ್ಗೆ ಕೆಲಸಕ್ಕೆ ತೆರಳುತ್ತಿದ್ದ ಲಕ್ಷ್ಮಣ್‌ ಅವರನ್ನು ಅಡ್ಡಗಟ್ಟಿಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಂದು ದುಷ್ಕರ್ಮಿಗಳು ಪರಾರಿಯಾಗಿದ್ದರು. ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಇನ್‌ಸ್ಪೆಕ್ಟರ್‌ ಬಿ.ಎನ್‌.ಅಶ್ವತ್ಥ ನಾರಾಯಣಸ್ವಾಮಿ ತಂಡವು, ಪ್ರತ್ಯಕ್ಷದರ್ಶಿಗಳ ನೀಡಿದ ಹೇಳಿಕೆ ಹಾಗೂ ಮೊಬೈಲ್‌ ಕರೆಗಳ ಮೂಲಕ ಹಂತಕರನ್ನು ಸೆರೆ ಹಿಡಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಂಧ್ರಪ್ರದೇಶದ ನಲ್ಲೂರಿನ ಸತ್ಯ ಹಾಗೂ ಗುಂಟೂರಿನ ಲಕ್ಷ್ಮಣ್‌ ಸಾಫ್ಟ್‌ವೇರ್‌ ಉದ್ಯೋಗಿಗಳಾಗಿದ್ದು, ಅಕ್ಕ-ತಂಗಿಯನ್ನು ವಿವಾಹವಾಗಿದ್ದರು. 2008ರಲ್ಲಿ ವಿವಾಹವಾದ ಆತ, ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳ ಜತೆ ವಾಸವಾಗಿದ್ದ. ಮದುವೆ ನಂತರ ತನ್ನ ಕಿರಿಯ ನಾದಿನಿ ಮೇಲೆ ಮೋಹಿತನಾಗಿದ್ದ ಸತ್ಯ, ಆಕೆಯ ಬಳಿ ಒಂದು ಬಾರಿ ತನ್ನ ಪ್ರೇಮವನ್ನು ನಿವೇದನೆ ಮಾಡಿಕೊಂಡಿದ್ದ. ಆದರೆ ಇದಕ್ಕೆ ಪತ್ನಿ ಮತ್ತು ನಾದಿನಿಯಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು. 2016ರಲ್ಲಿ ಕುಟುಂಬದವರ ಇಚ್ಛೆಯಂತೆ ಲಕ್ಷ್ಮಣ್‌ ಜತೆ ಸತ್ಯನ ನಾದಿನಿ ಶ್ರೀಜಾಳ ವಿವಾಹವಾಯಿತು.

ಬೆಳ್ಳಂದೂರು ಸಮೀಪ ಸಾಫ್ಟ್‌ವೇರ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಲಕ್ಷ್ಮಣ್‌, ಮದುವೆ ಬಳಿಕ ಹೊರಮಾವಿನಲ್ಲಿ ಪತ್ನಿ ಜತೆ ನೆಲೆಸಿದ್ದರು. ಈ ದಂಪತಿಗೆ ಆರು ತಿಂಗಳ ಹೆಣ್ಣು ಮಗುವಿದೆ. ನಾದಿನಿ ಮದುವೆಯಾದ ಬಳಿಕವು ಸತ್ಯನಿಗೆ ಆಕೆಯಡೆಗಿನ ಸೆಳೆತ ಮಾತ್ರ ಕ್ಷಿಣಸಲಿಲ್ಲ. ತನ್ನ ಷಡ್ಡಕನನ್ನು ಕೊಂದರೆ ನನ್ನಲ್ಲಿಗೆ ನಾದಿನಿ ಆಶ್ರಯ ಬಯಸಿ ಬರುತ್ತಾಳೆ ಎಂದು ಭಾವಿಸಿದ್ದ. ಆಗ ಆತನಿಗೆ ಹೈದರಾಬಾದ್‌ನಲ್ಲಿ ಕಾರು ಚಾಲಕನಾಗಿದ್ದ ದಿನೇಶ್‌ ಸಾಥ್‌ ಕೊಟ್ಟಿದ್ದಾನೆ.

ಲಕ್ಷ್ಮಣ್‌ ಹತ್ಯೆಗೆ 15 ಲಕ್ಷ ಮತ್ತು ಹೈದರಾಬಾದ್‌ನಲ್ಲಿ ಮನೆ ಕೊಡಿಸುವುದಾಗಿ ದಿನೇಶ್‌ಗೆ ಸತ್ಯ ಹೇಳಿದ್ದ. ಈ ಕೊಲೆ ಸಂಬಂಧ ತನ್ನ ಸೋದರ ಸಂಬಂಧಿ ಕುಶಾಂತ್‌ ಜತೆ ಚರ್ಚಿಸಿದ ದಿನೇಶ್‌, ಆತನ ಮೂಲಕ ಸುಪಾರಿ ಹಂತಕ ಪ್ರಶಾಂತ್‌ ಸಂಪರ್ಕಕ್ಕೆ ಬಂದ.

ಎರಡು ಬಾರಿ ಲಕ್ಷ್ಮಣ್‌ ಕೊಲೆಗೆ ಯತ್ನಿಸಿದರೂ ಆರೋಪಿಗಳು ಯಶಸ್ಸು ಕಾಣಲಿಲ್ಲ. ಕೊನೆಗೆ ಫೆ.3 ರಂದು ಅವರ ಸಂಚು ಕಾರ್ಯರೂಪಕ್ಕಿಳಿಯಿತು.

ವಾಟ್ಸಪ್‌ ಕಾಲ್‌, ಆನ್‌ಲೈನ್‌ ಹಣ

ಈ ಕೊಲೆ ಪ್ರಕರಣದಲ್ಲಿ ಆರೋಪಿಗಳ ಜತೆ ಸತ್ಯ ನಿರಂತರವಾಗಿ ವಾಟ್ಸಪ್‌ನಲ್ಲಿ ಸಂದೇಶ ವಿನಿಮಿಯ ಮಾಡಿಕೊಂಡಿದ್ದ. ಮೊಬೈಲ್‌ನಲ್ಲಿದ್ದ ಒಂದು ವರ್ಷದ ಮೆಸೇಜ್‌ಗಳು, ಕಾಲ್‌ ವಿವರಗಳು ಸಿಕ್ಕಿವೆ. ಅಲ್ಲದೆ, ಆನ್‌ಲೈನ್‌ನಲ್ಲೇ ಹಣ ವರ್ಗಾವಣೆ ನಡೆದಿತ್ತು. ಈ ಆರೋಪಿಗಳ ಪೈಕಿ ಬಹೇತಕರು ಆಟೋ ಚಾಲಕರಾಗಿದ್ದು, ಹಣದಾಸೆಗೆ ಈ ಕೃತ್ಯ ಎಸಗಿದ್ದಾರೆ. ಇದರಲ್ಲಿ ಲೋಕೇಶ್‌ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

click me!