ಹುಬ್ಬಳ್ಳಿಯಿಂದ ಗುರುರಾಜ ಹೂಗಾರ ಏಷ್ಯಾನೆಟ್ ಸುವರ್ಣ ನ್ಯೂಸ್.
ಹುಬ್ಬಳ್ಳಿ (ಡಿ.16) : ಬೇಸಗೆ ಕಾಲಕ್ಕೂ ಮುನ್ನವೇ ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಜನರು ಕುಡಿಯುವ ನೀರಿಗೆ ಪರಿತಪಿಸುವಂತಾಗಿದೆ. ಸಮರ್ಪಕವಾಗಿ ನೀರು ಪೂರೈಸಿ ಎಂದು ಜನರು ದಿನನಿತ್ಯ ಪಾಲಿಕೆ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಹೊಸದಾಗಿ ಅವಳಿ ನಗರದ ನೀರು ಪೂರೈಸುವ ಜವಾಬ್ದಾರಿ ಹೊತ್ತಿರುವ ಖಾಸಗಿ ಕಂಪನಿ ಬೇಜವಾಬ್ದಾರಿಯೇ ಕಾರಣ ಎಂದುಕೊಂಡಿದ್ದರು. ಆದ್ರೆ ಕುಡಿಯುವ ನೀರಿನ ಆಹಾಕಾರ ಉಲ್ಬಣಿಸಲು ಕಾಣದ ಕೈಗಳ ಕೆಲಸ ಮಾಡಿರುವ ಸ್ಫೋಟಕ ವಿಚಾರ ಬಯಲಾಗಿದೆ. ಉದ್ದೇಶಪೂರ್ವಕವಾಗಿ ನೀರು ಪೂರೈಕೆಯ ಜಾಲಕ್ಕೆ ಕಲ್ಲು ಹಾಕಿರುವ ವಿಚಾರ ಪಾಲಿಕೆ ಅಧಿಕಾರಿಗಳು ಬೆಳಕಿಗೆ ತಂದಿದ್ದಾರೆ.
ಹೌದು. ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಕುಡಿಯುವ ನೀರು ಪೂರೈಕೆ ಅವ್ಯವಸ್ಥೆ ಉಂಟಾಗುವಂತೆ ಮಾಡಲು ವಿಘ್ನಸಂತೋಷಿಗಳು ಕೆಲಸ ಮಾಡುತ್ತಿದ್ದಾರೆ ಎಂಬ ಅನುಮಾನಕ್ಕೆಈಗ ಸಾಕ್ಷ್ಯ ಸಿಕ್ಕಿದೆ. ನೀರು ಪೂರೈಕೆ ವಿಳಂಬದಿಂದ ಜನ ರೊಚ್ಚಿಗೆದ್ದು ಬೀದಿ ಗಿಳಿಯುವಂತೆ ಮಾಡುವುದೇ ಅವರ ಹುನ್ನಾರ ಎಂಬ ಅಂಶ ಬೆಳಕಿಗೆ ಬಂದಿದೆ.
ಹುಬ್ಬಳ್ಳಿಯಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ, ಬೇಸಿಗೆಯ ಮೊದಲೇ ಅವಸ್ಥೆ
ಹುಬ್ಬಳ್ಳಿ ಧಾರವಾಡ ಅವಳಿ ನಗರದ ನೀರು ಪೂರೈಕೆ ಜವಾಬ್ದಾರಿ ಇತ್ತೀಚೆಗೆ ಎಲ್‌ಆಂಡ್‌ಟಿ ಕಂಪನಿಗೆ ವಹಿಸಲಾಗಿತ್ತು.. ಖಾಸಗಿ ಕಂಪನಿಯವರು ಜಲ ಮಂಡಳಿಯಿಂದ ನೇಮಕಗೊಂಡಿದ್ದ ಸಿಬ್ಬಂದಿಗೆ ಕೆಲಸದಿಂದ ಕೈಬಿಟ್ಟು ಹೊಸದಾಗಿ ಸಿಬ್ಬಂದಿ ನೇಮಿಸುವುಲ್ಲಿ ವಿಳಂಬ ಮಾಡಿತ್ತು. ಇದರಿಂದ ಕೆಲ ಬಡಾವಣೆಗಳಲ್ಲಿ ನೀರು ಪೂರೈಕೆ ವ್ಯತ್ಯಯವಾಗಿತ್ತು.. ಇದಕ್ಕಾಗಿ ಅಧಿಕಾರಿಗಳು, ಜನಪ್ರತಿನಿಧಿಗಳ ಸಭೆ ಮೇಲೆ ಸಭೆ ನಡೆಸಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿದ್ದು. ಸಿಬ್ಬಂದಿ ನೇಮಿಸಿ ನಲ್ಲಿಗಳಿಗೆ ನೀರು ಬಿಟ್ಟರು ನೀರು ಮಾತ್ರ ಪೂರೈಕೆ ಆಗುತ್ತಿರಲಿಲ್ಲ. ಈ ಸಮಸ್ಯೆ ಬಗ್ಗೆ ತಲೆಕಡೆಸಿಕೊಂಡು ಪರಿಶೀಲನೆಗಿಳಿದಾಗ ಕೆಲವು ಕಿಡಿಗೇಡಿಗಳ ಷಡ್ಯಂತ್ರ ಬಯಲಾಗಿದೆ.
ಏನಿದು ಹುನ್ನಾರ..?
ಅವಳಿ ನಗರದೆಲ್ಲೆಡೆ ಕುಡಿಯುವ ನೀರು ಪೂರೈಕೆ ಜಾಲ ಹೊಂದಿರುವ ವಾಲ್ವ್ ಪಾಯಿಂಟ್ ಗಳನ್ನು ಸಿಮೆಂಟ್ ಕಲ್ಲು ಖಡಿ ಹಾಗೂ ಇನ್ನಿತರ ವಸ್ತುಗಳಿಂದ ಸಂಪೂರ್ಣ ಮುಚ್ಚಿ ಗುರುತು ಸಿಗದಂತೆ ನೋಡಿಕೊಳ್ಳುತ್ತಿರುವ ವ್ಯವಸ್ಥಿತ ಜಾಲ ಸಕ್ರಿಯವಾಗಿದೆ ಎಂಬುದು ಬಯಲಾಗಿದೆ. ಪ್ರತಿಯೊಂದು ಬಡಾವಣೆಗೆ ವಾಲ್ವ್ ಗಳನ್ನು ತಿರುವಿದಾಗಲೇ ನಿರ್ದಿಷ್ಟವಾದ ಪ್ರದೇಶಗಳಲ್ಲಿ ನೀರು ಸರಬರಾಜಾಗುತ್ತದೆ. ಈ ವಾಲ್ವ್ ಗಳ ಗುರುತು ಸಿಗದಂತೆ ಮಾಡುವ ದುರುದ್ದೇಶ ಕೆಲಕಿಡಿಗೇಡಿಗಳು. ಸಿಮೆಂಟ್, ಕಲ್ಲು ಖಡಿಗಳು ಮತ್ತು ಸಿಮೆಂಟ್ ಚೀಲಗಳಲ್ಲಿ ಮರಳು ತುಂಬಿ ನೀರಿನ ಪಾಯಿಂಟ್‌ಗಳನ್ನು ಮುಚ್ಚಲಾಗಿದೆ. ಇದೀಗ ಅಂತಹ ಪಾಯಿಂಟ್‌ಗಳು ನೀರು ಪೂರೈಕೆಯ ಹೊಸ ಸಿಬ್ಬಂದಿಗೆ ಸಿಗುತ್ತಿಲ್ಲ. ಅವುಗಳನ್ನು ಹುಡುಕಾಡುವುದೇ ದೊಡ್ಡ ಸವಾಲಾಗಿದೆ. ಹಾಗಾಗಿ ನೀರು ಪೂರೈಕೆಯಲ್ಲಿ ವಿಳಂಬವಾಗುತ್ತಿದೆ ಎಂದು ಎಲ್ ಅಂಡ್ ಟಿ ಅಧಿಕಾರಿಗಳು ತಿಳಿಸಿದ್ದಾರೆ.
ಸೆಲ್ಫಿ ಗೀಳಿಗೆ ವಿದ್ಯುತ್ ತಗುಲಿ ಮರ್ಮಾಂಗ ಸುಟ್ಟುಕೊಂಡ ವಿದ್ಯಾರ್ಥಿ
ಒಟ್ಟಿನಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿ ವ್ಯವಸ್ಥೆಯ ಮೇಲೆ ಗೂಬೆ ಕೂರಿಸಲು ಕಾಣದ ಕೈಗಳು ಕಳೆದ ನಾಲ್ಕೈದು ತಿಂಗಳಿಂದ ಕೆಲಸ ಮಾಡುತ್ತಿದ್ದು,ಈ ತಿಂಗಳಿಂದ ಇದು ಇನ್ನಷ್ಟು ತೀವ್ರಗೊಂಡಿದೆ. ವಿದ್ಯಾನಗರ, ಹಳೆ ಹುಬ್ಬಳ್ಳಿ ಮತ್ತು ರಾಯಾಪುರ ಏರಿಯಾದ ಪೊಲೀಸರು ಅನುಮಾನಾಸ್ಪದ ವ್ಯಕ್ತಿಗಳನ್ನು ಕರೆತಂದು ವಿಚಾರಣೆಗೊಳಪಡಿಸಿ ಎಚ್ಚರಿಕೆ ನೀಡಿ ಕಳಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.