ರಾಷ್ಟ್ರ ರಕ್ಷಣಾ ಪಡೆ ಸಂಘಟನೆ ಹೆಸರಿನಲ್ಲಿ ಹಿಂದೂ ಪರ, ಗೋ ರಕ್ಷಣೆ ಹೆಸರಿನ ಹೋರಾಟಗಳಲ್ಲಿ ಗುರುತಿಸಿಕೊಂಡಿದ್ದ ಹಿಂದೂಪರ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಿ ಬಂಧಿಸಲಾಗಿದೆ.
ಬೆಂಗಳೂರು (ಆ.13): ರಾಷ್ಟ್ರ ರಕ್ಷಣಾ ಪಡೆ ಸಂಘಟನೆ ಹೆಸರಿನಲ್ಲಿ ಹಿಂದೂ ಪರ, ಗೋ ರಕ್ಷಣೆ ಹೆಸರಿನ ಹೋರಾಟಗಳಲ್ಲಿ ಗುರುತಿಸಿಕೊಂಡಿದ್ದ ಹಿಂದೂಪರ ಕಾರ್ಯಕರ್ತ ಪುನೀತ್ ಕುಮಾರ್ ಅಲಿಯಾಸ್ ಪುನೀತ್ ಕೆರೆಹಳ್ಳಿ (32) ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಿ, ಆತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ವಶಕ್ಕೆ ನೀಡಲಾಗಿದೆ.
‘ಬೆಂಗಳೂರು ನಗರ, ಬೆಂಗಳೂರು ಜಿಲ್ಲೆ, ಮಂಡ್ಯ ಜಿಲ್ಲೆಗಳಲ್ಲಿ ಪುನೀತ್ ಕೆರೆಹಳ್ಳಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾನೆ. ರಾಷ್ಟ್ರ ರಕ್ಷಣಾ ಪಡೆ ಎಂಬ ಅನಧಿಕೃತ ಸಂಘಟನೆ ಹೆಸರಿನಲ್ಲಿ ತನ್ನ ಸಹಚರರೊಂದಿಗೆ ಸೇರಿ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುವುದು, ಕೋಮು ಗಲಭೆಗೆ ಪ್ರಚೋದಿಸುವಂತಹ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾನೆ. ಹೀಗಾಗಿ ಈತನನ್ನು ಗೂಂಡಾ ಕಾಯ್ದೆಯಡಿ ಬಂಧನದಲ್ಲಿಡಿ’ ಎಂದು ಸಿಸಿಬಿ ಸಂಘಟಿತ ಅಪರಾಧ ದಳದ ಅಧಿಕಾರಿಗಳು ನಗರ ಪೊಲೀಸ್ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಇದನ್ನು ಪರಿಶೀಲಿಸಿ ಪೊಲೀಸ್ ಆಯುಕ್ತರು ಗೂಂಡಾ ಕಾಯ್ದೆಯಡಿ ಬಂಧನಕ್ಕೆ ಆದೇಶಿಸಿದ್ದಾರೆ.
ಇದ್ರೀಶ್ ಪಾಷಾ ಸಾವು ಪ್ರಕರಣ: ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿಗೆ ಜಾಮೀನು
ಇದರ ಜತೆಗೆ ಪುನೀತ್ ಕೆರೆಹಳ್ಳಿ ವಿರುದ್ಧ ಕಳೆದ 10 ವರ್ಷಗಳ ಅಂದರೆ 2013 ರಿಂದ 2023 ರವರೆಗಿನ ಅಪರಾಧ ಪ್ರಕರಣಗಳ ದಾಖಲೆಗಳನ್ನು ಸಂಗ್ರಹಿಸಿ ಸಲ್ಲಿಸಿದ್ದರು. ಈ ಪ್ರಸ್ತಾವನೆ ಪರಿಶೀಲಿಸಿದ ನಗರ ಪೊಲೀಸ್ ಆಯುಕ್ತರು, ಪುನೀತ್ ಕೆರೆಹಳ್ಳಿಯನ್ನು ಗೂಂಡಾ ಕಾಯ್ದೆಯಡಿ ಬಂಧನದಲ್ಲಿಡಲು ಶುಕ್ರವಾರ ಆದೇಶಿಸಿದ್ದರು. ಇದರ ಬೆನ್ನಲ್ಲೇ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಪುನೀತ್ ಕೆರೆಹಳ್ಳಿಯನ್ನು ಬಂಧಿಸಿ ಶನಿವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪುನೀತ್ ಕೆರೆಹಳ್ಳಿ ವಿರುದ್ಧ ಬೆಂಗಳೂರು ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲ್ಲೆ, ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ, ಜಾತಿ ನಿಂದನೆ, ಕೊಲೆ, ಜೀವ ಬೆದರಿಕೆ ಸೇರಿದಂತೆ 10 ಅಪರಾಧ ಪ್ರಕರಣಗಳು ದಾಖಲಾಗಿವೆ. ಈತನ ವಿರುದ್ಧ ಡಿಜೆ ಹಳ್ಳಿ, ಬೇಗೂರು, ಕಗ್ಗಲಿಪುರ, ಹಲಸೂರು ಗೇಟ್, ಚಾಮರಾಜಪೇಟೆ, ಎಲೆಕ್ಟ್ರಾನಿಕ್ ಸಿಟಿ, ಮಳವಳ್ಳಿ ಮತ್ತು ಸಾತನೂರು ಠಾಣೆಗಳಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಗೋ ಸಾಗಾಟಗಾರನ ಕೊಲೆ ಆರೋಪ, ತಲೆ ಮರೆಸಿಕೊಂಡಿದ್ದ ಪುನೀತ್ ಕೆರೆಹಳ್ಳಿ ಮತ್ತು ಸಹಚರರು ರಾಜಸ್ಥಾನದಲ್ಲಿ ಅರೆಸ್ಟ್
ಪುನೀತ್ ಕೆರೆ ಹಳ್ಳಿ ಮೇಲೆ ಗೂಂಡಾ ಆಕ್ಟ್ ಜಾರಿ ಹಿನ್ನೆಲೆ ಹೇಳಿಕೆ ನೀಡಿರುವ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಶರಣಪ್ಪ, ಅಪರಾಧ ಚಟುವಟಿಕೆ ಮಾಡುತ್ತಿರುವ ಆರೋಪಿಗಳ ಮೆಲೆ ಪೊಲೀಸರ ನಿಗಾ ಇದೆ. ಈ ವರ್ಷ 7 ಜನರನ್ನ ಗೂಂಡಾ ಕಾಯ್ದೆಯಡಿ ಬಂಧನವಾಗಿದೆ. ನಿನ್ನೆ ಒಬ್ಬನ ಮೇಲೆ ಗೂಂಡಾ ಕಾಯ್ದೆಯಡಿ ಬಂಧನವಾಗಿದೆ. ಈತನ ಮೇಲೆ ಹಲವು ಪ್ರಕರಣಗಳು ದಾಖಲಾಗಿತ್ತು. 10 ಪ್ರಕರಣಗಳ ಪೈಕಿ ಒಂದರಲ್ಲಿ ಜೈಲು ಒಂದರಲ್ಲಿ ಖುಲಾಸೆಯಾಗಿದೆ. ಐದು ಪ್ರಕರಣ ಇನ್ನೂ ತನಿಖೆ ನಡೆಯುತ್ತಿದೆ. ಕಾನೂನು ಕಾಪಾಡುವ ದೃಷ್ಟಿಯಲ್ಲಿ ಗೂಂಡಾ ಕಾಯ್ದೆ ಹಾಕಲಾಗಿದೆ. ಇತ್ತೀಚೆಗೆ ಉಚ್ಚ ನ್ಯಾಯಾಲಯದ ಆದೇಶದ ಪ್ರಕಾರ ರೌಡಿಶೀಟರ್ ತೆರೆಯಲಾಗುತ್ತಿದೆ ಎಂದರು.
ಹಿಂದೂ ಸಂಘಟನೆಗಳ ಆಕ್ರೋಶ: ಗೂಂಡಾ ಕಾಯ್ದೆ ಅಡಿ ಪುನೀತ್ ಕೆರೆಹಳ್ಳಿ ಬಂಧನ ಹಿನ್ನೆಲೆ ರಾಜ್ಯ ಸರ್ಕಾರದ ಮತ್ತು ಬಿಜೆಪಿ ನಾಯಕರ ವಿರುದ್ಧ ಹಿಂದೂ ಸಂಘಟನೆಗಳ ಕಿಡಿಕಾರಿದೆ. ಮತ್ತೆ ಬಿಜೆಪಿ ನಾಯಕರ ವಿರುದ್ಧಹಿಂದೂ ಸಂಘಟನೆಗಳು ಬಹಿರಂಗ ಆಕ್ರೋಶ ಹೊರ ಹಾಕಿದೆ. ಪುನೀತ್ ಕೆರೆಹಳ್ಳಿ ಬೆಂಬಲವಾಗಿ ಬಿಜೆಪಿ ನಾಯಕರು ನಿಲ್ಲದಿದ್ದರೆ, ಬಿಜೆಪಿ ನಾಯಕರ ವಿರುದ್ಧವು ಹೋರಾಟ ಎಂದು ಶ್ರೀರಾಮ ಸೇನೆ ಎಚ್ಚರಿಕೆ ಕೊಟ್ಟಿದೆ. ರಾಜ್ಯದಲ್ಲಿ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಹಿಂದೂ ಸಂಘಟನೆಗಳನ್ನ ತಮ್ಮ ದ್ವೇಷದ ರಾಜಕಾರಣಕ್ಕೆ ಬಲಿಪಶು ಮಾಡುತ್ತಿದ್ದಾರೆ. ಮುಸ್ಲಿಮರ ಮತ ಬ್ಯಾಂಕಿನಿಂದ ಗೆದ್ದಿರುವ ಕಾಂಗ್ರೆಸ್ ದೇಶದ್ರೋಹಿ ಜಿಹಾದಿಗಳನ್ನು ತಮ್ಮ ಕುಟುಂಬದ ಸದಸ್ಯರಂತೆ ಪ್ರೀತಿಸುತ್ತಿದ್ದು ಇದು ದೇಶಕ್ಕೆ ಮಾರಕ ಎಂದಿದೆ.