
ಬೆಂಗಳೂರು(ಅ.03): ಮಾದಕ ವಸ್ತು ಮಾರಾಟ ಜಾಲ ಪ್ರಕರಣದ ಪ್ರಮುಖ ಆರೋಪಿ ಹಾಗೂ ಪೇಜ್ ತ್ರಿ ಪಾರ್ಟಿ ಆಯೋಜನೆ ದಂಧೆಯ ಕಿಂಗ್‌ಪಿನ್ ಎನ್ನಲಾದ ವೀರೇನ್ ಖನ್ನಾನನ್ನು ಮಂಪರು ಪರೀಕ್ಷೆಗೊಳಪಡಿಸುವ ಸಂಬಂಧ ಗುಜರಾತ್‌ನ ಅಹಮದಾಬಾದ್ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಸಿಸಿಬಿ ಅಧಿಕಾರಿಗಳು ಪತ್ರ ಬರೆದಿದ್ದಾರೆ.
ವಿಚಾರಣೆ ವೇಳೆ ಪ್ರಕರಣದ ಬಗ್ಗೆ ಬಾಯ್ಬಿಡದೆ ವೀರೇನ್ ಅಸಹಕಾರ ತೋರಿಸಿದ್ದು ಮಾತ್ರವಲ್ಲದೆ ತನ್ನ ಮೊಬೈಲ್‌ಗಳ ಪಾಸ್ ವರ್ಡ್ ಹಂಚಿಕೊಳ್ಳಲು ಕೂಡಾ ನಿರಾಕರಿಸಿದ್ದ. ಈ ನಡವಳಿಕೆಯಿಂದ ಬೇಸರಗೊಂಡ ಸಿಸಿಬಿ ಅಧಿಕಾರಿಗಳು, ಆರೋಪಿಯನ್ನು ಮಂಪರು ಪರೀಕ್ಷೆಗೊಳಪಡಿಸಲು ಅನುಮತಿ ನೀಡುವಂತೆ ಮಾದಕ ವಸ್ತು ವಿಶೇಷ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಈ ಅರ್ಜಿ ಪುರಸ್ಕರಿಸಿದ ನ್ಯಾಯಾಲಯವು ಮಂಪರು ಪರೀಕ್ಷೆಗೆ ಸಮ್ಮತಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನನ್ನ ಮಗನನ್ನು ಬಲಿಪಶು ಮಾಡಲಾಗ್ತಿದೆ: ಡ್ರಗ್ ಕಿಂಗ್‌ಪಿನ್ ಖನ್ನಾ ತಂದೆ
ಮಂಪರು ಪರೀಕ್ಷೆ ವಿಚಾರವಾಗಿ ಗುಜರಾಜ್‌ನ ಅಹಮದಾಬಾದ್ ಎಫ್‌ಎಸ್‌ಎಲ್ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಆದರೆ ಆ ಪತ್ರಕ್ಕೆ ಪ್ರತಿಕ್ರಿಯೆ ಬಂದಿಲ್ಲ. ಎಫ್‌ಎಸ್‌ಎಲ್ ತಜ್ಞರು ನಿಗದಿಪಡಿಸಿದ ದಿನ ಆರೋಪಿಯನ್ನು ಕರೆದೊಯ್ದು ಪರೀಕ್ಷೆಗೊಳಪಡಿಸಲಾಗುತ್ತದೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಮಾದಕ ವಸ್ತು ಮಾರಾಟ ಜಾಲ ಸಂಬಂಧ ಬಾಣಸವಾಡಿ ಹಾಗೂ ಕಾಟನ್‌ಪೇಟೆ ಠಾಣೆಗಳಲ್ಲಿ ದಾಖಲಾಗಿರುವ ಪ್ರತ್ಯೇಕ ಎರಡು ಪ್ರಕರಣಗಳಲ್ಲೂ ವೀರೇನ್ ಖನ್ನಾ ಪ್ರಮುಖ ಆರೋಪಿಯಾಗಿದ್ದಾನೆ. ಈ ಪ್ರಕರಣಗಳ ಸಂಬಂಧ ಸಿಸಿಬಿ ಅಧಿಕಾರಿಗಳು, ಸುಮಾರು 15 ದಿನಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರೂ ಪ್ರಯೋಜನವಾಗಿಲ್ಲ. ಖನ್ನಾ ಮನೆ ಮೇಲೆ ದಾಳಿ ಸಹ ನಡೆಸಿ ಕೆಲವು ಪುರಾವೆಗಳನ್ನು ತನಿಖಾ ತಂಡ ಜಪ್ತಿ ಮಾಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ