ಸುಲಿಗೆ ಆರೋಪಿಗಳಿಬ್ಬರ ಬಂಧನ/ ವಿದ್ಯಾರ್ಥಿಗಳನ್ನು ಸುಲಿಗೆ ಮಾಡಿ ಪರಾರಿಯಾಗಿದ್ದರು/ ಕಾರಿನಲ್ಲಿ ಬಂದು ಚಾಕು ತೋರಿಸಿ ದೋಚಿದ್ದರು/ ಮೊಬೈಲ್ ಮತ್ತು ನಗದು ಕಸಿದು ಪರಾರಿಯಾಗಿದ್ದವರು ಶಿವಮೊಗ್ಗ ಜಿಲ್ಲೆಯವರು
ಮಣಿಪಾಲ(ಫೆ. 07) ಇಲ್ಲಿನ ಕೆಎಫ್ ಸಿ ಬಿಲ್ಡಿಂಗ್ ಬಳಿ ಜ.31ರಂದು ಇಬ್ಬರು ವಿದ್ಯಾರ್ಥಿಗಳಿಗೆ, ಕಾರಿನಲ್ಲಿ ಬಂದು ಚೂರಿ ತೋರಿಸಿ ಬೆದರಿಸಿ ಸುಲಿಗೆ ಮಾಡಿದ ಇಬ್ಬರು ಆರೋಪಿಗಳನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ಶಿವಮೊಗ್ಗ ಜಿಲ್ಲೆಯ ಟಿಪ್ಪುನಗರದ ಆಶಿಫ್ (24) ಮತ್ತು ದಸ್ತಗೀರ್ ಬೇಗ್ (24) ಎಂದು ಗುರುತಿಸಲಾಗಿದ್ದು, ಇನ್ನೊಬ್ಬ ಆರೋಪಿ ತಲೆಮರಿಸಿಕೊಂಡಿದ್ದಾನೆ ಎಂದು ಎಸ್‌ಪಿ ಎನ್.ವಿಷ್ಣುವರ್ಧನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ
ಆರೋಪಿಗಳು ವಿದ್ಯಾರ್ಥಿ ಮತ್ತವನ ಗೆಳತಿ ಬಳಿ ಬಂದಿದ್ದಾರೆ. ಗೆಳತಿಯ ಕುತ್ತಿಗೆಗೆ ಚಾಕು ಹಿಡಿದು ಬೆದರಿಸಿ, ಅವರಲ್ಲಿದ್ದ 2 ಮೊಬೈಲ್, ಇಯರ್ ಫೋನ್, 250 ರು. ನಗದು ಸುಲಿಗೆ ಮಾಡಿ ಪರಾರಿಯಾಗಿದ್ದರು.
'ಅಲ್ಲಾ' ಗಾಗಿ ಹೆತ್ತ ಮಗುವಿನ ಕತ್ತು ಸೀಳಿದ ತಾಯಿ, 'ತ್ಯಾಗ ಮಾಡಿದ್ದೇನೆ'
ಆದರೇ ಆರೋಪಿಗಳು ಮಣಿಪಾಲದಲ್ಲಿಯೇ ತಲೆಮರೆಸಿಕೊಂಡಿದ್ದರು. ಅವರನ್ನು ಭಾನುವಾರ ಬೆಳಗ್ಗೆ ಮಣಿಪಾಲ ಪ್ಲಾನೆಟ್ ಕಫೆ ಹೊಟೆಲ್ ಸಮೀಪ ಬಂಧಿಸಿ ಕಾರು ಮತ್ತು ಮಾರಕಾಯುಧವನ್ನು ವಶಪಡಿಸಿಕೊಳ್ಳಲಾಗಿದೆ. ಮಣಿಪಾಲ ಪಿಎಸ್‌ಐ ರಾಜ್‌ಶೇಖರ ವಂದಲಿ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದರು.
ಮತ್ತೊಬ್ಬನ ಬಂಧನ: ಮಣಿಪಾಲದ ನರ್ಸರಿ ಮಾಲಕ ದಿಲೀಪ್ ಕುಮಾರ್ ರೈ ಅವರನ್ನು ಅಲ್ಲಿ ಕೆಲಸಕ್ಕಿದ್ದ ಬಾಗಲಕೋಟೆ ಬಸವರಾಜ್ ಎಂಬಾತ ಹಣಕ್ಕಾಗಿ ಬೆದರಿಕೆಯೊಡ್ಡಿ ಪರಾರಿಯಾಗಿದ್ದು, ಆತನನ್ನು ಬಾಗಲಕೋಟೆಯಲ್ಲಿ ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಕಳ್ಳತನ ಸುಳಿವು ಲಭ್ಯ; ಇತ್ತೀಚೆಗೆ ನಗರದ ಮಿಶನ್‌ಕಾಂಪೌಂಡ್ ನ ಸಹಕಾರ ಬ್ಯಾಂಕಲ್ಲಿ ಕಳ್ಳತನ ಮಾಡಿದ ಪ್ರಕರಣದ ಆರೋಪಿಗಳ ಸುಳಿವು ದೊರೆತಿದ್ದು, ಆರೋಪಿಗಳನ್ನು ಸದ್ಯವೇ ಬಂಧಿಸಲಾಗುತ್ತದೆ ಎಂದು ಎಸ್‌ಪಿ ವಿಷ್ಣುವರ್ಧನ್ ತಿಳಿಸಿದರು.