
ದೇಶಾದ್ಯಂತ ಭಾರಿ ಸುದ್ದಿ ಮಾಡಿದ್ದ ಕಲ್ಲಿದ್ದಲು ಹಗರಣದಲ್ಲಿ ದೋಷಿಯಾಗಿದ್ದ ಮಾಜಿ ಕಲ್ಲಿದ್ದಲು ಕಾರ್ಯದರ್ಶಿ ಎಚ್.ಸಿ. ಗುಪ್ತಾಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಮಹಾರಾಷ್ಟ್ರದ ಕಲ್ಲಿದ್ದಲು ನಿಕ್ಷೇಪ ಹಂಚಿಕೆಯಲ್ಲಿ ಅಕ್ರಮ ನಡೆದ ಪ್ರಕರಣ ಸಂಬಂಧ ದೆಹಲಿಯ ನ್ಯಾಯಾಲಯ ಸೋಮವಾರ ಶಿಕ್ಷೆ ಪ್ರಮಾಣವನ್ನು ಪ್ರಕಟಿಸಿದೆ ಎಂದು ಕೇಸ್ ಸಂಬಂಧದ ವಕೀಲರು ಮಾಹಿತಿ ನೀಡಿದ್ದಾರೆ.
ವಿಶೇಷ ನ್ಯಾಯಾಧೀಶ ಅರುಣ್ ಭಾರದ್ವಾಜ್ ಕಲ್ಲಿದ್ದಲು ಹಗರಣ ಸಂಬಂಧದ ಕೇಸ್‌ನಲ್ಲಿ ಶಿಕ್ಷೆ ಪ್ರಮಾಣವನ್ನು ಪ್ರಕಟಿಸಿದ್ದಾರೆ. ಮಾಜಿ ಕಲ್ಲಿದ್ದಲು ಕಾರ್ಯದರ್ಶಿ ಎಚ್.ಸಿ. ಗುಪ್ತಾಗೆ ಮೂರು ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿದೆ. ಇನ್ನು, ಕಲ್ಲಿದ್ದಲು ಸಚಿವಾಲಯದ ಮಾಜಿ ಜಂಟಿ ಕಾರ್ಯದರ್ಶಿ ಕೆ.ಎಸ್. ಕ್ರೋಫಾಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದ್ದರೆ, ಇದರ ಜತೆಗೆ 50 ಸಾವಿರ ರೂ. ದಂಡವನ್ನು ಸಹ ನೀಡಬೇಕಾಗಿದೆ. ಲೋಹರಾ ಪೂರ್ವ ಕಲ್ಲಿದ್ದಲು ನಿಕ್ಷೇಪ ಹಂಚಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ಕ್ರಿಮಿನಲ್ ಪಿತೂರಿ, ಕ್ರಿಮಿನಲ್ ನಂಬಿಕೆಯ ಉಲ್ಲಂಘನೆ, ವಂಚನೆ ಮತ್ತು ಭ್ರಷ್ಟಾಚಾರ ಪ್ರಕರಣಗಳಲ್ಲಿ ನ್ಯಾಯಾಲಯ ಈ ಶಿಕ್ಷೆ ವಿಧಿಸಿದೆ.
Coal Mining Scam ಮಮತಾ ಬ್ಯಾನರ್ಜಿ ಸೋದರಳಿಯನ ಕುಟುಂಬಕ್ಕೆ ಇಡಿ ಉರುಳು!
ಇನ್ನೊಂದೆಡೆ, ಅಕ್ರಮ ನಡೆಸಿರುವ ಗ್ರೇಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ನಿರ್ದೇಶಕ ಮುಕೇಶ್ ಗುಪ್ತಾ ಅವರಿಗೆ ನ್ಯಾಯಾಲಯ 4 ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದು, 2 ವರ್ಷ ದಂಡವನ್ನೂ ನೀಡಬೇಕಾಗಿದೆ. ಇದರ ಜತೆಗೆ ಕಂಪನಿ ಸಹ 2 ಲಕ್ಷ ರೂ. ದಂಡವನ್ನು ಪ್ರತ್ಯೇಕವಾಗಿ ನೀಡಬೇಕಾಗಿದೆ. ಕ್ರಿಮಿನಲ್ ಪಿತೂರಿ ಹಾಗೂ ವಂಚನೆ ಸಂಬಂಧ ದೆಹಲಿಯ ನ್ಯಾಯಾಲಯ ಮುಕೇಶ್ ಗುಪ್ತಾ ಹಾಗೂ ಕಂಪನಿಗೆ ಈ ಶಿಕ್ಷೆ ಹಾಗೂ ದಂಡ ವಿಧಿಸಿದೆ.
ಹಿರಿಯ ವಕೀಲ ಆರ್. ಎಸ್. ಛೀಮಾ, ಸಿಬಿಐನ ಡೆಪ್ಯುಟಿ ಕಾಣೂನು ಸಲಹೆಗಾರ ಸಂಜಯ್ ಕುಮಾರ್ ಹಾಗೂ ಹಿರಿಯ ಪಬ್ಲಿಕ್ ಪ್ರಾಸಿಕ್ಯೂಟರ್ ಎ.ಪಿ. ಸಿಂಗ್ ಅವರು ಈ ಕೇಸ್‌ನ ವಿಚಾರಣೆ ನಡೆಸಿದ್ದರು. ಇನ್ನು, ದೋಷಿಯಾಗಿರುವ ಎಚ್.ಸಿ. ಗುಪ್ತಾ ಈ ಹಿಂದೆ ಕಲ್ಲಿದ್ದಲು ಹಗರಣದ ಇತರೆ ಮೂರು ಪ್ರಕರಣಗಳಲ್ಲಿ ಸಹ ಅಪರಾಧಿ ಎನಿಸಿಕೊಂಡಿದ್ದರು. ಹಾಗೂ, ಈ ಪ್ರಕರಣಗಳಲ್ಲಿ ಅವರು ಮೇಲ್ಮನವಿ ಸಲ್ಲಿಸಿದ್ದು, ದೆಹಲಿ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಸದ್ಯ ಅವರು ಹಾಗೂ ಪ್ರಕರಣದ ಇತರೆ ಅಪರಾಧಿಗಳು ಜಾಮೀನಿನ ಮೇಲೆ ಹೊರಗಿದ್ದಾರೆ.
ಮಹಾರಾಷ್ಟ್ರ ಮೈತ್ರಿಯಲ್ಲಿ ಬಿರುಕು ಮೂಡಿಸಿದ ಕಲ್ಲಿದ್ದಲು ಒಪ್ಪಂದ: ತಿವಿದ ಬಿಜೆಪಿ!
2005 ಹಾಗೂ 2011 ರ ನಡುವೆ ಈ ಆರೋಪಿಗಳು ಕ್ರಿಮಿನಲ್ ಪಿತೂರಿ ನಡೆಸಿ ಭಾರತ ಸರ್ಕಾರದ ಕಲ್ಲಿದ್ದಲು ಸಚಿವಾಲಯಕ್ಕೆ ವಂಚಿಸಿದ್ದಾರೆ ಎಂದು ಸಿಬಿಐ ವಾದ ಮಾಡಿತ್ತು. ಅಲ್ಲದೆ, ನಿವ್ವಳ ಮೌಲ್ಯ, ಸಾಮರ್ಥ್ಯ, ಉಪಕರಣಗಳು ಮತ್ತು ಸ್ಥಾವರದ ಖರೀದಿ ಹಾಗೂ ಸ್ಥಾಪನೆಯ ಸ್ಥಿತಿಯ ಬಗ್ಗೆ ತಪ್ಪು ಮಾಹಿತಿಯ ಆಧಾರದ ಮೇಲೆ GIL ಪರವಾಗಿ 'ಲೋಹರಾ ಪೂರ್ವ ಕಲ್ಲಿದ್ದಲು ಬ್ಲಾಕ್' ಅನ್ನು ನಿಯೋಜಿಸಲು ಕಲ್ಲಿದ್ದಲು ಸಚಿವಾಲಯವನ್ನು ಅಪ್ರಾಮಾಣಿಕವಾಗಿ ಮತ್ತು ಮೋಸದಿಂದ ಪ್ರೇರೇಪಿಸುವುದು ಆರೋಪಿಗಳು ಪ್ಲ್ಯಾನ್ ಮಾಡಿದ್ದರು ಎಂದೂ ಕೇಂದ್ರ ತನಿಖಾ ದಳ ತನಿಖೆ ನಡೆಸಿತ್ತು.
ಕಂಪನಿಯು ತನ್ನ ಅರ್ಜಿಯಲ್ಲಿ ತನ್ನ ನಿವ್ವಳ ಮೌಲ್ಯವನ್ನು 120 ಕೋಟಿ ರೂ. ಎಂದು ಹೇಳಿಕೊಂಡಿತ್ತು. ಆದರೆ ಆ ಕಂಪನಿಯ ನಿಜವಾದ ನಿವ್ವಳ ಮೌಲ್ಯ ಕೇವಲ 3.3 ಕೋಟಿ ರೂ. ಆಗಿದೆ. ಮತ್ತು ಕಂಪನಿಯು ತನ್ನ ಪ್ರಸ್ತುತ ಸಾಮರ್ಥ್ಯವನ್ನು 1,20,000 ಟಿಪಿಎ ಎಂದು ಸುಳ್ಳು ಹೇಳಿಕೊಂಡಿದ್ದು, ಆದರೆ ಅದರ ನಿಜವಾಧ ಸಾಮರ್ಥ್ಯ 30,000 ಟಿಪಿಎ ಎಂದೂ ಸಿಬಿಐ ಹೇಳಿದೆ. 2014ರ ಆಗಸ್ಟ್ 25ರಂದು ಸುಪ್ರೀಂ ಕೋರ್ಟ್ ಕಲ್ಲಿದ್ದಲು ನಿಕ್ಷೇಪಗಳ ಸಂಪೂರ್ಣ ಹಂಚಿಕೆಯನ್ನು ರದ್ದುಗೊಳಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ