ಬೆಂಗಳೂರಿನ ಗೋವಿಂದರಾಜ ನಗರ ಕ್ಷೇತ್ರದ ಮಾಜಿ ಶಾಸಕ ಪ್ರಿಯಾಕೃಷ್ಣ ಬೆಂಬಲಿಗರು ಮತ್ತು ಹಾಲಿ ಶಾಸಕ, ಸಚಿವರೂ ಆದ ವಿ.ಸೋಮಣ್ಣ ಬೆಂಬಲಿಗರ ನಡುವೆ ಈ ಮಾರಾಮಾರಿ ನಡೆದಿದೆ ಎನ್ನಲಾಗಿದೆ.
ಬೆಂಗಳೂರು(ಮಾ.18): ಕಾರ್ಯಕ್ರಮವೊಂದರ ಫ್ಲೆಕ್ಸ್ ಕಟ್ಟುವ ವಿಚಾರಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ದೊಣ್ಣೆ-ಕಲ್ಲುಗಳಿಂದ ಮಾರಾಮಾರಿ ನಡೆದಿರುವ ಘಟನೆ ಗೋವಿಂದರಾಜ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ.
ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ವಿಜಯ ನಗರದ ಎಂ.ಸಿ.ಲೇಔಟ್‌ನ ಬಿಜಿಎಸ್ ಆಟದ ಮೈದಾನದಲ್ಲಿ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಘಟನೆ ಸಂಬಂಧ ಗೋವಿಂದರಾಜ ನಗರ ಠಾಣೆ ಪೊಲೀಸರು ದೂರು-ಪ್ರತಿದೂರು ಸ್ವೀಕರಿಸಿ ತನಿಖೆ ಕೈಗೊಂಡಿದ್ದಾರೆ.
ಬೆಂಗಳೂರು: ಪೊಲೀಸರ ಐಡಿ ತೋರಿಸಿ 1.48 ಲಕ್ಷ ಎಗರಿಸಿದ ಸೈಬರ್ ಚೋರರು..!
ಗೋವಿಂದರಾಜ ನಗರ ಕ್ಷೇತ್ರದ ಮಾಜಿ ಶಾಸಕ ಪ್ರಿಯಾಕೃಷ್ಣ ಬೆಂಬಲಿಗರು ಮತ್ತು ಹಾಲಿ ಶಾಸಕ, ಸಚಿವರೂ ಆದ ವಿ.ಸೋಮಣ್ಣ ಬೆಂಬಲಿಗರ ನಡುವೆ ಈ ಮಾರಾಮಾರಿ ನಡೆದಿದೆ ಎನ್ನಲಾಗಿದೆ. ಕಾಂಗ್ರೆಸ್ ಬೆಂಬಲಿಗರು ಬಿಜಿಎಸ್ ಆಟದ ಮೈದಾನದಲ್ಲಿ ಮಾ.19ರಂದು ಕಾರ್ಯಕ್ರಮ ನಡೆಸಲು ಬಿಬಿಎಂಪಿಯಿಂದ ಅನುಮತಿ ಪಡೆದಿದ್ದರು. ಆದರೆ, ಯುಗಾದಿ ಉತ್ಸವ ಕಾರ್ಯಕ್ರಮ ನಡೆಸಲು ಶುಕ್ರವಾರ ಮೈದಾನದಲ್ಲಿ ಫ್ಲೆಕ್ಸ್ ಅಳವಡಿಸಲು ಸಿದ್ಧತೆ ನಡೆಸುತ್ತಿದ್ದರು ಎನ್ನಲಾಗಿದೆ. ಇದನ್ನು ಬಿಜೆಪಿ ಕಾರ್ಯಕರ್ತರು ಪ್ರಶ್ನೆ ಮಾಡಿದಾಗ ಎರಡೂ ಗುಂಪುಗಳ ನಡುವೆ ವಾಗ್ವಾದ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ದೊಣ್ಣೆ-ಕಲ್ಲುಗಳಿಂದ ಹೊಡೆದಾಡಿಕೊಂಡಿದ್ದಾರೆ. ಈ ಗಲಾಟೆಯಲ್ಲಿ ಬಿಜೆಪಿಯ ಹಲವು ಕಾರ್ಯಕರ್ತರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೊನೆಗೆ ಪೊಲೀಸರು ಲಾಠಿಚಾಜ್‌ರ್ ನಡೆಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.
ಕಾನೂನು ಕ್ರಮ: ಡಿಸಿಪಿ ನಿಂಬರಗಿ
ಉಮಾಶಂಕರ್ ಎಂಬುವವರು ಮಾ.19ರಂದು ಬಿಜಿಎಸ್ ಮೈದಾನದಲ್ಲಿ ಸ್ತ್ರಿ ಶಕ್ತಿ ಮಹಿಳಾ ಸಮಾವೇಶ ನಡೆಸಲು ಬಿಬಿಎಂಪಿಯಿಂದ ಅನುಮತಿ ಪಡೆದಿದ್ದರು. ಅದರಂತೆ ಒಂದು ಮಹಿಳೆಯರನ್ನು ಒಳಗೊಂಡ ಗುಂಪು ಶುಕ್ರವಾರ ಮೈದಾನದಲ್ಲಿ ಫ್ಲೆಕ್ಸ್ ಹಾಗೂ ಬಂಟ್ಟಿಂಗ್ಸ್ ಕಟ್ಟುವಾಗ ಇನ್ನೊಂದು ಗುಂಪು ಮೈದಾನಕ್ಕೆ ಬಂದು ಗಲಾಟೆ ಮಾಡಿದೆ. ಈ ವೇಳೆ ಎರಡೂ ಗುಂಪುಗಳ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಮಧ್ಯೆ ಪ್ರವೇಶಿಸಿದ ಪೊಲೀಸರು ಎರಡೂ ಗುಂಪುಗಳನ್ನು ಮೈದಾನದಿಂದ ಹೊರಕ್ಕೆ ಕಳುಹಿಸಿದ್ದಾರೆ. ಅಷ್ಟಕ್ಕೂ ಸುಮ್ಮನಾಗದ ಎರಡೂ ಗುಂಪುಗಳು ದೊಣ್ಣೆ ಹಾಗೂ ಕಲ್ಲು ಹಿಡಿದು ಹೊಡೆದಾಡಲು ಮುಂದಾಗಿದ್ದಾರೆ. ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಪರಿಣಾಮ ಪೊಲೀಸರು ಲಾಠಿ ಚಾಜ್‌ರ್ ನಡೆಸಿ ಎರಡೂ ಗುಂಪುಗಳನ್ನು ಸ್ಥಳದಿಂದ ಚದುರಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಈ ಮಾರಾಮಾರಿ ವೇಳೆ ಇಬ್ಬರು ಪೊಲೀಸರು ಗಾಯಗೊಂಡಿದ್ದು, ಚಿಕಿತ್ಸೆಗೆ ಆಸ್ಪತ್ರೆಗೆ ಕಳುಹಿಸಲಾಗಿದೆ. ಈ ಘಟನೆ ಸಂಬಂಧ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ನಿಂಬರಗಿ ತಿಳಿಸಿದರು.
ಎಸಿಪಿ ವಿರುದ್ಧ ಇಂದು ಕಮಿಷನರ್‌ಗೆ ದೂರು
ವಿಜಯನಗರ ಎಸಿಪಿ ರವಿ ಅವರ ಅಮಾನತಿಗೆ ಆಗ್ರಹಿಸಿ ಗೋವಿಂದರಾಜ ನಗರ ಮತ್ತು ವಿಜಯ ನಗರದ ಮಾಜಿ ಕಾರ್ಪೊರೇಟರ್‌ಗಳು ಹಾಗೂ ಹಿರಿಯ ಬಿಜೆಪಿ ಮುಖಂಡರ ನೇತೃತ್ವದಲ್ಲಿ ಶನಿವಾರ ಮಧ್ಯಾಹ್ನ 12 ಗಂಟೆಗೆ ನಗರ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ದೂರು ನೀಡಲಾಗುತ್ತಿದೆ. ವ್ಯಾಪಕ ಭ್ರಷ್ಟಾಚಾರದ ಅರೋಪ ಎದುರಿಸುತ್ತಿರುವ ಎಸಿಪಿ ರವಿ ಅವರು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿ, ಕಾಂಗ್ರೆಸ್ ಏಜೆಂಟರಂತೆ ವರ್ತಿಸಿ ಸುಳ್ಳು ದೂರು ದಾಖಲಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.