
ಬೆಂಗಳೂರು (ಜ.20): ಇತ್ತೀಚೆಗೆ ಸಿವಿಲ್ ಗುತ್ತಿಗೆದಾರನನ್ನು ‘ಹನಿ ಟ್ರ್ಯಾಪ್’ ಖೆಡ್ಡಾಕೆ ಕೆಡವಿ ನಗದು ಹಾಗೂ ಚಿನ್ನಾಭರಣ ಸುಲಿಗೆ ಮಾಡಿ ತಲೆಮರೆಸಿಕೊಂಡಿದ್ದ ಮಹಿಳೆ ಸೇರಿ ಇಬ್ಬರನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದು, ಈ ಪ್ರಕರಣದಲ್ಲಿ ಬಂಧಿತ ಆರೋಪಿಗಳ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.
ಮಾಗಡಿ ಮುಖ್ಯರಸ್ತೆ ತುಂಗಾನಗರ ನಿವಾಸಿ ನಯನಾ (26) ಮತ್ತು ಆಕೆಯ ಸ್ನೇಹಿತ ಮೋಹನ್ (30) ಬಂಧಿತರು. ಈ ಹಿಂದೆ ಸಹಚರರಾದ ಅಜಯ್, ಸಂತೋಷ್ ಮತ್ತು ಜಯರಾಜ್ ಎಂಬುವವರನ್ನು ಬಂಧಿಸಲಾಗಿತ್ತು. ಆರೋಪಿಗಳು ಡಿ.9ರಂದು ಮಾಗಡಿ ರಸ್ತೆ ತುಂಗಾನಗರದ ಮನೆಯೊಂದಕ್ಕೆ ಗುತ್ತಿಗೆದಾರ ರಂಗನಾಥ (57) ಅವರನ್ನು ಕರೆದೊಯ್ದು ಬೆದರಿಸಿ ನಗದು ಹಾಗೂ ಚಿನ್ನಾಭರಣ ಸುಲಿಗೆ ಮಾಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚುತ್ತಿರುವ ದರೋಡೆ, ಸುಲಿಗೆ:ಕ್ಷಿಪ್ರ ಕಾರ್ಯಾಚರಣೆಯಲ್ಲೂ ಪೊಲೀಸ್ ವೈಫಲ್ಯ!
ಪ್ರಕರಣದ ಹಿನ್ನೆಲೆ:
ದೂರುದಾರ ರಂಗನಾಥ ಸಿವಿಲ್ ಗುತ್ತಿಗೆದಾರರಾಗಿದ್ದು, ಕಳೆದ 6 ತಿಂಗಳ ಹಿಂದೆ ಶಿವು ಎಂಬ ಸ್ನೇಹಿತನ ಮುಖಾಂತರ ನಯನಾಳ ಪರಿಚಯವಾಗಿದೆ. ಬಳಿಕ ಈ ನಯನಾ ತನ್ನ ಮಗುವಿಗೆ ಹುಷಾರಿಲ್ಲ ಆಸ್ಪತ್ರೆಗೆ ತೋರಿಸಬೇಕು ಎಂದು ರಂಗನಾಥ ಬಳಿ ಫೋನ್ ಪೇ ಮುಖಾಂತರ 14 ಸಾವಿರ ರು. ಪಡೆದಿದ್ದಳು. ಹೀಗೆ ಪ್ರತಿದಿನ ರಂಗನಾಥಗೆ ಕರೆ ಮಾಡಿ ಆತ್ಮೀಯವಾಗಿ ಮಾತನಾಡಿ ಮನೆಗೆ ಕರೆಯುತ್ತಿದ್ದಳು. ಆದರೆ, ರಂಗನಾಥ ಹೋಗಿರಲಿಲ್ಲ. ಈ ನಡುವೆ ರಂಗನಾಥ ಕಾರ್ಯ ನಿಮಿತ್ತ ಡಿ.9ರಂದು ಬೆಳಗ್ಗೆ ಮಾಗಡಿ ರಸ್ತೆಯ ತುಂಗಾನಗರದ ಮಾರ್ಗವಾಗಿ ನೆಲಗದರನಹಳ್ಳಿ ಕಡೆಗೆ ದ್ವಿಚಕ್ರ ವಾಹನದಲ್ಲಿ ಹೊರಟಾಗ ನಯನಾ, ಮಾತನಾಡಿಸಿ ಮನೆಗೆ ಕರೆದಿದ್ದಾಳೆ. ಆಗ ರಂಗನಾಥ ಆಕೆಯ ಮನೆಗೆ ತೆರಳಿ ಮಾತುಕತೆಯಲ್ಲಿ ತೊಡಗಿದ್ದರು. ಈ ವೇಳೆ ಕ್ರೈಂ ಪೊಲೀಸರ ವೇಷದಲ್ಲಿ ಆರೋಪಿಗಳಾದ ಸಂತೋಷ್, ಅಜಯ್, ಜಯರಾಜ್ ಏಕಾಏಕಿ ಮನೆಗೆ ನುಗ್ಗಿದ್ದು, ನೀವು ಮನೆಯಲ್ಲಿ ವ್ಯಭಿಚಾರ ಮಾಡುತ್ತಿದ್ದೀರಾ? ಎಂದು ಬೆದರಿಸಿ 29 ಸಾವಿರ ರು. ನಗದು, ಮೈಮೇಲಿದ್ದ ₹5 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.
ಹಣ, ಚಿನ್ನಾಭರಣ ಸುಲಿಗೆ:
ಬಳಿಕ ಆರೋಪಿಗಳು ರಂಗನಾಥ ಅವರ ಬಳಿ 29 ಸಾವಿರ ರು. ನಗದು, ಮೈಮೇಲಿದ್ದ ಸುಮಾರು 5 ಲಕ್ಷ ರು. ಮೌಲ್ಯದ ಚಿನ್ನಾಭರಣ ಕಿತ್ತುಕೊಂಡಿದ್ದರು. ಮೊಬೈಲ್ ಫೋನ್ ಪೇ ಮುಖಾಂತರ 26 ಸಾವಿರ ರು. ಹಣ ವರ್ಗಾವಣೆ ಮಾಡಿಕೊಂಡು ಆಟೋ ಹತ್ತಿ ಪರಾರಿಯಾಗಿದ್ದರು. ನಯನಾ ಸಹ ದ್ವಿಚಕ್ರ ವಾಹನದಲ್ಲಿ ಆ ಆಟೋ ರಿಕ್ಷಾ ಹಿಂಬಾಲಿಸಿದ್ದಳು.
ದೂರು ಕೊಡೋಣ ಎಂದಿದ್ದಕ್ಕೆ ಬೆದರಿಕೆ ಹಾಕಿದಳು:
ಕೆಲ ಹೊತ್ತಿನ ಬಳಿಕ ರಂಗನಾಥ್ ಮೊಬೈಲ್‌ಗೆ ನಯನಾ ಕರೆ ಮಾಡಿದ್ದಾಳೆ. ಈ ವೇಳೆ ರಂಗನಾಥ, ಘಟನೆ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡೋಣ ಬಾ ಎಂದು ಕರೆದಿದ್ದಾರೆ. ಈ ವೇಳೆ ನಯನಾ, ಪೊಲೀಸ್ ದೂರು ನೀಡಿದರೆ, ನನ್ನ ಮಗುವನ್ನು ನಿನ್ನ ಮನೆಗೆ ಕರೆತಂದು ನನಗೂ ನಿನಗೂ ಸಂಬಂಧವಿದೆ ಎಂದು ಹೇಳುವುದಾಗಿ ಹೆದರಿಸಿದ್ದಳು. ಬಳಿಕ ರಂಗನಾಥ ಬ್ಯಾಡರಹಳ್ಳಿ ಠಾಣೆಗೆ ದೂರು ನೀಡಿದ್ದರು.
ಇದನ್ನೂ ಓದಿ: ಶಾಲೆ ಚೇಂಬರ್‌ನಲ್ಲೇ ಪ್ರಿನ್ಸಿಪಾಲ್ ಶಿಕ್ಷಕಿ ಚಕ್ಕಂದದ ವಿಡಿಯೋ ವೈರಲ್! ಇಬ್ಬರನ್ನೂ ಕಿತ್ತೊಗೆದ ಶಿಕ್ಷಣ ಇಲಾಖೆ!
ಹಣವಂತರಿಗೆ ಬಲೆ:
ಹಾಸನ ಮೂಲದ ನಯನಾ ವಿವಾಹಿತೆಯಾಗಿದ್ದು, ಪತಿಯಿಂದ ದೂರವಾಗಿದ್ದಾಳೆ. ಕೆಲ ವರ್ಷಗಳಿಂದ ನಗರದಲ್ಲಿ ನೆಲೆಸಿದ್ದ ನಯನಾ, ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಇತರೆ ಆರೋಪಿಗಳ ಜತೆಗೆ ಸೇರಿಕೊಂಡು ಹನಿಟ್ರ್ಯಾಪ್ ದಂಧೆಗೆ ಇಳಿದಿದ್ದಳು. ಸ್ನೇಹಿತರ ಮುಖಾಂತರ ಹಣವಂತರನ್ನು ಪರಿಚಯಿಸಿಕೊಂಡು ಬಳಿಕ ಮನೆಗೆ ಕರೆದೊಯ್ದು ಬೆದರಿಸಿ ಸುಲಿಗೆ ಮಾಡುತ್ತಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಗ್ಯಾಂಗ್ ಮತ್ತಷ್ಟು ಜನರನ್ನು ಹನಿಟ್ರ್ಯಾಪ್ ಬಲೆಗೆ ಕೆಡವಿ ಸುಲಿಗೆ ಮಾಡಿರುವ ಸಾಧ್ಯತೆಯಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ