ಪೊಲೀಸ್ ಇಲಾಖೆಯ ಮೇಲೆ ಸಂಶಯ : ಪರೀಕ್ಷೆ ನಕಲು ತನಿಖೆ ಸಿಐಡಿ ಹೆಗಲಿಗೆ

By Suvarna NewsFirst Published Nov 3, 2021, 3:06 PM IST
Highlights
  • ಪೊಲೀಸ್ ಇಲಾಖೆಯ ಮೇಲೆ ಸಂಶಯಕ್ಕೆ ಎಡೆಮಾಡಿಕೊಟ್ಟಿರುವ ಅತ್ಯಾಧುನಿಕ ತಂತ್ರಜ್ಞಾನ ವುಳ್ಳ ಬ್ಲೂಟೂತ್ ನಕಲು
  • ತನಿಖೆ ನಗರ ಅಪರಾಧ ದಳ (ಸಿಸಿಬಿ)ದಿಂದ ಅಪರಾಧ ತನಿಖಾ ವಿಭಾಗ (ಸಿಐಡಿ)ಕ್ಕೆ ವರ್ಣಾವಣೆ 

  ಬೆಳಗಾವಿ(ನ.03):  ಪೊಲೀಸ್ ಇಲಾಖೆಯ (Police Department) ಮೇಲೆ ಸಂಶಯಕ್ಕೆ ಎಡೆಮಾಡಿಕೊಟ್ಟಿರುವ ಅತ್ಯಾಧುನಿಕ ತಂತ್ರಜ್ಞಾನ ವುಳ್ಳ ಬ್ಲೂಟೂತ್ (Bluetooth) ಬಳಸಿ ನಕಲು (Copy) ಗ್ಯಾಂಗ್ ಭೇದಿಸಲು ಇದೀಗ ಖಾಕಿಯೇ (Police ) ಹೆಣಗಾಡುವಂತಾಗಿದೆ. 

ಇದರಿಂದ ಪರಿತಪಿಸುತ್ತಿರುವ ನಗರ ಪೊಲೀಸರು ಅನಿವಾರ್ಯವಾಗಿ ಈ ತನಿಖೆಯನ್ನು ನಗರ ಅಪರಾಧ ದಳ (CCB)ದಿಂದ ಅಪರಾಧ ತನಿಖಾ ವಿಭಾಗ (CID)ಕ್ಕೆ ವರ್ಣಾವಣೆ ಮಾಡುವ ಮೂಲಕ ತಮ್ಮ ಮೇಲಿನ ಆರೋಪದಿಂದ ಪಾರಾಗಲು ಮುಂದಾಗಿದೆ.

ಅ.24 ರಂದು ಪೊಲೀಸ್ ಪೇದೆ (Police Constable) ಹುದ್ದೆಗಳ ನೇಮಕಾತಿಗಾಗಿ ನಡೆದ ಸ್ಪರ್ಧಾತ್ಮಕ ಪರೀಕ್ಷೆ (Competitive Exams) ಸಮಯದಲ್ಲಿ ಅತ್ಯಾಧುನಿಕ ಬ್ಲೂಟೂತ್ ಡಿವೈಸ್ ಬಳಸಿಕೊಂಡು ನಕಲು ಮಾಡುತ್ತಿದ್ದ ಇಬ್ಬರು ಅಭ್ಯರ್ಥಿಗಳು ಹಾಗೂ ನಕಲು ಮಾಡಲು ತಂತ್ರಗಾರಿಕೆ ಗ್ಯಾಂಗ್‌ನ 12 ಜನ ಸೇರಿದಂತೆ ಒಟ್ಟು 14 ಜನರ ವಿರುದ್ಧ ನಗರದ ಖಡೆ ಬಜಾರ್, ಕ್ಯಾಂಪ್ ಹಾಗೂ ಮಾಳ ಮಾರುತಿ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಮೂರು ಪ್ರಕರಣಗಳು (Case) ದಾಖಲಾಗಿವೆ. 

ಆದರೆ, ಕಳೆದ ಎರಡು ವರ್ಷಗಳಲ್ಲಿ ನಕಲು ಹಾಗೂ ವಂಚನೆಗೆ ಸಂಬಂಧಿಸಿದಂತೆ ನಗರ ಪೊಲೀಸ್ ವ್ಯಾಪ್ತಿಯಲ್ಲಿ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಸುಮಾರು 5 ಪ್ರಕರಣಗಳು ಸಿಐಡಿಗೆ (CID) ವರ್ಗಾವಣೆ ಮಾಡಲಾಗಿದೆ ಎನ್ನಲಾಗುತ್ತಿದೆ. ಅಕ್ರಮ ದಂಧೆಗೆ ಸಂಬಂಧಿಸಿದಂತೆ ದಾಖಲಾದ ಪ್ರಕರಣಗಳ ಪೈಕಿ ಇತ್ತೀಚೆಗೆ ಎರಡ್ಮೂರು ಪ್ರಕರಣಗಳು ಸದ್ಯ ಖಾಕಿ ಬಲೆಯಲ್ಲಿರುವ ಗ್ಯಾಂಗ್‌ನ ಹಿನ್ನೆಲೆಯುಳ್ಳವರಾಗಿದ್ದಾರೆ ಎಂಬುವುದು ಆಘಾತಕಾರಿ ವಿಷಯವಾಗಿದೆ.

ಈ ಹಿಂದೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಗಳ ಸಂದರ್ಭದಲ್ಲಿ ನಕಲು ಮಾಡಲು ಹೋಗಿ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದವರ ಪೈಕಿ ಬಹುತೇಕ ಆರೋಪಿಗಳು ಗೋಕಾಕ (Gokak) ಹಾಗೂ ಮೂಡಲಗಿ ತಾಲೂಕಿನ ಕೆಲವು ಗ್ರಾಮಗಳವರಾಗಿದ್ದಾರೆ. ಪ್ರತಿಯೊಂದು ಅಕ್ರಮ ಪ್ರಕರಣದ ಹಿನ್ನೆಲೆ ಗಮನಿಸಿದ್ದಲ್ಲಿ ಸದ್ಯ ಸಿಕ್ಕಿಹಾಕಿಕೊಂಡಿರುವವರ ಕೃಪಾ ಕಟಾಕ್ಷದಿಂದ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಈ ಹಿಂದೆ ನಡೆದ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಅಕ್ರಮ ದಂಧೆಕೋರರನ್ನು ಹೆಡೆಮುರಿ ಕಟ್ಟಿದ್ದರೆ, ಇದೀಗ ಈ ಗ್ಯಾಂಗ್ (Gang) ಇಷ್ಟೊಂದು ಪ್ರಮಾಣದಲ್ಲಿ ಬೇರೂರಲು ಸಾಧ್ಯವಾಗುತ್ತಿರಲಿಲ್ಲ.

ಈ ಹಿಂದಿನ ಪ್ರಕರಣಗಳನ್ನು ಲಘುವಾಗಿ ಪರಿಗಣಿಸಿದ್ದೇ ಇದೀಗ ಗ್ಯಾಂಗ್ ಕಬಂಧ ಬಾಹು ವಿಸ್ತರಿಸಲು ಸಾಧ್ಯವಾಗಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಮೇಲಿಂದ ಮೇಲೆ ಇಂತಹ ಪ್ರಕರಣಗಳಿಂದ ಬೆಳಗಾವಿ ಪೊಲೀಸರು (Belagavi Police) ಮುಜುಗರಪಡುತ್ತಿರುವ ಹಿನ್ನೆಲೆ ಹಾಗೂ ಈ ಗ್ಯಾಂಗ್‌ಗೆ ಪೊಲೀಸರು ಹಾಗೂ ಇನ್ನೂ ಪ್ರಭಾವಿಗಳಿರುವ ಬಗ್ಗೆ ಮೇಲ್ನೋಟಕ್ಕೆ ಮನಗಂಡಿರುವ ನಗರ ಪೊಲೀಸರು, ಈ ಪ್ರಕರಣವನ್ನು ಭೇದಿಸಲು ಹೆಣಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. 

ಆದ್ದರಿಂದ ಈ ಅತ್ಯಾಧುನಿಕ ತಂತ್ರಜ್ಞಾನಯುಳ್ಳ ಬ್ಲೂಟೂತ್ ಡಿವೈಸ್ ಬಳಸಿ ನಕಲು ಮಾಡುತ್ತಿರುವ ಪ್ರಕರಣವನ್ನು ಅಪರಾಧ ತನಿಖಾ ವಿಭಾಗ (CID)ಕ್ಕೆ ವರ್ಗಾವಣೆ ಮಾಡುವ ಮೂಲಕ ಈ ಪ್ರಕರಣದ ತನಿಖೆಯ ಸಂಪೂರ್ಣ ಜವಾಬ್ದಾರಿಯಿಂದ ನಗರ ಪೊಲೀಸರು ಕೈ ತೊಳೆದುಕೊಳ್ಳಲಿದ್ದಾರೆ.

ಕಾಣದ ಖಾಕಿ ಉಳಿಸಲು ಕಸರತ್ತು

ಪೊಲೀಸ್ ಪೇದೆ ಹುದ್ದೆಗಳ ನೇಮಕಾತಿಗಾಗಿ(Recruitment) ಸ್ಪರ್ಧಾತ್ಮಕ ಪರೀಕ್ಷೆ ಸಮಯದಲ್ಲಿ ನಡೆದ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಕಲು ಪ್ರಕರಣದಲ್ಲಿ ಖಾಕಿ ಕೈ ಇರುವುದು ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ಈ ಪ್ರಕರಣವು ತಿರುವು ಪಡೆದುಕೊಂಡಿದೆ. ಆದರೆ ಈ ಪ್ರಕರಣದಲ್ಲಿ ಪೊಲೀಸರನ್ನು ವಿಚಾರಣೆ ನಡೆಸಿದ್ದೇ ಆದಲ್ಲಿ ಇಲಾಖೆಗೆ ಮುಜುಗರವಾಗಲಿದೆ ಎಂಬ ಲೆಕ್ಕಾಚಾರ ಪೊಲೀಸ್ ಅಧಿಕಾರಿಗಳದ್ದಾಗಿದೆ ಎನ್ನಲಾಗುತ್ತಿದೆ.

ಅ.24ರಂದು ಪೊಲೀಸ್(Police) ಪೇದೆ ಹುದ್ದೆಗಳಿಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ(Competitive Exam) ಅತ್ಯಾಧುನಿಕ ತಂತ್ರಜ್ಞಾನಯುಳ್ಳ ಬ್ಲೂಟೂತ್(Bluetooth) ಉಪಯೋಗಿಸಿ ನಕಲು(Copy) ಮಾಡುತ್ತಿದ್ದ ವೇಳೆ, ಇಬ್ಬರನ್ನು ಅಭ್ಯರ್ಥಿ(Candidate) ಹಾಗೂ 12 ಜನ ನಕಲು ಮಾಡಲು ಸಹಕಾರ ನೀಡಿದವರು ಸೇರಿದಂತೆ ಒಟ್ಟು 14 ಜನರ ವಿರುದ್ಧ ನಗರದ ಮೂರು ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು(Cases) ದಾಖಲಾಗಿವೆ. ಆದರೆ ಈ ಅಕ್ರಮ(Illegal) ದಂಧೆ ಹಿಂದಿರುವ ಓರ್ವ ಮುಖ್ಯಪೇದೆಯ ಪುತ್ರನನ್ನು ಬಂಧಿಸಲಾಗಿದೆ. ಈಗಾಗಲೇ ಪೊಲೀಸ್ ಬಲೆಯಲ್ಲಿರುವ ದಂಧೆಕೋರರ ವಿಚಾರಣೆ ಸಮಯದಲ್ಲಿ ನಗರದಲ್ಲಿರುವ ಕೆಎಸ್‌ಆರ್‌ಪಿ(KSRP) ಪೇದೆ ಹಾಗೂ ಮೂಲಗಳ ಪ್ರಕಾರ ಮುಖ್ಯಪೇದೆಯೂ ಈ ದಂಧೆಗೆ ಸಹಕಾರ ನೀಡುತ್ತಿದ್ದ ಎಂದು ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ.

ಆದರೆ, ಇದುವರೆಗೂ ಇಡೀ ಇಲಾಖೆಯನ್ನೆ(Police Department) ನಿದ್ದೆಗೆಡಿಸಿದ್ದಲ್ಲದೇ, ಮುಜುಗರಕ್ಕೀಡಾಗುವಂತೆ ಮಾಡಿರುವ ಇಬ್ಬರೂ ಪೇದೆಗಳನ್ನು ವಿಚಾರಣೆ ನಡೆಸದೇ ಇರುವುದು ಇದೀಗ ಜನರ ಅನುಮಾನಕ್ಕೆ ಕಾರಣವಾಗಿದೆ. ಪರೀಕ್ಷಾರ್ಥಿಗಳ ಹಾಗೂ ಸಹಕಾರ ನೀಡುತ್ತಿದ್ದ ಒಟ್ಟು 14 ಜನರ ವಿರುದ್ಧ ನಗರ ಪೊಲೀಸ್ ಕಮಿಷನ್‌ರೇಟ್ ವ್ಯಾಪ್ತಿಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದರಿಂದ ಈ ಪ್ರಕರಣದ ತನಿಖೆಯ(Investigation) ಸಂಪೂರ್ಣ ಜವಾಬ್ದಾರಿ ನಗರ ಪೊಲೀಸರ ಮೇಲಿದೆ. ಅಲ್ಲದೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರಿಗೆ ತನಿಖೆ ಕಾರ್ಯವನ್ನು ಆಯುಕ್ತ ಡಾ.ಕೆ.ತ್ಯಾಗರಾಜನ್ ಅವರು ವಹಿಸಿದ್ದಾರೆ. ಈ ಪ್ರಕರಣ ನಡೆದು ಒಂದುವಾರ ಕಳೆದರೂ ಇದುವರೆಗೂ ಪ್ರಕರಣದಲ್ಲಿನ ಭಾಗಿಯಾಗಿದ್ದಾರೆ ಎನ್ನಲಾದ ಇಬ್ಬರೂ ಪೊಲೀಸ್ ಪೇದೆಗಳ ವಿಚಾರಣೆ ನಡೆಸಿಲ್ಲ ಎಂದು ತಿಳಿದುಬಂದಿದೆ.

click me!