ಬೆಂಗಳೂರು ಪೊಲೀಸರಿಂದ ಭೇದಿಸಲಾಗದ ಮಹಿಳೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು 11 ವರ್ಷದ ಬಳಿಕ ಸಿಐಡಿ ಪೊಲೀಸರು ಭೇದಿಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಂಗಳೂರು (ಮೇ 24): ಬೆಂಗಳೂರಿನಲ್ಲಿ ಕಳೆದ 11 ವರ್ಷದ ಹಿಂದೆ ಅಂದರೆ 2013ರಲ್ಲಿ ನಡೆದಿದ್ದ ರೇಪ್ ಅಂಡ್ ಮರ್ಡರ್ ಕೇಸ್ ಅನ್ನು ಕರ್ನಾಟಕ ರಾಜ್ಯ ಪೊಲೀಸರು ಭೇದಿಸಲಾಗಿದೇ ಸಿ ರಿಪೋರ್ಟ್ ಸಲ್ಲಿಸಿ ಕೈ ತೊಳೆದುಕೊಂಡಿದ್ದರು. ಆದರೆ, ಗಂಡನ ಕಾನೂನು ಹೋರಾಟದ ನಂತರ ಸಿಐಡಿ ತನಿಖೆಗೆ ನೀಡಲಾಯಿತು. ಪ್ರಕರಣ ಕೈಗೆತ್ತಿಕೊಂಡ ಸಿಐಡಿ ಪೊಲೀಸರು 11 ವರ್ಷದ ಹಿಂದಿನ ಪ್ರಕರಣವನ್ನು ಭೇದಿಸಿ ಕೃತ್ಯವೆಸಗಿದ್ದ ಮೂವರು ಆರೋಪಿಗಳನ್ನು ಹೆಡೆಮುರಿಕಟ್ಟಿ ಜೈಲಿಗಟ್ಟಿದ್ದಾರೆ.
ಹೌದು, ಹನ್ನೊಂದು ವರ್ಷದ ಹಿಂದೆ ರೇಪ್ ಮಾಡಿ ಮರ್ಡರ್ ಮಾಡಿದ್ದ ಆರೋಪಿಗಳನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ನರಸಿಂಹ ಮೂರ್ತಿ, ದೀಪಕ್, ಹರಿ ಪ್ರಸಾದ್ ಬಂಧಿತ ಆರೋಪಿಗಳು. 2013ರ ಫೆಬ್ರುವರಿ 15ನೇ ತಾರೀಖು ಕೃತ್ಯ ಎಸಗಿದ್ದರು. ವಿಜಯಾ ಎಂಬ ಮಹಿಳೆಯನ್ನು ಎತ್ತಿಕೊಂಡು ಹೋಗಿ ನೀಲಗಿರಿ ತೋಪಿನಲ್ಲಿ ಕೂಡಿಹಾಕಿ ಅತ್ಯಾಚಾರವೆಸಗಿ ನಂತರ ಭೀಕರವಾಗಿ ಕೊಲೆ ಮಾಡಿ ಬೀಸಾಡಿ ಹೋಗಿದ್ದರು. ಆದರೆ, ತೀವ್ರ ದುರ್ವಾಸನೆ ಬೀರುತ್ತಿದ್ದ ಬಗ್ಗೆ ಸ್ಥಳೀಯರು ಹೋಗಿ ನೋಡಿದಾಗ ಮಹಿಳೆ ಕೊಲೆಯಾಗಿರುವ ಘಟನೆ ಬೆಳಕಿಗೆ ಬಂದಿತು.
ಕೇವಲ 2000 ರೂ.ಗೆ ಬೆಂಗಳೂರು ಯುವತಿ ಪ್ರಭುಧ್ಯಾಳ ಮರ್ಡರ್
ಬೆಂಗಳೂರಿನ ಖಾಸಗಿ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಬಾಲಕೃಷ್ಣ ಪೈ ಅವರ ಹೆಂಡತಿ ವಿಜಯಾ ಕೊಲೆಯಾದ ಮಹಿಳೆ ಆಗಿದ್ದಾಳೆ. ಪತಿ ಬಾಲಕೃಷ್ಣ ಪೈ ಅವರ ಬ್ಯಾಂಕ್‌ನಲ್ಲಿಯೇ ಆರೋಪಿಗಳಾದ ನರಸಿಂಹಮೂರ್ತಿ ಹಾಗೂ ಹರಿಪ್ರಸಾದ್ ಕೆಲಸ ಮಾಡುತ್ತಿದ್ದರು. ಇವರೊಂದಿಗೆ ನರಸಿಂಹಮೂರ್ತಿಯ ಸ್ನೇಹಿತ ದೀಪಕ್ ಕೂಡ ಕೈ ಜೋಡಿಸಿದ್ದನು. ಒಂದೇ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಬಾಲಕೃಷ್ಣ ಪೈ ಹೆಂಡತಿಯನ್ನು ನಿಮ್ಮ ಗಂಡನಿಗೆ ತೊಂದರೆಯಾಗಿದೆ ಎಂದು ತಾವಿದ್ದ ಜಾಗಕ್ಕೆ ಕರೆಸಿಕೊಂಡು ಕಿಡ್ನಾಪ್ ಮಾಡಿಕೊಂಡು ಹೋಗಿ ಚಿಕ್ಕಜಾಲ ಪೊಲೀಸ್ ಠಾಣೆಯ ಮುತ್ತುಕದಹಳ್ಳಿ ಗ್ರಾಮದ ನೀಲಗಿರಿ ತೋಪಿನಲ್ಲಿ ಅತ್ಯಾಚಾರ ಎಸಗಿದ್ದಾರೆ. ನಂತರ, ಮಹಿಳೆಯನ್ನು ಅಲ್ಲಿಯೇ ಕೊಲೆ ಮಾಡಿ ಬೀಸಾಡಿ ಬಂದಿದ್ದರು. ಇನ್ನು ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದರಿಂದ ಆರೋಪಿಗಳು ಯಾವ ಸುಳಿವೂ ಸಿಗದಂತೆ ಎಸ್ಕೇಪ್ ಆಗಿದ್ದರು.
ಇನ್ನು ರಾಜ್ಯ ಪೊಲೀಸರು ಮಹಿಳೆಯ ಗಂಡ ಬಾಲಕೃಷ್ಣ ಪೈ ಅವರೇ ಆರೋಪಿ ಎಂದು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಇವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ತಪ್ಪಿತಸ್ಥನಂತೆಯೇ ಬಿಂಬಿಸಲು ಮುಂದಾಗಿದ್ದರು. ಆದರೆ, ಬಾಲಕೃಷ್ಣ ಪೈ ಅವರು ಕೊಲೆ ಮಾಡಿದ್ದಾರೆ ಎಂಬ ಆರೊಪಕ್ಕೆ ಯಾವುದೇ ಸಾಕ್ಷಾಧಾರಗಳೂ ಕೂಡ ಸಿಕ್ಕಿರಲಿಲ್ಲ. ಇದರಿಂದ ಬೆಂಗಳೂರು ಪೊಲೀಸರು ನ್ಯಾಯಾಲಯಕ್ಕೆ 'ಸಿ' ರಿಪೋರ್ಟ್ (ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆ ಮಾಡಲು ಸಾಕ್ಷಾಧಾರಗಳು ಸಿಗುತ್ತಿಲ್ಲ) ಸಲ್ಲಿಕೆ ಮಾಡಿದ್ದರು.
ಸಿನಿಮಾ ನಟಿ ಹೇಮಾ ಇಷ್ಟು ದೊಡ್ಡ ಮಾದಕ ವ್ಯಸನಿಯಾ? ಆಕೆ ತೆಗೆದುಕೊಂಡಿದ್ದ ಡೇಂಜರಸ್ ಡ್ರಗ್ಸ್ ಇಲ್ಲಿದೆ ನೋಡಿ..
ಹೆಂಡತಿಯನ್ನು ಕಳೆದುಕೊಂಡು ದುಃಖದಲ್ಲಿದ್ದ ಬಾಲಕೃಷ್ಣ ಪೈ ಅವರು ತಮ್ಮದಲ್ಲದ ತಪ್ಪಿಗೆ ನ್ಯಾಯಾಂಗ ಬಂಧನದ ಅವಧಿಯಲ್ಲಿ ಜೈಲು ಶಿಕ್ಷೆಯನ್ನೂ ಅನುಭವಿಸಿ ಬಂದಿದ್ದರು. ಇದರಿಂದ ನೋವಿನಲ್ಲಿದ್ದ ಬಾಲಕೃಷ್ಣ ಅವರು ಹೈಕೋರ್ಟ್ ಮೊರೆ ಹೋಗಿ ನ್ಯಾಯಕ್ಕಾಗಿ ಮನವಿ ಮಾಡಿದ್ದರು. ನಂತರ ಗಂಭೀರ ಪ್ರಕರಣವೆಂದು ಪರಿಗಣಿಸಿ ಸಿಐಡಿ ಪೊಲೀಸರ ತನಿಖೆಗೆ ಒಪ್ಪಿಸಿದ್ದರು. 11 ವರ್ಷದ ಹಳೆಯ ಪ್ರಕರಣವಾದರೂ ತಂತ್ರಜ್ಞಾನದ ಸಹಾಯದೊಂದಿಗೆ ಪ್ರಕರಣ ಭೇದಿಸುತ್ತಾ ಹೋದ ಸಿಐಡಿ ಪೊಲೀಸರಿಗೆ ಆರೋಪಿಗಳ ಸುಳಿವು ಸಿಕ್ಕಿದೆ. ನಂತರ, ಬಾಲಕೃಷ್ಣ ಪೈ ಅವರ ಸಹೋದ್ಯೋಗಿಗಳಾಗಿ ಕೆಲಸ ಮಾಡುತ್ತಿದ್ದವರೇ ಅತ್ಯಾಚಾರ ಆರೋಪಿಗಳು ಎಂದು ತಿಳಿದುಬಂದಿದ್ದು, ಅವರನ್ನು ಬಂಧಿಸಿದ್ದಾರೆ. ಜೊತೆಗೆ, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನೂ ಸಲ್ಲಿಕೆ ಮಾಡಿದ್ದಾರೆ.