
ಚಿಕ್ಕಮಗಳೂರು(ಡಿ.13): ಬರೋಬ್ಬರಿ 10 ವರ್ಷಗಳಿಂದ ಪ್ರೀತಿಸಿದ ಯುವತಿಗೆ ಮೋಸ ಮಾಡಿ, ಆಕೆಯಿಂದ ಹಣ ಪಡೆದು, ಈಗ ಬೇರೆ ಮದುವೆಗೆ ಸಿದ್ಧನಾಗಿದ್ದ ಯುವಕನ ಮನೆ ಮುಂದೆ ಸಂತ್ರಸ್ತ ಯುವತಿ ಗಲಾಟೆ ಮಾಡಿರುವ ಘಟನೆ ಚಿಕ್ಕಮಗಳೂರು ನಗರದ ಕಲ್ಯಾಣ ನಗರದಲ್ಲಿ ನಡೆದಿದೆ.
ಹಾಸನ ಜಿಲ್ಲೆಯ ಬೇಲೂರು ಮೂಲದವರಾದ ಅಶ್ವಿನಿ ಎಂಬ ಯುವತಿ, ಕಲ್ಯಾಣ ನಗರದ ನಿವಾಸಿ ಶರತ್ ಎಂಬ ಯುವಕನನ್ನು ಕಳೆದ 10 ವರ್ಷಗಳಿಂದ ಪ್ರೀತಿಸುತ್ತಿದ್ದರು. ಈ ನಡುವೆ ಶರತ್‌ನು ಅಶ್ವಿನಿಯಿಂದ 4.5 ಲಕ್ಷ ರೂಪಾಯಿ ಹಣವನ್ನೂ ಪಡೆದಿದ್ದ ಎನ್ನಲಾಗಿದೆ. ಆದರೆ, ಶರತ್‌ಗೆ ಈ ಮೊದಲೇ ಮದುವೆಯಾಗಿ ಕೇವಲ ಎರಡು ತಿಂಗಳಲ್ಲಿ ವಿಚ್ಛೇದನ (Divorce) ಆಗಿರುವ ವಿಷಯವನ್ನು ಮುಚ್ಚಿಟ್ಟು ಅಶ್ವಿನಿಯನ್ನು ಪ್ರೀತಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಮದುವೆಯಾಗುವುದಾಗಿ ಅಶ್ವಿನಿಯ ತಾಯಿಯ ಬಳಿಗೂ ಹೋಗಿ ಭರವಸೆ ನೀಡಿದ್ದ ಕಾರಣ, ಅಶ್ವಿನಿ ತಾಯಿ ಮಗಳಿಗೆ ಬಂದಿದ್ದ ಐದು ಉತ್ತಮ ಮದುವೆ ಸಂಬಂಧಗಳನ್ನು ನಿರಾಕರಿಸಿದ್ದರು.
ಸದ್ಯ ಶರತ್ ನಾಳೆ ಬೇರೆ ಹುಡುಗಿಯೊಂದಿಗೆ ಮದುವೆಯಾಗಲು ಸಿದ್ಧತೆ ನಡೆಸಿದ್ದಾನೆ. ಇದರಿಂದ ಆಕ್ರೋಶಗೊಂಡ ಅಶ್ವಿನಿ, ಇಂದು ಚಿಕ್ಕಮಗಳೂರು ತಾಲೂಕಿನ ಕಲ್ಯಾಣ ನಗರದಲ್ಲಿರುವ ಶರತ್‌ನ ಮನೆ ಮುಂದೆ ಬಂದು ನ್ಯಾಯಕ್ಕಾಗಿ ಗಲಾಟೆ ಮಾಡಿದ್ದಾರೆ. 'ಈಗ ನನಗೆ ಮೋಸ ಮಾಡಿದ್ದಾನೆ, ನಾಳೆ ಬೇರೆ ಹುಡುಗಿಗೂ ಮೋಸ ಮಾಡ್ತಾನೆ. ಇವನನ್ನು ಹೀಗೆ ಬಿಡಬಾರದು' ಎಂದು ಅಶ್ವಿನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ಅಶ್ವಿನಿ ಈಗಾಗಲೇ ಆರೋಪಿ ಶರತ್ ವಿರುದ್ಧ ಅಟ್ರಾಸಿಟಿ ಸೇರಿದಂತೆ ಒಟ್ಟು ಮೂರು ಪ್ರಕರಣಗಳನ್ನು ದಾಖಲಿಸಿದ್ದಾರೆ. ಆದರೆ ಶರತ್ ಎಲ್ಲಾ ಕೇಸ್‌ಗಳಿಗೂ ನ್ಯಾಯಾಲಯದಿಂದ ಸ್ಟೇ ತಂದು ಬೇರೆ ಮದುವೆಯಾಗಲು ಮುಂದಾಗಿರುವುದು ಆಶ್ಚರ್ಯ ತಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ