ಚಿಕ್ಕಮಗಳೂರಿನಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿಯನ್ನು ಕೊಲೆ ಮಾಡಲಾಗಿದೆ. 110 ಗ್ರಾಂ ಚಿನ್ನ ನೀಡಿದ್ದರೂ ಕಿರುಕುಳ ನೀಡುತ್ತಿದ್ದರು. ಮೃತದೇಹವನ್ನು ಆಸ್ಪತ್ರೆಯಲ್ಲಿ ಬಿಟ್ಟು ಮಗುವನ್ನು ಕಿಡ್ನಾಪ್ ಮಾಡಿದ್ದಾರೆ ಎಂದು ಪೋಷಕರು ದೂರು ನೀಡಿದ್ದಾರೆ.
ವರದಿ : ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಮಾ.28): ಕಳೆದ ನಾಲ್ಕು ವರ್ಷಗಳ ಹಿಂದೆ 110 ಗ್ರಾಂ ಚಿನ್ನ ನೀಡಿ ಅದ್ಧೂರಿಯಾಗಿ ಮಗಳನ್ನು ಕೊಟ್ಟು ಮದುವೆ ಮಾಡಿಕೊಟ್ಟರೂ ಗಂಡನ ಮನೆಯವರಿಗೆ ವರದಕ್ಷಿಣೆ ದಾಹ ತೀರಲೇ ಇಲ್ಲ. ವರದಕ್ಷಿಣೆ ಕಿರುಕುಳಕ್ಕೆ ಗಂಡನ ಮನೆಯವರೇ ಮಗಳನ್ನು ಹಲ್ಲೆ ಮಾಡಿ, ನೇಣು ಹಾಕಿ ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವ ನಾಟಕ ಮಾಡಿ ಕೊಂದೇ ಬಿಟ್ಟಿದ್ದಾರೆ. ಇದೀಗ ಹೆಂಡತಿ ಶವವನ್ನೂ ಆಸ್ಪತ್ರೆಯಲ್ಲಿ ಬಿಟ್ಟು ಆಕೆಯ ಮಗುವನ್ನು ಕಿಡ್ನಾಪ್ ಮಾಡಿಕೊಂಡು ಪರಾರಿ ಆಗಿದ್ದಾರೆ ಎಂದು ಮೃತ ಮಹಿಳೆ ಪೋಷಕರು ದೂರು ನೀಡಿದ್ದಾರೆ.
ವರದಕ್ಷಿಣೆ ಕಿರುಕುಳಕ್ಕೆ ಮಲೆನಾಡಿನ ಗೃಹಿಣಿ ಬಲಿಯಾಗಿದ್ದಾಳೆ. ಕಳೆದ 4 ವರ್ಷಗಳ ಹಿಂದಷ್ಟೇ ಅದ್ಧೂರಿಯಾಗಿ ಮದುವೆಯಾಗಿದ್ದ ಮಮತಾ ಮೃತ ದುರ್ದೈವಿ. ಚಿಕ್ಕಮಗಳೂರು ಜಿಲ್ಲೆ, ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಘಟನೆ ನಡೆದಿದೆ. ಮದುವೆ ವೇಳೆ 110 ಗ್ರಾಂ ಚಿನ್ನ ನೀಡಿ ಮದುವೆ ಮಾಡಿದ್ದ ಮಮತಾ ಪೋಷಕರು. ಹಣಕ್ಕಾಗಿ ಗಂಡನ ಮನೆಯವರಿಂದ ಮಾನಸಿಕ-ದೈಹಿಕ ಕಿರುಕುಳ ನೀಡಿದ್ದಾರೆ. ಇದರಿಂದ ಹಿಂಸೆ ತಾಳಲಾರದೆ ಮಮತಾ ಗಂಡನ ಮನೆ ಬಿಟ್ಟು ತವರು ಸೇರಿದ್ದಳು. ದೊಡ್ಡವರ ರಾಜಿ-ಪಂಚಾಯಿತಿ ಮೂಲಕ ಮತ್ತೆ ಗಂಡನ ಮನೆ ಸೇರಿಸಲಾಗಿತ್ತು.
ಕಳೆದ ವರ್ಷ ತೋಟದ ನಿರ್ವಹಣೆಗೆಂದು 50 ಸಾವಿರ ರೂ. ಪಡೆದುಕೊಂಡಿದ್ದ ಮಮತಾ ಪತಿ ಅವಿನಾಶ್. ಜನವರಿ 25ರಂದು ಮಮತಾಗೆ ಪಿಡ್ಸ್ ಬಂದಿದೆ ಎಂದು ಆಸ್ಪತ್ರೆಗೆ ಸೇರಿಸಿದ್ದನು. ಅವಿನಾಶ್ ಚಿಕ್ಕಪ್ಪ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆಂದು ಮಾಹಿತಿ ನೀಡಿದ್ದನು. ಆದರೆ, ಗಂಡನ ಮನೆಯವರು ವರದಕ್ಷಿಣೆ ಕಿರುಕುಳಕ್ಕೆ ಹೊಡೆದು ನೇಣು ಹಾಕಿ ಆಸ್ಪತ್ರೆಗೆ ಕರೆತಂದಿದ್ದಾರೆ ಎಂದು ಮಹಿಳೆಯ ಪೋಷಕರು ಆರೋಪ ಮಾಡಿದ್ದಾರೆ. ಇದಾದ ನಂತರ ಮಹಿಳೆಯ ತವರು ಮನೆಯವರು ಕಳೆದ 2 ತಿಂಗಳಿಂದ ಚಿಕ್ಕಮಗಳೂರಿನ ಫಾದರ್ ಮುಲ್ಲರ್, ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ, ಮಮತಾ ಹುಷಾರಾಗುವ ಮುನ್ನವೇ ಗಂಡನ ಮನೆಯವರು ಮನೆಗೆ ಕರೆತಂದಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಮುದ್ದಾದ ಹೆಂಡತಿ ಕೊಂದು, ಸೂಟ್‌ಕೇಸ್‌ಗೆ ತುಂಬಿದ ಪತಿರಾಯ!
ಇದೀಗ ಮಮತಾಳನ್ನು ಮನೆಗೆ ಕರೆದುಕೊಂಡು ಬಂದ ಬಳಿಕ ಮನೆಯಲ್ಲೇ ಸಾವಿಗೀಡಾಗಿದ್ದಾಳೆ. ಮಮತಾ ಗಂಡ, ಅತ್ತೆ-ಮಾವನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ಮೃತ ಮಹಿಳೆಯ ಅಣ್ಣ ಮಂಜುನಾಥ್ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ಬಾಳೆಹೊನ್ನೂರು ಪೊಲೀಸ್ ಠಾಣೆ ಮುಂದೆ ಮೃತಳ ಪೋಷಕರಿಂದ ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಮಹಿಳೆ ಸಾವನ್ನಪ್ಪುತ್ತಿದ್ದಂತೆ ಆಕೆಯ 2 ವರ್ಷದ ಮಗುವನ್ನ ಕರೆದುಕೊಂಡು ಹೋಗಿದ್ದಾರೆ.ನ ಇದೀಗ ಮಹಿಳೆಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ತಂದಿದ್ದು, ಇದೀಗ ಶವವನ್ನು ಆಸ್ಪತ್ರೆಯಿಂದ ತೆಗೆದುಕೊಂಡು ಹೋಗದೇ, ಕನಿಷ್ಠ ಆಕೆಯ 2 ವರ್ಷದ ಮಗುವನ್ನು ಅಮ್ಮನ ಮುಖ ನೋಡಲು ವಾಪಸ್ ಕರೆದುಕೊಂಡು ಬರಬೇಕು. ಅಲ್ಲಿವರೆಗೂ ಆಸ್ಪತ್ರೆಯಿಂದ ಶವ ತೆಗೆಯಲು ಬಿಡುವುದಿಲ್ಲ ಎಂದು ಪೊಲೀಸ್ ಠಾಣೆ ಎದುರು ಪ್ರತಿಭಟನೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ಚಿನ್ನ ಅಕ್ರಮ ಸಾಗಣೆ ಪ್ರಕರಣ: ನಟಿ ರನ್ಯಾ ರಾವ್‌ಗೆ ಬೇಲ್ ಇಲ್ಲ, ಕಾರಣವೇನು?