ವೈವಾಹಿಕ ವೆಬ್‌ಸೈಟ್‌ನಲ್ಲಿ ಪರಿಚಿತನಾದ ವ್ಯಕ್ತಿ ತಾನು ಐಎಎಸ್ ಅಧಿಕಾರಿ ಎಂದು ಹೇಳಿಕೊಂಡು ಮದುವೆಯಾಗುವುದಾಗಿ ನಂಬಿಸಿ 42 ವರ್ಷದ ಮಹಿಳೆಯಿಂದ ₹3.50 ಲಕ್ಷ ಪಡೆದು ಬಳಿಕ ಹೆಚ್ಚಿನ ಹಣಕ್ಕೆ ಬ್ಲ್ಯಾಕ್‌ಮೇಲ್ ಮಾಡಿದ ಆರೋಪದಡಿ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು (ಮಾ.28): ವೈವಾಹಿಕ ವೆಬ್‌ಸೈಟ್‌ನಲ್ಲಿ ಪರಿಚಿತನಾದ ವ್ಯಕ್ತಿ ತಾನು ಐಎಎಸ್ ಅಧಿಕಾರಿ ಎಂದು ಹೇಳಿಕೊಂಡು ಮದುವೆಯಾಗುವುದಾಗಿ ನಂಬಿಸಿ 42 ವರ್ಷದ ಮಹಿಳೆಯಿಂದ ₹3.50 ಲಕ್ಷ ಪಡೆದು ಬಳಿಕ ಹೆಚ್ಚಿನ ಹಣಕ್ಕೆ ಬ್ಲ್ಯಾಕ್‌ಮೇಲ್ ಮಾಡಿದ ಆರೋಪದಡಿ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಂಚನೆಗೆ ಒಳಗಾದದ ಭುವನೇಶ್ವರಿನಗರದ ಹನುಮಂತಪ್ಪ ಲೇಔಟ್‌ನ ರೇಷ್ಮಾ (ಹೆಸರು ಬದಲಿಸಲಾಗಿದೆ) ಅವರು ನೀಡಿದ ದೂರಿನ ಮೇರೆಗೆ ಆಂಧ್ರಪ್ರದೇಶ ಮೂಲದ ನಲ್ಲಪಟ್ಟಿ ಜೀವನ್ ಕುಮಾರ್ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಬಿಎನ್‌ಎಸ್ ಕಾಯ್ದೆ ವಿವಿಧ ಕಲಂಗಳ ಅಡಿ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಪ್ರಕರಣದ ವಿವರ: ದೂರುದಾರೆ ರೇಷ್ಮಾ ಅವರು ಮದುವೆಯಾಗಲು ವರನಿಗಾಗಿ ಹುಡುಕಾಡುತ್ತಿದ್ದರು. ವೈವಾಹಿಕ ವೆಬ್‌ಸೈಟ್‌ವೊಂದರಲ್ಲಿ ತಮ್ಮ ಸ್ವ ಪರಿಚಯದ ಮಾಹಿತಿ ನೀಡಿ ನೋಂದಣಿ ಮಾಡಿಕೊಂಡಿದ್ದರು. ಅದರಂತೆ 2024ರ ಮೇ ತಿಂಗಳಲ್ಲಿ ವೆಬ್‌ಸೈಟ್‌ನಲ್ಲಿ ನಲ್ಲಪಟ್ಟಿ ಜೀವನ್ ಕುಮಾರ್ ಪರಿಚಯವಾಗಿದೆ. ತಾನು ಐಎಎಸ್ ಅಧಿಕಾರಿ ಎಂದು ಹೇಳಿಕೊಂಡಿರುವ ಜೀವನ್, ಮದುವೆ ಆಗುವುದಾಗಿ ರೇಷ್ಮಾ ಅವರನ್ನು ನಂಬಿಸಿದ್ದಾನೆ. ಬಳಿಕ ಇಬ್ಬರು ಪರಸ್ಪರ ಮೊಬೈಲ್‌ನಲ್ಲಿ ಮಾತನಾಡಲು ಆರಂಭಿಸಿದ್ದಾರೆ. ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಂಡು ಮತ್ತಷ್ಟು ಹತ್ತಿರವಾಗಿದ್ದಾರೆ.
ತಾಯಿಗೆ ಕ್ಯಾನ್ಸರ್ ನೆಪವೊಡ್ಡಿ ಹಣ ಸುಲಿಗೆ: ಈ ನಡುವೆ ಜೀವನ್ ಕುಮಾರ್ ತನ್ನ ತಾಯಿ ಕ್ಯಾನ್ಸರ್ ರೋಗಿಯಾಗಿದ್ದು, ಅವರ ಚಿಕಿತ್ಸೆ ಹಾಗೂ ಇತರೆ ಖರ್ಚುಗಳಿಗೆ ಹಣದ ಅಗತ್ಯವಿದೆ ಎಂದು ಹೇಳಿಕೊಂಡಿದ್ದಾನೆ. 2024ರ ಮೇ 27ರಿಂದ 2025ರ ಜ.18ರ ವರೆಗೆ ರೇಷ್ಮಾ ಅವರಿಂದ ₹3.50 ಲಕ್ಷ ಪಡೆದಿದ್ದಾನೆ. ಕೆಲ ದಿನಗಳ ಬಳಿಕ ಮತ್ತೆ ₹5 ಲಕ್ಷ ಕೇಳಿದ್ದಾನೆ. ಈ ವೇಳೆ ರೇಷ್ಮಾ ತನ್ನ ಬಳಿ ಯಾವುದೇ ಹಣವಿಲ್ಲ ಎಂದು ಹೇಳಿದ್ದಾರೆ.
ಮಾರ್ಚ್‌ನಲ್ಲಿ 69% ಹೆಚ್ಚು ಮಳೆ, ಇನ್ನೂ ಒಂದು ವಾರ ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ: ಎಲ್ಲೆಲ್ಲಿ?
₹5 ಲಕ್ಷ ಕೊಡುವಂತೆ ಬ್ಲ್ಯಾಕ್ ಮೇಲ್: ಆಗ ತನ್ನ ವರಸೆ ಬದಲಿಸಿದ ಜೀವನ್ ಕುಮಾರ್, ₹5 ಲಕ್ಷ ಕೊಡದಿದ್ದರೆ, ನಿನ್ನ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ. ಈ ಸಂಬಂಧ ಪೊಲೀಸ್‌ಗೆ ದೂರು ನೀಡಿದರೆ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಹೀಗಾಗಿ ರೇಷ್ಮಾ ಅವರು ಜೀವನ್ ಕುಮಾರ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಹೆಬ್ಬಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಆರೋಪಿಯ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.