ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೆಸರನ್ನು ದುರ್ಬಳಕೆ ಮಾಡಿಕೊಂಡು ಜನಸಾಮಾನ್ಯರಿಂದ ಕೋಟ್ಯಂತರ ರುಪಾಯಿ ಪಡೆದು ವಂಚಿಸಿರುವ ಘಟನೆ ಆನೇಕಲ್ ಸೂರ್ಯನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಆನೇಕಲ್ (ಫೆ.10): ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೆಸರನ್ನು ದುರ್ಬಳಕೆ ಮಾಡಿಕೊಂಡು ಜನಸಾಮಾನ್ಯರಿಂದ ಕೋಟ್ಯಂತರ ರುಪಾಯಿ ಪಡೆದು ವಂಚಿಸಿರುವ ಘಟನೆ ಆನೇಕಲ್ ಸೂರ್ಯನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನೆರೆಯ ತಮಿಳುನಾಡಿನ ಹೊಸೂರು ಮೂಲದ ಪವಿತ್ರಾ ಜನರಿಗೆ ವಂಚಿಸಿದವರು. ತಮ್ಮ ಟ್ರಸ್ಟ್‌ಗೆ ನಿರ್ಮಲಾ ಸೀತಾರಾಮನ್ ಅವರಿಂದ ₹17,000 ಕೋಟಿ ಬಂದಿದೆ. ಈ ಹಣವನ್ನು ಸ್ತ್ರೀ ಶಕ್ತಿ ಗುಂಪುಗಳ ಮೂಲಕ ಸಾಲ ನೀಡಬೇಕು. ತಲಾ ಗುಂಪಿಗೆ ₹10 ಲಕ್ಷ ಸಾಲ ನೀಡುತ್ತೇವೆ. ಇದರಲ್ಲಿ ₹5 ಲಕ್ಷ ಸಬ್ಸಿಡಿ ಎಂದು ನಂಬಿಸಿದರು. ಇದಕ್ಕಾಗಿ ಕೇಂದ್ರದಿಂದ ಹಣ ಸಂದಾಯ ಆಗಿರುವ ನಕಲಿ ಪ್ರಮಾಣಪತ್ರವನ್ನು ತಯಾರಿಸಿದ್ದರು.
ನಾವು ಹೊಸೂರಿನಲ್ಲಿ ಟ್ರಸ್ಟ್ ಆರಂಭಿಸಿದ್ದೇವೆ. ನಮ್ಮ ಟ್ರಸ್ಟ್‌ಗೆ ಕೇಂದ್ರ ಸರ್ಕಾರದಿಂದ ಹಣ ಬಂದಿದೆ. ಅಮೆರಿಕದಿಂದಲೂ ನಮ್ಮ ಟ್ರಸ್ಟ್‌ಗೆ ಹಣ ಸಂದಾಯ ಆಗಿದೆ ಎಂದು ಜನರಿಗೆ ಪವಿತ್ರಾ ಹೇಳುತ್ತಿದ್ದಳು. ಒಂದು ತಂಡವನ್ನು ಕಟ್ಟಿಕೊಂಡು ‘ನೀವು ಸಾಲ ಪಡೆಯಲು ಮುಂಚಿತವಾಗಿ ಸ್ವಲ್ಪ ಹಣ ಕಟ್ಟಬೇಕು’ ಎಂದು ನೂರಾರು ಜನ ಮಹಿಳೆಯರಿಂದ ₹5 ಸಾವಿರದಿಂದ ₹25 ಸಾವಿರದವರೆಗೆ ಹಣ ವಸೂಲಿ ಮಾಡಿದ್ದಳು. ಹಣ ಕಟ್ಟಿದವರು ಸಾಲ ಕೇಳಿದಾಗ ವಂಚಕೀಯ ನಾಟಕ ಬಟಾ ಬಯಲಾಗಿದೆ. ಈಕೆಯ ವಿರುದ್ಧ ಆನೇಕಲ್, ಚಂದಾಪುರ, ಸೂರ್ಯನಗರ, ಹೊಸಕೋಟೆ, ಅತ್ತಿಬೆಲೆ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ಪವಿತ್ರಾಳನ್ನು ಸೂರ್ಯನಗರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ರೈತನಿಗೆ ₹1.80 ಲಕ್ಷ ವಂಚನೆ: ರೈತರೊಬ್ಬರ ಮಗನಿಗೆ ನ್ಯಾಯಾಲಯದಲ್ಲಿ ಸರ್ಕಾರಿ ನೌಕರಿ ಕೊಡಿಸುವುದಾಗಿ ₹1.80 ಲಕ್ಷ ಪಡೆದು ವಂಚಿಸಿದ ಆರೋಪದಡಿ ವ್ಯಕ್ತಿಯೊಬ್ಬನ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಉಯ್ಯಂಬಳ್ಳಿ ಗ್ರಾಮದ ದುಂಡಯ್ಯ(63) ವಂಚನೆಗೆ ಒಳಗಾದವರು. ಇವರು ನೀಡಿದ ದೂರಿನ ಮೇರೆಗೆ ಗೌರಿಬಿದನೂರಿನ ಪದ್ಮರಾಜ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೆ ವಿಷಯಕ್ಕೆ ವರ್ತಕರ ಜೋಡಿ ಕೊಲೆ ಆಗಿದ್ದು: ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದ್ದೇನು?
ಏನಿದು ಪ್ರಕರಣ?: ದೂರುದಾರ ದುಂಡಯ್ಯ 2021ನೇ ಸಾಲಿನಲ್ಲಿ ವಿಧಾನಸೌಧದ ಬಳಿ ಇರುವ ಮಾಹಿತಿ ಆಯೋಗದ ಬಳಿಗೆ ಬಂದಿದ್ದರು. ಈ ವೇಳೆ ಪದ್ಮರಾಜ್ ಎಂಬಾತ ಸಿಕ್ಕಿ ಪರಿಚಯ ಮಾಡಿಕೊಂಡಿದ್ದಾನೆ. ‘ನಾನು ಮಾಹಿತಿ ಆಯೋಗದಲ್ಲಿ ಕೆಲಸ ಮಾಡುತ್ತಿದ್ದೇನೆ. ನ್ಯಾಯಾಲಯಗಳಲ್ಲಿ ಕೆಲಸಗಳು ಖಾಲಿಯಿವೆ. 10ನೇ ತರಗತಿ ಪಾಸ್ ಆದವರಿಗೆ ಕೆಲಸ ಕೊಡಿಸುತ್ತೇನೆ. ಮೂರು ಲಕ್ಷ ರುಪಾಯಿ ಕೊಟ್ಟರೆ ಕೆಲಸ ಕೊಡಿಸುತ್ತೇನೆ. ಯಾರಾದರೂ ಇದ್ದರೆ ತಿಳಿಸಿ’ ಎಂದು ಹೇಳಿದ್ದಾನೆ.