
ಬೆಂಗಳೂರು(ನ.05): ಇತ್ತೀಚೆಗೆ ಹೈದರಾಬಾದ್ ಪೊಲೀಸರಿಂದ ಬಂಧಿತರಾಗಿದ್ದ ಸೇನೆ ಹಾಗೂ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಂಚಿಸುತ್ತಿದ್ದ ನಾಲ್ವರು ಸೈಬರ್ ಖದೀಮರನ್ನು ಸಿಸಿಬಿ ವಶಕ್ಕೆ ಪಡೆದು ನಗರಕ್ಕೆ ಕರೆ ತಂದಿದೆ.
ರಾಜಸ್ಥಾನದ ಭರತ್‌ಪುರ ಜಿಲ್ಲೆಯ ವಾಜೀಬ್ ಖಾನ್, ಸಾಹಿಲ್, ಶಾಹೀದ್ ಹಾಗೂ ಉಮೇರ್ ಖಾನ್ ಬಂಧಿತರು. ವಂಚನೆ ಕೃತ್ಯದಲ್ಲಿ ಆರೋಪಿಗಳನ್ನು ಹೈದರಾಬಾದ್ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಬೆಂಗಳೂರಿನಲ್ಲಿ ನಡೆದಿದ್ದ ವಂಚನೆ ಕೃತ್ಯ ಸಂಬಂಧ ಆರೋಪಿಗಳನ್ನು ನ್ಯಾಯಾಲಯದ ಅನುಮತಿ ಪಡೆದು ವಶಕ್ಕೆ ಪಡೆಯಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ (ಸಿಸಿಬಿ)ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಹೇಗೆ ವಂಚನೆ:
ಫೇಸ್‌ಬುಕ್ ಹಾಗೂ ಟ್ವಿಟರ್‌ನಲ್ಲಿ ಪೊಲೀಸರು ಹಾಗೂ ಸೇನಾಧಿಕಾರಿಗಳು ಸಮವಸ್ತ್ರದಲ್ಲಿ ತೆಗೆಸಿರುವ ಫೋಟೋಗಳನ್ನು ಡೌನ್‌ಲೋಡ್ ಮಾಡಿಕೊಂಡು ಆ ಫೋಟೋಗಳನ್ನು ಬಳಸಿ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಖಾತೆ ತೆರೆಯುತ್ತಿದ್ದರು. ವಾಟ್ಸ್‌ಆ್ಯಪ್ ಡಿಪಿಗೆ ಅಧಿಕಾರಿಗಳ ಫೋಟೋಗಳನ್ನು ಬಳಸಿದ್ದರು. ಈ ಖಾತೆಗಳ ಮೂಲಕ ಒಎಲ್‌ಎಕ್ಸ್ ಮತ್ತು ಕ್ವಿಕರ್‌ನಲ್ಲಿ ಮೊಬೈಲ್, ಬೈಕ್ ಹೀಗೆ ಹಳೇ ವಸ್ತುಗಳ ಮಾರಾಟ ಅಥವಾ ಖರೀದಿ ನೆಪದಲ್ಲಿ ಜನರಿಗೆ ಅವರು ಬಲೆ ಬೀಸುತ್ತಿದ್ದರು. ಮೊದಲು ನಮ್ಮ ಖಾತೆಗೆ .1 ವರ್ಗಾಯಿಸಿದರೆ ನಿಮ್ಮ ಖಾತೆಗೆ ಹಣ ಕಳುಹಿಸುವುದಾಗಿ ಹೇಳುತ್ತಿದ್ದರು. ನಂತರ ಗ್ರಾಹಕರ ವ್ಯಾಲೆಟ್‌ಗೆ ಮೊಬೈಲ್ ಲಿಂಕ್ ಆಗಿರುವ ಮಾಹಿತಿ ತಿಳಿದುಕೊಳ್ಳುತ್ತಿದ್ದರು. ತರುವಾಯ ವ್ಯಾಟ್ಸ್‌ಆ್ಯಪ್‌ಗೆ ಕ್ಯೂಆರ್ ಕೋಡ್ ಕಳುಹಿಸಿ ಸ್ಕಾ$್ಯನ್ ಮಾಡಿಸಿ ಜನರ ಬ್ಯಾಂಕ್ ಖಾತೆ ಅಥವಾ ವ್ಯಾಲೆಟ್ ಖಾತೆಗೆ ಅವರು ಕನ್ನ ಹಾಕುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಆನ್‌ಲೈನ್ ಶಾಪಿಂಗ್ ಮಾಡೋ ಮುನ್ನ ಇರಲಿ ಎಚ್ಚರ: ಖರೀದಿ ನೆಪದಲ್ಲಿ ಕ್ಯೂಆರ್ ಕೋಡ್ ಕಳುಹಿಸಿ ವಂಚನೆ
ಇದೇ ರೀತಿ ಬೆಂಗಳೂರು ಹಾಗೂ ಹೈದರಾಬಾದ್ ಸೇರಿದಂತೆ ದೇಶ ವ್ಯಾಪ್ತಿ ನೂರಾರು ಜನರಿಗೆ ಆರೋಪಿಗಳು ವಂಚಿಸಿದ್ದರು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಹೈದರಾಬಾದ್ ಪೊಲೀಸರು, ಕೊನೆಗೆ ಮೋಸದ ಜಾಲ ಪತ್ತೆ ಹಚ್ಚುವಲ್ಲಿ ಯಶಸ್ಸು ಕಂಡಿದ್ದರು.
ನಗರದಲ್ಲಿ 40 ಕೇಸ್ ಬೆಳಕಿಗೆ:
ಓಎಲ್‌ಎಕ್ಸ್ ಹಾಗೂ ಕ್ವಿಕ್ಕರ್ ಸೇರಿದಂತೆ ವೆಬ್‌ಸೈಟ್‌ಗಳಲ್ಲಿ ಬೈಕ್, ಕಾರು, ಮೊಬೈಲ್, ಪೀಠೋಪಕರಣಗಳು, ಎಲೆಕ್ಟ್ರಾನಿಕ್ ವಸ್ತುಗಳು ಮಾರಾಟ ಮತ್ತು ಖರೀದಿಸುವ ಸೋಗಿನಲ್ಲಿ ಆರೋಪಿಗಳು ಜನರಿಗೆ ವಂಚಿಸಿದ್ದರು. ಈಗ ಬಂಧನದಿಂದ 40ಕ್ಕೂ ಹೆಚ್ಚಿನ ಪ್ರಕರಣಗಳು ಪತ್ತೆಯಾಗಿವೆ ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ