ಬೆಂಗಳೂರು: ಗೊರಕೆ ತಡೆ ಯಂತ್ರ ಹೆಸರಲ್ಲಿ ಜನರಿಗೆ ‘ಟೋಪಿ’..!

By Kannadaprabha NewsFirst Published Jan 27, 2023, 8:25 AM IST
Highlights

ಮ್ಯಾಗ್ನಟಿಕ್‌ ಅಂಶವಿರುವ ಟೋಪಿ ಧರಿಸಿದರೆ ನಿಲ್ಲುತ್ತೆ ಗೊರಕೆ ಎಂದು ನಂಬಿಸಿದ್ದ ಕಂಪನಿ, ಟೋಪಿ ಮಾರಿದರೆ ಹೆಚ್ಚಿನ ಕಮಿಷನ್‌ ಆಮಿಷ, ಸಾವಿರ ಜನರ ಸೇರಿಸಿ ನಗರದಲ್ಲಿ ಕಂಪನಿಯಿಂದ ಸಭೆ, ಪೊಲೀಸರ ದಾಳಿ. ಮಹಾರಾಷ್ಟ್ರ ಮೂಲದ ಕಂಪನಿ ಮಾಲಿಕ ಸೇರಿ ನಾಲ್ವರ ಬಂಧನ. 

ಬೆಂಗಳೂರು(ಜ.27):  ‘ಗೊರಕೆ’ ನಿಲ್ಲಿಸುವ ಟೋಪಿಗಳನ್ನು ಮಾರಾಟ ಮಾಡಿದರೆ ಅಧಿಕ ಕಮಿಷನ್‌ ನೀಡುವುದಾಗಿ ಹೇಳಿ ಜನರಿಂದ ಹಣ ಪಡೆದು ಮೋಸ ಮಾಡುತ್ತಿದ್ದ ಚೈನ್‌ ಲಿಂಕ್‌ ಕಂಪನಿಯೊಂದರ ಮುಖ್ಯಸ್ಥ ಸೇರಿದಂತೆ ನಾಲ್ವರನ್ನು ಹೈಗ್ರೌಂಡ್ಸ್‌ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ. ಮಹಾರಾಷ್ಟ್ರದ ಮುಂಬೈ ನಗರದ ಸುನೀಲ್‌ ಜೋಶಿ, ಬೆಂಗಳೂರಿನ ಶೇಖ್‌ ಸಾದಿಕ್‌ ಆಲಿ, ಎನ್‌.ಯೋಗೇಶ್‌ ಹಾಗೂ ಪ್ರಮೋದ್‌ ಗೋಪಿನಾಥ್‌ ಬಂಧಿತರಾಗಿದ್ದು, ಆರೋಪಿಗಳಿಂದ ಕೆಲ ದಾಖಲೆಗಳು ಹಾಗೂ ಗೊರಕೆ ನಿಲ್ಲಿಸುವ ಟೋಪಿಗಳಿದ್ದ ಕಿಟ್‌ಗಳನ್ನು ಜಪ್ತಿ ಮಾಡಲಾಗಿದೆ.

ಇತ್ತೀಚೆಗೆ ವಸಂತ ನಗರದ ಡಾ. ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ತನ್ನ ಏಜೆಂಟ್‌ಗಳ ಸಭೆ ಕರೆದು ಸಾರ್ವಜನಿಕರಿಂದ ಮಾಗ್ನೆಟಿಕ್‌ ಅಂಶವಿರುವ ಮ್ಯಾಜಿಕ್‌ ಟೋಪಿ (ಗೊರಕೆ ನಿಲ್ಲಿಸುವ ಟೋಪಿ) ಎಂದು ಸುಳ್ಳು ಪ್ರಚಾರ ನಡೆಸಿ ಕಿಟ್‌ಗಳನ್ನು ಇ-ಬಯೋಟೋರಿಯಂ ನೆಟ್‌ವರ್ಕ್ ಪ್ರೈ ಹೆಸರಿನ ಕಂಪನಿ ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತು. ಕೂಡಲೇ ಆ ಸಭೆ ಮೇಲೆ ಇನ್‌ಸ್ಪೆಕ್ಟರ್‌ ಶಿವಸ್ವಾಮಿ ನೇತೃತ್ವದ ತಂಡವು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರಾಜ್ಯದಲ್ಲಿ ಮತ್ತೊಂದು ಪೋನ್ಝಿ ಮೋಸದ ಜಾಲ ಬಯಲು: ಹಣ ಡೆಪಾಸಿಟ್‌ ಮಾಡಿದವರಿಗೆ ಪಂಗನಾಮ

ಮುಂಬೈ ಮೂಲದ ಸುನೀಲ್‌ ಜೋಶಿ, ಕೆಲವು ದಿನಗಳ ಹಿಂದೆ ಇ-ಬಯೋಟೋರಿಯಂ ಹೆಸರಿನ ಚೈನ್‌ ಲಿಂಕ್‌ ಕಂಪನಿಯನ್ನು ಆರಂಭಿಸಿದ್ದ. ತಲೆಗೆ ಮ್ಯಾಗ್ನೆಟಿಕ್‌ ಅಂಶವಿರುವ ಟೋಪಿ ಹಾಕಿಕೊಂಡರೆ ನಿದ್ರೆ ಮಾಡುವಾಗ ಗೊರಕೆ ಬರುವುದಿಲ್ಲ. ಸುಖವಾಗಿ ನಿದ್ರೆ ಮಾಡಬಹುದು ಎಂದು ಪ್ರಚಾರ ನಡೆಸಿ .5 ಸಾವಿರಕ್ಕೆ ಟೆಕ್ಸ್‌ಟೈಲ್‌ ಕಿಟ್ಟನ್ನು ಮಾರಾಟಕ್ಕೆ ಯೋಜಿಸಿದ್ದ. ಈ ಕಿಟ್‌ ಮಾರಿದರೆ ಅಧಿಕ ಕಮಿಷನ್‌ ಕೊಡುವುದಾಗಿ ನಂಬಿಸಿ ಜನರಿಗೆ ಗಾಳ ಹಾಕಿ ವಂಚಿಸಲು ಆತ ಯತ್ನಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಅಂತೆಯೇ ಜ.15ರಂದು ವಸಂತನಗರದ ಮಿಲ್ಲರ್‌ ರಸ್ತೆಯ ಅಂಬೇಡ್ಕರ್‌ ಭವನದಲ್ಲಿ ಸುಮಾರು ಒಂದು ಸಾವಿರ ಜನರನ್ನು ಸೇರಿಸಿ ಪಿರಾಮಿಡ್‌ ಚೈನ್‌ ಲಿಂಕ್‌ ವ್ಯವಸ್ಥೆಯಲ್ಲಿ ಠೇವಣಿ ಸಂಗ್ರಹಕ್ಕೆ ಬಯೋಟೋರಿಯಂ ಕಂಪನಿ ಮುಂದಾಗಿತ್ತು. ಈ ಕಂಪನಿಗೆ ಹೆಚ್ಚಿನ ಜನರನ್ನು ಸೇರಿಸುತ್ತ ಹೋದರೆ ಅಧಿಕ ಲಾಭ ಬರುತ್ತದೆ ಎಂದು ಆಮಿಷವೊಡ್ಡಿದ್ದರು. ಆನೇಕ ಜನರಿಗೆ ಮೋಸ ಮಾಡುವ ಉದ್ದೇಶದಿಂದ ಸಭೆ ನಡೆಸುತ್ತಿರುವ ಬಗ್ಗೆ ಮಾಹಿತಿ ಪಡೆದು ದಾಳಿ ನಡೆಸಲಾಯಿತು ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸಗೌಡ ತಿಳಿಸಿದ್ದಾರೆ.

ಜನರಿಗೆ ಟೋಪಿ ಹಾಕೋದೆ ಚೈನ್‌ಲಿಂಕ್‌ ಕೆಲಸ

ಚೈನ್‌ ಲಿಂಕ್‌ ಕಂಪನಿಗಳು ಆರಂಭದಲ್ಲಿ ಕೆಲಸ ಕೊಡುವ ಉದ್ದೇಶವಿದೆ ಎಂದು ಹೇಳಿ ಇಂತಿಷ್ಟುಜನರನ್ನು ಸೇರಿಸಿಕೊಳ್ಳುತ್ತಾರೆ. ಆನಂತರ ಅವರಿಗೆ ಒಳ್ಳೆಯ ಮಟ್ಟದ ಕಮಿಷನ್‌ ಸೇರಿದಂತೆ ಬೇರೆ ಬೇರೆ ಆಮಿಷ ನೀಡಿ ವಿಶ್ವಾಸ ಗಳಿಸುತ್ತಾರೆ. ಹಾಗೆ ಇವರಿಗೆ ಹೆಚ್ಚಿನ ಕಮಿಷನ್‌ ಕೊಟ್ಟಿರುವ ಬಗ್ಗೆ ದಾಖಲೆಗಳನ್ನು ಸೃಷ್ಟಿಸುತ್ತಾರೆ. ಹೊಸದಾಗಿ ಕಂಪನಿಗೆ ಠೇವಣಿದಾರರಾಗುವರಿಗೆ ಮೊದಲ ತಂಡದ ಜನರನ್ನು ಉದಾಹರಿಸಿ ಗಾಳ ಹಾಕುತ್ತಾರೆ. ಅಲ್ಲದೆ ಹಳೇ ತಂಡದ ಸದಸ್ಯರ ಮೂಲಕ ಹೊಸಬರಿಗೆ ಉತ್ತೇಜಿಸಿ ಕಂಪನಿಗೆ ಸೆಳೆಯುತ್ತಾರೆ. ಹೀಗೆ ಹೆಚ್ಚಿನ ಠೇವಣಿದಾರರಿಂದ ಹಣ ಸಂಗ್ರಹಿಸಿ ದಿಢೀರನೇ ತಮ್ಮ ಕಂಪನಿ ಮುಚ್ಚುತ್ತಾರೆ. ಇದೇ ರೀತಿಯ ಕೃತ್ಯದಲ್ಲಿ ತೊಡಗಿದ್ದ ಬಯೋಟೋರಿಯಂ ಕಂಪನಿಯ ನಾಲ್ವರನ್ನು ಬಂಧಿಸಿ ಜನರಿಗೆ ಸಂಭವೀಯ ಮೋಸ ತಪ್ಪಿಸಿದ್ದೇವೆ. ಕಂಪನಿಯ ಹಣ ಹೂಡಿಕೆ ಮಾಡಿರುವ ಜನರ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಡಿಸಿಪಿ ಹೇಳಿದ್ದಾರೆ.

ಬೆಂಗಳೂರು: ಬಿಬಿಎಂಪಿ ಹೆಸರಲ್ಲಿ ಕರೆ ಮಾಡಿ ಸ್ನೇಹಿತರಿಗೇ ವಂಚನೆ..!

400 ಟೋಪಿಗೆ 5 ಸಾವಿರ!

ಗೊರಕೆ ಟೋಪಿ ಎಂದು ಬಿಂಬಿಸಿ .5 ಸಾವಿರಕ್ಕೆ ಮಾರಾಟಕ್ಕೆ ಯತ್ನಿಸಿದ್ದ ಟೋಪಿ ಬೆಲೆ ಕೇವಲ 300 ರಿಂದ 400 ರುಪಾಯಿ ಇರಬಹುದು. ಅದರಲ್ಲಿ ಯಾವುದೇ ಮ್ಯಾಗ್ನೆಟಿಕ್‌ ಅಂಶ ಇರಲಿಲ್ಲ. ಸುಳ್ಳು ಪ್ರಚಾರ ಮಾಡಿ ಜನರಿಗೆ ಟೋಪಿ ಹಾಕುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

38 ಲಕ್ಷ ಜಪ್ತಿ

ಕಂಪನಿಯ ಮುಖ್ಯಸ್ಥ ಸುನೀಲ್‌ ಜೋಶಿ ಬ್ಯಾಂಕ್‌ ಖಾತೆಗಳನ್ನು ನಿರ್ಬಂಧಿಸಲಾಗಿದ್ದು, ಆತನ ಖಾತೆಯಲ್ಲಿದ್ದ 38 ಲಕ್ಷ ರು. ಮುಟ್ಟಗೋಲು ಹಾಕಿಕೊಂಡಿದ್ದೇವೆ. ಈ ಹಣದ ಮೂಲದ ಬಗ್ಗೆ ತನಿಖೆ ನಡೆಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!