ಮತ್ತೊಂದು ಹೇಯ ಘಟನೆ| ಸುಟ್ಟ ಸ್ಥಿತಿಯಲ್ಲಿ ಮತ್ತೋರ್ವ ಮಹಿಳೆ ಶವ ಪತ್ತೆ!| ಪಶುವೈದ್ಯೆಯ ಶವ ಸಿಕ್ಕ ಪ್ರದೇಶದ ಸಮೀಪದಲ್ಲೇ ಪತ್ತೆ
ಹೈದ್ರಾಬಾದ್[ನ.30]: ಪಶುವೈದ್ಯೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಆಕೆಯನ್ನು ಹತ್ಯೆ ಮಾಡಿದ ಭೀಕರ ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ, ಪಶುವೈದ್ಯೆಯ ಶವ ಸಿಕ್ಕ ಪ್ರದೇಶದ ಸಮೀಪದಲ್ಲೇ ಶುಕ್ರವಾರ ಮತ್ತೊಬ್ಬ ಮಹಿಳೆ ಶವ ಪತ್ತೆಯಾಗಿದೆ.
ಅರೆ ಸುಟ್ಟ ಪರಿಸ್ಥಿತಿಯಲ್ಲಿದ್ದ ಸುಮಾರು 35 ವರ್ಷ ಮಹಿಳೆಯ ಶವ ಶಂಶಾಬಾದ್‌ನ ಹೊರವಲಯದ ನಿರ್ಜನ ಪ್ರದೇಶದಲ್ಲಿ ಕಂಡುಬಂದಿದೆ. ಎರಡು ದಿನಗಳ ಅಂತರದಲ್ಲಿ ಬೆಳಕಿಗೆ ಬಂದ ಇಬ್ಬರ ಮಹಿಳೆಯರ ಹತ್ಯೆ ಘಟನೆಗಳು ತೆಲಂಗಾಣ ಮಾತ್ರವಲ್ಲದೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿವೆ.
ಶುಕ್ರವಾರ ರಾತ್ರಿ ವೇಳೆಗೆ ಸುಟ್ಟಸ್ಥಿತಿಯಲ್ಲಿದ್ದ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಆ ವರದಿ ಬಂದ ಬಳಿಕ ಘಟನೆ ಕುರಿತು ಸ್ಪಷ್ಟಚಿತ್ರಣ ಹೊರಬೀಳಲಿದೆ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಸೈಬರಾಬಾದ್ ಪೊಲೀಸ್ ಆಯುಕ್ತ ವಿ.ಸಿ. ಸಜ್ಜನರ ತಿಳಿಸಿದ್ದಾರೆ.
ಮೇಲ್ನೋಟಕ್ಕೆ ಈ ಮಹಿಳೆ ಮೇಲೆ ಕೂಡಾ ಅತ್ಯಾಚಾರವೆಸಗಿ ಬಳಿಕ ಹತ್ಯೆ ಮಾಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.