
ಬೆಂಗಳೂರು (ಏ.18) : ಕೊನೇ ಕ್ಷಣದಲ್ಲಿ ಸಿಇಟಿ ಪರೀಕ್ಷಾ ಕೇಂದ್ರ ಪ್ರವೇಶಿಸಲು ಯತ್ನಿಸಿದ ಮಹಿಳಾ ಅಭ್ಯರ್ಥಿಯೊಬ್ಬಳು ಕ್ಯೂಆರ್ ಕೋಡ್ ಆಧಾರಿತ ಮುಖ ಚಹರೆ ಪತ್ತೆ ಆ್ಯಪ್ ಮೂಲಕ ತಪಾಸಣೆ ವೇಳೆ ನಕಲಿ ಎಂಬುದು ಪತ್ತೆಯಾಗಿದೆ. ಇದನ್ನು ಸಿಬ್ಬಂದಿ ಉನ್ನತ ಅಧಿಕಾರಿಗಳ ಗಮನಕ್ಕೆ ತರುವಷ್ಟರಲ್ಲಿ ಆಕೆ ಪರಾರಿಯಾಗಿರುವ ಘಟನೆ ನಗರದಲ್ಲಿ ಗುರುವಾರ ನಡೆದಿದೆ.
ಮಲ್ಲೇಶ್ವರದ ಸಿಲ್ವರ್ ವ್ಯಾಲಿ ಪಬ್ಲಿಕ್ ಪಿಯು ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಸಿಇಟಿ ಪರೀಕ್ಷೆಯ ಎರಡನೇ ದಿನ ಈ ಘಟನೆ ನಡೆದಿದ್ದು, ಮಾಹಿತಿ ತಿಳಿದ ಕೂಡಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.
ಇದನ್ನೂ ಓದಿ: ಜನಿವಾರ ತೆಗೆಸಿದ ಪ್ರಕರಣ: 'ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ..; ಸಿಎಂ ವಿರುದ್ಧ ವಿಜಯೇಂದ್ರ ಕಿಡಿ
ಬೆಳಗ್ಗೆ ಗಣಿತ ವಿಷಯ ಬರೆಯಲು ಬಂದ ತುಬಾ ಫಾತೀಮಾ ಜಮೀಲ್ ಎಂಬಾಕೆ ನೇರವಾಗಿ ಪರೀಕ್ಷಾ ಕೇಂದ್ರದ ಶೌಚ ಗೃಹಕ್ಕೆ ಹೋಗಿ ಗಂಟೆಯಾದರೂ ಹೊರ ಬಂದಿರಲಿಲ್ಲ. ಇನ್ನೇನು ಪರೀಕ್ಷೆ ಆರಂಭವಾಗಬೇಕು ಎನ್ನುವಷ್ಟರಲ್ಲಿ ಹೊರ ಬಂದು ಕ್ಯೂಆರ್ ಕೋಡ್ ಪ್ರವೇಶ ಪತ್ರ ತೋರಿಸಿ, ಒಳ ಹೋಗಲು ಯತ್ನಿಸಿದ್ದಾಳೆ. ಈ ವೇಳೆ ಮುಖ ಚಹರೆ ಪತ್ತೆ ಆ್ಯಪ್ ಮೂಲಕ ಅವರ ಭಾವಚಿತ್ರ ತೆಗೆದಾಗ ಅವರು ನಕಲಿ ಅಭ್ಯರ್ಥಿ ಎಂಬುದು ಗೊತ್ತಾಗಿದೆ. ತಕ್ಷಣ ಈ ವಿಷಯವನ್ನು ಸಿಬ್ಬಂದಿ ಪ್ರಾಂಶುಪಾಲರ ಗಮನಕ್ಕೆ ತರಬೇಕೆನ್ನುವಷ್ಟರಲ್ಲಿ ಅಲ್ಲಿಂದ ಆಕೆ ಕಾಲ್ಕಿತ್ತಿದ್ದಾಳೆ. ಈಕೆ ಟಬು ನಾಝ್ ಎಂಬ ನೈಜ ಅಭ್ಯರ್ಥಿಯ ಪ್ರವೇಶ ಪತ್ರಕ್ಕೆ ತನ್ನ ಫೋಟೋ ಅಂಟಿಸಿಕೊಂಡಿದ್ದಳು. ಅಲ್ಲದೆ, ಪರೀಕ್ಷಾ ದಿನಾಂಕಗಳನ್ನೂ ತಪ್ಪಾಗಿ ನಮೂದಿಸಿರುವುದು ಗೊತ್ತಾಗಿದೆ. ಈ ಬಗ್ಗೆ ವಿಡಿಯೋ ದೃಶ್ಯ ಸಮೇತ ವರದಿ ನೀಡಲು ಕಾಲೇಜಿನ ಪ್ರಾಂಶುಪಾಲರಿಗೆ ಸೂಚಿಸಲಾಗಿದೆ. ನಂತರ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಮಾಹಿತಿ ನೀಡಿದ್ದಾರೆ.
ಈ ಘಟನೆ ಹೊರತುಪಡಿಸಿ ಎಲ್ಲೆಡೆ ಪರೀಕ್ಷೆ ಸುಸೂತ್ರವಾಗಿ ಮುಕ್ತಾಯಗೊಂಡಿದೆ. ನಕಲಿ ಅಭ್ಯರ್ಥಿಗಳ ಪತ್ತೆ ಸಲುವಾಗಿ ಕೆಇಎ ಆರಂಭಿಸಿರುವ ಈ ಹೊಸ ವ್ಯವಸ್ಥೆ ನಿಜಕ್ಕೂ ಅನುಕೂಲಕರವಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಜನಿವಾರ ತೆಗೆಯದ್ದಕ್ಕೆ ಸಿಇಟಿಯೇ ಇಲ್ಲ, ಬಿಇ ಕನಸು ನುಚ್ಚುನೂರು!
ಅಭ್ಯರ್ಥಿಗಳ ತಪಾಸಣೆ ಮಾಡಿದ ಇಡಿ, ಎಒ
ಮಲ್ಲೇಶ್ವರದ ಸರ್ಕಾರಿ ಪಿಯು ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಮತ್ತು ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಅವರು ಗುರುವಾರ ಭೇಟಿ ನೀಡಿ ಖುದ್ದು ಕ್ಯೂಆರ್ ಕೋಡ್ ಆಧಾರಿತ ಮುಖ ಚಹರೆ ಪತ್ತೆ ಆ್ಯಪ್ ಮೂಲಕ ಅಭ್ಯರ್ಥಿಗಳ ತಪಾಸಣೆ ಮಾಡಿದರು. ಇಬ್ಬರೂ ಅಧಿಕಾರಿಗಳು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ವಿದ್ಯಾರ್ಥಿಗಳ ಭಾವಚಿತ್ರ ತೆಗೆದು ನೈಜತೆ ಪರಿಶೀಲಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ