ಸುಮಾರು 300 ಪುಟಗಳ ವಾಟ್ಸ್ ಆ್ಯಪ್ ಚಾಟಿಂಗ್ ಹಿಸ್ಟರಿ, ಮೊಬೈಲ್ ಕರೆಗಳ ಸಂಭಾಷಣೆಗಳ ಆಡಿಯೋ ಹಾಗೂ ವಿಡಿಯೋ ಕರೆಗಳ ತುಣುಕು ಸೇರಿದಂತೆ ಕೆಲವು ಮಹತ್ವದ ದಾಖಲೆಗಳನ್ನು ಯುವತಿ ವಿಶೇಷ ತನಿಖಾ ದಳಕ್ಕೆ ಸಲ್ಲಿಸಿದ್ದಾರೆ. ಜಾರಕಿಹೊಳಿ- ಹಾಗೂ ಆಕೆಯ ನಡುವೆ ನಡೆದ ಸಂಪೂರ್ಣ ಹಿಸ್ಟರಿ ಇದರಲ್ಲಿದೆ.
ಬೆಂಗಳೂರು (ಏ.01): ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಚಿವರಿಗೆ ಬಂಧನದ ಉರುಳು ಬಿಗಿಯಾಗುತ್ತಿದ್ದು, ತನ್ನ ಜತೆ ರಮೇಶ್ ಜಾರಕಿಹೊಳಿ ಅವರಿಗೆ ಒಡನಾಟವಿತ್ತು ಎಂಬುದಕ್ಕೆ ಪುರಾವೆಯಾಗಿ ವಿಶೇಷ ತನಿಖಾ ದಳಕ್ಕೆ (ಎಸ್‌ಐಟಿ) ಸುಮಾರು 300 ಪುಟಗಳ ವಾಟ್ಸ್ ಆ್ಯಪ್ ಚಾಟಿಂಗ್ ಹಿಸ್ಟರಿ, ಮೊಬೈಲ್ ಕರೆಗಳ ಸಂಭಾಷಣೆಗಳ ಆಡಿಯೋ ಹಾಗೂ ವಿಡಿಯೋ ಕರೆಗಳ ತುಣುಕು ಸೇರಿದಂತೆ ಕೆಲವು ಮಹತ್ವದ ದಾಖಲೆಗಳನ್ನು ಯುವತಿ ಸಲ್ಲಿಸಿದ್ದಾಳೆ ಎಂದು ತಿಳಿದು ಬಂದಿದೆ.
ನ್ಯಾಯಾಲಯದಲ್ಲಿ ಅತ್ಯಾಚಾರ ಪ್ರಕರಣದ ಸಂಬಂಧ ಹೇಳಿಕೆ ದಾಖಲಿಸಿದ ಬೆನ್ನಲ್ಲೇ ಯುವತಿಯನ್ನು ಎರಡು ದಿನಗಳಿಂದ ಎಸ್‌ಐಟಿ ‘ಮ್ಯಾರಥಾನ್ ವಿಚಾರಣೆ’ ನಡೆಸಿದ್ದು, ಗುರುವಾರ ಕೂಡಾ ವಿಚಾರಣೆಗೆ ಹಾಜರಾಗುವಂತೆ ಆಕೆಗೆ ತನಿಖಾಧಿಕಾರಿಗಳು ಸೂಚಿಸಿದ್ದಾರೆ. ಈ ಸುದೀರ್ಘ ವಿಚಾರಣೆ ಸಂದರ್ಭದಲ್ಲಿ ತಾನು ಮಾಜಿ ಸಚಿವರ ವಿರುದ್ಧ ಮಾಡಿರುವ ಆರೋಪಗಳಿಗೆ ಪೂರಕವಾಗಿ ಸಾಕ್ಷ್ಯಗಳನ್ನು ಯುವತಿ ಒದಗಿಸಿದ್ದಾಳೆ ಎನ್ನಲಾಗಿದ್ದು, ಇದು ಜಾರಕಿಹೊಳಿ ಪಾಳೆಯದಲ್ಲಿ ಆತಂಕ ಹೆಚ್ಚಿಸಿದೆ.
ಯುವತಿ ವಿಡಿಯೋ ಚಿತ್ರೀಕರಿಸಿದ್ದೇ SIT ಪೊಲೀಸರು: ಜಗದೀಶ್ ಗಂಭೀರ ಆರೋಪ
ಅತ್ಯಾಚಾರ ಪ್ರಕರಣ ಸಂಬಂಧ ಬೌರಿಂಗ್ ಆಸ್ಪತ್ರೆಯಲ್ಲಿ ಬುಧವಾರ ಯುವತಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದ ಎಸ್‌ಐಟಿ ಅಧಿಕಾರಿಗಳು, ಬಳಿಕ ಆಡುಗೋಡಿಯ ವಿಚಾರಣಾ ಕೇಂದ್ರಕ್ಕೆ ಕರೆದೊಯ್ದು ಸುಮಾರು ಮೂರು ತಾಸು ಪ್ರಕರಣದ ಬಗ್ಗೆ ಪ್ರಶ್ನಿಸಿದರು. ಈ ವೇಳೆ ಸಮಚಿತ್ತದಿಂದಲೇ ಆಕೆ ಉತ್ತರಿಸಿದ್ದಾಳೆ ಎಂದು ತಿಳಿದು ಬಂದಿದೆ.
ತಾನು ಸುಳ್ಳು ಹೇಳುತ್ತಿಲ್ಲ. ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ನನ್ನನ್ನು ರಮೇಶ್ ಜಾರಕಿಹೊಳಿ ಲೈಂಗಿಕವಾಗಿ ಬಳಸಿಕೊಂಡು ವಂಚಿಸಿದ್ದಾರೆ. ನನಗೆ ಮಾಜಿ ಸಚಿವರಿಂದ ಜೀವ ಭೀತಿ ಇರುವ ಕಾರಣಕ್ಕೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಗೌಪ್ಯವಾಗಿ ನೆಲೆಸಬೇಕಾಯಿತು. ನನ್ನ ತಂದೆ, ತಾಯಿ, ಸೋದರರನ್ನು ಮಾಜಿ ಸಚಿವರು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಹೀಗಾಗಿ ಈ ಪ್ರಕರಣದ ವಿಚಾರವಾಗಿ ಪೋಷಕರ ಹೇಳಿಕೆಯನ್ನು ಮಾನ್ಯ ಮಾಡಬಾರದು ಎಂದು ಕೂಡಾ ಯುವತಿ ಹೇಳಿದ್ದಾಳೆ ಎನ್ನಲಾಗುತ್ತಿದೆ.