ಡ್ರಗ್‌ ಮಾಫಿಯಾ: 9 ಕೋಟಿ ಬಿಟ್‌ ಕಾಯಿನ್‌ ಸಂಪಾದಿಸಿದ್ದ ಹ್ಯಾಕರ್‌ ಶ್ರೀಕಿ

By Kannadaprabha News  |  First Published Jan 16, 2021, 7:44 AM IST

ಡ್ರಗ್ಸ್‌ ಕೇಸಲ್ಲಿ ಪೊಲೀಸರ ವಶದಲ್ಲಿರುವ ಹ್ಯಾಕರ್‌ ಶ್ರೀಕಿ, ದೇಶ ವಿದೇಶಗಳ ವೆಬ್‌ಸೈಟ್‌ ಹ್ಯಾಕ್‌ ಮಾಡಿ| ಅಕ್ರಮವಾಗಿ ಸಂಪಾದಿಸಿದ್ದ 31 ಬಿಟ್‌ ಕಾಯಿನ್‌ ಜಪ್ತಿ| ಈ ಬಿಟ್‌ ಕಾಯಿನ್‌ ಬಳಸಿಯೇ ಡ್ರಗ್ಸ್‌ ಖರೀದಿಸಿದ್ದ| 


ಬೆಂಗಳೂರು(ಜ.16): ಇತ್ತೀಚೆಗೆ ಮಾದಕ ವಸ್ತು ಮಾರಾಟ ದಂಧೆಯಲ್ಲಿ ಸಿಕ್ಕಿಬಿದ್ದಿದ್ದ ಕುಖ್ಯಾತ ಅಂತಾರಾಷ್ಟ್ರೀಯ ಹ್ಯಾಕರ್‌ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ ಹಲವು ವೆಬ್‌ಸೈಟ್‌ಗಳಿಗೆ ಕನ್ನ ಹಾಕಿ ದೋಚಿದ್ದ ಸುಮಾರು 9 ಕೋಟಿ ಮೌಲ್ಯದ 31 ಬಿಟ್‌ ಕಾಯಿನ್‌ಗಳನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ.

ಪೋಕರ್‌ ಗೇಮ್‌ಗಳು ಸೇರಿದಂತೆ ದೇಶ-ವಿದೇಶದ ಸರ್ಕಾರಿ ಹಾಗೂ ಖಾಸಗಿ ವೆಬ್‌ಸೈಟ್‌ಗಳನ್ನು ಹ್ಯಾಕ್‌ ಮಾಡಿದ್ದ ಆರೋಪಿ, ಬಳಿಕ ಕ್ರಿಪ್ಪೋ ಕರೆನ್ಸಿಗಳಾದ ಬಿಟ್‌ ಕಾಯಿನ್‌, ವೈಎಫ್‌ಎ, ಇಥೆರಿಯಂ ಖಾತೆಗಳಲ್ಲಿ ಕೋಟ್ಯಂತರ ರುಪಾಯಿ ಮೌಲ್ಯದ ಕರೆನ್ಸಿ ದೋಚಿದ್ದ. ಇದುವರೆಗೆ ಆತನಿಂದ ಅಕ್ರಮವಾಗಿ ಹ್ಯಾಕ್‌ ಮಾಡಿ ಸಂಪಾದಿಸಿದ್ದ .9 ಕೋಟಿ ಮೌಲ್ಯದ 31 ಬಿಟ್‌ ಕಾಯಿನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಂಟಿ ಪೊಲೀಸ್‌ ಆಯುಕ್ತ (ಅಪರಾಧ) ಸಂದೀಪ್‌ ಪಾಟೀಲ್‌ ತಿಳಿಸಿದ್ದಾರೆ.

Latest Videos

undefined

ಹಣ ಸಂಪಾದಿಸುವ ದುರುದ್ದೇಶದಿಂದ ಪೋಕರ್‌ ಗೇಮಿಂಗ್‌ ವೆಬ್‌ಸೈಟ್‌ಗಳನ್ನು ತನ್ನ ಸಹಚರರಾದ ಸುನೀಶ್‌ ಶೆಟ್ಟಿ, ಪ್ರಸಿದ್‌್ಧ ಶೆಟ್ಟಿ, ಸುಜಯ್‌, ಹೇಮಂತ್‌ ಮುದ್ದಪ್ಪ, ರಾಬಿನ್‌ ಖಂಡೇಲ್‌ವಾಲ್‌ ಸೇರಿದಂತೆ ಶ್ರೀಕಿ ಹ್ಯಾಕ್‌ ಮಾಡುತ್ತಿದ್ದರು. ಬಳಿಕ ಆ ವೆಬ್‌ಸೈಟ್‌ಗಳಲ್ಲಿ ದತ್ತಾಂಶವನ್ನು ಕಳವು ಮಾಡಿ ಆ ಡೇಟಾವನ್ನು ತಮ್ಮ ಗೇಮಿಂಗ್‌ ವೆಬ್‌ಸೈಟ್‌ಗೆ ಕಾನೂನು ಬಾಹಿರವಾಗಿ ಬಳಸುತ್ತಿದ್ದರು. ಈವರೆಗೆ ಮೂರು ಬಿಟ್‌ ಕಾಯಿನ್‌ ಎಕ್ಸ್‌ಚೆಂಜ್‌, 10 ಪೋಕರ್‌ ವೆಬ್‌ಸೈಟ್‌ ಹಾಗೂ 3 ಮಾಲ್‌ವೇರ್‌ ಎಕ್ಸ್‌ಪ್ಲೋಟೆಡ್‌ ಹ್ಯಾಕ್‌ ಮಾಡಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಈ ಬಗ್ಗೆ ಸಂಬಂಧಿಸಿದ ಕಂಪನಿಗಳಿಗೆ ಇಂಟರ್‌ಪೋಲ್‌ ಮುಖಾಂತರ ವಿನಿಮಯ ಮಾಡಲಾಗಿದೆ ಎಂದು ಜಂಟಿ ಆಯುಕ್ತರು ಹೇಳಿದ್ದಾರೆ.

ಹ್ಯಾಕರ್‌ ಶ್ರೀಕಿ ವಿರುದ್ಧ ಮತ್ತಷ್ಟು ಕೇಸ್‌

ರೆಸಾರ್ಟ್‌ಗಳಲ್ಲಿ ಕುಳಿತು ಹ್ಯಾಕಿಂಗ್‌

ಬೆಂಗಳೂರಿನ ಐಷಾರಾಮಿ ಹೋಟೆಲ್‌ ಹಾಗೂ ನಗರ ಹೊರವಲಯದ ರೆಸಾರ್ಟ್‌ಗಳೇ ಶ್ರೀಕಿಯ ಅಡ್ಡೆಗಳಾಗಿದ್ದವು. ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿ ಬಿಟ್‌ ಕಾಯಿನ್‌ಗಳನ್ನು ಕಳವು ಮಾಡಿ ಬಿಟ್‌ ಕಾಯಿನ್‌ ಟ್ರೇಡರ್‌ ರಾಬಿನ್‌ ಖಂಡೇಲ್‌ವಾಲ್‌ ಹಾಗೂ ಇತರೆ ಟ್ರೇಡರ್‌ಗಳಿಗೆ ಮಾರುತ್ತಿದ್ದ. ನಂತರ ಟ್ರೇಡರ್‌ಗಳಿಂದ ತನ್ನ ಸಹಚರರ ಬ್ಯಾಂಕ್‌ ಖಾತೆಗೆ ಹಾಗೂ ಹವಾಲ ಮುಖಾಂತರ ಹಣವನ್ನು ಸ್ವೀಕರಿಸಿ ಶ್ರೀಕಿ ಐಷರಾಮಿ ಜೀವನ ನಡೆಸುತ್ತಿದ್ದ. ಡಾರ್ಕ್ ವೆಬ್‌ಸೈಟ್‌ನಲ್ಲಿ ವಿದೇಶದಲ್ಲಿ ಡ್ರಗ್ಸ್‌ ಖರೀದಿಗೆ ಬಿಟ್‌ ಕಾಯಿನ್‌ಗಳನ್ನು ಬಳಸಿರುವುದು ತನಿಖೆಯಲ್ಲಿ ಮಾಹಿತಿ ಸಿಕ್ಕಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ರಾಜ್ಯ ಸರ್ಕಾರದ ವೆಬ್‌ಸೈಟಿಗೇ ಖನ್ನ

ಶ್ರೀಕಿ ಬಿಟ್‌ ಕಾಯಿನ್‌ ಹ್ಯಾಂಕಿಂಗ್‌ಗೆ ಬಿಟ್‌ ಕಾಯಿನ್‌ಗಳ ಮಾಹಿತಿ ಪಡೆಯಲು, ಪ್ರೈವೇಟ್‌ ಕೀಗಳನ್ನು ಕಳವು ಮಾಡಲು, ವರ್ಗಾವಣೆ ಮಾಡಿಕೊಳ್ಳಲು ಕೆಲವು ಹ್ಯಾಕಿಂಗ್‌ ಟೂಲ್‌ಗಳನ್ನು ಹಾಗೂ ವೆಬ್‌ಸೈಟ್‌ಗಳನ್ನು ಉಪಯೋಗಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ 2019ನೇ ಸಾಲಿನಲ್ಲಿ ಹಣ ಸಂಪಾದಿಸುವ ಉದ್ದೇಶದಿಂದ ರಾಜ್ಯ ಸರ್ಕಾರದ ಇ ಪ್ರಕ್ಯೂರ್‌ಮೆಂಟ್‌ ವೆಬ್‌ಸೈಟನ್ನು ಹ್ಯಾಕ್‌ ಮಾಡಿ ಕೋಟ್ಯಂತರ ರುಪಾಯಿಯನ್ನು ತನ್ನ ಸಹಚರರ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡು ಸರ್ಕಾರದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡಿರುವುದು ಪತ್ತೆಯಾಗಿದೆ ಎಂದು ಜಂಟಿ ಆಯುಕ್ತರು ತಿಳಿಸಿದ್ದಾರೆ.

ಡಿಸಿಪಿ ಬಿ.ಎಸ್‌.ಅಂಗಡಿ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್‌ಗಳಾದ ಶ್ರೀಧರ್‌ ಪೂಜಾರ್‌, ಲಕ್ಷ್ಮೇಕಾಂತಯ್ಯ, ಎಸ್‌.ಆರ್‌.ಚಂದ್ರಾಧರ್‌ ಹಾಗೂ ಡಿ.ಎಂ.ಪ್ರಶಾಂತ್‌ ಬಾಬು ತನಿಖೆ ನಡೆಸುತ್ತಿದ್ದಾರೆ. ವಿದೇಶದ ಹಲವು ವೆಬ್‌ಸೈಟ್‌ಗಳನ್ನು ಆರೋಪಿ ಶ್ರೀಕಿ ಹ್ಯಾಕ್‌ ಮಾಡಿ ಹಣ ಸಂಪಾದಿಸಿದ್ದಾನೆ. ಈ ಕುರಿತು ಸಂಬಂಧಿಸಿದ ಕಂಪನಿಗಳಿಗೆ ಇಂಟರ್‌ಪೋಲ್‌ ಮೂಲಕ ಮಾಹಿತಿ ನೀಡಲಾಗಿದೆ ಎಂದು ಜಂಟಿ ಆಯುಕ್ತ (ಅಪರಾಧ)ಸಂದೀಪ್‌ ಪಾಟೀಲ್‌ ತಿಳಿಸಿದ್ದಾರೆ. 
 

click me!