
ಬೆಂಗಳೂರು (ಅ.13) : ಶುಶೃತಿ ಸೌಹಾರ್ದ ಸಹಕಾರ ಬ್ಯಾಂಕ್‌ನ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಬ್ಯಾಂಕ್‌ನ ಅಧ್ಯಕ್ಷ ಸೇರಿದಂತೆ 11 ಮಂದಿ ಆರೋಪಿಗಳ ಮನೆಗಳ ಮೇಲೆ ಸಿಸಿಬಿ ಬುಧವಾರ ದಾಳಿ ನಡೆಸಿ .1 ಕೋಟಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದೆ.
Bengaluru: ಶುಶೃತಿ ಕೋ-ಆಪರೇಟಿವ್ ಸೊಸೈಟಿ ಮೇಲೆ ಸಿಸಿಬಿ ರೇಡ್
ಬ್ಯಾಂಕ್‌ನ ಅಧ್ಯಕ್ಷ ಶ್ರೀನಿವಾಸ್ ಮೂರ್ತಿ, ಮೂರ್ತಿ ಪತ್ನಿ ಹಾಗೂ ಬ್ಯಾಂಕ್ ನಿರ್ದೇಶಕಿ ಧಾರಿಣಿ ದೇವಿ, ಪುತ್ರಿ ಮೋಕ್ಷತಾ, ಸಂಬಂಧಿ ಸುರೇಶ್ ಹಾಗೂ ಸುರೇಶ್ ಪತ್ನಿ ಬಂಧಿತರಾಗಿದ್ದು, ಕೃತ್ಯ ಬೆಳಕಿಗೆ ಬಂದ ನಂತರ ತಪ್ಪಿಸಿಕೊಂಡಿರುವ ಇನ್ನುಳಿದ ಆರೋಪಿಗಳ ಪತ್ತೆಗೆ ತನಿಖೆ ನಡೆದಿದೆ. ನಗರದ ವಿವಿಧೆಡೆ ಆರೋಪಿಗಳ ಮನೆ ಹಾಗೂ ಬ್ಯಾಂಕ್ ಕಚೇರಿಗಳ ಮೇಲೆ ದಾಳಿ ನಡೆಸಲಾಯಿತು. ಈ ಸಂದರ್ಭದಲ್ಲಿ .39 ಲಕ್ಷ ನಗದು, .30 ಲಕ್ಷ ಠೇವಣಿ, 800 ಗ್ರಾಂ ಚಿನ್ನಾಭರಣ ಹಾಗೂ 10 ಕೇಜಿ ಬೆಳ್ಳಿ ಸೇರಿದಂತೆ .1 ಕೋಟಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಂಟಿ ಆಯುಕ್ತ (ಅಪರಾಧ) ರಮನ್ ಗುಪ್ತಾ ತಿಳಿಸಿದ್ದಾರೆ.
ಇತ್ತೀಚೆಗೆ ಹಣ ದುರ್ಬಳಕೆ ಹಾಗೂ ಅಧಿಕ ಬಡ್ಡಿ ಆಮಿಷವೊಡ್ಡಿ ಜನರಿಗೆ ವಂಚಿಸಿದ ಆರೋಪದ ಮೇರೆಗೆ ಶುಶೃತಿ ಸಹಕಾರ ಬ್ಯಾಂಕ್ ವಿರುದ್ಧ ರಾಜಗೋಪಾಲ ನಗರ, ಸಂಜಯ ನಗರ, ವಿಲ್ಸನ್ ಗಾರ್ಡನ್ ಹಾಗೂ ಹಲಸೂರು ಗೇಟ್ ಠಾಣೆಯಲ್ಲಿ ಪ್ರತ್ಯೇಕವಾಗಿ ಐದು ಪ್ರಕರಣಗಳು ದಾಖಲಾಗಿದ್ದವು. ಈ ವಂಚನೆ ಪ್ರಕರಣದ ತನಿಖೆಗೆ ಸಿಸಿಬಿಗೆ ವಹಿಸಿ ಆಯುಕ್ತ ಪ್ರತಾಪ್ ರೆಡ್ಡಿ ಆದೇಶಿಸಿದ್ದರು.
ವಂಚನೆ ಜಾಲದ ವಿರುದ್ಧ ತನಿಖೆ
ಬಹುಕೋಟಿ ವಂಚನೆ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಸಿಸಿಬಿ ಪೊಲೀಸರು, ಬ್ಯಾಂಕ್‌ನ ಅಧ್ಯಕ್ಷ ಶ್ರೀನಿವಾಸ ಮೂರ್ತಿ ಕುಟುಂಬ ಸೇರಿದಂತೆ 5 ಮಂದಿಯನ್ನು ಬಂಧಿಸಿದೆ. ಬ್ಯಾಂಕ್‌ನ ಆಡಳಿತ ಮಂಡಳಿಯ 11 ಮಂದಿ ಸದಸ್ಯರಿಗೆ ಸೇರಿದ ಮನೆಗಳು ಹಾಗೂ ಬ್ಯಾಂಕ್ ಕಚೇರಿಗಳು ಸೇರಿದಂತೆ 14 ಕಡೆ ಸಿಸಿಬಿ ಪರಿಶೀಲನೆ ನಡೆಸಿದೆ. ಬೆಳಗ್ಗೆ 6ಕ್ಕೆ ಆರಂಭವಾದ ದಾಳಿ ಸಂಜೆ ಮುಕ್ತಾಯಗೊಂಡಿದೆ. ಕೆಲವು ಕಡೆ ಗುರುವಾರ ಸಹ ದಾಖಲೆಗಳ ಶೋಧನೆ ಮುಂದುವರೆಯುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
1998ರಲ್ಲಿ ಶುಶೃತಿ ಕೋ-ಆಪರೇಟಿವ್ ಬ್ಯಾಂಕನ್ನು ಸ್ಥಾಪಿಸಿದ ಶ್ರೀನಿವಾಸಮೂರ್ತಿ, ಬ್ಯಾಂಕಿಗೆ ತನ್ನ ಪತ್ನಿ ಧಾರಿಣಿದೇವಿ, ಪುತ್ರಿ ಮೋಕ್ಷತಾ ಹಾಗೂ ಸಂಬಂಧಿಕರನ್ನು ನಿರ್ದೇಶಕರನ್ನಾಗಿ ನೇಮಿಸಿಕೊಂಡಿದ್ದ. ಕೆಲ ವರ್ಷಗಳು ಒಳ್ಳೆಯ ಆದಾಯದಲ್ಲೇ ಬ್ಯಾಂಕ್ ನಿರ್ವಹಿಸಿದ್ದು, ರಾಜಗೋಪಾಲ ನಗರ, ಸಂಜಯ ನಗರ, ವಿಲ್ಸನ್ ಗಾರ್ಡನ್, ಹಲಸೂರು ಗೇಟ್ ಸಮೀಪ ಶಾಖೆ ತೆರೆದಿದ್ದರು. ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಸಾರ್ವಜನಿಕರಿಂದ ಬ್ಯಾಂಕ್‌ಗೆ ಆರೋಪಿಗಳು ಬಂಡವಾಳ ಹೂಡಿಕೆ ಮಾಡಿಸಿದ್ದರು.
ಆರಂಭದ ದಿನಗಳಲ್ಲಿ ಶೇ.8ರಿಂದ 11ರವರೆಗೆ ಬಡ್ಡಿ ಮತ್ತು ಲಾಭಾಂಶವನ್ನು ಗ್ರಾಹಕರಿಗೆ ಬ್ಯಾಂಕ್ ವಿತರಿಸಿದೆ. ಆದರೆ ಕೊರೋನಾ ಲಾಕ್‌ಡೌನ್ ವೇಳೆ ಆರ್ಥಿಕ ನಷ್ಟದ ಲೆಕ್ಕ ತೋರಿಸಿ ಗ್ರಾಹಕರಿಗೆ ಆರೋಪಿಗಳು ವಂಚಿಸಿದ್ದರು. ಇನ್ನೊಂದೆಡೆ ಸಾಲ ಪಡೆಯಲು ಅರ್ಹತೆ ಇಲ್ಲದ ತಮಗೆ ಪರಿಚಿತ ವ್ಯಕ್ತಿಗಳಿಗೆ ಸಾಲ ವಿತರಿಸಿದ್ದರು ಎಂದು ತಿಳಿದು ಬಂದಿದೆ.
ಸಂಬಂಧಿಕರ ಹೆಸರಲ್ಲಿ 100 ಕೋಟಿ ಸಾಲ?
ತಮ್ಮ ಸಂಬಂಧಿಕರು ಹಾಗೂ ಸ್ನೇಹಿತರ ಬೇನಾಮಿ ಹೆಸರಿನಲ್ಲಿ .100 ಕೋಟಿಗೂ ಅಧಿಕ ಹಣವನ್ನು ಬ್ಯಾಂಕ್‌ನ ಅಧ್ಯಕ್ಷ ಶ್ರೀನಿವಾಸ ಮೂರ್ತಿ ಹಾಗೂ ಪದಾಧಿಕಾರಿಗಳು ಮಂಜೂರು ಮಾಡಿ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಲೆಕ್ಕ ಪರಿಶೋಧಕರಿಂದ ಬ್ಯಾಂಕ್‌ನ ಲೆಕ್ಕ ಪರಿಶೋಧನೆ ನಡೆದಿದ್ದು, ಇದರ ವರದಿ ಬಂದ ಬಳಿಕ ನಿಖರ ಮಾಹಿತಿ ಸಿಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು: ರಾಘವೇಂದ್ರ ಬ್ಯಾಂಕ್ ವಂಚನೆ ಪ್ರಕರಣ, 11 ಮಂದಿ ಅರೆಸ್ಟ್
ಶುಶೃತಿ ಸೌಹಾರ್ದ ಸಹಕಾರ ಬ್ಯಾಂಕ್‌ನ ಆಡಳಿತ ಮಂಡಳಿ ಸದಸ್ಯರು ಸ್ವಜನ ಪಕ್ಷಪಾತ ಹಾಗೂ ಹಣ ದುರ್ಬಳಕೆ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ದಾಳಿ ವೇಳೆ ಕೆಲವು ದಾಖಲೆಗಳು ಜಪ್ತಿಯಾಗಿದೆ. ಲೆಕ್ಕ ಪರಿಶೋಧನೆ ಬಳಿಕ ಬ್ಯಾಂಕ್‌ನಲ್ಲಿ ವಂಚನೆಯಾಗಿರುವ ಮೊತ್ತ ತಿಳಿಯಲಿದೆ.
-ರಮನ್ ಗುಪ್ತಾ, ಜಂಟಿ ಪೊಲೀಸ್ ಆಯುಕ್ತ (ಅಪರಾಧ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ