ದಲಿತ ಕಾರ್ಮಿಕರ ಮೇಲೆ ಹಲ್ಲೆ ಪ್ರಕರಣ; ಪ್ರತಿದೂರು ದಾಖಲಿಸಿದ ಜಗದೀಶಗೌಡ ಪತ್ನಿ ಅಶ್ವಿನಿ

By Kannadaprabha News  |  First Published Oct 13, 2022, 7:44 AM IST
  • ಕಾರ್ಮಿಕರಿಗೆ ಕೂಡಿ ಹಾಕಿದ ಪ್ರಕರಣದಲ್ಲಿ ಪ್ರತಿದೂರು ದಾಖಲಿಸಿದ ಜಗದೀಶಗೌಡ ಪತ್ನಿ ಅಶ್ವಿನಿ
  • ಸುಳ್ಳು ಕೇಸ್‌ ದಾಖಲು: ಕಾಫಿ ಬೆಳೆಗಾರರ ಸಂಘ
  • ಆರೋಪಿಯನ್ನು ಕೂಡಲೇ ಬಂಧಿಸದಿದ್ದರೆ ಬಾಳೆಹೊನ್ನೂರು ಚಲೋ: ರಾಮು ಕೌಳಿ ಹೇಳಿಕೆ

ಚಿಕ್ಕಮಗಳೂರು (ಅ.13) : ತಾಲೂಕಿನ ಹುಣಸೆಹಳ್ಳಿಪುರ ಎಸ್ಟೇಟ್‌ನಲ್ಲಿ ಸಾಲ ವಾಪಸ್‌ ನೀಡದ ಕಾರ್ಮಿಕರನ್ನು ಕೂಡಿ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದ ಕೇಸಿಗೆ ಕೌಂಟರ್‌ ಕೇಸ್‌ ದಾಖಲಾಗಿದೆ. ಕಾರ್ಮಿಕರು ನೀಡಿರುವ ದೂರಿನ ಅನ್ವಯ ಜಗದೀಶ್‌ಗೌಡ ಹಾಗೂ ಅವರ ಮಗ ತಿಲಕ್‌ ವಿರುದ್ಧ ಕೇಸು ದಾಖಲಾಗಿದ್ದರೆ, ಜಗದೀಶ್‌ಗೌಡ ಅವರ ಪತ್ನಿ ಅಶ್ವಿನಿ ಅವರು ಕಾರ್ಮಿಕರ ವಿರುದ್ಧ ಪ್ರತಿ ದೂರು ನೀಡಿದ್ದಾರೆ.

ಕಾರ್ಮಿಕರು ಆಗಾಗ ಸಣ್ಣಪುಟ್ಟಗಲಾಟೆ ಮಾಡುತ್ತಿದ್ದರು. ಈ ಬಗ್ಗೆ ಹೇಳಲು ಹೋದ ಸಂದರ್ಭದಲ್ಲಿ ಕಾರ್ಮಿಕರು ಮನೆಗೆ ನುಗ್ಗಿ ಹೂವಿನ ಕುಂಡ ಒಡೆದು ಹಾಕಿ, ತಮ್ಮ ಮೇಲೆ ಹಲ್ಲೆಗೆ ಯತ್ನಿಸಿದ್ದರು ಎಂದು ಮಂಗಳವಾರ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಬಾಳೆಹೊನ್ನೂರು ಪೊಲೀಸ್‌ ಠಾಣೆಯಲ್ಲಿ ಕೇಸ್‌ ಹಾಗೂ ಕೌಂಟರ್‌ ಕೇಸ್‌ ದಾಖಲಾಗಿದೆ.

Latest Videos

undefined

ಸುಳ್ಳು ಕೇಸ್‌ ದಾಖಲು:

ಬಾಳೆಹೊನ್ನೂರು ಕಾಫಿ ಬೆಳೆಗಾರ ಜಗದೀಶ್‌ ಗೌಡ ಹಾಗೂ ತಿಲಕ್‌ ತಮ್ಮ ತೋಟದ ಕಾರ್ಮಿಕರ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿರುವುದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ ಎಂದು ಖಾಂಡ್ಯ ಬೆಳೆಗಾರರ ಒಕ್ಕೂಟದ ಸದಸ್ಯ ಎಂ.ಜೆ.ಚಂದ್ರಶೇಖರ್‌ ಹೇಳಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಗದೀಶ್‌ಗೌಡ ಅವರು .9 ಲಕ್ಷವನ್ನು ವಿಜಯ್‌, ಅರ್ಪಿತ, ರೂಪ, ಮಂಜುನಾಥ್‌ ಮುಂತಾದ ಕಾರ್ಮಿಕರಿಗೆ ಮುಂಗಡವಾಗಿ ನೀಡಿ ತಮ್ಮ ತೋಟಕ್ಕೆ 2 ತಿಂಗಳ ಹಿಂದೆ ಕರೆತಂದಿದ್ದರು. ಕೆಲಸಕ್ಕೆ ಕರೆ ತಂದ ಬಳಿಕ ಕಾರ್ಮಿಕರು ಕೆಲಸಕ್ಕೆ ಸರಿಯಾಗಿ ಬರುತ್ತಿರಲಿಲ್ಲ. ಈ ಹಿನ್ನೆಲೆ ಮುಂಗಡ ಹಣ ವಾಪಾಸ್‌ ಕೇಳಲು ಹೋಗಿದ್ದಾಗ ಕಾರ್ಮಿಕರು ವಿನಾಕಾರಣ ಗಲಾಟೆ ಮಾಡಿದ್ದಾರೆ. ಬಳಿಕ ಕೆಲ ಸಂಘಟನೆಗಳ ಸಹಾಯದಿಂದ ಠಾಣೆಯಲ್ಲಿ ಸುಳ್ಳು ಕೇಸ್‌ ದಾಖಲಿಸಿದ್ದಾರೆ. ಮಲೆನಾಡು ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಕೆಲ ಕಾರ್ಮಿಕ, ದಲಿತ ಸಂಘಟನೆಗಳ ಹೆಸರಿನಲ್ಲಿ ಕಾರ್ಮಿಕರನ್ನು ಬಳಸಿಕೊಂಡು ತೋಟದ ಮಾಲೀಕರ ಮೇಲೆ ಇಂತಹ ಸುಳ್ಳು ಕೇಸ್‌ಗಳನ್ನು ದಾಖಲಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ ಎಂದರು.

Chikkamagaluru; ದಲಿತ ಕಾರ್ಮಿಕರನ್ನ ಕೂಡಿ ಹಾಕಿ ಹಲ್ಲೆ ಪ್ರಕರಣ, ಹಲ್ಲೆಯಿಂದ ನಡೀತಾ ಗರ್ಭಪಾತ!?

ಕೇಸ್‌ಗಳನ್ನು ದಾಖಲು ಮಾಡಿದ ಬಳಿಕ ಠಾಣೆಯಲ್ಲಿ ಸಂಘಟನೆಗಳು ಸೆಟಲ್‌ಮೆಂಟ್‌ಗೆ ಮುಂದಾಗಿ ತೋಟದ ಮಾಲೀಕರಿಂದ ಹಣ ವಸೂಲಿ ಮಾಡುತ್ತಿರುವ ಘಟನೆಗಳು ನಡೆಯುತ್ತಿವೆ. ಹಾಲಿ ಘಟನೆಯೂ ಅಂಥದ್ದೇ ಆಗಿದೆ. ಕಾಫಿ ಬೆಳೆಗಾರರು ಇಂದು ಸಾಕಷ್ಟುಸಂಕಷ್ಟದಲ್ಲಿದ್ದಾರೆ. ಆದರೂ ಕಾರ್ಮಿಕರಿಗೆ ಸಾಲ ಸೌಲಭ್ಯಗಳನ್ನು ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳಿಂದ ಬೇಸತ್ತ ಬೆಳೆಗಾರರು ಕಾರ್ಮಿಕರಿಗೆ ಸಂಕಷ್ಟದ ಸಮಯದಲ್ಲಿ ಹಣ ನೀಡಬೇಕೇ ಎಂಬ ಚಿಂತನೆ ಮಾಡಬೇಕಾದ ಅಗತ್ಯದೆ ಎಂದರು.

ಗರ್ಭಿಣಿ ಮೇಲೆ ಹಲ್ಲೆ ಮಾಡಲಾಗಿದೆ ಎಂದು ದೂರುತ್ತಿದ್ದಾರೆ. ಆದರೆ. ಗರ್ಭಿಣಿಯಾಗಿದ್ದ ಅರ್ಪಿತಾ ಅ.5ರಂದು ಜೇನುಗದ್ದೆ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆ ಬಳಿ ನನಗೆ 12 ದಿನಗಳ ಹಿಂದೆ ಗರ್ಭಪಾತವಾಗಿದೆ ಎಂದು ಹೇಳಿಕೆ ನೀಡಿದ್ದಾಳೆ. ಇದು ಆರೋಗ್ಯ ಕೇಂದ್ರದ ಡೈರಿಯಲ್ಲಿ ನಮೂದಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಕೇಸ್‌ಗಳನ್ನು ಪಡೆಯುವಾಗ ಪೊಲೀಸರು ಸತ್ಯಾಸತ್ಯತೆ ಪರಿಶೀಲಿಸಬೇಕು. ಹಾಲಿ ಘಟನೆಯಲ್ಲಿ ನೀಡಿರುವ ಸುಳ್ಳು ಕೇಸನ್ನು ವಾಪಾಸ್‌ ಪಡೆಯಬೇಕು. ಇಲ್ಲದೇಹೋದಲ್ಲಿ ಬೆಳೆಗಾರರ ಸಂಘಟನೆ ತೀವ್ರ ಸ್ವರೂಪದ ಹೋರಾಟ ನಡೆಸಲಿದೆ. ಕರ್ನಾಟಕ ಬೆಳೆಗಾರರ ಒಕ್ಕೂಟ ಸಹ ಇಂತಹ ಘಟನೆಯಲ್ಲಿ ನಮ್ಮ ಬೆಂಬಲಕ್ಕೆ ನಿಂತಿದ್ದು, ಹೋರಾಟಕ್ಕೆ ಬೆಂಬಲ ಸೂಚಿಸುವ ಭರವಸೆ ನೀಡಿದೆ ಎಂದರು.

ಒಕ್ಕೂಟದ ಅಧ್ಯಕ್ಷ ಎಸ್‌.ವಿ.ಶಂಕರ್‌ ಮಾತನಾಡಿ, ಘಟನೆಯನ್ನು ವಿರೋಧಿಸಿ ಕರ್ನಾಟಕ ಬೆಳೆಗಾರರ ಒಕ್ಕೂಟದ 23 ಸಂಘಟನೆಗಳು ಹೋರಾಟಕ್ಕೆ ಬೆಂಬಲ ನೀಡಿವೆ. ಪೊಲೀಸ್‌ ಇಲಾಖೆ ಇಂತಹ ಕೇಸ್‌ ಬಂದಾಗ ಕೂಲಂಕುಷವಾಗಿ ಪರಿಶೀಲಿಸಿ ಕೇಸ್‌ ದಾಖಲು ಮಾಡಬೇಕಿದೆ ಎಂದರು.

ದಲಿತಪರ ಸಂಘಟನೆಗಳ ಖಂಡನೆ:

ಬಾಳೆಹೊನ್ನೂರು, ಹುಣಸೇಹಳ್ಳಿ ಪುರ ಗ್ರಾಮದ ಕಾಫಿ ತೋಟದಲ್ಲಿ ಕಾರ್ಮಿಕರ ಮೇಲೆ ದೌರ್ಜನ್ಯ ಎಸಗಿದ ಆರೋಪಿಗಳ ಬಂಧನವಾಗದ ಹಿನ್ನೆಲೆ ವಿವಿಧ ದಲಿತಪರ ಸಂಘಟನೆಗಳು ಅ.13ರಂದು ಬಾಳೆಹೊನ್ನೂರು ಚಲೋಗೆ ಕರೆ ನೀಡಿವೆ ಎಂದು ಕರ್ನಾಟಕ ಜನಶಕ್ತಿ ಸಂಘಟನೆ ರಾಜ್ಯ ಸಮಿತಿ ಸದಸ್ಯ ರಾಮು ಕೌಳಿ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು, ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿವೆ. ಪುರ ಗ್ರಾಮದಲ್ಲಿ ನಡೆದಿರುವುದು ಇದರ ಮುಂದುವರಿದ ಭಾಗವಾಗಿದೆ. ಕಾರ್ಮಿಕರನ್ನು ಬಂಧನದಲ್ಲಿಟ್ಟು ದೌರ್ಜನ್ಯ ಎಸಗಿದ ಘಟನೆ ಅಮಾನುಷ, ಅನಾಗರೀಕತೆಯ ವರ್ತನೆಯಾಗಿದೆ. ಇಂತಹ ಘಟನೆಗಳಿಗೆ ಸರ್ಕಾರವೇ ನೇರ ಹೊಣೆಯಾಗಿದ್ದು, ಕನಿಷ್ಠ ಪ್ರತಿಯೊಬ್ಬರಿಗೂ ಒಂದು ಮನೆಯ ವ್ಯವಸ್ಥೆ ಕಲ್ಪಿಸಿದ್ದರೆ ಇಂತಹ ಘಟನೆ ನಡೆಯಲು ಸಾಧ್ಯವಿರಲಿಲ್ಲ. ಕಾರ್ಮಿಕರ ಮೇಲೆ ಹಲ್ಲೆ ನಡೆದು ಮೂರು ದಿನವಾದರೂ ಸಹ ಆರೋಪಿಗಳನ್ನು ಪೊಲೀಸರು ಬಂಧನ ಮಾಡಿಲ್ಲ ಎಂದರು.

ಈ ಹಿನ್ನೆಲೆ ಗುರುವಾರ ದಲಿತಪರ ಸಂಘಟನೆಗಳು ಬಾಳೆಹೊನ್ನೂರು ಚಲೋಗೆ ಕರೆ ನೀಡಿವೆ. ಬೆಳಗ್ಗೆ 11 ಗಂಟೆಗೆ ಬಾಳೆಹೊನ್ನೂರು ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಜೇಸಿ ವೃತ್ತದಲ್ಲಿ ಸಭೆ ನಡೆಸಲಾಗುವುದು. ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಭೇಟಿ ನೀಡಿ ಸಂತ್ರಸ್ಥರ ಅಹವಾಲು ಸ್ವೀಕರಿಸಬೇಕು ಎಂದು ಒತ್ತಾಯಿಸಿದರು.

ಸಂತ್ರಸ್ಥರಿಗೆ ಸರ್ಕಾರದಿಂದ ಕೂಡಲೇ ಸೂಕ್ತ ಪರಿಹಾರ ನೀಡಬೇಕು. ಅದಲ್ಲದೇ ಪುರ ಗ್ರಾಮದ ಜಗದೀಶ್‌ ತೋಟದಲ್ಲಿ ಇನ್ನೂ ಹಲವು ಕಾರ್ಮಿಕರು ಬಂಧಿಯಾಗಿದ್ದು, ಅವರನ್ನು ಕೂಡಲೇ ಬಂಧಮುಕ್ತಗೊಳಿಸಬೇಕು ಎಂದು ಒತ್ತಾಯಿಸಿದರು.

ಶೋಷಣೆಗೆ ಒಳಗಾಗುವ ಕಾಲ ಇದಲ್ಲ: ಸಿ.ಟಿ.ರವಿ

ಆದಿ ದ್ರಾವಿಡ ಸಂಘದ ಜಿಲ್ಲಾಧ್ಯಕ್ಷ ಸುರೇಶ್‌ ಮಾತನಾಡಿ, ಘಟನೆ ನಡೆದು ಮೂರು ದಿನವಾದರೂ ಕೇಸ್‌ ದಾಖಲಿಸಿಕೊಳ್ಳಲು ಸ್ಥಳೀಯ ಪಿಎಸ್‌ಐ ಹಿಂದೇಟು ಹಾಕಿದ್ದಾರೆ. ದಲಿತ ಸಂಘಟನೆಗಳು ಒಗ್ಗೂಡಿ ಠಾಣೆಗೆ ಬಂದು ಒತ್ತಡ ಹೇರಿದ ನಂತರ ಕೇಸ್‌ ದಾಖಲಿಸಿಕೊಂಡಿದ್ದಾರೆ ಎಂದರು.ಸುದ್ದಿಗೋಷ್ಠಿಯಲ್ಲಿ ಸಂತ್ರಸ್ಥರಾದ ವಿಜಯ್‌, ರೂಪ ಇದ್ದರು.

ಜಗದೀಶ್‌ಗೌಡ, ಬಿಜೆಪಿ ಕಾರ್ಯಕರ್ತ ಅಲ್ಲ, ಅಭಿಮಾನಿ ಇರಬಹುದು. ಅಹಿತಕರ ಘಟನೆಗಳಿಗೆ ಬಿಜೆಪಿ ಬೆಂಬಲಿಸುವುದಿಲ್ಲ. ಬಿಜೆಪಿ ಹೆಸರಿನಲ್ಲಿ ಜನರ ಮೇಲೆ ದೌರ್ಜನ್ಯ ನಡೆಸುವುದು ಸಹಿಸುವುದಿಲ್ಲ, ಇದಕ್ಕೆ ಅನುವು ಮಾಡಿಕೊಡುವುದಿಲ್ಲ. ಎಲ್ಲರೂ ಸಾಮರಸ್ಯದಿಂದ ಇರಬೇಕೆಂದು ಪಕ್ಷ ಬಯಸುತ್ತದೆ. ಈ ರೀತಿಯ ದೌರ್ಜನ್ಯ ಯಾರೇ ಮಾಡಿದರೂ ಖಂಡಿಸಲಾಗುವುದು

- ಎಚ್‌.ಸಿ. ಕಲ್ಮರಡಪ್ಪ, ಅಧ್ಯಕ್ಷ, ಜಿಲ್ಲಾ ಬಿಜೆಪಿ

click me!