
ಬೆಂಗಳೂರು(ಮಾ.03): ಮಾದಕ ವಸ್ತು ಮಾರಾಟ ಜಾಲದ ನಂಟು ಪ್ರಕರಣ ಸಂಬಂಧ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಹಾಗೂ ನೃತ್ಯಗಾರ್ತಿ ನಂದಿನಿ ಆಳ್ವ ಪುತ್ರ ಆದಿತ್ಯ ಆಳ್ವ ಸೇರಿದಂತೆ 25 ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ನ್ಯಾಯಾಲಯಕ್ಕೆ 2,390 ಪುಟಗಳ ಬೃಹತ್ ಆರೋಪ ಪಟ್ಟಿಯನ್ನು ಸಿಸಿಬಿ ಸಲ್ಲಿಸಿದೆ.
ಆರೋಪ ಪಟ್ಟಿಯಲ್ಲಿ ನಟಿಯರು ಡ್ರಗ್ಸ್ ವ್ಯಸನಿಗಳು ಹಾಗೂ ಪೆಡ್ಲಿಂಗ್‌ಗೆ ಸಹಕಾರ ನೀಡಿದ್ದಾರೆ ಎಂಬ ಅಂಶ ಉಲ್ಲೇಖವಾಗಿದೆ ಎನ್ನಲಾಗಿದೆ. ಈ ಪ್ರಕರಣದಲ್ಲಿ ನಟಿಯರು, ರಾಗಿಣಿ ಗೆಳೆಯ, ಸಾರಿಗೆ ಇಲಾಖೆ ಉದ್ಯೋಗಿ ರವಿಶಂಕರ್, ಸಂಜನಾ ಸ್ನೇಹಿತ ರಾಹುಲ್ ತೋನ್ಸೆ, ಪೇಜ್-3 ಪಾರ್ಟಿ ಆಯೋಜಕ ವೀರೇನ್ ಖನ್ನಾ ಹಾಗೂ ಮೂವರು ನೈಜೀರಿಯಾ ಪ್ರಜೆಗಳು ಸೇರಿ 20 ಆರೋಪಿಗಳು ಬಂಧಿತರಾಗಿದ್ದರು. ಇನ್ನುಳಿದ ಐವರು ನಾಪತ್ತೆಯಾಗಿರುವ ಆರೋಪಿಗಳು ಎಂದು ಹೇಳಲಾಗಿದೆ.
ತಾರಾ ದಂಪತಿ ದಿಗಂತ್, ಐಂದ್ರಿತಾ ರೇ, ಫ್ಯಾಷನ್ ಗುರು ರಮೇಶ್ ಡೆಂಬಲ್, ಬಿಜೆಪಿ ಮುಖಂಡ ಕಾರ್ತಿಕ್ ರಾಜ್, ಮಾಜಿ ಡಾನ್ ದಿ.ಮುತ್ತಪ್ಪ ರೈ ಪುತ್ರ ರಾಕಿ ರೈ, ನಿರ್ಮಾಪಕರಾದ ಸೌಂದರ್ಯ ಜಗದೀಶ್ ದಂಪತಿ ಸೇರಿದಂತೆ 180 ಮಂದಿಯ ಹೇಳಿಕೆಗಳನ್ನು ಕೂಡಾ ಆರೋಪ ಪಟ್ಟಿಯಲ್ಲಿ ನಮೂದಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬಿಗ್‌ಬಾಸ್ ಮನೆಗೆ ರಾಗಿಣಿ..? ಶುರುವಾಗೋಕೂ ಮುನ್ನ ರಿವೀಲ್ ಮಾಡಿದ್ರು ರಾಗಿಣಿ!
2020ರ ಸೆ.4ರಂದು ನಟಿಯರಾದ ರಾಗಿಣಿ, ಸಂಜನಾ ಗಲ್ರಾನಿ, ಅವರ ಗೆಳೆಯರು ಹಾಗೂ ಪೇಜ್ ತ್ರಿ ಪಾರ್ಟಿಗಳ ಆಯೋಜಕ ವೀರೇನ್ ಖನ್ನಾ ವಿರುದ್ಧ ಸಿಸಿಬಿ ಎಸಿಪಿ ಗೌತಮ್ ನೀಡಿದ ದೂರಿನ ಮೇರೆಗೆ ಕಾಟನ್‌ಪೇಟೆ ಠಾಣೆಯಲ್ಲಿn ಎಫ್‌ಐಆರ್ ದಾಖಲಾಗಿತ್ತು. ಆರು ತಿಂಗಳ ಸುದೀರ್ಘವಾಗಿ ತನಿಖೆ ನಡೆಸಿದ ಸಿಸಿಬಿ ಇನ್‌ಸ್ಪೆಕ್ಟರ್ ಪುನೀತ್ ನೇತೃತ್ವದ ತಂಡ ನ್ಯಾಯಾಲಯಕ್ಕೆ ಐದು ಸಂಪುಟದಲ್ಲಿ 2,390 ಪುಟಗಳ ಆರೋಪ ಪಟ್ಟಿಯನ್ನು ಸೋಮವಾರ ಸಲ್ಲಿಸಿದೆ. ಕೃತ್ಯದಲ್ಲಿ ಆರೋಪಿಗಳ ಪಾತ್ರದ ಬಗ್ಗೆ ಪೊಲೀಸರು ಸವಿಸ್ತಾರವಾಗಿ ವಿವರಿಸಿದ್ದಾರೆ. ಮಾದಕ ವಸ್ತು ವ್ಯಸನಿಗಳಾಗಿದ್ದು ಮಾತ್ರವಲ್ಲದೆ ಮಾರಾಟಕ್ಕೆ ಕೂಡಾ ನಟಿಯರು ಸಾಥ್ ಕೊಟ್ಟಿದ್ದಾರೆ. ಆಫ್ರಿಕಾ ಪ್ರಜೆಗಳಿಂದ ಡ್ರಗ್ಸ್ ಖರೀದಿಸಿ ವೀರೇನ್ ಖನ್ನಾ, ರಾಹುಲ್ ತೋನ್ಸೆ ಹಾಗೂ ರವಿಶಂಕರ್, ಪೇಜ್ ತ್ರಿ ಪಾರ್ಟಿಗಳಲ್ಲಿ ಅದನ್ನು ಅವರು ಬಳಸಿದ್ದಾರೆ ಎಂದು ಹೇಳಲಾಗಿದೆ.
ಆರೋಪಿಗಳಿವರು
ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ, ರವಿಶಂಕರ್, ವೀರೇನ್ ಖನ್ನಾ, ಪ್ರಶಾಂತ್ ರಂಕಾ, ರಾಹುಲ್ ತೋನ್ಸೆ, ನಿಯಾಜ್ ಅಹಮ್ಮದ್, ಅಶ್ವಿನ್ ಬೋಗಿ, ವೈಭವ್ ಜೈನ್, ಪ್ರತೀಕ್ಷೆ ಶೆಟ್ಟಿ, ಶ್ರೀಕಾಂತ್ ಅಲಿಯಾಸ್ ಶ್ರೀ, ಆಫ್ರಿಕಾ ಪ್ರಜೆಗಳಾದ ಲೂಮ್ ಪೆಪ್ಪರ್ ಅಲಿಯಾಸ್ ಸಾಂಬಾ, ಬೆನ್ಲಾಡ್ ಉಡೇನಾ, ಓಸ್ಸಿ, ಜಾನಿ, ರಾಗಿಣಿ ಗೆಳೆಯ ಶಿವಪ್ರಕಾಶ್, ಆದಿತ್ಯ ಆಳ್ವ, ಪ್ರಶಾಂತ್ ರಾಜ್ ಹಾಗೂ ಅಭಿಸ್ವಾಮಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ