ಎಟಿಎಂಗಳಲ್ಲಿ ತಾಂತ್ರಿಕ ದೋಷ ಸೃಷ್ಟಿಸಿ ಹಣಕ್ಕೆ ಕನ್ನ..!

Kannadaprabha News   | Asianet News
Published : Mar 03, 2021, 07:18 AM IST
ಎಟಿಎಂಗಳಲ್ಲಿ ತಾಂತ್ರಿಕ ದೋಷ ಸೃಷ್ಟಿಸಿ ಹಣಕ್ಕೆ ಕನ್ನ..!

ಸಾರಾಂಶ

ಚಾಲಾಕಿ ಕಳ್ಳನ ಬಂಧನ| ವಿವಿಧ ಬ್ಯಾಂಕ್‌ಗಳ 48 ಎಟಿಎಂ ಕಾರ್ಡ್‌ ಬಳಸಿ ಕೃತ್ಯ| ಹಣ ಪಡೆಯಲು ಎಟಿಎಂಗೆ ಬಂದಾಗ ಸಿಕ್ಕಿಬಿದ್ದ ಖದೀಮ| ಹಣ ಬರುವ ಜಾಗಕ್ಕೆ ಬೆರಳಿಟ್ಟು ತಾಂತ್ರಿಕ ದೋಷ ಸೃಷ್ಟಿಸುತ್ತಿದ್ದ ಆರೋಪಿ| 

ಬೆಂಗಳೂರು(ಮಾ.03): ಎಟಿಎಂ ಘಟಕಗಳಲ್ಲಿ ಕೈ ಬೆರಳು ಬಳಸಿ ತಾಂತ್ರಿಕ ತೊಂದರೆ ಸೃಷ್ಟಿಸಿ ಬ್ಯಾಂಕ್‌ಗಳಿಗೆ ಟೋಪಿ ಹಾಕಿ ಹಣ ಲಪಟಾಟಿಸುತ್ತಿದ್ದ ಚಾಲಾಕಿ ಕಳ್ಳನೊಬ್ಬ ರಾಜಾಜಿನಗರ ಪೊಲೀಸರ ಗಾಳಕ್ಕೆ ಬಿದ್ದಿದ್ದಾನೆ.

ಉತ್ತರ ಪ್ರದೇಶದ ಹಮಿರ್‌ಪುರ್‌ ಜಿಲ್ಲೆಯ ದೀಪಕ್‌ (20) ಬಂಧಿತನಾಗಿದ್ದು, ಆರೋಪಿಯಿಂದ ವಿವಿಧ ಬ್ಯಾಂಕ್‌ಗಳ 48 ಕಾರ್ಡ್‌ಗಳು ಹಾಗೂ .52 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ. ಕೆಲ ದಿನಗಳ ಹಿಂದೆ ನಗರದ ಕೆಲವು ಎಟಿಎಂ ಘಟಕಗಳಲ್ಲಿ ವಂಚನೆ ನಡೆದಿರುವ ಬಗ್ಗೆ ಆ ಘಟಕಗಳ ತಾಂತ್ರಿಕ ನಿರ್ವಹಣೆ ಗುತ್ತಿಗೆ ಪಡೆದಿರುವ ಖಾಸಗಿ ಏಜೆನ್ಸಿಗೆ ಮಾಹಿತಿ ಸಿಕ್ಕಿದೆ. ಕೂಡಲೇ ಜಾಗೃತರಾದ ಏಜೆನ್ಸಿ ಅಧಿಕಾರಿಗಳು, ಫೆ.24ರಂದು ರಾಜಾಜಿನಗರದ ಡಾ
ರಾಜ್‌ಕುಮಾರ್‌ ರಸ್ತೆಯಲ್ಲಿ ಎಟಿಎಂ ಕೇಂದ್ರಕ್ಕೆ ಹಣ ಪಡೆಯಲು ಬಂದಾಗ ಆರೋಪಿಯನ್ನು ಸೆರೆ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸೆರೆಯಾಗಿದ್ದು ಹೀಗೆ:

ನಗರದ ವಿವಿಧ ಬ್ಯಾಂಕ್‌ಗಳ ಎಟಿಎಂಗಳ ತಾಂತ್ರಿಕ ನಿರ್ವಹಣೆ ಗುತ್ತಿಗೆ ಪಡೆದಿರುವ ಎಂಫಾಸಿಸ್‌ ಏಜೆನ್ಸಿಗೆ, ಇತ್ತೀಚೆಗೆ ಕೆಲವು ಎಟಿಎಂಗಳಲ್ಲಿ ಮೋಸದಿಂದ ಹಣ ಡ್ರಾ ಮಾಡುತ್ತಿರುವ ಸಂಗತಿ ಗೊತ್ತಾಗಿದೆ. ಅಂತೆಯೇ ಫೆ.23ರಂದು ರಾಜಾಜಿನಗರ ಸಮೀಪದ ಪ್ರಕಾಶ್‌ ನಗರದ ಡಾ. ರಾಜ್‌ ಕುಮಾರ್‌ ರಸ್ತೆಯಲ್ಲಿರುವ ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ ಎಟಿಎಂ ಸೆಂಟರ್‌ನಲ್ಲಿ ಕಿಡಿಗೇಡಿ ಮೋಸದಿಂದ ಹಣ ಪಡೆಯಲು ಯತ್ನಿಸಿರುವುದು ಏಜೆನ್ಸಿಗೆ ಮಾಹಿತಿ ಸಿಕ್ಕಿದೆ. ಕೂಡಲೇ ಎಚ್ಚೆತ್ತ ಅವರು, ಮರುದಿನ ಬೆಳಗ್ಗೆ 11.30ಕ್ಕೆ ಆ ಎಟಿಎಂಗೆ ಪರಿಶೀಲನೆಗೆ ತೆರಳಿದ್ದರು. ಅದೇ ವೇಳೆಗೆ ಎಟಿಎಂ ಘಟಕಕ್ಕೆ ಹಣ ಪಡೆಯಲು ಬಂದ ದೀಪಕ್‌ನನ್ನು ಅನುಮಾನದ ಮೇರೆಗೆ ಏಜೆನ್ಸಿ ಅಧಿಕಾರಿಗಳು ವಶಕ್ಕೆ ಪಡೆದು ಬಳಿಕ ರಾಜಾಜಿನಗರ ಠಾಣೆ ಪೊಲೀಸರಿಗೊಪ್ಪಿಸಿದ್ದಾರೆ. ವಿಚಾರಣೆ ನಡೆಸಿದಾಗ ಆರೋಪಿಯ ಎಟಿಎಂ ವಂಚನೆ ಕೃತ್ಯ ಬಯಲಾಯಿತು ಎಂದು ಅದಿಕಾರಿಗಳು ಹೇಳಿದ್ದಾರೆ.

ಉದ್ಯಮಿಗಳಿಂದ ಸ್ನೇಹಿತೆ ಮನೆಗೇ ಕನ್ನ: ಇಬ್ಬರ ಬಂಧನ

ವಿದ್ಯಾರ್ಹತೆ ಪಿಯುಸಿ: ಉತ್ತರ ಪ್ರದೇಶದ ದೀಪಕ್‌, ದೊಡ್ಡಬಿದರಕಲ್ಲು ಸಮೀಪ ಬಾಡಿಗೆ ರೂಮ್‌ ಪಡೆದು ನೆಲೆಸಿದ್ದ. ಈ ಮೊದಲು ಮೂರು ಬಾರಿ ಬೆಂಗಳೂರಿಗೆ ಬಂದು ಎಟಿಎಂ ಘಟಕಗಳಲ್ಲಿ ವಂಚನೆ ಮೂಲಕ ಹಣ ಕದ್ದು ಪರಾರಿಯಾಗಿದ್ದ. ಪಿಯುಸಿ ವಿದ್ಯಾರ್ಹತೆ ಹೊಂದಿರುವ ಆತ, ಬ್ಯಾಂಕ್‌ಗಳಿಗೆ ವಂಚನೆ ಕೃತ್ಯವನ್ನು ಕರಗತ ಮಾಡಿಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಹಣ ಬರುವ ಜಾಗಕ್ಕೆ ಬೆರಳಿಟ್ಟು ತಾಂತ್ರಿಕ ದೋಷ ಸೃಷ್ಟಿಸುತ್ತಿದ್ದ

ದೀಪಕ್‌ ಎಟಿಎಂ ಘಟಕಕ್ಕೆ ತೆರಳಿ ಹಣ ಪಡೆಯಲು ಕಾರ್ಡ್‌ ಹಾಕುತ್ತಿದ್ದ. ಪಿನ್‌ ನಮೂದಿಸಿ ಯಂತ್ರದಲ್ಲಿ ಹಣ ಎಣಿಕೆ ಹಂತದಲ್ಲಿ ಆತ, ಎಟಿಎಂನಿಂದ ಹಣ ಬರುವ ಜಾಗದೊಳಗೆ ಕೈ ಬೆರಳುಗಳನ್ನು ಅಡ್ಡ ಇಡುತ್ತಿದ್ದ. ಇದರಿಂದ ಸಂಪರ್ಕ ಕಡಿತವಾಗಿ ಹಣ ಸ್ವೀಕರಿಸಿದಾಗ ಸರ್ವರ್‌ ಹ್ಯಾಂಗ್‌ ಆಗುತ್ತಿತ್ತು. ಆಗ ಗ್ರಾಹಕನ ಖಾತೆಯಲ್ಲಿ ಹಣ ಡ್ರಾ ಆಗಿದ್ದರೂ ಬ್ಯಾಂಕ್‌ಗೆ ಮಾಹಿತಿ ರವಾನೆ ಆಗುತ್ತಿರಲಿಲ್ಲ. ಬಳಿಕ ಸಂಬಂಧಪಟ್ಟಬ್ಯಾಂಕ್‌ನವರಿಗೆ ಹಣ ಬಂದಿಲ್ಲ ಎಂದು ಆನ್‌ಲೈನ್‌ ಮೂಲಕ ಆರೋಪಿ ದೂರು ಸಲ್ಲಿಸುತ್ತಿದ್ದ.

ಈ ದೂರು ಸ್ವೀಕರಿಸುತ್ತಿದ್ದ ಬ್ಯಾಂಕ್‌ ಸಿಬ್ಬಂದಿ, ಗ್ರಾಹಕನ ಬ್ಯಾಂಕ್‌ ಖಾತೆಗೆ ಹಣವನ್ನು ಜಮಾ ಮಾಡುತ್ತಿದ್ದರು. ಹೀಗೆ ಆರೋಪಿಯು ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ 19, ಎಸ್‌ಬಿಐ ಬ್ಯಾಂಕ್‌ 20, ಫೆಡರಲ್‌ ಬ್ಯಾಂಕ್‌ 4, ಎಚ್‌ಡಿಎಫ್‌ಸಿ 2, ಬ್ಯಾಂಕ್‌ ಆಫ್‌ ಬರೋಡಾ 2 ಹಾಗೂ ಆಕ್ಸಿಸ್‌ ಬ್ಯಾಂಕ್‌ 1 ಕಾರ್ಡ್‌ ಸೇರಿದಂತೆ ಒಟ್ಟು 48 ಎಟಿಎಂ ಕಾರ್ಡ್‌ಗಳನ್ನು ಬಳಸಿಕೊಂಡು ಸುಮಾರು 4-5 ಲಕ್ಷ ಹಣ ಪಡೆದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಮಿಷನ್‌ ಆಸೆ ತೋರಿಸಿ ಎಟಿಎಂ ಕಾರ್ಡ್‌ ಪಡೆದ

ತನ್ನೂರಿನ ಜನರಿಗೆ ಕಮಿಷನ್‌ ಆಸೆ ತೋರಿಸಿ ಅವರಿಂದ ಎಟಿಎಂ ಕಾರ್ಡ್‌ಗಳನ್ನು ಆರೋಪಿ ಪಡೆದುಕೊಂಡಿದ್ದ. ಈ ಕೃತ್ಯದಲ್ಲಿ ಮತ್ತಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ತನಿಖೆ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಗ್ರ್ಯಾಮಿ ಪ್ರಶಸ್ತಿ ವಿಜೇತ ಖ್ಯಾತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಬೆಂಗಳೂರು ಮನೆಯಿಂದ ಡೆಲಿವರಿ ಬಾಯ್ಸ್ ಕಳ್ಳತನ!
5 ಸಾವಿರ ಕೊಡ್ತೀನಿ ರೂಮ್‌ಗೆ ಬಾ ಅಂದ್ರು? ಬ್ರಹ್ಮಾನಂದ ಗುರೂಜಿಯ ವಿಡಿಯೋ ವೈರಲ್