ಕೆರೆ ಸ್ವಚ್ಛಗೊಳಿಸುವುದಕ್ಕಾಗಿ ಕಲುಷಿತ ನೀರನ್ನು ಹೊಳೆಗೆ ಹರಿಸಿದ ಕೊಡಗಿನ ಪ್ರಭಾವಿ ರಾಜಕಾರಣಿ. ಕಲುಷಿತ ನೀರು ಕುಡಿದು ಜಾನುವಾರು ಸಾವು
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಮೇ.20): ಪ್ರಭಾವಿ ರಾಜಕಾರಣಿಯೊಬ್ಬರು ಕಾಲುವೆಗಳಿಗೆ ಹರಿಸಿದ ಕಲುಷಿತ ನೀರನ್ನು ಜಾನುವಾರುಗಳು ಕುಡಿದ ಪರಿಣಾಮ ಹಲವು ಜಾನುವಾರುಗಳು ಅನಾರೋಗ್ಯಕ್ಕೆ ತುತ್ತಾಗಿದ್ದು, ಒಂದು ಜಾನುವಾರು ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಮೇಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಭಾಷ್ ನಗರ ಪೈಸಾರಿಯಲ್ಲಿ ಬೆಳಕಿಗೆ ಬಂದಿದೆ. ಇತ್ತೀಚೆಗೆ 60 ಎಕರೆ ಕಾಫಿ ತೋಟ ಖರೀದಿಸಿದ್ದ ಬೆಂಗಳೂರಿನ ರಾಜಕಾರಣಿಯೊಬ್ಬರು ತಮ್ಮ ತೋಟದ ವ್ಯಾಪ್ತಿಯಲ್ಲಿದ್ದ ಐದು ದಶಕಗಳಿಗೂ ಹೆಚ್ಚು ಹಳೆಯದಾದ ಕೆರೆಯನ್ನು ಹೊಡೆದು ಅದರಲ್ಲಿದ್ದ ಕಲುಷಿತ ನೀರನ್ನು ಕಾಲುವೆಗಳಿಗೆ ಹರಿಸಿದ್ದಾರೆ ಎನ್ನಲಾಗಿದೆ. ಎಂದಿನಂತೆ ಕಾಲುವೆಗಳಲ್ಲಿ ಹರಿಯುತ್ತಿದ್ದ ನೀರನ್ನು ಜಾನುವಾರುಗಳು ಕುಡಿಯುತ್ತಿದ್ದವು. ಅದೇ ರೀತಿ ಈ ಕಾಲುವೆಯಲ್ಲಿ ಹರಿಯುತ್ತಿದ್ದ ಕಲುಷಿತ ನೀರನ್ನು ಜಾನುವಾರುಗಳು ಕುಡಿದ ಪರಿಣಾಮ ಅನಿತಾ ಎಂಬುವರ ಹಸು ಸಾವನ್ನಪ್ಪಿದೆ. ಮೂರು ಹಸುಗಳನ್ನು ಸಾಕಿಕೊಂಡು ಅವುಗಳಿಂದ ಜೀವನ ನಡೆಸುತ್ತಿದ್ದ ಅನಿತಾ ಅವರು ಹಸು ಕಳೆದುಕೊಂಡು ಕಂಗಾಲಾಗಿದ್ದಾರೆ.
undefined
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸೇತುವೆಯ ಫೌಂಡೇಶನ್ ಬೇರಿಂಗ್ ಕಟ್, ತಪ್ಪಿತು ಭಾರೀ ದುರಂತ!
ಇತ್ತೀಚೆಗೆ ಕಾಫಿ ತೋಟವನ್ನು ಖರೀದಿಸಿದ್ದ ಪ್ರಭಾವಿ ರಾಜಕೀಯ ವ್ಯಕ್ತಿಯೊಬ್ಬರು ಕೆರೆಯನ್ನು ಸ್ವಚ್ಚಗೊಳಿಸುವುದಕ್ಕಾಗಿ ಅದನ್ನು ಒಡೆದು ಅದರಲ್ಲಿದ್ದ ಕಲುಷಿತ ನೀರನ್ನು ಮೇಕೇರಿಯ ಹೊಳೆಗೆ ಹರಿಬಿಟ್ಟಿದ್ದರು ಎಂಬ ಆರೋಪ ಕೇಳಿ ಬಂದಿದೆ. ಮೇಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳ ನೂರಾರು ಕುಟುಂಬಗಳು ಇದೇ ಹೊಳೆಯ ನೀರನ್ನು ಕುಡಿಯಲು ಸೇರಿದಂತೆ ವಿವಿಧ ಉದ್ದೇಶಗಳಿಗೆ ಬಳಸುತ್ತಿದ್ದರು. ಹೊಳೆಯಲ್ಲಿ ನೀರು ಸಂಪೂರ್ಣ ಕಲುಷಿತವಾಗಿ ಹರಿಯುತ್ತಿದ್ದರಿಂದ ಜನರು ಯಾರೂ ಈ ನೀರನ್ನು ಉಪಯೋಗಿಸಿಲ್ಲ. ಹೀಗಾಗಿ ಗ್ರಾಮದ ಜನರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಆದರೆ ಜಾನುವಾರು ಈ ನೀರನ್ನು ಕುಡಿದ ಪರಿಣಾಮ ಹಲವು ಜಾನುವಾರುಗಳು ಅನಾರೋಗ್ಯಕ್ಕೆ ತುತ್ತಾಗಿದ್ದು, ಅನಿತಾ ಅವರ ಜಾನುವಾರು ಸಾವನ್ನಪ್ಪಿದೆ.
Road Accident: ಗೂಡ್ಸ್-ಕಾರು ನಡುವೆ ಭೀಕರ ಅಪಘಾತ, ಇಬ್ಬರು ಸ್ಥಳದಲ್ಲೇ ಸಾವು!
ಬಿಸಿಯೂಟದ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿರುವ ಅನಿತಾ ಅವರು ಮೂರು ಹಸುಗಳನ್ನು ಸಾಕಿಕೊಂಡು ಹಾಲನ್ನು ಮಾರಿ ಅದರಿಂದ ಬರುತ್ತಿದ್ದ ಆದಾಯದಿಂದ ಜೀವನ ಸಾಗಿಸುತ್ತಿದ್ದರು. ಇದೀಗ ಒಂದು ಜಾನುವಾರು ಕಳೆದುಕೊಂಡಿರುವ ಅನಿತಾ ಅವರಿಗೆ ದಿಕ್ಕುತೋಚದಂತೆ ಆಗಿದ್ದು, ಕಲುಷಿತ ನೀರನ್ನು ಹರಿಸಿದವರೆ ನನಗೆ ಪರಿಹಾರ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಕಳೆದ ಎರಡು ದಿನಗಳ ಹಿಂದೆಯೇ ಕೆರೆಯನ್ನು ಹೊಡೆದು ನೀರು ಹರಿಸಲು ಮುಂದಾಗಿದ್ದರು. ಈ ವಿಷಯ ಗೊತ್ತಾಗಿ ಗ್ರಾಮಸ್ಥರು ತೀವ್ರ ಗದ್ದಲ ಮಾಡಿ ವಿರೋಧ ವ್ಯಕ್ತಪಡಿಸಿದ್ದರು. ಆದರೂ ಎರಡು ದಿನಗಳು ಕಳೆದ ಬಳಿಕ ಯಾರಿಗೂ ಗೊತ್ತಾಗದಂತೆ ರಾತ್ರೋ ರಾತ್ರಿ ಕೆರೆಯನ್ನು ಒಡೆದು ಹೊಳೆಗೆ ನೀರು ಹರಿಸಲಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಜಾನುವಾರು ಸಾವನ್ನಪ್ಪುತ್ತಿದ್ದಂತೆ ಗ್ರಾಮದ ಜನರು ಕೆರೆಯನ್ನು ಹೊಡೆದಿರುವ ತೋಟದ ಮಾಲೀಕರಾಗಿರುವ ಪ್ರಭಾವಿ ರಾಜಕಾರಣಿಯೊಬ್ಬರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸ್ಥಳಕ್ಕೆ ಬಂದ ಮೇಕೇರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಜನಪ್ರತಿನಿಧಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಕೆರೆಯನ್ನು ಹೊಡೆದು ಸಾರ್ವಜನಿಕ ಬಳಕೆಯ ನೀರಿನ ಮೂಲಗಳಿಗೆ ಸೇರಿಸಿ ಎಲ್ಲಾ ನೀರು ಕಲುಷಿತ ಆಗುವಂತೆ ಮಾಡಿರುವುದಿರಂದ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದಾಗಿ ಜನರಿಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಸದ್ಯ ಇಡೀ ಕಾಲುವೆ ಸಂಪೂರ್ಣ ಕಲುಷಿತಗೊಂಡಿದ್ದು, ಕುಡಿಯುವ ನೀರಿಗೆ ಜನರು ಆಹಾಕಾರ ಪಡುವಂತೆ ಆಗಿದೆ.