ಸಿಸಿಟಿವಿ ಕ್ಯಾಮೆರಾಗಳ ಕಣ್ತಪ್ಪಿಸಿ ದಂಡದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಆರೋಪಿ ಚನ್ನಬಸವ ತನ್ನ ದ್ವಿಚಕ್ರ ವಾಹನದ ನೋಂದಣಿ ಫಲಕಕ್ಕೆ ಸ್ಟಿಕ್ಕರ್ ಅಂಟಿಸಿಕೊಂಡು ಓಡಾಡುತ್ತಿದ್ದ.
ಬೆಂಗಳೂರು(ನ.26): ಸಂಚಾರ ನಿಯಮ ಉಲ್ಲಂಘನೆಗೆ ದಂಡ ತಪ್ಪಿಸಿಕೊಳ್ಳಲು ದ್ವಿಚಕ್ರ ವಾಹನದ ಹಿಂಬದಿ ನೋದಣಿ ಫಲಕಕ್ಕೆ ಸ್ಟಿಕ್ಕರ್ ಅಂಟಿಸಿಕೊಂಡು ಓಡಾಡುತ್ತಿದ್ದ ಖತರ್ನಾಕ್ ವ್ಯಕ್ತಿಯನ್ನು ಪತ್ತೆ ಹಚ್ಚಿ ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ನ್ಯೂತಿಪ್ಪಸಂದ್ರದ ಮಲ್ಲೇಶಪಾಳ್ಯ ನಿವಾಸಿ ಎಂ ಚನ್ನಬಸವ (22)ನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಿಯು ಖಾಸಗಿ ಕಂಪನಿ ಉದ್ಯೋಗಿಯಾಗಿದ್ದು, ಮೂರು ತಿಂಗಳ ಹಿಂದೆ ದ್ವಿಚಕ್ರ ವಾಹನವೊಂದನ್ನು ಖರೀದಿಸಿದ್ದ. ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳಿಗೆ ದಂಡ ವಿಧಿಸುವ ಸಲುವಾಗಿ ನಗರ ಸಂಚಾರ ಪೊಲೀಸರು ಪ್ರಮುಖ ಜಂಕ್ಷನ್‌ಗಳು, ಸಿಗ್ನಲ್‌ಗಳು, ವೃತ್ತಗಳು ಸೇರಿದಂತೆ ನಗರದ ಹಲವೆಡೆ ಅತ್ಯಾಧುನಿಕ ತಂತ್ರಜ್ಞಾನದ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ. ಈ ಸಿಸಿಟಿವಿ ಕ್ಯಾಮೆರಾಗಳ ಕಣ್ತಪ್ಪಿಸಿ ದಂಡದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಆರೋಪಿ ಚನ್ನಬಸವ ತನ್ನ ದ್ವಿಚಕ್ರ ವಾಹನದ ನೋಂದಣಿ ಫಲಕಕ್ಕೆ ಸ್ಟಿಕ್ಕರ್ ಅಂಟಿಸಿಕೊಂಡು ಓಡಾಡುತ್ತಿದ್ದ.
undefined
ಸಿಂಧನೂರು: ಪ್ರೀತಿಸಿ ಮದುವೆಯಾದ ಪತ್ನಿಯನ್ನ ನೇಣು ಬಿಗಿದು ಕೊಲೆ ಮಾಡಿದ ಪಾಪಿ ಗಂಡ..!
ಇತ್ತೀಚೆಗೆ ಮಲ್ಲೇಶ್‌ಪಾಳ್ಯ ಬಸ್ ನಿಲ್ದಾಣದ ಬಳಿ ವ್ಯಕ್ತಿಯೊಬ್ಬರು ಚನ್ನಬಸವನ ದೋಷಪೂರಿತ ನೋಂದಣಿ ಫಲಕದ ಫೋಟೋ ಕ್ಲಿಕ್ಕಿಸಿ ನಗರದ ಸಂಚಾರ ಪೊಲೀಸರ ‘ಪಬ್ಲಿಕ್ ಐ’ ಅಧಿಕೃತ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಿದ್ದರು. ಇದನ್ನು ಗಮನಿಸಿ ಜೀವನಭೀಮಾನಗರ ಸಂಚಾರ ಠಾಣೆ ಪೊಲೀಸರು ಸ್ವಯಂ ಪ್ರಕರಣ ದಾಖಲಿಸಿಕೊಂಡಿದ್ದರು.
ಬಳಿಕ ಮಲ್ಲೇಶ್‌ಪಾಳ್ಯ ಬಸ್ ನಿಲ್ದಾಣ ಹಾಗೂ ಸುತ್ತಮುತ್ತಲ ರಸ್ತೆಗಳ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿ ಆರೋಪಿಯ ದ್ವಿಚಕ್ರ ವಾಹನದ ಮೇಲೆ ನಿಗಾವಹಿಸಿದ್ದರು. ನ.24ರಂದು ಮಲ್ಲೇಶ್‌ಪಾಳ್ಯದ ಮುಖ್ಯರಸ್ತೆಯಲ್ಲಿ ಆರೋಪಿ ದ್ವಿಚಕ್ರ ವಾಹನ ಸಹಿತ ಸಿಕ್ಕಿಬಿದ್ದಿದ್ದಾನೆ. ಬಳಿಕ ಆತನನ್ನು ವಶಕ್ಕೆ ಪಡೆದು ಬೈಯಪ್ಪನಹಳ್ಳಿ ಠಾಣೆ ಪೊಲೀಸರಿಗೆ ಒಪ್ಪಿಸಿದ್ದರು. ಬಳಿಕ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.