₹7 ಕೋಟಿ ದೋಚಿದ ಕಾರು ಪತ್ತೆ: ಹಣ ಮಾತ್ರ ನಾಪತ್ತೆ!

Kannadaprabha News   | Kannada Prabha
Published : Nov 21, 2025, 06:34 AM IST
bengaluru robbery

ಸಾರಾಂಶ

ಎಚ್‌ಡಿಎಫ್‌ಸಿ ಬ್ಯಾಂಕ್‌ ಎಟಿಎಂ ಘಟಕಗಳಿಗೆ ತುಂಬಲೆಂದು ಕೊಂಡೊಯ್ಯುತ್ತಿದ್ದ 7.11 ಕೋಟಿ ರು. ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿರುವ ಪೊಲೀಸರು, ಇಬ್ಬರು ಶಂಕಿತ ದರೋಡೆಕೋರರನ್ನು ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಬೆಂಗಳೂರು : ಎಚ್‌ಡಿಎಫ್‌ಸಿ ಬ್ಯಾಂಕ್‌ ಎಟಿಎಂ ಘಟಕಗಳಿಗೆ ತುಂಬಲೆಂದು ಕೊಂಡೊಯ್ಯುತ್ತಿದ್ದ 7.11 ಕೋಟಿ ರು. ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿರುವ ಪೊಲೀಸರು, ಇಬ್ಬರು ಶಂಕಿತ ದರೋಡೆಕೋರರನ್ನು ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ನಗರದಲ್ಲಿ ದರೋಡೆ ಗುಂಪಿನ ಇಬ್ಬರು ಸದಸ್ಯರು ಎಂದು ಹೇಳಲಾದವರು ಪೊಲೀಸರ ಬಲೆಗೆ ಬಿದ್ದಿದ್ದು, ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ವೆಲ್ಲೂರು ರಸ್ತೆಯಲ್ಲಿ ಕಾರು ಪತ್ತೆಯಾಗಿದೆ. ಆದರೆ ಗುರುವಾರ ಸಂಜೆವರೆಗೆ ದರೋಡೆಯಾಗಿದ್ದ ಹಣ ಪೊಲೀಸರಿಗೆ ಸಿಕ್ಕಿಲ್ಲ. ಹೀಗಾಗಿ ಹಣದ ಸಮೇತ ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಹೊರರಾಜ್ಯಗಳಲ್ಲಿ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದು, ಶುಕ್ರವಾರ ಎಲ್ಲ ದುಷ್ಕರ್ಮಿಗಳು ಬಂಧನವಾಗುವ ನಿರೀಕ್ಷೆ ಅಧಿಕಾರಿಗಳಿಗಿದೆ.

ಇತ್ತ ಸಿದ್ದಾಪುರ ಠಾಣೆಯಲ್ಲಿ ಸಿಎಂಎಸ್‌ ಕಂಪನಿಯ ಗನ್‌ ಮ್ಯಾನ್‌ಗಳು ಹಾಗೂ ಸಿಬ್ಬಂದಿ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ ಎಂದು ತಿಳಿದು ಬಂದಿದೆ.

2,000ಕ್ಕೂ ಮೊಬೈಲ್ ಸಂಖ್ಯೆಗಳು, ಸಿಸಿಟಿವಿ:

ಜೆ.ಪಿ.ನಗರದ ಎಚ್‌ಡಿಎಫ್‌ಸಿ ಬ್ಯಾಂಕ್ ಶಾಖೆಯಿಂದ 7.11 ಕೋಟಿ ರು. ಟ್ರಂಕ್‌ಗಳಲ್ಲಿ ತುಂಬಿಕೊಂಡು ಬುಧವಾರ ಮಧ್ಯಾಹ್ನ 12.20ಕ್ಕೆ ಗೋವಿಂದಪುರದ ಎಟಿಎಂಗಳಿಗೆ ಸಿಎಂಎಸ್ ಕಂಪನಿಯ ಸಿಬ್ಬಂದಿ ವಾಹನದಲ್ಲಿ ಹೊರಟಿದ್ದರು. ವಾಹನದಲ್ಲಿ ಸೆಕ್ಯುರಿಟಿ ಗಾರ್ಡ್‌ಗಳಾದ ರಾಜು, ತಮ್ಮಯ್ಯ, ಕಸ್ಟೋಡಿಯನ್ ಅಫ್ತಾಬ್‌ ಹಾಗೂ ಚಾಲಕ ಬಿನೋದ್ ಕುಮಾರ್‌ ಇದ್ದರು.

ಜಯನಗರದ ಅಶೋಕ ಪಿಲ್ಲರ್ ದಾಟಿ ಲಾಲ್‌ಬಾಗ್‌ ಸಿದ್ದಾಪುರ ಗೇಟ್ ಬಳಿ ಬಂದಾಗ ಇನ್ನೋವಾದಲ್ಲಿ ಬಂದ ಐದಾರು ಮಂದಿ ದರೋಡೆಕೋರರು, ಸಿಎಂಎಸ್ ವಾಹನವನ್ನು ಅಡ್ಡಗಟ್ಟಿದ್ದಾರೆ. ತಮ್ಮನ್ನು ಆರ್‌ಬಿಐ ಅಧಿಕಾರಿಗಳೆಂದು ಪರಿಚಯಿಸಿಕೊಂಡ ದರೋಡೆಕೋರರು, ನಿಮ್ಮ ವಾಹನದಲ್ಲಿರುವ ಹಣ ಪರಿಶೀಲಿಸಬೇಕಿದೆ ಎಂದಿದ್ದಾರೆ. ನಂತರ ಉಳಿದವರನ್ನು ಕಾರಿನಲ್ಲಿ ಕೂರಿಸಿ ಚಾಲಕನಿಗೆ ತಮ್ಮ ಕಾರು ಹಿಂಬಾಲಿಸುವಂತೆ ಸೂಚಿಸಿದ್ದು, ಡೇರಿ ವೃತ್ತದಲ್ಲಿ ಚಾಲಕನಿಗೆ ಪಿಸ್ತೂಲ್‌ ತೋರಿಸಿ ಬೆದರಿಕೆ ಹಾಕಿ ಹಣ ತುಂಬಿದ್ದ ಟ್ರಂಕ್‌ಗಳನ್ನು ಕಾರಿಗೆ ಸಾಗಿಸಿ ಕ್ಷಣಾರ್ಧದಲ್ಲಿ ಆರೋಪಿಗಳು ಪರಾರಿಯಾಗಿದ್ದಾರೆ. ಡೇರಿ ಸರ್ಕಲ್‌ನಿಂದ ಹೊರಟ ಇನ್ನೋವಾ ಕಾರು, ಹಳೇ ಮದ್ರಾಸ್ ರಸ್ತೆಗೆ ಬಂದಿದ್ದು, ಅದೇ ಮಾರ್ಗದಲ್ಲಿ ಪಯಣಿಸಿ ಕೆ.ಆರ್‌.ಪುರದ ಭಟ್ಟರಹಳ್ಳಿ ಮೂಲಕ ಹೆದ್ದಾರಿಯಲ್ಲಿ ಸಾಗದೆ ದರೋಡೆಕೋರರು ದಿಕ್ಕು ಬದಲಿಸಿದ್ದಾರೆ. ಭಟ್ಟರಹಳ್ಳಿಯಿಂದ ಹಳ್ಳಿ ರಸ್ತೆಗಳಲ್ಲಿ ಸಾಗಿ ಹೊಸಕೋಟೆ ಮುಟ್ಟಿದ್ದಾರೆ. ಹೀಗೆ ದಿಕ್ಕು ಬದಲಿಸುತ್ತಲೇ ದರೋಡೆಕೋರರು ಆಂಧ್ರಪ್ರದೇಶದ ಗಡಿ ದಾಟಿದ್ದಾರೆ.

ಈ ಕೃತ್ಯದ ತನಿಖೆಗಿಳಿದ ಪೊಲೀಸರು ನಗರದ ಡೇರಿ ವೃತ್ತದಿಂದ ಹೊಸಕೋಟೆವರೆಗೆ ಸುಮಾರು 2000ಕ್ಕೂ ಹೆಚ್ಚಿನ ಸಿಸಿಟಿವಿ ಕ್ಯಾಮೆರಾಗಳು ಹಾಗೂ ಆ ಪ್ರದೇಶದ ದೂರವಾಣಿ ಸಂಪರ್ಕದ ಟವರ್‌ಗಳಲ್ಲಿ ಅದೇ ಹೊತ್ತಿಗೆ ಸಂಪರ್ಕ ಹೊಂದಿದ್ದ ಶಂಕಿತ ಸುಮಾರು 2 ಸಾವಿರಕ್ಕೂ ಅಧಿಕ ಮೊಬೈಲ್‌ ಕರೆಗಳನ್ನು ಜಾಲಾಡಿದ್ದಾರೆ. ಆಗ ದರೋಡೆಕೋರರ ಗ್ರೇಟ್ ಎಸ್ಕೇಪ್‌ ಜಾಡು ಪೊಲೀಸರಿಗೆ ಸಿಕ್ಕಿದೆ. ಈ ಸುಳಿವು ಬೆನ್ನತ್ತಿದ್ದಾಗ ದರೋಡೆಕೋರರ ಗುಂಪಿನ ಇಬ್ಬರು ನಗರದಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ತಮ್ಮನ್ನು ಪೊಲೀಸರು ಬೆನ್ನಟ್ಟಿರುವ ವಿಚಾರ ಗೊತ್ತಾಗಿ ಭೀತಿಗೊಂಡ ಆರೋಪಿಗಳು, ಚಿತ್ತೂರು ಸಮೀಪ ಇನ್ನೋವಾ ಬಿಟ್ಟು ಬೇರೊಂದು ಕಾರಿನಲ್ಲಿ ಹಣದ ಸಮೇತ ಪರಾರಿಯಾಗಿದ್ದಾರೆ. ನಸುಕಿನಲ್ಲಿ ಚಿತ್ತೂರಿನ ವೆಲ್ಲೂರು ರಸ್ತೆಯಲ್ಲಿ ಅನಾಥವಾಗಿ ನಿಂತಿದ್ದ ಇನ್ನೋವಾ ಪತ್ತೆಯಾಗಿದೆ ಎಂದು ಮೂಲಗಳು ವಿವರಿಸಿವೆ.

ಅಲರಾಂ ಬಾರಿಸಿಲ್ಲ

ಹಣ ಸಾಗಿಸುವ ವಾಹನಕ್ಕೆ ಬಿಗಿ ಭದ್ರತೆಯನ್ನು ಸಿಎಂಎಸ್ ಕಂಪನಿ ಕಲ್ಪಿಸಿತ್ತು. ಕಾರಿನ ಚಾಲಕ ಹೊರತುಪಡಿಸಿದರೆ ಹೊರಗಿನಿಂದ ಬಾಗಿಲು ತೆರೆಯಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲದೆ, ಆ ವಾಹನದಲ್ಲಿ ಸಿಸಿಟಿವಿ ಕ್ಯಾಮೆರಾ ಹಾಗೂ ಚಾಲಕನ ಸೀಟಿನ ಮುಂದೆ ಅಲರಾಂ ಸಹ ಅಳ‍ವಡಿಸಲಾಗಿತ್ತು. ಆದರೆ ದರೋಡೆ ವೇಳೆ ಚಾಲಕ ಅಲರಾಂ ಸ್ವಿಚ್‌ ಆನ್ ಮಾಡಿಲ್ಲ. ಪರವಾನಗಿ ಹೊಂದಿದ್ದ ಬಂದೂಕುಗಳನ್ನೂ ಗನ್‌ ಮ್ಯಾನ್‌ಗಳು ಬಳಸಿಲ್ಲ ಎಂದು ಮೂಲಗಳು ಹೇಳಿವೆ.

ವೆಬ್ ಸೀರೀಸ್‌ ಪ್ರೇರಣೆ?

ಒಟಿಟಿಯಲ್ಲಿ ವೆಬ್‌ ಸಿರೀಸ್ ನೋಡಿ ಎಟಿಎಂ ಹಣ ದೋಚಲು ದರೋಡೆಕೋರರು ಸಂಚು ರೂಪಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಒಟಿಟಿ ತಾಣಗಳಲ್ಲಿ ದರೋಡೆ ಪ್ರಕರಣ ಸಂಬಂಧ ಹಲವು ವೆಬ್‌ಸೀರೀಸ್‌ ವೀಕ್ಷಣೆಗೆ ಸಿಗುತ್ತವೆ. ಸಾದಂರ್ಭಿಕ ಸಾಕ್ಷ್ಯಗಳನ್ನು ಅವಲೋಕಿಸಿದಾಗ ವೆಬ್‌ ಸೀರೀಸ್‌ ಪ್ರೇರೇಣೆ ಬಗ್ಗೆ ಅನುಮಾನವಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಸ್ಥಳೀಯರ ತಂಡ?:

ದರೋಡೆ ಕೃತ್ಯದಲ್ಲಿ ಪರಿಚಿತರ ಕೈವಾಡವಿರುವ ಶಂಕೆ ಮತ್ತಷ್ಟು ಬಲವಾಗಿದೆ. ಈಗ ಪೊಲೀಸರ ಗಾಳಕ್ಕೆ ಸಿಕ್ಕಿರುವ ಇಬ್ಬರು ಸಹ ಬೆಂಗಳೂರಿನವರೇ ಆಗಿದ್ದಾರೆ. ಹೀಗಾಗಿ ಸಿಎಂಎಸ್ ಸಿಬ್ಬಂದಿ ನೆರವಿನಿಂದ ಸ್ಥಳೀಯರೇ ದರೋಡೆ ಮಾಡಿರಬಹುದು ಎಂದು ಮೂಲಗಳು ತಿಳಿಸಿವೆ.

ದಕ್ಷಿಣ ವಿಭಾಗ-ಸಿಸಿಬಿ ಜಂಟಿ ಆಪರೇಷನ್

ಈ ದರೋಡೆ ಕೃತ್ಯವನ್ನು ಸವಾಲಾಗಿ ತೆಗೆದುಕೊಂಡಿರುವ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್‌, ಶೀಘ್ರ ಆರೋಪಿಗಳ ಪತ್ತೆ ಕಾರ್ಯಾಚರಣೆಯ ಖುದ್ದು ಮೇಲುಸ್ತುವಾರಿ ವಹಿಸಿದ್ದಾರೆ. ಪಶ್ಚಿಮ ವಿಭಾಗದ ಜಂಟಿ ಆಯುಕ್ತ ವಂಶಿ ಕೃಷ್ಣ ಸಾರಥ್ಯದಲ್ಲಿ ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಹಾಗೂ ಸಿಸಿಬಿ ಡಿಸಿಪಿಗಳಾದ ಶ್ರೀಹರಿಬಾಬು ಮತ್ತು ರಾಜಾ ಇಮಾಮ್ ಕಾಸಿಂ ಅವರನ್ನೊಳಗೊಂಡ 200ಕ್ಕೂ ಹೆಚ್ಚಿನ ಪೊಲೀಸರನ್ನು ದರೋಡೆಕೋರರ ಬೇಟೆಗೆ ಆಯುಕ್ತರು ನಿಯೋಜಿಸಿದ್ದಾರೆ.

ಈ ವಿಶೇಷ ತಂಡವುಗಳು ಪ್ರತ್ಯೇಕವಾಗಿ ಕಾರ್ಯಾಚರಣೆ ನಡೆಸಿವೆ. ಇನ್ನೋವಾ ಕಾರನ್ನು ಬೆನ್ನತ್ತಿ ಹೊರ ರಾಜ್ಯದಲ್ಲಿ ಇಬ್ಬರು ಎಸಿಪಿಗಳ ನೇತೃತ್ವದಲ್ಲಿ ಐವರು ಇನ್ಸ್‌ಪೆಕ್ಟರ್‌ಗಳ ತಂಡ ತೆರಳಿದೆ. ಈ ತಂಡಕ್ಕೆ ಬೆಂಗಳೂರಿನಿಂದ ತಾಂತ್ರಿಕ ಮಾಹಿತಿ ರವಾನಿಸುವ ಕೆಲಸದಲ್ಲಿ ಮತ್ತೊಂದು ತಂಡ ನಿರ್ವಹಿಸುತ್ತಿದೆ ಎಂದು ತಿಳಿದು ಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
ಉಡುಪಿ: ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷನ ರೆಸಾರ್ಟ್‌ನಲ್ಲಿ ಅಕ್ರಮ ವಿದೇಶಿಯರಿಗೆ ಆಶ್ರಯ; ಪ್ರಕರಣ ದಾಖಲು!