
ಬೆಂಗಳೂರು(ಮಾ.26): ಉದ್ಯೋಗದಿಂದ ತೆಗೆದಿದ್ದಕ್ಕೆ ಕೋಪಗೊಂಡು ಖಾಸಗಿ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕನ ಕೊಲೆಗೆ(Murder) ಯತ್ನಿಸಿದ್ದ ಮಾಜಿ ಉದ್ಯೋಗಿ ಹಾಗೂ ಆತನ ನಾಲ್ವರು ಸಹಚರರನ್ನು ಬಾಗಲೂರು ಠಾಣೆ ಪೊಲೀಸರು(Police) ಬಂಧಿಸಿದ್ದಾರೆ.
ಶಿಡ್ಲಘಟ್ಟದ ನಿವಾಸಿ ಮಧು (30), ಆತನ ಸಹಚರರಾದ ಪ್ರಮೋದ್ (26), ಅಲೆಕ್ಸಾಂಡರ್ (27), ಚನ್ನರಾಜು (34), ಇಮ್ರಾನ್‌ಪಾಷಾ (29) ಬಂಧಿತರು. ಮಾ.8ರಂದು ಬಾಗಲೂರಿನ ಏರೋಸ್ಪೇಸ್ ಪಾರ್ಕ್ನ ‘ಸಾಸ್‌ಮೋಸ್ ಎಚ್‌ಇಟಿ ಟೆಕ್ನಾಲಜಿಸ್’ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕ ರಾಜಶೇಖರ್ ರೈ (46) ಅವರ ಕೊಲೆಗೆ ಯತ್ನಿಸಿದ್ದರು.
Bidar: ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲೇ ಎರಡು ಗುಂಪುಗಳ ಮಧ್ಯೆ ಮಾರಾಮಾರಿ..!
ಕಂಪನಿಯು ರಕ್ಷಣಾ ಸಾಮಗ್ರಿಗಳನ್ನು ಉತ್ಪಾದಿಸುತ್ತದೆ. ಹೀಗಾಗಿ ಈ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಇಲ್ಲಿ ಉತ್ಪಾದಿಸುವ ಸಾಮಗ್ರಿಗಳ ಫೋಟೋ, ವಿಡಿಯೋ ಮಾಡುವಂತಿಲ್ಲ. ಈ ಕಂಪನಿಯ ಉದ್ಯೋಗಿಯಾಗಿದ್ದ ಮಧು ಮೊಬೈಲ್‌ನಲ್ಲಿ ಕೆಲ ಉತ್ಪನ್ನಗಳ ವಿಡಿಯೋ ಮಾಡಿದ್ದ. ಇದನ್ನು ಗಮನಿಸಿದ್ದ ಕಂಪನಿಯ ಮೇಲ್ವಿಚಾರಕರು ನಿಯಮ ಉಲ್ಲಂಘಿಸಿದ್ದಕ್ಕೆ ಮಧುಗೆ ನೋಟಿಸ್ ನೀಡಿದ್ದರು. ಈ ನೋಟಿಸ್‌ಗೆ ಮಧು ಪ್ರತಿಕ್ರಿಯಿಸಿರಲಿಲ್ಲ. ಹೀಗಾಗಿ ಆತನನ್ನು ಒಂದೂವರೆ ತಿಂಗಳ ಹಿಂದೆ ಉದ್ಯೋಗದಿಂದ ತೆಗೆಯಲಾಗಿತ್ತು. ಹೀಗಾಗಿ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕ ರಾಜಶೇಖರ್ ಮೇಲೆ ಮಧು ದ್ವೇಷ ಕಾರುತ್ತಿದ್ದ.
ಹತ್ಯೆಗಾಗಿ ಸಿನಿಮಾ ಸ್ಟೈಲಲ್ಲಿ ಚೇಜಿಂಗ್
ರಾಜಶೇಖರ್ ಮಾ.8ರಂದು ರಾತ್ರಿ 8ಕ್ಕೆ ಕೆಲಸ ಮುಗಿಸಿ ಚಾಲಕನೊಂದಿಗೆ ಕಾರಿನಲ್ಲಿ ರಾಜರಾಜೇಶ್ವರಿ ನಗರದ ಮನೆಗೆ ತೆರಳುತ್ತಿದ್ದರು. ಈ ವೇಳೆ ಮಾರ್ಗದ ಬಿ.ಕೆ.ಪಾಳ್ಯದ ಕ್ರಾಸ್‌ನಲ್ಲಿ ಕಾರನ್ನು ಅಡ್ಡಗಟ್ಟಿರುವ ಆರೋಪಿಗಳು(Accused), ಮಾರಕಾಸ್ತ್ರಗಳಿಂದ ರಾಜಶೇಖರ್ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ರಾಜಶೇಖರ್ ಕಾರು ಚಾಲಕ ಸಿನಿಮೀಯ ಶೈಲಿಯಲ್ಲಿ ಕಾರನ್ನು ತಿರುಗಿಸಿ ಮುಂದೆ ಚಲಿಸಿದ್ದಾರೆ. ಆದರೂ ಆರೋಪಿಗಳು ಮತ್ತೊಂದು ಕಾರಿನಲ್ಲಿ ರಾಜಶೇಖರ್ ಅವರ ಕಾರನ್ನು ಬೆನ್ನಟ್ಟಿದ್ದಾರೆ.
House Theft: ಚಪ್ಪಲಿ ಸ್ಟ್ಯಾಂಡಲ್ಲಿ ಕೀ ಇಡೋರ ಮನೆಗೆ ಕನ್ನ ಹಾಕ್ತಿದ್ದ ಖತರ್ನಾಕ್ ಕಳ್ಳಿ ಅರೆಸ್ಟ್..!
ಈ ವೇಳೆ ಮಾರ್ಗ ಮಧ್ಯೆ ಬಾಗಲೂರು ಪೊಲೀಸ್ ಠಾಣೆ ನಾಮಫಲಕ ಗಮನಿಸಿರುವ ರಾಜಶೇಖರ್ ಅವರ ಕಾರು ಚಾಲಕ, ಕಾರನ್ನು ನೇರವಾಗಿ ಠಾಣೆ ಆವರಣಕ್ಕೆ ತಂದು ನಿಲ್ಲಿಸಿದ್ದಾರೆ. ಆರೋಪಿಗಳು ಪರಾರಿಯಾಗಿದ್ದಾರೆ. ಬಳಿಕ ರಾಜಶೇಖರ್ ಪೊಲೀಸರಿಗೆ ದೂರು ನೀಡಿದ್ದಾರೆ. ಮುಖಕ್ಕೆ ಮಾಸ್ಕ್ ಹಾಕಿದ್ದರಿಂದ ದುಷ್ಕರ್ಮಿಗಳ ಯಾವುದೇ ಸುಳಿವು ಇರಲಿಲ್ಲ.
ಕೊಲ್ಲಲು ಬಂದವರು ಮದ್ಯ ಸೇವಿಸಿ ನಿದ್ರೆ!
ರಾಜಶೇಖರ್ ತಪ್ಪಿಸಿಕೊಂಡು ಪೊಲೀಸ್ ಠಾಣೆ ಬಳಿ ತೆರಳಿದ್ದರಿಂದ ಮತ್ತಷ್ಟು ಆಕ್ರೋಶಗೊಂಡ ಮಧು ಹಾಗೂ ಆತನ ಸಹಚರರು, ರಾಜಶೇಖರ್ ಅವರ ರಾಜರಾಜೇಶ್ವರಿ ನಗರ ನಿವಾಸದ ಬಳಿ ರಾಜಶೇಖರ್ ಆಗಮನಕ್ಕಾಗಿ ಕಾದು ಕುಳಿತಿದ್ದರು. ಠಾಣೆಯಲ್ಲಿ ದೂರು(Complaint) ಪ್ರಕ್ರಿಯೆ ಮುಗಿಸಿ ರಾಜಶೇಖರ್ ತಡರಾತ್ರಿ ಮನೆಗೆ ಬಂದಿದ್ದಾರೆ. ಈ ವೇಳೆಗೆ ಆರೋಪಿಗಳು ಕಾರಿನಲ್ಲೇ ಕಂಠಪೂರ್ತಿ ಮದ್ಯ(Alcohol) ಸೇವಿಸಿ ನಿದ್ರೆಗೆ ಜಾರಿದ್ದರು. ಹೀಗಾಗಿ ರಾಜಶೇಖರ್ ಮನೆ ಸುರಕ್ಷಿತವಾಗಿ ಮನೆ ಸೇರಿಕೊಂಡಿದ್ದರು. ಮಾರನೇ ದಿನ ಮದ್ಯದ ಅಮಲು ಇಳಿದು ಎಚ್ಚರಗೊಂಡ ಆರೋಪಿಗಳು, ಕೂಡಲೇ ಸ್ಥಳದಿಂದ ಪರಾರಿಯಾಗಿದ್ದರು.
ಈ ನಡುವೆ ಆರೋಪಿಗಳ ಪತ್ತೆಗೆ ಕಾರ್ಯಾಚರಣೆಗೆ ಇಳಿದಿದ್ದ ಬಾಗಲೂರು ಠಾಣೆ ಪೊಲೀಸರು, ಮೊಬೈಲ್ ಟವರ್ ಲೊಕೇಷನ್ ಸಹಾಯದಿಂದ ಆರೋಪಿಗಳ ಜಾಡು ಹಿಡಿದು ಹೋರಟಾಗ ಆರೋಪಿ ಮಧು ಶಿಡ್ಲಘಟ್ಟದಲ್ಲಿ ಸಿಕ್ಕಿಬಿದ್ದ. ಈತ ನೀಡಿದ ಮಾಹಿತಿ ಮೇರೆಗೆ ಉಳಿದವರನ್ನು ಪಾಂಡಿಚೇರಿಯಲ್ಲಿ ಬಂಧಿಸಿ ನಗರಕ್ಕೆ ಕರೆತರಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ