ಸೋಷಿಯಲ್ ಮೀಡಿಯಾದ ಕೀಚಕರ ಹಾವಳಿಯಿಂದ ಬೇಸತ್ತು ಮೊಬೈಲ್, ಫೇಸ್‌ಬುಕ್, ವಾಟ್ಸ್ಯಾಪ್, ಮೆಸೆಂಜರ್‌ನಲ್ಲಿ ಬ್ಲಾಕ್ ಮಾಡಿದರೆ ಬೇರೆಯವರ ಹೆಸರು, ಮೊಬೈಲ್ ಬಳಸಿ ಹೆಣ್ಣು ಮಕ್ಕಳಿಗೆ ಕಿರುಕುಳ ನೀಡುತ್ತಿರುವ ಘಟನೆಗಳು ಅಲ್ಲಲ್ಲಿ ನಡೆಯುತ್ತಿದ್ದರೂ ಪೊಲೀಸ್ ಠಾಣೆ ಮೆಟ್ಟಿಲೇರುವ ಧೈರ್ಯ ಹೆಣ್ಣು ಮಕ್ಕಳು ಮಾಡುತ್ತಿಲ್ಲ.
ನಾಗರಾಜ ಎಸ್.ಬಡದಾಳ
ದಾವಣಗೆರೆ (ನ.05): ಸೋಷಿಯಲ್ ಮೀಡಿಯಾದ ಕೀಚಕರ ಹಾವಳಿಯಿಂದ ಬೇಸತ್ತು ಮೊಬೈಲ್, ಫೇಸ್‌ಬುಕ್, ವಾಟ್ಸ್ಯಾಪ್, ಮೆಸೆಂಜರ್‌ನಲ್ಲಿ ಬ್ಲಾಕ್ ಮಾಡಿದರೆ ಬೇರೆಯವರ ಹೆಸರು, ಮೊಬೈಲ್ ಬಳಸಿ ಹೆಣ್ಣು ಮಕ್ಕಳಿಗೆ ಕಿರುಕುಳ ನೀಡುತ್ತಿರುವ ಘಟನೆಗಳು ಅಲ್ಲಲ್ಲಿ ನಡೆಯುತ್ತಿದ್ದರೂ ಪೊಲೀಸ್ ಠಾಣೆ ಮೆಟ್ಟಿಲೇರುವ ಧೈರ್ಯ ಹೆಣ್ಣು ಮಕ್ಕಳು ಮಾಡುತ್ತಿಲ್ಲ.
ಹಗಲು-ರಾತ್ರಿ ಎನ್ನದೇ ಸೋಷಿಯಲ್ ಮೀಡಿಯಾ ಕೀಚಕರ ಹಾವಳಿಯಿಂದ ಶಾಂತಿ, ನೆಮ್ಮದಿ ಕಳೆದುಕೊಂಡ ಹೆಣ್ಣು ಮಕ್ಕಳು ಅಂತಹ ವ್ಯಕ್ತಿಯ ನಂಬರ್, ಖಾತೆ ಬ್ಲಾಕ್ ಮಾಡಿದರೂ ಕಾಟ ತಪ್ಪಿಲ್ಲ. ಮನೆಯಲ್ಲಿ ತಮ್ಮ ಹೆತ್ತವರು, ಸಹೋದರಿಯರು ಅಥವಾ ಪತ್ನಿ ಮೊಬೈಲ್‌ನಿಂದ ತನ್ನನ್ನು ಬ್ಲಾಕ್ ಮಾಡಿದ ಹೆಣ್ಣು ಮಕ್ಕಳಿಗೆ ನಿರಂತರ ನಾರ್ಮಲ್ ಕಾಲ್, ಎಸ್ಸೆಮ್ಮೆಸ್, ವಾಟ್ಸಪ್ ಮೆಸೇಜ್ , ವೀಡಿಯೋ ಕಾಲ್, ಮೆಸೆಂಜರ್‌ನಲ್ಲಿ ನಿರಂತರ ಮೆಸೇಜ್ ಮಾಡಿ, ಟಾರ್ಚರ್ ಮಾಡುತ್ತಿರುವ ಪ್ರಕರಣಗಳ ಸಂಖ್ಯೆಯೂ ಕಡಿಮೆ ಇಲ್ಲ.
Davanagere: ಸೋಷಿಯಲ್ ಮೀಡಿಯಾ ಕೀಚಕರಿಗೆ ಎಚ್ಚರಿಕೆಯ ಗಂಟೆ
ಅಸಹಾಯಕ ಹೆಣ್ಣು ಮಕ್ಕಳ ಗೋಳು: ಬ್ಲಾಕ್ ಮಾಡಿದ ಮಹಿಳೆಗೆ ಸೋಷಿಯಲ್ ಮೀಡಿಯಾ ಕೀಚಕರು ತನ್ನ ಸ್ನೇಹಿತರು, ಸಿಕ್ಕ ಸಿಕ್ಕವರ ಮೊಬೈಲ್‌ನಿಂದ ಕೆಲ ಗಂಟೆ ಅವಧಿಯಲ್ಲಿ ಬಿಟ್ಟು ಬಿಡದೇ ನೂರಾರು ಸಲ ಕರೆ ಮಾಡಿರುವ ನಿದರ್ಶನಗಳಿವೆ. ಟ್ರೂ ಕಾಲರ್‌ನಲ್ಲಿ ಹೀಗೆ ಮೇಲಿಂದ ಮೇಲೆ ಕರೆ ಮಾಡುತ್ತಿರುವುದು ತನಗೆ ಕಿರುಕುಳ ನೀಡುತ್ತಿರುವ ವ್ಯಕ್ತಿಯೇ ಎಂಬುದು ಮಹಿಳೆಗೂ ಗೊತ್ತಿರುತ್ತದೆ. ಆದರೆ, ಸಹನೆಯಿಂದ ತನ್ನ ಮೊಬೈಲ್ ಸೈಲೆಂಟ್ ಇಟ್ಟು, ಯಾರ ಬಳಿಯೂ ಹೇಳಿಕೊಳ್ಳದೇ ಕೊರಗುತ್ತಿರುವ ವಿದ್ಯಾರ್ಥಿನಿಯರು, ಯುವತಿಯರು, ಗೃಹಿಣಿಯರು, ಅಸಹಾಯಕ ಹೆಣ್ಣು ಮಕ್ಕಳ ಗೋಳು ಹೇಳತೀರದು.
ಆತಂಕಕ್ಕೆ ಒಳಗಾಗುವ ಸ್ಥಿತಿ: ಒಮ್ಮೆಗೆ 50-60 ಕರೆಗಳು ಬೇರೆ ಬೇರೆ ನಂಬರ್‌ನಿಂದ ಮೇಲಿಂದ ಮೇಲೆ ಮಿಸ್ಡ್ ಕಾಲ್ ಬರುವುದು, ಯಾವುದೇ ಅನಧಿಕೃತ ನಂಬರ್‌ನಿಂದ ನಾರ್ಮಲ್ ಕಾಲ್ ಬರುವುದು, ವಾಟ್ಸಪ್ ಸಂದೇಶ, ವೀಡಿಯೋ ಕಾಲ್ ಬಂದರೆ ಸಂತಸ್ತ ಮಹಿಳೆಯರು ತೀವ್ರ ಆತಂಕಕ್ಕೆ ಒಳಗಾಗುವಂತಹ ಸ್ಥಿತಿ ಇದೆ. ವಿದ್ಯಾರ್ಥಿನಿಯರು, ಗೃಹಿಣಿಯರು, ಉದ್ಯೋಗಸ್ಥ ಮಹಿಳೆಯರು ಹೀಗೆ ನಾನಾ ಕ್ಷೇತ್ರದಲ್ಲಿ ಸಂಕಷ್ಟಅನುಭವಿಸುತ್ತಲೇ ಇದ್ದಾರೆ. ಸೋಷಿಯಲ್ ಮೀಡಿಯಾ ಕೀಚಕನೆಂಬ ಬೆಂಕಿ ಕೆಂಡ ಸೆರಗಿನಲ್ಲಿ ಕಟ್ಟಿಕೊಳ್ಳುವಂತಿಲ್ಲ, ಮತ್ತೊಂದು ಕಡೆ ಮನೆ ಮಂದಿಗೆ ಈ ವಿಚಾರ ಗೊತ್ತಾದರೆ ಏನಾಗುತ್ತದೋ ಎಂಬ ಅಳುಕು, ಆತಂಕವೂ ಸಂತ್ರಸ್ತೆಯರಲ್ಲಿದೆ.
ಫೇಸ್‌ಬುಕ್, ವಾಟ್ಸಪ್, ಮೆಸೆಂಜರ್‌ಗೆ ಫೋಟೋಗಳನ್ನು ಕಳಿಸುವುದಾಗಿ ನಯ ನಾಜೂಕಿನಿಂದ ಮಾತನಾಡುತ್ತಿದ್ದ ವ್ಯಕ್ತಿ ಏಕವಚನದಲ್ಲಿ ಬ್ಲಾಕ್ ಮೇಲ್ ಮಾಡುತ್ತಿರುವ ಪ್ರ ಕರಣಗಳ ಸಂಖ್ಯೆಯೂ ಹೆಚ್ಚುತ್ತಿದೆ. ನಿತ್ಯವೂ ಇಂತಹ ವ್ಯಕ್ತಿಗಳ ಕಿರುಕುಳ ತಾಳಲಾಗದೇ ಸಂತ್ರಸ್ತೆಯರು ಭಯಭೀತರಾಗಿ, ಖಿನ್ನತೆಗೆ ಒಳಗಾಗುತ್ತಿದ್ದಾರೆ. ಅನಾರೋಗ್ಯಕ್ಕೆ ತುತ್ತಾಗಿ, ಆಸ್ಪತ್ರೆಗೆ ಅಲೆದಾಡುವಂತಾಗಿದೆ. ನಗುತ್ತಾ, ಎಲ್ಲರೊಂದಿಗೂ ಬೆರೆಯುತ್ತಿದ್ದ ಮಹಿಳೆಯರು ಸೋಷಿಯಲ್ ಮೀಡಿಯಾ ಕೀಚಕರ ಗಾಳಕ್ಕೆ ಸಿಲುಕಿ ತಮ್ಮ ವ್ಯಕ್ತಿತ್ವದ ವಿರುದ್ಧದ ಮನಸ್ಥಿತಿ ತೋರಲಾರಂಭಿಸುತ್ತಾರೆ. ಮನೆ ಮಂದಿ ಮೇಲೆ ವಿನಾಕಾರಣ ಸಿಟ್ಟು, ಜಗಳ ಆಡುತ್ತಾ ತನ್ನ ನೋವು, ಸಂಕಟ ಹೊರ ಹಾಕಿಕೊಳ್ಳು ದುಸ್ಥಿತಿ ಅಲ್ಲಲ್ಲಿ ಇದೆ
ನಾರಿಯರಿಗೆ ಸೋಷಿಯಲ್ ಮೀಡಿಯಾ ಕೀಚಕರ ಕಾಟ..!
ಕನಿಷ್ಟ ಪ್ರಜ್ಞೆ ಇದ್ದರೆ ಇಂತಹ ದುಷ್ಕೃತ್ಯ ಮಾಡಲ್ಲ: ಹೆಣ್ಣು ಮಕ್ಕಳಲ್ಲಿ ದಿಢೀರ್ ಬದಲಾವಣೆಗೆ ಏನು ಕಾರಣವೆಂಬುದನ್ನು ಮನೆಯಲ್ಲಿ ಹೆತ್ತವರು, ಸಹೋದರರು, ಪತಿ, ಮಕ್ಕಳು ಸಮಾಧಾನದಿಂದ ಕುಳಿತು, ಆಲಿಸಬೇಕಿದೆ. ಏನೆಲ್ಲಾ ಸಮಸ್ಯೆಯಾಗುತ್ತಿದೆ ಹೇಳಿಕೊಂಡು, ಹೀಗೆ ಮತ್ತೊಂದು ಮನೆಯ ಹೆಣ್ಣು ಮಕ್ಕಳಿಗೆ ಕಿರುಕುಳ ನೀಡುತ್ತಿರುವ ವ್ಯಕ್ತಿಗಳು ತನ್ನ ಸಹೋದರಿ, ಪತ್ನಿ, ಮಕ್ಕಳಿಗೂ ಯಾರಾದರೂ ಹೀಗೆ ದೈಹಿಕ, ಮಾನಸಿಕ ಹಿಂಸೆ ನೀಡಿದರೆ ಹೇಗೆ ಎಂಬ ಕನಿಷ್ಟಪ್ರಜ್ಞೆ ಇಟ್ಟುಕೊಂಡರೆ ಇಂತಹ ದುಷ್ಕೃತ್ಯ ಯಾರೂ ಮಾಡುವುದಿಲ್ಲವೆಂದು ಹೆಸರು ಹೇಳಲಿಚ್ಛಿಸದ ಸಂತ್ರಸ್ತೆಯ್ಬೊರು ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿದ್ದಾರೆ.