• ರಸ್ತೆ ದಾಟಲು ನಿಂತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾದ ಲಾರಿ
• ಹತ್ತು ವರ್ಷದ ಬಾಲಕ ಸ್ಥಳದಲ್ಲೇ ಸಾವು, ಇಬ್ಬರಿಗೆ ಗಾಯ
• ರೊಚ್ಚಿಗೆದ್ದ ಸ್ಥಳೀಯರಿಂದ ಲಾರಿ ಮೇಲೆ ಕಲ್ಲೆಸೆತ, ಚಾಲಕನಿಗೆ ಥಳಿತ
ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ
ಬೆಳಗಾವಿ (ಆ.03): ರಸ್ತೆ ದಾಟಲು ರಸ್ತೆ ಬದಿಗೆ ನಿಂತಿದ್ದ ದ್ವಿಚಕ್ರ ವಾಹನಕ್ಕೆ ಕಬ್ಬಿಣದ ಸಲಾಕೆ ಸಾಗಿಸುತ್ತಿದ್ದ ಲಾರಿ ಡಿಕ್ಕಿ ಹೊಡೆದು 10 ವರ್ಷದ ಬಾಲಕ ಸ್ಥಳದಲ್ಲೇ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ. ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿರುವ ವೆಲ್‌ಕಮ್ ಹೋಟೆಲ್ ಬಳಿ ಬೆಳಗಾವಿ ಖಾನಾಪುರ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ.
ಸಹೋದರಿ ಅತೀಕಾ ಬೇಪಾರಿ ಜೊತೆ 10 ವರ್ಷದ ಅರ್ಹಾನ್ ದ್ವಿಚಕ್ರ ವಾಹನ ಮೇಲೆ ತೆರಳುತ್ತಿದ್ದ, ಈ ವೇಳೆ ರಸ್ತೆ ದಾಟಲು ರಸ್ತೆ ಬದಿಯಲ್ಲಿ ನಿಂತಿದ್ದಾಗ ಬಂದ ಲಾರಿ ಮೊದಲು ಎದುರುಗಡೆ ತೆರಳುತ್ತಿದ್ದ ಕಾರಿಗೆ ಡಿಕ್ಕಿಯಾಗಿದೆ. ಬಳಿಕ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿದೆ. ಈ ವೇಳೆ ಹತ್ತು ವರ್ಷದ ಅರ್ಹಾನ್ ಎಂಬ ಬಾಲಕ ಮೃತಪಟ್ಟಿದ್ದಾನೆ. ಇನ್ನೂ ಘಟನೆಯಲ್ಲಿ ಮೃತ ಅರ್ಹಾನ್ ಅಕ್ಕ ಅತೀಕಾ ಹಾಗೂ ರಸ್ತೆ ದಾಟಲು ರಸ್ತೆ ಪಕ್ಕ ನಿಂತಿದ್ದ ಆಯುಷ್ ಎಂಬ 13 ವರ್ಷದ ಬಾಲಕನಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
National Education Policy ಯಲ್ಲಿ ಪ್ರಾಯೋಗಿಕತೆ, ಕೌಶಲ್ಯ ಕಲಿಕೆಗೆ ಒತ್ತು: ಅಶ್ವತ್ಥನಾರಾಯಣ
ಪಾನಮತ್ತ ಚಾಲಕನಿಗೆ ಥಳಿಸಿ ಲಾರಿ ಜಖಂಗೊಳಿಸಿದ ಸ್ಥಳೀಯರು: ಅಪಘಾತ ಸಂಭವಿಸುತ್ತಿದ್ದಂತೆ ರೊಚ್ಚಿಗೆದ್ದ ಸ್ಥಳೀಯರು ಲಾರಿ ಚಾಲಕನ ಹೊರಗೆಳೆದು ಥಳಿಸಿದ್ದಾರೆ. ಈ ವೇಳೆ ಲಾರಿ ಚಾಲಕ ಪಾನಮತ್ತನಾಗಿದ್ದ ಎಂಬುದು ಗೊತ್ತಾಗಿದೆ. ಬಳಿಕ ಉದ್ರಿಕ್ತಗೊಂಡ ಗುಂಪು ಲಾರಿ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಅಷ್ಟೇ ಅಲ್ಲದೇ ಲಾರಿ ಮುಂಬದಿಯ ಗಾಜನ್ನು ಕಟ್ಟಿಗೆಯಿಂದ ಒಡೆದು ಆಕ್ರೋಶ ಹೊರಹಾಕಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಟ್ಟರು. ಸ್ಥಳಕ್ಕೆ ಡಿಸಿಪಿ ಸ್ನೇಹಾ ಆಗಮಿಸಿ ಪರಿಸ್ಥಿತಿ ನಿಯಂತ್ರಣಗೊಳಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಬಿಜೆಪಿ ಶಾಸಕ: ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಅನಿಲ್ ಬೆನಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಶಾಸಕರ ಎದುರು ಟ್ರಾಫಿಕ್ ಪೊಲೀಸರ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದರು. ಕ್ಯಾಂಪ್ ಪ್ರದೇಶ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಖಾಸಗಿ ಶಾಲೆಗಳಿವೆ. ಇಲ್ಲಿ ಟ್ರಾಫಿಕ್ ಸಿಗ್ನಲ್ ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಟ್ರಾಫಿಕ್ ಪೊಲೀಸರ ನಿಯೋಜನೆ ಮಾಡಬೇಕು. ಅಲ್ಲದೇ ಸ್ಪೀಡ್ ಬ್ರೇಕರ್ ಅಳವಡಿಸಬೇಕು ಎಂದು ಆಗ್ರಹಿಸಿದರು. ಈ ವೇಳೆ ಮಾತನಾಡಿದ ಶಾಸಕ ಅನಿಲ್ ಬೆನಕೆ,'ಲಾರಿ ಅಪಘಾತದಲ್ಲಿ ಶಾಲಾ ಬಾಲಕ ಮೃತಪಟ್ಟಿದ್ದಾನೆ. ಮೊನ್ನೆ ಕೋಟೆ ರಸ್ತೆಯಲ್ಲಿಯೂ ಇದೇ ರೀತಿ ಘಟನೆ ಅಗಿದೆ. ಸಹಜವಾಗಿಯೇ ಜನರು ಟ್ರಾಫಿಕ್ ಪೊಲೀಸರ ಕಾರ್ಯವೈಖರಿ ಬಗ್ಗೆ ಪ್ರಶ್ನೆ ಮಾಡುತ್ತಾರೆ.
ಈ ರಸ್ತೆ ಕಾಂಟೋನ್ಮೆಂಟ್ ಪ್ರದೇಶದಲ್ಲಿ ಬರುವುದರಿಂದ ರಸ್ತೆ ಅಗಲೀಕರಣ ಮಾಡಲು ಸಾಧ್ಯವಾಗಿಲ್ಲ. ರಸ್ತೆಯ ಮೇಲೆ ಸ್ಪೀಡ್ ಬ್ರೇಕರ್ ಅಳವಡಿಸಬೇಕು ಹಾಗೂ ಶಾಲೆ ಆರಂಭ ಹಾಗೂ ಬಿಡುವ ವೇಳೆ ಪೊಲೀಸರನ್ನು ನಿಯೋಜಿಸಬೇಕೆಂದು ಹೇಳಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ. ಬಹಳಷ್ಟು ಪ್ರಯತ್ನ ಪಟ್ಟರೂ ಕಂಟೋನ್ಮೆಂಟ್ ಪ್ರದೇಶ ಇರುವುದರಿಂದ ರಸ್ತೆ ಅಗಲೀಕರಣಕ್ಕೆ ಸಮಸ್ಯೆ ಆಗಿದೆ. ಬೆಳಗಿನ ಜಾವ ಭಾರಿ ವಾಹನಗಳ ನಿಷೇಧವಿದ್ದರೂ ಈ ವಾಹನ ಹೇಗೆ ಬಂದಿದೆ ಗೊತ್ತಿಲ್ಲ. ಲಾರಿ ಚಾಲಕ ನಿಶ್ಚಿತವಾಗಿ ಪಾನಮತ್ತನಾಗಿದ್ದ. ಬೆಳಗಿನ ಜಾವ ಭಾರಿ ವಾಹನಗಳ ನಗರ ಪ್ರವೇಶ ನಿಷೇಧಕ್ಕೆ ಸೂಚನೆ ಕೊಡುತ್ತೇನೆ. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರ ನಿಯೋಜನೆ ಮಾಡುತ್ತೇವೆ. ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ' ಎಂದು ತಿಳಿಸಿದ್ದಾರೆ.
ಬೆಳಗ್ಗೆ 9ರಿಂದ 11ರವರೆಗೆ ಭಾರಿ ವಾಹನಗಳ ಸಂಚಾರ ನಿಷೇಧವಿದೆ: ಸದ್ಯ ಪ್ರಕರಣ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿಸಿಪಿ ಸ್ನೇಹಾ, 'ಅಪಘಾತದಲ್ಲಿ ಮಗು ತೀರಿಕೊಂಡಿದೆ. ಲಾರಿ ಚಾಲಕನ ವಶಕ್ಕೆ ಪಡೆದಿದ್ದೇವೆ ಹಾಗೂ ಲಾರಿ ಸೀಜ್ ಮಾಡಿದ್ದೇವೆ. ಅಪಘಾತದಲ್ಲಿ ಇಬ್ಬರು ಗಾಯಗೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಳಗ್ಗೆ 9ರಿಂದ 11ರವರೆಗೆ ನಗರ ಪ್ರದೇಶದಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧವಿದ್ದರೂ ಬೆಳಗ್ಗೆ 8.40ಕ್ಕೆ ಈ ಅಪಘಾತ ಸಂಭವಿಸಿದೆ. ಇತ್ತೀಚೆಗೆ ಕೋಟೆ ರಸ್ತೆಯ ಬಳಿ ಅಪಘಾತ ಸಹ ಬೆಳಗಿನ ಜಾವ ನಡೆದಿದೆ. ಘಟನೆ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಒಗ್ಗಟ್ಟಾಗದಿದ್ದರೆ ಇನ್ನೂ 25 ವರ್ಷ ಕಾಂಗ್ರೆಸ್ ಸ್ಥಿತಿ ಬದಲಾಗದು: ಫಿರೋಜ್ ಸೇಠ್
ಅದೇನೇ ಇರಲಿ ಎರಡು ದಿನಗಳ ಅಂತರದಲ್ಲಿ ಇಬ್ಬರು ವಿದ್ಯಾರ್ಥಿಗಳು ಲಾರಿ ಡಿಕ್ಕಿಯಾಗಿ ಸಾವನ್ನಪ್ಪಿದ್ದಾರೆ. ನಗರ ಪ್ರದೇಶದಲ್ಲಿ ಸಂಚರಿಸುವ ಭಾರಿ ವಾಹನಗಳ ಮೇಲೆ ಪೊಲೀಸರು ನಿಗಾ ಇಡಬೇಕು. ಶಾಲೆಗಳು ಇರುವ ರಸ್ತೆಯಲ್ಲಿ ಹೆಚ್ವಿನ ಸಂಖ್ಯೆಯಲ್ಲಿ ಟ್ರಾಫಿಕ್ ಪೊಲೀಸರ ನಿಯೋಜನೆ ಮಾಡಿ ಕಟ್ಟುನಿಟ್ಟಾಗಿ ಸಂಚಾರಿ ನಿಯಮ ಜಾರಿ ಮಾಡಲು ಕ್ರಮ ಕೈಗೊಳ್ಳಲಿ ಎಂಬುದು ಸಾರ್ವಜನಿಕರ ಆಗ್ರಹ.