* ಇದೊಂದು ವಿಚಿತ್ರ ಪ್ರಕರಣ, ಗಾಯಾಳುವಾಗಿ ಬಂದವರು ಎಸ್ಕೇಪ್
* ಆಂಬುಲೆನ್ಸ್ ನಲ್ಲಿ ಬಂದವರು ಶಿವಮೊಗ್ಗಕ್ಕೆ ಬರುತ್ತಲೇ ಗುಣಮುಖರಾದರು
* ನಾವು ಗಾಯಾಳುಗಳಲ್ಲ ಗಾಯಾಳುಗಳನ್ನು ನೋಡಿಕೊಳ್ಳಲು ಬಂದವರು
* ಅಪಘಾತದ ವೇಳೆ ಡ್ರಾಪ್ ಪಡೆದುಕೊಂಡವರಿಗೆ ಏನು ಹೇಳಬೇಕು?
ಶಿವಮೊಗ್ಗ(ಅ. 05) ಇದೊಂದು ವಿಚಿತ್ರ ಅಪಘಾತ ಪ್ರಕರಣ ಶಿವಮೊಗ್ಗದಿಂದ ವರದಿಯಾಗಿದೆ. ಶಿವಮೊಗ್ಗ ಗಾಜನೂರಿನ ಬಳಿ ಅಪಘಾತವಾಗಿದ್ದು ಆಂಬುಲೆನ್ಸ್ ನಲ್ಲಿ ಮೆಗ್ಗಾನ್ ಆಸ್ಪತ್ರೆಗೆ ಕರೆತಂದ ಐವರಲ್ಲಿ ಇಬ್ಬರು ದಾಖಲಾಗಿದ್ದರೆ ಮೂರು ಜನ ನಾಪತ್ತೆಯಾಗಿದ್ದಾರೆ.
ಕಾರು ಮತ್ತು ಖಾಸಗಿ ಬಸ್ ನಡುವೆ ಅಪಘಾತ ಸಂಭವಿಸಿದೆ. ಅಪಘಾತದ ಪರಿಣಾಮಕ್ಕೆ ಕಾರು ಮತ್ತು ಬಸ್ ನಲ್ಲಿದ್ದವರಿಗೆ ಗಾಯಗಳಾಗಿವೆ. ಒಬ್ಬರ ಮುಖಕ್ಕೆ ಗಂಭೀರ ಗಾಯವಾಗಿದ್ದರೆ ಇನ್ನೊಬ್ಬರ ಕಾಲಿಗೆ ಹೊಡೆತ ಬಿದ್ದಿದೆ.
ಅಪಘಾತವಾದ ನಂತರ ಆಂಬುಲೆನ್ಸ್ ಗೆ ಕರೆ ಮಾಡಲಾಗಿದ್ದು ಗಾಯಾಳುಗಳನ್ನು ಶಿವಮೊಗ್ಗಕ್ಕೆ ಕರೆದು ತರಲಾಗಿದೆ. ಈ ವೇಳೆ ನಮಗೂ ಪೆಟ್ಟಾಗಿದೆ ಎಂದು ಮೂವರು ಆಂಬುಲೆನ್ಸ್ ಏರಿದ್ದರು. ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಮದ್ಯ ಸೇವಿಸಿ ಭರ್ಜರಿ ಮೀನು ಊಟ ಮಾಡಿದ್ದರು ಎನ್ನಲಾಗಿದೆ.
ಆದರೆ ಆಂಬುಲೆನ್ಸ್ ಶಿವಮೊಗ್ಗಕಲ್ಕೆ ಬರುತ್ತಿದ್ದಂತೆ ಮೂವರು ಕಣ್ಮರೆಯಾಗಿದ್ದು ನಾವು ಆಸ್ಪತ್ರೆಗೆ ದಾಖಲಾಗಲ್ಲ ಎಂದು ಹೇಳಿ ತಪ್ಪಿಸಿಕೊಂಡಿದ್ದಾರೆ. ನಾವು ರೋಗಿಗಳನ್ನು ನೋಡಿಕೊಳ್ಳಲು ಆಂಬುಲೆನ್ಸ್ ಏರಿದ್ದೇವು.. ನಮಗೆ ಏನು ಆಗಿಲ್ಲ ಎಂದು ವರಸೆ ಬದಲಿಸಿ ಜಾಗ ಖಾಲಿ ಮಾಡಿದ್ದಾರೆ.
ಒಟ್ಟಿನಲ್ಲಿ ಗಾಯಾಳುಗಳನ್ನು ಕರೆದುಕೊಂಡು ಬರುವ ಆಂಬುಲೆನ್ಸ್ ನಲ್ಲಿಯೇ ಈ ಮೂವರು ಡ್ರಾಪ್ ಪಡೆದುಕೊಂಡಿದ್ದಾರೆ ಎಂಬ ಮಾತುಕತೆ ನಡೆಯುತ್ತಿದೆ. ತುರ್ತು ಸಂದರ್ಭವನ್ನು ಈ ರೀತಿ ತಮ್ಮ ಅನೂಕೂಲಕ್ಕೆ ಬಳಕೆ ಮಾಡಿಕೊಳ್ಳುವುದು ಸರಿಯಾ? ಎಂಬ ಪ್ರಶ್ನೆಯೂ ಮೂಡಿದೆ. ಒಂದು ಕಡೆ ರಸ್ತೆ ಅಪಘಾತದ ಆತಂಕ ಕಾಡುತ್ತಿದ್ದರೆ ಘಟನೆಯಲ್ಲಿ ಡ್ರಾಪ್ ಪಡೆದುಕೊಂಡವರ ಸರಿಯಾದ ವಿವರವೂ ಗೊತ್ತಾಗಿಲ್ಲ.
ಶಿವಮೊಗ್ಗದಲ್ಲಿಯೇ ಈ ಹಿಂದೆ ವಿಚಿತ್ರ ಪ್ರಕರಣಗಳು ನಡೆದಿದ್ದವು. ಶಿಕಾರಿಪುರದಿಂದ ಮದ್ಯ ಸೇವಿಸಿ ಬಂದ ವ್ಯಕ್ತಿಯೊಬ್ಬ ಗೂಡ್ಸ್ ಆಟೋದಲ್ಲಿ ಬರುವ ವೇಳೆ ಕಾಲು ಹೊರಚಾಚಿಕೊಂಡು ನಿದ್ರಿಸಿದ್ದ. ಮಧ್ಯ ದಾರಿಯಲ್ಲಿ ಲಾರಿಗೆ ಸಿಕ್ಕ ಕಾಲು ಕತ್ತರಿಸಿ ಬಿದ್ದಿತ್ತು. ಮದ್ಯದ ನಶೆಯಲ್ಲಿ ಏನು ಗೊತ್ತಾಗಿರಲಿಲ್ಲ. ಬೆಳಗ್ಗೆ ಎದ್ದಾಗ ವಿಷಯ ಅರಿವಿಗೆ ಬಂದಿದ್ದು ಕಾಲು ಹುಡುಕಿಕೊಡಿ ಎಂದು ಪೊಲೀಸರಿಗೆ ದೂರು ಕೊಟ್ಟಿದ್ದ.