ಲಾಟರಿ ಹೆಸರಲ್ಲಿ 6 ಸಾವಿರ ಜನರಿಗೆ ಸಾಮೂಹಿಕ ಮಕ್ಮಲ್ ಟೋಪಿ ಹಾಕಲಾಗಿದೆ. ಚಿನ್ನದ ಬಿಸ್ಕಟ್, ಕಾರ್, ಬೈಕ್ ಆಸೆಗೆ ಲಾಟರಿ ಖರೀದಿಸಿದವರಿಗೆ ಶಾಕ್ ಆಗಿದ್ದು, ವಂಚಿಸಿದ ಐವರ ಮೇಲೆ ಕೇಸ್ ದಾಖಲು, ಇಬ್ಬರ ಬಂಧನವಾಗಿದೆ.
ವರದಿ: ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಆ.18): ಅವರೆಲ್ಲ ಚಿನ್ನದ ಬಿಸ್ಕತ್, ಹೈಟೆಕ್ ಕಾರು, ರಾಯಲ್ ಎನ್ಪಿಲ್ಡ್ ಬೈಕ್ ಸೇರಿದಂತೆ ಅನೇಕ ಬೆಲೆಬಾಳುವ ವಸ್ತುಗಳು ಸಿಗುತ್ವೆ ಅನ್ನೋ ಆಸೆಯಿಂದ ಲಾಟರಿ ಟಿಕೇಟ್ ಖರೀದಿಸಿದ್ದರು. ಇನ್ನೇನು ಲಾಟರಿ ಡ್ರಾ ನಡೆಯಬೇಕು ಅನ್ನೋವಾಗ ಆಯೋಜಕರೇ ಹೈಡ್ರಾಮಾ ಮಾಡಿ ಲಾಟರಿ ಡ್ರಾ ರದ್ದು ಮಾಡಿ ಶಾಕ್ ಕೊಟ್ಟಿದ್ದರು. ಡ್ರಾ ನಡೆಯದೆ ಇದ್ದಾಗ ಕೈ ಸುಟ್ಟುಕೊಂಡ ಸಾವಿರಾರು ಜನ ಪ್ರತಿಭಟಿಸಿ ಮನೆದಾರಿ ಹಿಡಿದಿದ್ದರು. ಆದ್ರೀಗ ಲಾಟರಿ ಡ್ರಾ ಹೆಸ್ರಲ್ಲಿ ನಾಲ್ಕೈದು ತಾಲೂಕುಗಳ ಜನರಿಗೆ ಮೋಸ ಮಾಡಿದ ಖದೀಮರ ವಿರುದ್ಧ ಕೇಸ್ ದಾಖಲಾಗಿದೆ.
ವಿಜಯಪುರ ಜಿಲ್ಲೆಯಲ್ಲಿ ಲಾಟರಿ ಡ್ರಾ ಹೆಸ್ರಲ್ಲಿ ಭಾರೀ ಮೋಸ:
ಗುಮ್ಮಟನಗರಿ ವಿಜಯಪುರ ಜಿಲ್ಲೆಯಲ್ಲಿ ಅತಿ ದೊಡ್ಡ ಲಾಟರಿ ಲಫಡಾ ನಡೆದಿದೆ. ಬಂಪರ್ ಲಾಟರಿ ನಡೆಸೋದಾಗಿ ಜನರಿಗೆ ಚಿನ್ನದ ಬಿಸ್ಕತ್, ರಾಯಲ್ ಬೈಕ್, ಲಗ್ಜುರಿ ಕಾರ್, ಅನೇಕ ಬೈಕ್, ಸೈಕಲ್, ಪ್ರಿಡ್ಜ್ ಆಸೆ ತೋರಿಸಿ ಒಂದು ಕುಟುಂಬ 6 ಸಾವಿರ ಜನರಿಗೆ ಮಕ್ಮಲ್ ಟೋಪಿ ಹಾಕಿದೆ. ದೇವರಹಿಪ್ಪರಗಿಯ ಮನಿಯಾರ್ ಎಂಟರ್‌ಪ್ರೈಸಸ್ ಹೆಸ್ರ ಮಹಾಮೋಸ ನಡೆದಿದೆ. ಜನರಿಗೆ ₹600 ಒಂದರಂತೆ ಟಿಕೇಟ್ ಮಾರಾಟ ಮಾಡಿದ್ದ ಮನಿಯಾರ್ ಕುಟುಂಬದವರು ಕೊನೆಯಲ್ಲಿ ಡ್ರಾ ನಡೆಸದೇ ಕೈ ಎತ್ತಿದ್ದಾರೆ. ಇದರಿಂದ ಸರಿಸುಮಾರು 6 ಸಾವಿರ ಜನರಿಗೆ 30 ಲಕ್ಷ ರೂಪಾಯಿಯಷ್ಟು ವಂಚನೆಯಾಗಿದೆ.
ಬಗೆದೆಷ್ಟು ಬಯಲಾಗ್ತಿದೆ ಕೆಐಎಡಿಬಿ ಅಧಿಕಾರಿಗಳ ಹಗರಣ, ಹೊಸದಾಗಿ ಬರೊಬ್ಬರಿ 13 ಮಂದಿ ವಿರುದ್ಧ
ನಾಲ್ಕೈದು ತಾಲೂಕುಗಳ ಜನರಿಗೆ ಸಾಮೂಹಿಕ ವಂಚನೆ:
ಈ ಪ್ರಕರಣ ಅದೇಷ್ಟು ಗಂಭೀರ ಸ್ವರೂಪದ್ದು ಎಂದರೆ ವಿಜಯಪುರ ಜಿಲ್ಲೆಯ 4-5 ತಾಲೂಕುಗಳ ಜನರಿಗೆ ಈ ಮನಿಯಾರ್ ಎಂಟರ್‌ಪ್ರೈಸಸ್ ಕಣ್ಣಿಗೆ ಮಣ್ಣು ಏರಚಿ ಮಹಾಮೋಸ ಮಾಡಿದೆ. ದೇವರಹಿಪ್ಪರಗಿ, ಸಿಂದಗಿ, ಮುದ್ದೇಬಿಹಾಳ, ಬಸವನ ಬಾಗೇವಾಡಿ, ಇಂಡಿ ಹೀಗೆ ಐದಾರು ತಾಲೂಕುಗಳಲ್ಲಿ ಮನಿಯಾರ್ ಕುಟುಂಬ ತಮ್ಮ ಲಾಟರಿ ಟಿಕೇಟ್ ಮಾರಾಟ ಮಾಡಿದೆ. ಬಳಿಕ ಆಗಷ್ಟ 15 ರಂದು ಡ್ರಾ ನಡೆಯಬೇಕಿತ್ತು. ತಾಲೂಕು, ಹಳ್ಳಿಗಳಿಂದ ಬಂದಿದ್ದ ಸಾವಿರಾರು ಜನರು ಸೇರಿದ್ದರು. ಆದ್ರೆ ಅದೇನಾಯ್ತೋ ಗೊತ್ತಿಲ್ಲ ಡ್ರಾ ನಡೆಯಲೇ ಇಲ್ಲ.
ಡ್ರಾ ನಡೆಯೋ ಜಾಗದಲ್ಲಿ ಹೈಡ್ರಾಮಾ:
ಇನ್ನು ಡ್ರಾ ನಡೆಯೋದಾಗಿ ತಿಳಿದು 6 ಸಾವಿರಕ್ಕು ಅಧಿಕ ಜನರು ದೇವರಹಿಪ್ಪರಗಿಯ ಮನಿಯಾರ್ ಎಂಟರ್‌ಪ್ರೈಸಸ್ ಎದುರು ಸೇರಿದ್ದರು. ಆದ್ರೆ ಡ್ರಾ ನಡೆಯೋ ಜಾಗದಲ್ಲಿ ಮನಿಯಾರ್ ಎಂಟರ್ಪ್ರೈಸಸ್ ನ ಮನಿಯಾರ್ ಕುಟುಂಬಸ್ಥರು ಹೈಡ್ರಾಮಾ ನಡೆಸಿದ್ದರು. ಡ್ರಾದಲ್ಲಿ ನೀಡಬೇಕಾದ ಕೆಲ ಸಾಮಾನು ಬಂದಿಲ್ಲ ಅನ್ನೋದನ್ನ ಹಿಡಿದು, ಅಲ್ಲಿ ಬಂದ ಜನರು ಒಂದಿಷ್ಟು ಸಾಮಾನು ಎತ್ತುಕೊಂಡು ಹೋಗಿದ್ದಾರೆ ಅಂತಾ ಹೈಡ್ರಾಮಾ ಸೃಷ್ಟಿ ಮಾಡಿದ್ದರು. ಇದರಿಂದ ಡ್ರಾ ಕ್ಯಾನ್ಸಲ್ ಮಾಡಲಾಗಿದೆ. ಈ ವೇಳೆ ಸೇರಿದ್ದ ಸಾವಿರಾರು ಜನರು ದೇವರಹಿಪ್ಪರಗಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿ, ಬಂದ ದಾರಿಗೆ ಸುಂಕ ಇಲ್ಲಾ ಅಂತಾ ವಾಪಾಸ್ ಮನೆಗೆ ಹೋಗಿದ್ದಾರೆ.
ಕಾಸರಗೋಡು ಸಮೀಪ ರೈಲ್ವೇ ಹಳಿಯಲ್ಲಿ ಕಲ್ಲು, ವೆಸ್ಟರ್ನ್ ಕಮೋಡ್ ಪತ್ತೆ : ಮತ್ತೊಂದು ವಿಧ್ವಂಸಕ್ಕೆ ಸಂಚು?
ಮನಿಯಾರ್ ಕುಟುಂಬಸ್ಥರ ಮೇಲೆ ಕೇಸ್:
ಬಳಿಕ ಈಗ ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಮನಿಯಾರ್ ಕುಟುಂಬದವರ ಮೇಲೆ ಪ್ರಕರಣ ದಾಖಲಾಗಿದೆ. ಬಂಪರ್ ಲಾಟರಿ ನಡೆಸಿದ್ದ ಇಸ್ಮಾಯಿಲ್ ಮನಿಯಾರ್, ಶಹನವಾಜ್ ಮನಿಯಾರ್, ಅಬ್ದುಲ್ ರಜಾಕ್ ಮನಿಯಾರ್, ಗೌಸ್‌ಮುದ್ದೀನ್ ಮನಿಯಾರ್, ಮಹಮ್ಮದ್ ಮನಿಯಾರ್ ಮೇಲೆ ಐಪಿಸಿ ಸೆಕ್ಷನ್ 420 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈಗಾಗಲೇ 1ನೇ ಆರೋಪಿ ಇಸ್ಮಾಯಿಲ್ ಹಾಗೂ 5ನೇ ಆರೋಪಿ ಮಹಮ್ಮದ್ ನನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಲಾಟರಿಯಲ್ಲಿದ್ದ ವಸ್ತುಗಳು ಯಾವವು ನೋಡಿ!
3 ಚಿನ್ನದ ಬಿಸ್ಕತ್, 1 ಐಶಾರಾಮಿ ಎರ್ಟಿಗಾ ಕಾರು, 1 ರಾಯಲ್ ಎನ್ಪಿಲ್ಡ್ ಬೈಕ್, 1 ಆಟೋ, ಒಂದು ಟಂಟಂ, 2 ಹೊಂಡಾ ಶೈನ್ ಬೈಕ್, 2 ಸ್ಪ್ಲೆಂಡರ್ ಬೈಕ್, 10 ಹೆಚ್ ಎಫ್ ಡಿಲಕ್ಸ್ ಬೈಕ್, 2 ಟಿವಿಎಸ್ ಎಕ್ಸಲ್ ಮೋಟರ್ ಸೈಕಲ್, 2 ಎಲೆಕ್ಟ್ರಿಕ್ ಬೈಕ್, 20 ಪ್ರಿಡ್ಜ್, 20 ಎಲ್‌ಇಡಿ ಟಿವಿ, 20 ಕೂಲರ್, 1೦ ವಿವೋ ಮೋಬೈಲ್, 3 ಸೈಕಲ್ ಬಹುಮಾನ ನೀಡುವುದಾಗಿ ಮನಿಯಾರ್ ಕುಟುಂಬ ಹೇಳಿಕೊಂಡಿತ್ತು. ಇಷ್ಟೆಲ್ಲ ಬಹುಮಾನಗಳ ಆಸೆಯಿಂದ 6 ಸಾವಿರಕ್ಕು ಅಧಿಕ ಜನರು ಸಾಮೂಹಿಕವಾಗಿ ಮಕ್ಮಲ್ ಟೋಪಿ ಹಾಕಿಕೊಂಡಿದ್ದಾರೆ..