Belagavi: ಹಾಲಭಾವಿಯಲ್ಲಿ ಗೃಹಿಣಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್

By Suvarna News  |  First Published Sep 14, 2022, 7:35 PM IST

ಹಾಲಭಾವಿಯಲ್ಲಿ ಗೃಹಿಣಿ  ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ವರದಕ್ಷಿಣೆ ಕಿರುಕುಳ ನೀಡಿ ಕೊಲೆ‌ ಮಾಡಿ ನೇಣು ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.


ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ
 

ಬೆಳಗಾವಿ, (ಸೆಪ್ಟೆಂಬರ್.14): ತಾಲೂಕಿನ ಹಾಲಭಾವಿ ಗ್ರಾಮದಲ್ಲಿ ಗೃಹಿಣಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ, ಕುಟುಂಬಸ್ಥರೇ ತಮ್ಮ ಮಗಳ ಹತ್ಯೆಗೈದು ನೇಣು ಹಾಕಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

Tap to resize

Latest Videos

ಹಾಲಭಾವಿ ಗ್ರಾಮದಲ್ಲಿ ಸೆಪ್ಟೆಂಬರ್ 11 ರಂದು ಗಂಡ ಭರಮಪ್ಪ ನಾಯಕ್ ಮನೆಯಲ್ಲಿ ನೇಣು ಬಿಗಿದುಕೊಂಡು ಪತ್ನಿ ರೇಣುಕಾ (20) ಆತ್ಮಹತ್ಯೆ ಮಾಡಿಕೊಂಡಿದ್ದಳು. ಬೆಳಗಾವಿ ತಾಲೂಕಿನ ಹುಲ್ಯಾನೂರ ಗ್ರಾಮದ ನಿವಾಸಿಯಾಗಿದ್ದ ರೇಣುಕಾಳನ್ನು ಕೇವಲ ಐದು ತಿಂಗಳ ಹಿಂದೆಯಷ್ಟೇ ಬೆಳಗಾವಿ ತಾಲೂಕಿನ ಹಾಲಭಾವಿ ಗ್ರಾಮದ ಭರಮಪ್ಪ ನಾಯಕ್ ಎಂಬಾತನೊಂದಿಗೆ ಮದುವೆ ಮಾಡಿಕೊಡಲಾಗಿತ್ತು.

 ಸಣ್ಣಪುಟ್ಟ ರಸ್ತೆಗಳ ಗುತ್ತಿಗೆ ಹಿಡಿದು ಕೆಲಸ ಮಾಡುತ್ತಿದ್ದ ಈ ಭರಮಪ್ಪನಿಗೆ ಅಂದು 50ಗ್ರಾಂ ಚಿನ್ನವನ್ನ ವರದಕ್ಷಿಣೆ ನೀಡುವುದಾಗಿ ಮಾತುಕತೆಯಾಗಿತ್ತಂತೆ. ಮದುವೆ ಸಮಯದಲ್ಲಿ ಇಪ್ಪತ್ತು ಗ್ರಾಂ ಚಿನ್ನಾಭರಣ ಸಹ ನೀಡಿದ್ದರಂತೆ. ಇದಾದ ಬಳಿಕ ಹಣವಿಲ್ಲದ್ದಕ್ಕೆ ರೇಣುಕಾ ಕುಟುಂಬಸ್ಥರು ಮುಂದಿನ ದಿನಗಳಲ್ಲಿ ಕೊಡ್ತೇವಿ ಅಂತಾ ಹೇಳಿದ್ದರಂತೆ. ಇದೇ ವಿಚಾರಕ್ಕೆ ಮದುವೆಯಾದ ಐದು ತಿಂಗಳಲ್ಲಿ ಮೂರು ಬಾರಿ ಗಂಡನ ಮನೆಯವರು ಗಲಾಟೆ ಮಾಡಿ ರೇಣುಕಾಳ ಮೇಲೆ ಹಲ್ಲೆ ಕೂಡ ನಡೆಸಿ ಕಿರುಕುಳ ನೀಡಿದ್ದರಂತೆ. 

ಆಂಟಿ ಹಿಂದೆ ಬಿದ್ದು ಜೀವವನ್ನೇ ಕಳೆದುಕೊಂಡ ಬಡಪಾಯಿ ಯುವಕನ ಕಥೆ

ಇನ್ನೂ ದೀಪಾವಳಿಗೆ ಉಳಿದ ಚಿನ್ನವನ್ನ ನೀಡ್ತೇವಿ ಅಂತಾ ಹಿರಿಯ ಮಧ್ಯಸ್ಥಿಕೆಯಲ್ಲಿ ಮಾತುಕತೆಯಾಗಿ ನಂತರ ರೇಣುಕಾಗೆ ಗಂಡನ ಮನೆಗೆ ಕಳುಹಿಸಿ ಕೊಟ್ಟಿದ್ದರಂತೆ. ಹೀಗೆ ಗಂಡನ ಮನೆಗೆ ಹೋದ ಎರಡೇ ದಿನದಲ್ಲಿ ರೇಣುಕಾ ಶವವಾಗಿದ್ದಾಳೆ. ಆಕೆಯನ್ನ ಕೊಲೆ ಮಾಡಿ ನಂತರ ನೇಣು ಹಾಕಿದ್ದಾರೆ ಎಂದು ಆತ್ಮಹತ್ಯೆ ಮಾಡಿಕೊಂಡ ರೇಣುಕಾ ಸಂಬಂಧಿ ಯಲ್ಲವ್ವಾ ಆರೋಪಿಸಿದ್ದಾರೆ‌. ಇನ್ನು ರೇಣುಕಾ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಂತೆ ಪತಿ ಭರಮಪ್ಪಾ‌ ನಾಯಕ್ ಹಾಗೂ ಕುಟುಂಬಸ್ಥರು ಪರಾರಿಯಾಗಿದ್ದು ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಗಂಡ ಭರಮಪ್ಪ ನಾಯಕ್, ಮೈದುನ ಸಿದ್ದಪ್ಪ ನಾಯಕ್, ಹಾಲಪ್ಪ ನಾಯಕ್, ಕಮಲವ್ವ ನಾಯಕ್, ಯಲ್ಪಪ್ಪ ನಾಯಕ್ ವಿರುದ್ಧ ಕೇಸ್ ದಾಖಲಿಸಿದ್ದು ಆರೋಪಿಗಳನ್ನು  ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.  

ಒತ್ತಡಕ್ಕೆ ಮಣಿದು ಆರೋಪಿಯನ್ನು ಬಿಟ್ಟು ಕಳಿಸಿದ್ರಾ ಪೊಲೀಸರು?
ಇನ್ನೂ ಕಾಕತಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿಕೊಂಡ ಪೊಲೀಸರು ಆತ್ಮಹತ್ಯೆ ಮಾಡಿಕೊಂಡ ರೇಣುಕಾ ಪತಿ ಭರಮಪ್ಪ ಸಹೋದರ ಸಂಬಂಧಿ ಸಿದ್ದಪ್ಪನನ್ನ ಠಾಣೆಗೆ ಕರೆದುಕೊಂಡು ಬಂದಿದ್ದರಂತೆ. ಈ ವೇಳೆ ಸ್ಥಳೀಯ ಬಿಜೆಪಿ ಮುಖಂಡನಿಂದ ಒತ್ತಡ ಬಂತು ಎಂಬ ಕಾರಣಕ್ಕೆ ರಾಜಕೀಯ ಒತ್ತಡಕ್ಕೆ ಮಣಿದು ವಶಕ್ಕೆ ಪಡೆದಿದ್ದ ಆರೋಪಿ ಸಿದ್ದಪ್ಪನನ್ನು  ಬಿಟ್ಟು ಕಳುಹಿಸಿದ್ದಾರೆ ಅಂತಾ ಕುಟುಂಬಸ್ಥರು ಆರೋಪಿಸಿದ್ದಾರೆ. 

ಕಾಕತಿ ಸಿಪಿಐ ಗುರುನಾಥ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಹುಲ್ಯಾನೂರ ಗ್ರಾಮಸ್ಥರು ಹಾಗೂ ರೇಣುಕಾ ಕುಟುಂಬಸ್ಥರು ಸೇರಿಕೊಂಡು ಬೆಳಗಾವಿಯ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿ ತಮಗೆ ನ್ಯಾಯ ಬೇಕು ಅಂತಾ ಪ್ರತಿಭಟನೆ ನಡೆಸಿದ್ದಾರೆ. ಇದೇ ವೇಳೆ ಸ್ಥಳಕ್ಕೆ ಬಂದ ಡಿಸಿಪಿ ರವೀಂದ್ರ ಗಡಾದಿ ಮನವಿ ಸ್ವೀಕರಿಸಿ ಎಸಿಪಿ ನೇತೃತ್ವದಲ್ಲಿ ತನಿಖೆ ನಡೆಸಲಾಗುವುದು ಜತೆಗೆ ಆರೋಪಿಗಳನ್ನ ಶೀಘ್ರದಲ್ಲಿ ಬಂಧಿಸಿಲಾಗುವುದು ಅಂತಾ ಭರವಸೆ ನೀಡಿದ್ದಾರೆ.

 ಇದೇ ವೇಳೆ ರೇಣುಕಾಳ ಕುಟುಂಬಸ್ಥರು ಪೊಲೀಸರಿಗೆ ಕಾಲಿಗೆ ಬಿದ್ದು ಗೋಳಾಡಿ ಮಗಳ ಸಾವಿಗೆ ನ್ಯಾಯ ಕೊಡಿಸಿ ಅಂತಾ ಕಣ್ಣೀರಿಟ್ಟಿದ್ದಾರೆ. ಇತ್ತ ಡಿಸಿಪಿಗೆ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಹುಲ್ಯಾನೂರ ಗ್ರಾಮದ ಮುಖಂಡ ಬಸವಣ್ಣಿ  ಒಂದು ವಾರದೊಳಗೆ ಆರೋಪಿಗಳನ್ನ ಬಂಧಿಸಬೇಕು ಇಲ್ಲವಾದ್ರೇ ಇಡೀ ಗ್ರಾಮದ ಜನರು ಕಾಕತಿ ಪೊಲೀಸ್ ಠಾಣೆ ಮುಂದೆ ಅಹೋರಾತ್ರಿ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಒಟ್ಟಾರೆ ಐದು ತಿಂಗಳ ಹಿಂದೆ ಮದುವೆಯಾಗಿ ಸುಂದರ ಬದುಕಿನ ಕನಸು ಕಂಡಿದ್ದ ರೇಣುಕಾ ಸಾವಿಗೆ ಕಾರಣ ಏನೆಂಬುದು ಪೊಲೀಸರ ತನಿಖೆಯಿಂದ ಹೊರಬರಬೇಕಿದೆ. ಆದ್ರೇ ಇದೀಗ ಪ್ರಕರಣದಲ್ಲಿ ಪೊಲೀಸರೇ ರಾಜಕೀಯ ಒತ್ತಡಕ್ಕೆ ಮಣಿದು ಆರೋಪಿಗಳ ಬೆನ್ನಿಗೆ ನಿಂತಿರುವ ಆರೋಪ ಕೇಳಿ ಬರುತ್ತಿದ್ದು, ಮೇಲಾಧಿಕಾರಿಗಳು ಪ್ರಕರಣ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸಿ ಆತ್ಮಹತ್ಯೆ ಮಾಡಿಕೊಂಡ ರೇಣುಕಾ ಕುಟುಂಬಸ್ಥರಿಗೆ ನ್ಯಾಯ ಕೊಡಿಸಲಿ ಎಂಬುದು ಗ್ರಾಮಸ್ಥರ ಆಗ್ರಹ.

click me!