ಕರ್ನಾಟಕ ಗಡಿ ಭಾಗ ಕಾಸರಗೋಡು ಜಿಲ್ಲೆಯ ಬದಿಯಡ್ಕದ ಖ್ಯಾತ ದಂತ ವೈದ್ಯರೊಬ್ಬರ ನಿಗೂಢ ಸಾವು ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ. ಕುಂದಾಪುರದ ರೈಲ್ವೇ ಹಳಿಯಲ್ಲಿ ವೈದ್ಯನ ಮೃತದೇಹ ಪತ್ತೆ ಬೆನ್ನಲ್ಲೇ ಹಿಂದೂ ಪರ ಸಂಘಟನೆಗಳು ಪ್ರತಿಭಟನೆಗೆ ಇಳಿದಿದೆ.
ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು
ಮಂಗಳೂರು (ನ.11): ಕರ್ನಾಟಕ ಗಡಿ ಭಾಗ ಕಾಸರಗೋಡು ಜಿಲ್ಲೆಯ ಬದಿಯಡ್ಕದ ಖ್ಯಾತ ದಂತ ವೈದ್ಯರೊಬ್ಬರ ನಿಗೂಢ ಸಾವು ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ. ಕುಂದಾಪುರದ ರೈಲ್ವೇ ಹಳಿಯಲ್ಲಿ ವೈದ್ಯನ ಮೃತದೇಹ ಪತ್ತೆ ಬೆನ್ನಲ್ಲೇ ಹಿಂದೂ ಪರ ಸಂಘಟನೆಗಳು ಪ್ರತಿಭಟನೆಗೆ ಇಳಿದಿದ್ದು, ಮುಸ್ಲಿಂ ಯುವತಿ ವಿಚಾರದಲ್ಲಿ ತಂಡವೊಂದು ವೈದ್ಯರಿಗೆ ಬೆದರಿಕೆ ಒಡ್ಡಿ ಹಲ್ಲೆಗೆ ಮುಂದಾಗಿದ್ದೆ ಘಟನೆಗೆ ಕಾರಣ ಎಂದು ಆರೋಪಿಸಲಾಗಿದೆ. ಮಂಗಳೂರು ಗಡಿ ಭಾಗದ ಕಾಸರಗೋಡು ಜಿಲ್ಲೆಯ ಬದಿಯಡ್ಕದಲ್ಲಿ ಡಾ.ಕೃಷ್ಣಮೂರ್ತಿ ಕಳೆದ 30 ವರ್ಷಗಳಿಂದ ದಂತ ವೈದ್ಯರಾಗಿದ್ದಾರೆ. ಆದರೆ ಕಳೆದ ನವೆಂಬರ್ 8ರಂದು ಕ್ಲೀನಿಕ್‌ಗೆ ಹೋದ ಡಾ.ಕೃಷ್ಣಮೂರ್ತಿ ಆ ಬಳಿಕ ನಿಗೂಢವಾಗಿ ನಾಪತ್ತೆಯಾಗಿದ್ದಾರೆ.
ಎಷ್ಟೇ ಹುಡುಕಾಟ ನಡೆಸಿದರೂ ಅವರ ಪತ್ತೆಯಾಗಿರಲಿಲ್ಲ. ಆದರೆ ನವೆಂಬರ್ 10ರಂದು ಬದಿಯಡ್ಕದಿಂದ 180 ಕಿ.ಮೀ ದೂರದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಟ್ಟಿಯಂಗಡಿ ಬಳಿಯ ರೈಲು ಹಳಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಮೇಲ್ನೋಟಕ್ಕೆ ಆತ್ಮಹತ್ಯೆ ಅಂತ ಕಂಡುಬಂದರೂ ಅವರ ಸಾವಿನ ಸುತ್ತ ಅನುಮಾನ ನೆಟ್ಟಿದೆ. ಅವರ ಮನೆಯವರು ಹೇಳುವ ಪ್ರಕಾರ ಜಾಗದ ವಿಚಾರದಲ್ಲಿ ಕೆಲ ತಗಾದೆ ಇತ್ತು ಎನ್ನಲಾಗಿದೆ. ಆರು ತಿಂಗಳಿನಿಂದ ಜಾಗದ ವಿಚಾರದಲ್ಲಿ ಕೃಷ್ಣಮೂರ್ತಿ ನಿರಂತರ ಕಿರುಕುಳ, ಬೆದರಿಕೆ ಅನುಭವಿಸಿದ್ದರು ಎನ್ನಲಾಗಿದೆ. ಅವರ ಜಾಗವನ್ನು ತಮಗೇ ಮಾರಾಟ ಮಾಡುವಂತೆ ಕೆಲವರು ಕಿರುಕುಳ ನೀಡುತ್ತಿದ್ದ ಬಗ್ಗೆ ದೂರಲಾಗಿದೆ. ಇದೇ ವಿಚಾರದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡರಾ ಅನ್ನೋ ಅನುಮಾನಗಳಿವೆ.
ಮುದ್ರಾಧಾರಣೆಗೆ ಅವಕಾಶ ಇಲ್ಲ ಎಂಬ ಆದೇಶ ವಾಪಸ್ ಪಡೆಯುವ ಭರವಸೆ ನೀಡಿದ ಮುಜರಾಯಿ ಸಚಿವೆ
ಮುಸ್ಲಿಂ ಯುವತಿ ಜೊತೆ ಅನುಚಿತ ವರ್ತನೆ ಆರೋಪ!: ಈ ನಡುವೆ ನವೆಂಬರ್ 8 ರಂದು ಬೆಳಿಗ್ಗೆ ಡಾ.ಕೃಷ್ಣಮೂರ್ತಿ ಬದಿಯಡ್ಕದ ಕ್ಲೀನಿಕ್‌ಗೆ ಬಂದಿದ್ದರು. ಬೆ.11ರ ಸುಮಾರಿಗೆ ತಪಾಸಣೆಗೆಂದು ಮುಸ್ಲಿಂ ಯುವತಿಯೊಬ್ಬಳು ಕ್ಲೀನಿಕ್‌ಗೆ ಬಂದಿದ್ದಾಳೆ. ಆದರೆ ಈ ವೇಳೆ ಆಕೆಯ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ತಂಡವೊಂದು ಅವರಿಗೆ ಹಲ್ಲೆಗೆ ಮುಂದಾಗಿ ಬೆದರಿಕೆ ಒಡ್ಡಿದೆ ಎನ್ನಲಾಗಿದೆ. ಇದಾದ ಬಳಿಕ ಅವರು ಬೈಕ್‌ನಲ್ಲಿ ತೆರಳಿದ್ದು, ಮೊಬೈಲ್ ಕ್ಲಿನಿಕ್‌ನಲ್ಲೇ ಇಟ್ಟಿದ್ದರು. ಬೈಕ್ ಬದಿಯಡ್ಕ ಪೇಟೆಯಲ್ಲಿ ಇಟ್ಟು ನಾಪತ್ತೆಯಾಗಿದ್ದರು. ಇದಾದ ಬಳಿಕ ಮನೆಯವರು ಬೆದರಿಕೆ ಹಾಕಿದವರ ವಿರುದ್ದ ಬದಿಯಡ್ಕ ಠಾಣೆಗೆ ದೂರು ನೀಡಿದ್ದು, ಮುಸ್ಲಿಂ ಯುವತಿ ಕಡೆಯವರೂ ಪ್ರತಿದೂರು ನೀಡಿದ್ದಾರೆ. ಈ ಮಧ್ಯೆ ನಿನ್ನೆ ಅವರ ಮೃತದೇಹ ರೈಲ್ವೇ ಹಳಿಯಲ್ಲಿ ಪತ್ತೆಯಾಗಿದೆ. ಕೃಷ್ಣಮೂರ್ತಿ ಪುತ್ರಿ ಮೃತದೇಹದ ಗುರುತು ಪತ್ತೆ ಮಾಡಿದ್ದಾರೆ. ರೈಲು ಹಳಿಯಲ್ಲಿ ದೇಹ ಎರಡು ತುಂಡಾಗಿ ಬಿದ್ದಿತ್ತು.
Mangaluru: ವೈದ್ಯಕೀಯ ವಿದ್ಯಾರ್ಥಿ ಸಾವು: 8 ವರ್ಷಗಳ ಬಳಿಕ ಸಿಬಿಐಗೆ ವಹಿಸಿದ ಸುಪ್ರೀಂಕೋರ್ಟ್!
ಆತ್ಮಹತ್ಯೆಗೆ ಕುಂದಾಪುರಕ್ಕೆ ಹೋಗಿದ್ದೇಕೆ?: ಸದ್ಯ ಡಾ.ಕೃಷ್ಣಮೂರ್ತಿ ಸಾವಿನ ಬಗ್ಗೆ ಹಲವು ಅನುಮಾನಗಳು ಹುಟ್ಟಿದೆ. ಅವರು ಸಾಯಲು ನಿರ್ಧಾರ ಮಾಡಿದ್ದರೂ ಬದಿಯಡ್ಕದಿಂದ 180 ಕಿ.ಮೀ ದೂರದ ಕುಂದಾಪುರಕ್ಕೆ ಹೋಗಿದ್ದು ಅನುಮಾನ ಮೂಡಿಸಿದೆ. ಬೈಕ್ ಬದಿಯಡ್ಕದಲ್ಲೇ ಇಟ್ಟು ಯಾವ ವಾಹನದಲ್ಲಿ ಕುಂದಾಪುರಕ್ಕೆ ಹೋಗಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಇನ್ನು ರೈಲಿನಲ್ಲಿ ಬಂದಿದ್ದರೂ ಮೂಡ್ಲುಕಟ್ಟೆ ರೈಲು ನಿಲ್ದಾಣದಲ್ಲಿ ಇಳಿಯಬೇಕು. ಅಲ್ಲಿಂದ ಅವರ ಶವ ಪತ್ತೆಯಾದ ಜಾಗಕ್ಕೆ 10-12 ಕಿಮೀ ದೂರವಿದೆ. ಅಲ್ಲಿಯವರೆಗೆ ಹೇಗೆ ಹೋದರು ಅನ್ನೋದು ಅನುಮಾನ. ಸದ್ಯ ಸಾವಿನ ಬಗ್ಗೆ ಹಲವು ಸಂಶಯ ವ್ಯಕ್ತವಾಗಿದೆ. ಸದ್ಯ ಅವರಿಗೆ ಬೆದರಿಕೆ ಒಡ್ಡಿದ ಐವರನ್ನ ಬದಿಯಡ್ಕ ಪೊಲೀಸರು ವಶಕ್ಕೆ ಪಡೆದಿದ್ದು, ಇಂದು ವಿಎಚ್‌ಪಿ ಹರತಾಳಕ್ಕೆ ಕರೆ ನೀಡಿದೆ.