ತಲೆಮರೆಸಿಕೊಂಡಿದ್ದ ಭವಾನಿ ರೇವಣ್ಣ ಪ್ರತ್ಯಕ್ಷ, ಮಧ್ಯಂತರ ಜಾಮೀನು ಬೆನ್ನಲ್ಲೇ ಎಸ್‌ಐಟಿ ಕಚೇರಿಗೆ ಹಾಜರ್!

By Gowthami K  |  First Published Jun 7, 2024, 11:49 AM IST

ಸಂತ್ರಸ್ತೆ ಅಪಹರಣ ಸಂಬಂಧ ಕಳೆದ 1 ತಿಂಗಳಿನಿಂದ  ತಲೆಮರೆಸಿಕೊಂಡಿರುವ ಪ್ರಜ್ವಲ್‌ ತಾಯಿ ಭವಾನಿ ರೇವಣ್ಣಗೆ ಹೈಕೋರ್ಟ್ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.


ಬೆಂಗಳೂರು (ಜೂ.7): ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಅಪಹರಣ ಸಂಬಂಧ ಕಳೆದ 1 ತಿಂಗಳಿನಿಂದ  ತಲೆಮರೆಸಿಕೊಂಡಿರುವ ಪ್ರಜ್ವಲ್‌ ತಾಯಿ ಭವಾನಿ ರೇವಣ್ಣಗೆ ಹೈಕೋರ್ಟ್ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಈ ಮೂಲಕ ತಲೆಮರೆಸಿಕೊಂಡಿರುವ ಭವಾನಿ ರೇವಣ್ಣಗೆ ಬಿಗ್ ರಿಲೀಫ್ ಸಿಕ್ಕಿದಂತಾಗಿದೆ. ಇದರ ಜೊತೆಗೆ ಕೋರ್ಟ್ ಹಲವು ಷರತ್ತುಗಳನ್ನು ವಿಧಿಸಿದೆ. ಇಂದು ಮಧ್ಯಾಹ್ನ 1 ಗಂಟೆಗೆ ಎಸ್‌ಐಟಿ ವಿಚಾರಣೆಗೆ ಹಾಜರಾಗಬೇಕು. ಮಾತ್ರವಲ್ಲ ಕೆ.ಆರ್.ನಗರಕ್ಕೆ ತೆರಳದಂತೆ ಮತ್ತು ಹಾಸನಕ್ಕೂ ತೆರಳದಂತೆ ಭವಾನಿಗೆ  ಸೂಚನೆ ನೀಡಿದೆ.

ಮುಂದಿನ ಶುಕ್ರವಾರದವರೆಗೆ ಮಾತ್ರ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿ ಮುಂದಿನ ವಿಚಾರಣೆಯನ್ನು ಕೂಡ ಅದೇ ದಿನ ಅಂದರೆ ಜೂ.14ಕ್ಕೆ ನ್ಯಾಯಾಧೀಶ ಕೃಷ್ಣ ಎಸ್ ದೀಕ್ಷಿತ್ ಮುಂದೂಡಿದ್ದಾರೆ.  ಇಂದು ಮಧ್ಯಾಹ್ನ 1 ಗಂಟೆ ಒಳಗೆ ಎಸ್‌ಐಟಿ ವಿಚಾರಣೆಗೆ ‌ಹಾಜರಾಗಲು ಸೂಚಿಸಿದೆ ಈ ಹಿನ್ನೆಲೆಯಲ್ಲಿ ಭವಾನಿ ರೇವಣ್ಣ 1 ಗಂಟೆಗೂ ಮುನ್ನ ಎಸ್‌ಐಟಿ ವಿಚಾರಣೆಗೆ ಹಾಜರಾಗಿದ್ದಾರೆ. ಈ ಮೂಲಕ ತಲೆ ಮರೆಸಿಕೊಂಡಿದ್ದ ಭವಾನಿ ರೇವಣ್ಣ ಸುಮಾರು 1 ತಿಂಗಳ ಬಳಿಕ ವಿಚಾರಣೆಗೆ ಹಾಜರಾಗಿದ್ದಾರೆ. ಹೈಕೋರ್ಟ್ ಸೂಚನೆ ಹಿನ್ನೆಲೆ ಎಸ್ಐಟಿ ಕಚೇರಿಗೆ ಹಾಜರಾಗಿದ್ಧಾರೆ.

Tap to resize

Latest Videos

undefined

ರಾಹುಲ್‌ ಗಾಂಧಿಗೆ ಷರತ್ತುಬದ್ಧ ಜಾಮೀನು ನೀಡಿದ ಬೆಂಗಳೂರು ಕೋರ್ಟ್, 75 ಲಕ್ಷ ಶ್ಯೂರಿಟಿ ಕೊಟ್ಟ ಡಿಕೆ ಸುರೇಶ್

ಪ್ರಕರಣದ ಹಿನ್ನೆಲೆ: ಅಪಹರಣಕ್ಕೆ ಒಳಗಾಗಿದ್ದಾರೆ ಎನ್ನಲಾದ ಮಹಿಳೆಯ ಪುತ್ರ ಎಚ್‌.ಡಿ. ರಾಜು 2024ರ ಮೇ.2ರಂದು ಕೆ.ಆರ್‌.ನಗರ ಪೊಲೀಸ್‌ ಠಾಣೆಗೆ ದೂರು ದಾಖಲಿಸಿದ್ದರು. ಪ್ರಕರಣದ ಮೊದಲ ಆರೋಪಿ ಎಚ್‌.ಡಿ. ರೇವಣ್ಣ ಮತ್ತವರ ಪತ್ನಿ ಭವಾನಿ ರೇವಣ್ಣ ಸೂಚನೆ ಮೇರೆಗೆ ಎರಡನೇ ಆರೋಪಿ ಸತೀಶ್‌ ಬಾಬಣ್ಣ ತಮ್ಮ ತಾಯಿಯನ್ನು ಮನೆಯಿಂದ ಕರೆದುಕೊಂಡು ಹೋಗಿದ್ದರು. ನಂತರ ತಾಯಿ ಎಲ್ಲಿದ್ದಾರೆ ಎಂಬ ಕೇಳಿದರೆ ಮಾಹಿತಿ ನೀಡಿಲ್ಲ ಎಂದು ದೂರುದಾರರು ಆರೋಪಿಸಿದ್ದರು.

ವಾಲ್ಮೀಕಿ ಕೇಸ್‌ ಸಿಎಂ ಸಿದ್ದರಾಮಯ್ಯಗೆ ಗೊತ್ತಿದ್ದೇ ನಡೆದಿದೆ: ಎಚ್.ಡಿ.ಕುಮಾರಸ್ವಾಮಿ

ಈ ಸಂಬಂಧ ಕೆ.ಆರ್‌.ನಗರ ಠಾಣೆಯ ಪೊಲೀಸರು ಅಪಹರಣ ಆರೋಪ  ಎಫ್‌ಐಆರ್‌ ದಾಖಲಿಸಿದ್ದರು. ಈ ಕುರಿತು ತನಿಖೆ ನಡೆಸುತ್ತಿರುವ ಎಸ್‌ಐಟಿ, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಭವಾನಿ ರೇವಣ್ಣ ಅವರಿಗೆ ನೋಟಿಸ್‌ ಜಾರಿ ಮಾಡಿತ್ತು.

ಇದರಿಂದ ನಿರೀಕ್ಷಣಾ ಜಾಮೀನು ಕೋರಿ ಭವಾನಿ ರೇವಣ್ಣ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಮೇ 31ರಂದು ನ್ಯಾಯಾಲಯ ತಿರಸ್ಕರಿಸಿತ್ತು. ಬಳಿಕ ಭವಾನಿ ರೇವಣ್ಣ ಹೈಕೋರ್ಟ್ ಮೆಟ್ಟಲೇರಿದ್ದರು. ಇದರ ಬೆನ್ನಲ್ಲೇ  ಜೂನ್ 3 ರಂದು  ನಿರೀಕ್ಷಣಾ ಜಾಮೀನು ಮಂಜೂರು ಮಾಡುವಂತೆ ಕೋರಿ ಹೈಕೋರ್ಟ್‌ಗೆ ಕ್ರಿಮಿನಲ್‌ ಅರ್ಜಿ ಸಲ್ಲಿಸಿದ್ದರು. 

ಅರ್ಜಿಯಲ್ಲಿ ಎಫ್‌ಐಆರ್‌ ದಾಖಲಿಸಿರುವ ಮೈಸೂರಿನ ಕೆ.ಆರ್‌. ನಗರ ಠಾಣಾ ಪೊಲೀಸರನ್ನು (ಸದ್ಯ ತನಿಖೆ ನಡೆಸುತ್ತಿರುವ ಎಸ್‌ಐಟಿ) ಪ್ರತಿವಾದಿ ಮಾಡಲಾಗಿದೆ. ಈ ಅರ್ಜಿ ವಿಚಾರಣೆಗೆ ನಿಗದಿಯಾಗಬೇಕಿದೆ. ಅಪಹರಣ ಪ್ರಕರಣದಲ್ಲಿ ತಮ್ಮ ಯಾವುದೇ ಪಾತ್ರವಿಲ್ಲ. ಬಂಧಿಸಿ ವಿಚಾರಣೆಗೆ ಒಳಪಡಿಸುವ ಅವಶ್ಯತೆ ಇಲ್ಲ, ಹಾಗಾಗಿ, ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕು. ಜಾಮೀನು ಮಂಜೂರಾತಿಗೆ ನ್ಯಾಯಾಲಯ ವಿಧಿಸುವ ಎಲ್ಲ ಷರತ್ತುಗಳಿಗೂ ಬದ್ಧವಾಗಿರುವುದಾಗಿ ಎಂದು ಅರ್ಜಿಯಲ್ಲಿ ಭವಾನಿ ರೇವಣ್ಣ ಉಲ್ಲೇಖಿಸಿದ್ದರು. 

click me!