
ಕಾರವಾರ (ಜುಲೈ.23): ನಿಗೂಢವಾಗಿ ನಾಪತ್ತೆಯಾಗಿದ್ದ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಶಿರಾಲಿಯ ತಟ್ಟಿಹಕ್ಕಲ್‌ನ ನಿವಾಸಿ ಜಿಯಾನ್ ಅಬ್ದುಲ್ ಮುನಾಫ್ (18) ಎಂಬ ಯುವತಿ, ಉತ್ತರಪ್ರದೇಶದ ಮಥುರಾದಲ್ಲಿ ಪತ್ತೆಯಾಗಿದ್ದಾಳೆ. ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿಯ ತ್ವರಿತ ಕಾರ್ಯಾಚರಣೆಯಿಂದ ಸುರಕ್ಷಿತವಾಗಿ ಮನೆಗೆ ಮರಳಿದ್ದಾಳೆ.
ಏನಿದು ಪ್ರಕರಣ?
ಜುಲೈ 18ರಂದು ಜಿಯಾನ್, ತನ್ನ ತಂಗಿಯ ಜೊತೆ ಭಟ್ಕಳಕ್ಕೆ ತೆರಳುವುದಾಗಿ ಹೇಳಿ ಮನೆಯಿಂದ ಹೋಗಿದ್ದಳು. ಆದರೆ ತಂಗಿಯನ್ನು ಮನೆಗೆ ಕಳುಹಿಸಿದ ಬಳಿಕ, ಜಿಯಾನ್ ಗೆಳತಿಯೊಂದಿಗೆ ನಾಪತ್ತೆಯಾಗಿದ್ದಳು. ಈ ಬಗ್ಗೆ ಪೋಷಕರು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಿಪಿಐ ಮಂಜುನಾಥ ಎ. ಲಿಂಗಾರೆಡ್ಡಿ, ಯುವತಿಯ ಶೋಧಕ್ಕಾಗಿ ತನಿಖೆ ಆರಂಭಿಸಿದರು.
ತನಿಖೆ ವೇಳೆ ಸಿಕ್ಕ ಸುಳಿವು:
ತನಿಖೆಯಲ್ಲಿ ಜಿಯಾನ್ ರೈಲಿನಲ್ಲಿ ಪ್ರಯಾಣಿಸುತ್ತಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ತಕ್ಷಣವೇ ಮೊಬೈಲ್ ಲೊಕೇಶನ್ ಪರಿಶೀಲನೆ ನಡೆಸಿದಾಗ, ಆಕೆ ಉತ್ತರಪ್ರದೇಶದ ಮಥುರಾದಲ್ಲಿರುವುದು ದೃಢಪಟ್ಟಿದೆ. ಜಿಯಾನ್, ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಹಿಳೆಯೊಂದಿಗೆ ತೆರಳಿದ್ದಳು ಎಂಬ ಮಾಹಿತಿಯೂ ಬೆಳಕಿಗೆ ಬಂದಿತು.
ಪೊಲೀಸರು ಪ್ರಕಾರ, ಆ ಮಹಿಳೆ ರಾಜಸ್ಥಾನದ ಯುವಕನೊಂದಿಗೆ ಸ್ನೇಹ ಹೊಂದಿದ್ದು, ಜಿಯಾನ್‌ಳನ್ನು ತನ್ನೊಂದಿಗೆ ಕರೆದೊಯ್ದಿದ್ದಳು ಎಂಬ ಸತ್ಯಾಂಶ ಬಯಲಾಗಿದೆ. ಈ ಮಾಹಿತಿಯ ಆಧಾರದ ಮೇಲೆ, ಎಎಸ್‌ಐ ರಾಜೇಶ್ ಕೆ., ಸಿಬ್ಬಂದಿ ಅಕ್ಷತ್ ಕುಮಾರ್ ಮತ್ತು ಮಹಿಳಾ ಸಿಬ್ಬಂದಿ ಸಾವಿತ್ರಿ ಅವರ ತಂಡ, ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಮಥುರಾಕ್ಕೆ ತೆರಳಿ ಜಿಯಾನ್‌ಳನ್ನು ಪತ್ತೆಹಚ್ಚಿತು.
ಜಿಯಾನ್ ಸ್ವಇಚ್ಛೆಯಿಂದ ಮಹಿಳೆಯೊಂದಿಗೆ ತೆರಳಿದ್ದಳು ಎಂಬುದು ವಿಚಾರಣೆ ವೇಳೆ ತಿಳಿಸಿದ್ದಾಳೆ. ಭಟ್ಕಳ ಪೊಲೀಸರು ಯುವತಿಯನ್ನು ಸುರಕ್ಷಿತವಾಗಿ ಭಟ್ಕಳಕ್ಕೆ ಕರೆತಂದು ಪೋಷಕರಿಗೆ ಹಸ್ತಾಂತರಿಸಿದರು. ಪೊಲೀಸರ ಈ ತ್ವರಿತ ಮತ್ತು ಪರಿಣಾಮಕಾರಿ ಕಾರ್ಯಾಚರಣೆಗೆ ಸ್ಥಳೀಯ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ