
ಬೆಂಗಳೂರು (ಆ.4): ವಿಶೇಷ ಸಮಗ್ರ ಪರಿಷ್ಕರಣೆ ಫಾರ್ಮ್ ವೆರಿಫಿಕೇಶನ್ ಬಾಕಿಯಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳ ಸೋಗಿನಲ್ಲಿ ಸೈಬರ್ ವಂಚಕರು 82 ವರ್ಷದ ವೃದ್ಧನೊಬ್ಬನಿಗೆ 3.5 ಲಕ್ಷ ರು. ವಂಚಿಸಿರುವ ಘಟನೆ ಜೀವನ್ ಭೀಮನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ರುಸ್ತುಂಬಾಗ್ ನಿವಾಸಿಯಾದ ಆರ್.ಪಾರ್ಥಸಾರಥಿ ಅವರು ನೀಡಿದ ದೂರಿನ ಅನ್ವಯ ಅಪರಿಚಿತನ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಜು.30 ರಂದು ಫಾರ್ಥಸಾರಥಿ ಅವರಿಗೆ ವಾಟ್ಸಪ್ ಮೂಲಕ ಕರೆ ಮಾಡಿದ ಅಪರಿಚಿತ ವ್ಯಕ್ತಿ ತನ್ನನ್ನು ತಾನು ಚುನಾವಣಾ ಆಯೋಗದ ಅಧಿಕಾರಿ (ಇಸಿಐ) ಎಂದು ಪರಿಚಯಿಸಿಕೊಂಡಿದ್ದ. ಎಸ್‌ಐಆರ್ ಫಾರ್ಮ್ ವೆರಿಫಿಕೇಶನ್ ಆಗಿಲ್ಲ. ಹೀಗಾಗಿ ನೀವು ಸಲ್ಲಿಸಿದ ಅರ್ಜಿ ತಿರಸ್ಕೃತಗೊಂಡಿದೆ. ನಂತರ ಹೊಸ ಅರ್ಜಿಯನ್ನು ಭರ್ತಿ ಮಾಡಬೇಕೆಂದು ಹೇಳಿ ಲಿಂಕ್ ಒಂದನ್ನು ಕಳುಹಿಸಿದ್ದು, ಇದನ್ನು ಡೋನ್‌ಲೋಡ್ ಮಾಡಿಕೊಂಡು ವಿವರವನ್ನು ಭರ್ತಿ ಮಾಡಿ ಎಂದು ತಿಳಿಸಿದ್ದ.
ಬಳಿಕ ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳಿಸಲು 5 ರು. ಶುಲ್ಕ ಪಾವತಿಸುವಂತೆ ಸೂಚಿಸಿದ್ದ. ದೂರುದಾರರು ಅದರಂತೆ ಆ ಲಿಂಕ್ ಅನ್ನು ಒತ್ತಿ ತಮ್ಮ ಮೊಬೈಲ್‌ನಲ್ಲಿ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಕ್ರೇಡಿಟ್ ಕಾರ್ಡ್ ಮೂಲಕ ಹಣ ಪಾವತಿಸಲು ಮುಂದಾಗಿ ವಿಫಲವಾಗಿದ್ದರು. ಬಳಿಕ ವಂಚಕ ಕ್ಯೂಆರ್ ಕೋಡ್ ಕಳುಹಿಸಿದ್ದ. ಅದನ್ನು ಸ್ಕ್ಯಾನ್ ಮಾಡಿದ್ದು, ಪಾರ್ಥಸಾರಥಿ ಅವರ ಖಾತೆಯಿಂದ ಹಂತ ಹಂತವಾಗಿ 3.5 ಲಕ್ಷ ರು. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ಬಳಿಕ ವಂಚನೆಗೆ ಒಳಗಾಗಿರುವುದು ತಿಳಿದ ಪಾರ್ಥಸಾರಥಿ ಅವರು ಜೀವನ್ ಭೀಮನಗರ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ