
ಬೆಂಗಳೂರು(ಸೆ.20): ಅಕ್ರಮವಾಗಿ ಸಂಗ್ರಹಿಸಿದ್ದ ಅಳಿವಿನಂಚಿನಲ್ಲಿರುವ ಮಣ್ಣು ಮುಕ್ಕ ಹಾವನ್ನು(ಎರಡು ತಲೆ ಹಾವು) ಸಂರಕ್ಷಿಸಿರುವ ಬೆಂಗಳೂರು ಸಂಚಾರಿ ಅರಣ್ಯ ದಳದ ಸಿಬ್ಬಂದಿ, ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಯನ್ನು ಬಂಧಿಸಲು ಬಲೆ ಬೀಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಕೋಲಾರ ಜಿಲ್ಲೆಯಲ್ಲಿ ದಾಳಿ ನಡೆಸಿದ ಬೆಂಗಳೂರಿನ ಅರಣ್ಯ ಸಂಚಾರಿ ದಳದ ಸಿಬ್ಬಂದಿ, ಕೆಜಿಎಫ್ ತಾಲೂಕಿನ ಆ್ಯಂಡರ್‌ಸನ್ ಪೇಟೆಯ ಬಿಎಂ ರಸ್ತೆಯ ಆರ್ಫಾತ್ ಫಿಶ್ ಸ್ಟಾಲ್‌ನಲ್ಲಿ ಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಹಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸುಮಾರು 1.68 ಕೆಜಿ ತೂಕವಿರುವ 114 ಸೆಂಟಿ ಮೀಟರ್ ಉದ್ದದ ಹಾವನ್ನು ಒಂದು ವಾರಕ್ಕೂ ಹೆಚ್ಚು ದಿನಗಳಿಂದ ಸಂಗ್ರಹಿಸಿದ್ದು, ಸೂಕ್ತ ಆಹಾರ ನೀಡಿಲ್ಲ. ಹೀಗಾಗಿ ಅದರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಬನ್ನೇರುಘಟ್ಟದ ಪುನರ್ವಸತಿ ಕೇಂದ್ರದಲ್ಲಿರಿಸಿ ನಿಗಾ ವಹಿಸಲಾಗುತ್ತಿದೆ ಎಂದು ಸಂಚಾರಿ ದಳದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಫುಡ್ ಡೆಲಿವರಿ ನೆಪದಲ್ಲಿ ಎರಡು ತಲೆ ಹಾವು ಮಾರಾಟಕ್ಕೆ ಯತ್ನ: ಇಬ್ಬರು ಅರೆಸ್ಟ್
ಈ ಕುರಿತು ಮಾಹಿತಿ ಲಭ್ಯವಾದ ತಕ್ಷಣ ಅಂಗಡಿಯ ಮೇಲೆ ದಾಳಿ ನಡೆಸಲಾಗಿತ್ತು. ಆರೋಪಿ ಹಿಂಬಾಗಿಲಿನಿಂದ ಪರಾರಿಯಾಗಿದ್ದಾನೆ. ಅತನನ್ನು ಬಂಧಿಸಲು ಕಾರ್ಯಚರಣೆ ಮಾಡಲಾಗುತ್ತಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಗಂಗಾಧರ್ ‘ಕನ್ನಡಪ್ರಭ’ಕ್ಕೆ ತಿಳಿಸಿದರು.
ದೇಶದಲ್ಲಿ ಮಣ್ಣು ಮುಕ್ಕ ಹಾವಿನ ಸಂತತಿ ಅತ್ಯಂತ ವಿರಳ ಮತ್ತು ಅಳಿವಿನಂಚಿನಲ್ಲಿದೆ. ಇವುಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಿದೆ. ಮೂಢ ನಂಬಿಕೆಗಳ ಕಾರಣದಿಂದ ಈ ಹಾವನ್ನು ಅಕ್ರಮವಾಗಿ ಇಟ್ಟುಕೊಳ್ಳುವುದು, ಮಾರಾಟ ಮಾಡುವುದು, ಕೊಲ್ಲುವುದು ಸೇರಿದಂತೆ ಇತರೆ ಕಾನೂನು ಬಾಹಿರ ಕೃತ್ಯಗಳಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ವಿವರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ