
ಬೆಂಗಳೂರು (ಮೇ 12): ಎಸ್ಕಾರ್ಟ್ ಸರ್ವೀಸ್ ಪಡೆಯಲು ಆನ್‌ಲೈನ್‌ನಲ್ಲಿ ಹುಡುಕಾಟ ನಡೆಸಿದ್ದ ಯುವಕನೊಬ್ಬ 'ಕಾಲ್ ಗರ್ಲ್' ಹೆಸರಿನಲ್ಲಿ ಅಪರಿಚಿತರಿಂದ ಭಾರಿ ಹಣ ಕಳೆದುಕೊಂಡ ಘಟನೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಿಹಾರದಿಂದ ಬೆಂಗಳೂರಿಗೆ ಉದ್ಯೋಗಕ್ಕಾಗಿ ಬಂದ 29 ವರ್ಷದ ಯುವಕನೊಬ್ಬ ಇತ್ತೀಚೆಗೆ ಆನ್‌ಲೈನ್‌ನಲ್ಲಿ ಎಸ್ಕಾರ್ಟ್ ಸೇವೆಗಾಗಿ ಹುಡುಕುತ್ತಿದ್ದ. ಈ ಸಂದರ್ಭ ‘KissBall Escort Services’ ಎಂಬ ಅಕ್ರಮ ವೆಬ್‌ಸೈಟ್ ಒಂದರ ಮೇಲೆ ಕ್ಲಿಕ್ ಮಾಡಿದ ಯುವಕ ಅದರಲ್ಲಿ ಉದ್ಯೋಗದ ಆಮಿಷದ ಜೊತೆಗೆ ಕಾಲ್ ಗರ್ಲ್ ಆಮಿಷಕ್ಕೂ ಒಳಗಾಗಿದ್ದಾನೆ. ಆರಂಭದಲ್ಲಿ ₹400 ಪಾವತಿಸಿ ಕಾಲ್‌ಗರ್ಲ್ ಅನ್ನು ಆನ್‌ಲೈನ್ ಬುಕ್ಕಿಂಗ್ ಮಾಡಿದ್ದನು.
ಬಳಿಕ, ತಮ್ಮ ಲೊಕೇಷನ್ ಶೇರ್ ಮಾಡಿದ ಯುವಕನಿಗೆ ಕೆಲ ಸಮಯದ ನಂತರ ಒಬ್ಬ ಅಪರಿಚಿತ ವ್ಯಕ್ತಿಯಿಂದ ಕರೆ ಬರುತ್ತದೆ. ಆ ವ್ಯಕ್ತಿ ಮುಂಗಡ ಹಣ, ಆಕ್ಟಿವೇಶನ್ ಕೋಡ್, ಜಿಎಸ್‌ಟಿ, ಕ್ಯಾನ್ಸಲೇಶನ್ ಚಾರ್ಜ್ ಮುಂತಾದ ನಾನಾ ಕಾರಣಗಳನ್ನು ಹೇಳುತ್ತಾ ಹಂತ ಹಂತವಾಗಿ ಹಣ ಪಾವತಿಸಲು ಹೇಳುತ್ತಾನೆ. ಈ ಎಲ್ಲ ಕ್ರಮಗಳನ್ನು ಅನುಸರಿಸುತ್ತಾ ಹೋದಂತೆ ಯುವಕನಿಗೆ ಭಯ ಶುರುವಾಗಿ ಯಾವ ಕಾಲ್ ಗರ್ಲ್ ಬೇಡ ಕ್ಯಾನ್ಸಲ್ ಮಾಡಿ ಎಂದಾಗಲೂ ದುಬಾರಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಮಾನ ಮರ್ಯಾದೆಗೆ ಹೆದರಿದ ಯುವಕ ತನ್ನ ಬಳಿ ಸಂಗ್ರಹ ಮಾಡಿಟ್ಟುಕೊಂಡಿದ್ದ ಲಕ್ಷಾಂತರ ರೂ. ಹಣವನ್ನು ಕಳೆದುಕೊಂಡಿದ್ದಾನೆ. ಒಟ್ಟಾರೆ, ಸೈಬರ್ ವಂಚಕರಿಗೆ 1.39 ಲಕ್ಷ ಹಣವನ್ನು ಪಾವತಿ ಮಾಡಿದ್ದಾನೆ.
ಹಂತ ಹಂತವಾಗಿ ವಂಚನೆ ಮಾಡಿದ್ದು ಹೇಗೆ?
ನಿಮಗೆ ಕಾಲ್ ಗರ್ಲ್ ಬೇಕಾದಲ್ಲಿ ಪ್ರಾರಂಭದಲ್ಲಿ ₹400 ಪಾವತಿಸಿ ಲಾಗಿನ್ ಆಗಿ.
ನೀವು ಹುಡುಗಿಯರನ್ನು ಆಯ್ಕೆ ಮಾಡಲು ಪ್ರಾರಂಭದಲ್ಲಿ ₹6,900 ರೂಪಾಯಿನಂತೆ 2 ಬಾರಿ ಪಾವತಿ.
ನಂತರ ₹9,500 ರೂಪಾಯಿ ಆಕ್ಟಿವೇಶನ್ ಕೋಡ್ ಹೆಸರಿನಲ್ಲಿ ಪಾವತಿ
ಹಣ ಜಾಸ್ತಿ ಆಗುತ್ತಿದ್ದಂತೆ ಬುಕ್ಕಿಂಗ್ ಕ್ಯಾನ್ಸಲ್ ಮಾಡಲು ಮುಂದಾದಾಗ ಮತ್ತೆ ಬೆದರಿಕೆ ಜೊತೆಗೆ ಹಣಕ್ಕೆ ಬೇಡಿಕೆ.
ಜಿಎಸ್‌ಟಿ, ಇನ್ಸುರೆನ್ಸ್ ಮುಂತಾದ ಕಾರಣಗಳಿಂದ ಇನ್ನಷ್ಟು ಹಣ ಪಾವತಿ.
ಅಂತಿಮವಾಗಿ, ಒಟ್ಟು ₹1.39 ಲಕ್ಷಕ್ಕಿಂತ ಅಧಿಕ ಹಣವನ್ನು ಯುವಕ ಕಳೆದುಕೊಂಡಿದ್ದಾನೆ.
ಆನ್‌ಲೈನ್‌ನಲ್ಲಿ ಇಷ್ಟೆಲ್ಲಾ ಹಣ ಕಳೆದುಕೊಂಡ ನಂತರ ಯುವಕ ತನಗೆ ಮೋಸವಾಗಿರುವುದನ್ನು ಅರಿತು ಕೂಡಲೇ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಇನ್ನು ಯುವಕ ದೂರು ನೀಡುವಾಗಲೂ ಆತನಿಗೆ ನಿರಂತರವಾಗಿ ಮೆಸೇಜ್‌ಗಳು ಬರುತ್ತಿದ್ದವು. 'ಹಣ ನೀಡದಿದ್ದರೆ ಲೀಗಲ್ ಅಡಚಣೆ ಆಗುತ್ತದೆ' ಎಂಬ ಹೆಸರಿನಲ್ಲಿ ಬೆದರಿಕೆ ಕೂಡ ನೀಡಲಾಗಿತ್ತು. ಈ ಮೂಲಕ ಆತಂಕಕ್ಕೆ ಒಳಗಾಗಿ ಯುವಕ ಮತ್ತಷ್ಟು ಹಣ ಪಾವತಿಸಿದ್ದಾನೆ. ಆದರೆ, ಹಣ ರಿಕವರಿ ಮಾಡುವ ಗೋಲ್ಡನ್ ಅವಧಿ ಮೀರಿ ಹೋಗಿತ್ತು. ಇದೀಗ ಕರೆ ಮಾಡಿದ ಆಧಾರದ ಮೇಲೆ ಪೊಲೀಸರು ಸೈಬರ್ ವಂಚಕರನ್ನು ಬಲೆಗೆ ಬೀಸಲು ಮುಂದಾಗಿದ್ದಾರೆ.
ಪೊಲೀಸರಿಂದ ಎಚ್ಚರಿಕೆ:
ಈ ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ. ಸಾರ್ವಜನಿಕರಿಗೆ, ಈ ರೀತಿಯ ಅಕ್ರಮ ವೆಬ್‌ಸೈಟ್‌ಗಳಿಗೆ ಪ್ರಭಾವಿತರಾಗಿ ಹಣ ಪಾವತಿಸಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ