
ಬೆಂಗಳೂರು (ಮೇ 12): ಮಹಿಳಾ ಸಹೋದ್ಯೋಗಿಗಳ ಭಾವಚಿತ್ರಗಳನ್ನು ಅಶ್ಲೀಲವಾಗಿ ಮಾರ್ಫಿಂಗ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವಿಕೃತಿ ಮೆರೆಯುತ್ತಿದ್ದ ಆರೋಪಿಯನ್ನು ಬೆಂಗಳೂರು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಮಡಿಕೇರಿ ಮೂಲದ ಆಶಿಸ್ ಮೋನಪ್ಪ ಎನ್ನಲಾಗಿದೆ.
ಘಟನೆ ವಿವರ: ಕೊಡಗು ಮೂಲದ ಆಶಿಸ್ ಮೋನಪ್ಪ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್ ವೇರ್ ಉದ್ಯೋಗಿಯಾಗಿ 2023ರಲ್ಲಿ ಸೇರಿದ್ದನು. ಆದರೆ 2024ರ ಜನವರಿಯಲ್ಲಿ ಉದ್ಯೋಗ ತ್ಯಜಿಸಿದನು. ನಂತರ ಹೊಸ ಕೆಲಸ ಹುಡುಕುವ ಉದ್ದೇಶದಿಂದ, ಹಳೆಯ ಸಹೋದ್ಯೋಗಿಗಳ ಸಂಪರ್ಕದಲ್ಲಿ ಇರುತ್ತಿದ್ದನು. ಈ ನಡುವೆ, ಪಾರ್ಟಿಯೊಂದರಲ್ಲಿ ಭಾಗವಹಿಸಿದ್ದ ವೇಳೆ ಮಹಿಳಾ ಸಹೋದ್ಯೋಗಿಯೊಬ್ಬರಿಂದ ಲ್ಯಾಪ್‌ಟಾಪ್ ಅನ್ನು ಕೆಲ ಕಾಲ ಉಪಯೋಗಿಸಲು ಪಡೆದಿದ್ದ. ಲ್ಯಾಪ್‌ಟಾಪ್‌ನಲ್ಲಿ ಸಂಗ್ರಹಿತವಾಗಿದ್ದ ಮಹಿಳೆಯರ ಖಾಸಗಿ ಭಾವಚಿತ್ರಗಳನ್ನು ಅವನು ಎಡಿಟ್ ಮಾಡಿ ಅಶ್ಲೀಲವಾಗಿ ಮಾರ್ಫಿಂಗ್ ಮಾಡಿದ್ದಾನೆ. ನಂತರ, ಇದನ್ನೆಲ್ಲಾ ಟೆಲಿಗ್ರಾಮ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾನೆ.
ಇನ್ನು ಆಶಿಸ್ ಮಹಿಳಾ ಸಹೋದ್ಯೋಗಿಯ ಲ್ಯಾಪ್‌ಟಾಪ್ ಅನ್ನು ಕೆಲ ದಿನಗಳ ನಂತರ ವಾಪಸ್ ಕೊಟ್ಟಿದ್ದಾನೆ. ಆಗ ಆ ಮಹಿಳೆ ಲ್ಯಾಪ್‌ಟಾಪ್ ಪರಿಶೀಲನೆ ಮಾಡಿದಾಗ ಅದರಲ್ಲಿದ್ದ ಎಲ್ಲ ಮಹಿಳಾ ಉದ್ಯೋಗಿಗಳ ಫೋಟೋ ಮಾರ್ಫಿಂಗ್ ಮಾಡಿದ ಫೋಲ್ಡರ್ ಪತ್ತೆಯಾಗಿದೆ. ಇದನ್ನು ನೋಡಿದ ಮಹಿಳೆ ಶಾಕ್‌ಗೆ ಒಳಗಾಗಿದ್ದಾರೆ. ಇದಾದ ತಕ್ಷಣ ಆರೋಪಿ ಆಶಿಸ್ ಮೋನಪ್ಪನನ್ನು ಕರೆದು ಪ್ರಶ್ನಿ ಮಾಡಿದ್ದಾರೆ. ಆದರೆ, ಇದರಿಂದ ತೀವ್ರ ಆತಂಕಗೊಂಡ ಆರೋಪಿ ತನ್ನ ಮೊಬೈಲ್ ಫೋನ್‌ನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.
ಪೊಲೀಸ್ ದಾಳಿ ಮತ್ತು ಬಂಧನ:
ಈ ಕುರಿತು ಮಹಿಳೆ ಬಾಣಸವಾಡಿ ಠಾಣೆಯಲ್ಲಿ ದೂರು ದಾಖಲಿಸಿದ ಮೇಲೆ, ಪೂರ್ವ ವಿಭಾಗದ ಡಿಸಿಪಿ ದೇವರಾಜ್ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯಿಂದ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಈಗಾಗಲೇ ಆರೋಪಿಯು ಮೂರು ಮಹಿಳಾ ಸಹೋದ್ಯೋಗಿಗಳ ಭಾವಚಿತ್ರಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಅಪ್ಲೋಡ್ ಮಾಡಿರುವುದೂ ಬಯಲಾಗಿದೆ. ಇದೀಗ ಅವರ ಸಂಬಂಧಿತ ಫೋಟೋಗಳನ್ನು ಡಿಲೀಟ್ ಮಾಡುವ ಪ್ರಕ್ರಿಯೆಯನ್ನು ಮಾಡಲಾಗುತ್ತಿದೆ.
ಡಿಜಿಟಲ್ ಸಾಧನ ಕೊಡುವ ಮುನ್ನ ಎಚ್ಚರ:
ಈ ಘಟನೆ ಇನ್ನೊಮ್ಮೆ ಡಿಜಿಟಲ್ ಖಾಸಗಿತನದ ಅಪಾಯವನ್ನು ತೋರಿಸಿದೆ. ಸಹೋದ್ಯೋಗಿಗಳ ವಿಶ್ವಾಸಕ್ಕೆ ಧಕ್ಕೆ ತರುವಂತಹ ನಡೆ ಯಾವುದೇ ಪರಿಸ್ಥಿತಿಯಲ್ಲೂ ಕ್ಷಮೆಯಲ್ಲ. ಸಾಮಾಜಿಕ ಜವಾಬ್ದಾರಿ ಮತ್ತು ನೈತಿಕತೆಯ ಕೊರತೆಯು ಇಂತಹ ಘಟನೆಗಳಿಗೆ ಕಾರಣವಾಗುತ್ತಿದೆ. ಪೊಲೀಸರು ಎಲ್ಲಾ ಯುವತಿಯರಿಗೆ ಎಚ್ಚರಿಕೆಯ ಸಂದೇಶವನ್ನೂ ನೀಡಿದ್ದಾರೆ. ಡಿಜಿಟಲ್ ಸಾಧನಗಳನ್ನು ಇತರರಿಗೆ ನೀಡುವಾಗ ಶ್ರದ್ದೆ ವಹಿಸಬೇಕು ಮತ್ತು ಖಾಸಗಿ ಮಾಹಿತಿಗಳನ್ನು ಸದಾ ಸುರಕ್ಷಿತವಾಗಿಡಬೇಕು ಎಂದು ಪೊಲೀಸ್ ಅಧಿಕಾರಿ ಮನವಿ ಮಾಡಿದ್ದಾರೆ.
ಬಾಣಸವಾಡಿ ಠಾಣೆಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಒಬ್ಬರು ದೂರು ಕೊಟ್ಟಿದ್ದರು. ಎಕ್ಸ್ ಎಂಪ್ಲಾಯಿ ಲೇಡಿಸ್ ಫೋಟೋವನ್ನ ಅಶ್ಲೀಲವಾಗಿ ಎಡಿಟ್ ಮಾಡಿದ್ದರು. ಲ್ಯಾಪ್ ಟ್ಯಾಪ್ ಹಾಗೂ ಫೋನ್ ನಲ್ಲಿ ನೋಡಿದಾಗ ಗೊತ್ತಾಗಿದೆ. ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನ ಬಂಧಿಸಲಾಗಿದೆ. ಒಟ್ಟು 3 ಜನ ಲೇಡಿಸ್ ಹಾಗೂ ಈತ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ಯುವತಿಯ ಲ್ಯಾಪ್ ಟ್ಯಾಪ್ ಪಡೆದಿದ್ದ ಮೋನಪ್ಪ, ಬಳಿಕ ಲ್ಯಾಪ್ ಟಾಪ್ ನಲ್ಲಿದ್ದ ಫೋಟೋವನ್ನ ಎಡಿಟ್ ಮಾಡಿ ಮಾರ್ಫಿಂಗ್ ಮಾಡಿದ್ದನು. ಬಳಿಕ ಅದನ್ನ ಟೆಲಿಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾನೆ. ಸದ್ಯ ಆರೋಪಿಯನ್ನ ಬಂಧಿಸಿ ವಿಚಾರಣೆ ಮಾಡಲಾಗುತ್ತಿದೆ.
- ದೇವರಾಜ್, ಪೂರ್ವ ವಿಭಾಗದ ಡಿಸಿಪಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ