Latest Videos

ಕೇವಲ 2000 ರೂ.ಗೆ ಬೆಂಗಳೂರು ಯುವತಿ ಪ್ರಭುಧ್ಯಾಳ ಮರ್ಡರ್

By Sathish Kumar KHFirst Published May 24, 2024, 1:34 PM IST
Highlights

ಬೆಂಗಳೂರಿನ ಸುಬ್ರಹ್ಮಣ್ಯಪುರದಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಕಾಲೇಜು ವಿದ್ಯಾರ್ಥಿನಿ ಪ್ರಭುದ್ಯಾ, ಕೇವಲ 2000 ರೂ.ಗೆ ಕೊಲೆ ಆಗಿದ್ದಾಳೆ ಎಂಬ ಸತ್ಯಾಂಶ ಬಹಿರಂಗವಾಗಿದೆ.

ಬೆಂಗಳೂರು (ಮೇ 24): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೆಲವು ದಿನಗಳ ಹಿಂದೆ ಸುಬ್ರಹ್ಮಣ್ಯಪುರದ ಮನೆಯೊಂದರಲ್ಲಿ ಯುವತಿ ಪ್ರಭುಧ್ಯಾ ಕೈ ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಆದರೆ, ಮೃತ ಯುವತಿ ತಾಯಿ ಇದು ಕೊಲೆ ಎಂದ ದೂರು ಕೊಟ್ಟಿದ್ದರು. ಈ ಬಗ್ಗೆ ತನಿಖೆ ಮಾಡಿದ ಪೊಲೀಸರಿಗೆ ಸ್ಫೋಟಕ ಸತ್ಯ ಬಹಿರಂಗವಾಗಿದ್ದು, ಕೇವಲ 2000 ರೂ.ಗಾಗಿ ಅಪ್ರಾಪ್ತ ಯುವಕನೊಬ್ಬ ಮನೆಗೆ ನುಗ್ಗಿ ಕೊಲೆ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ. 

ಹೌದು, ಬೆಂಗಳೂರಿನ ಸುಬ್ರಹ್ಮಣ್ಯಪುರದ ಮನೆಯೊಂದರಲ್ಲಿ ಕೈ ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಯುವತಿ ಪ್ರಭುಧ್ಯಾಳದ್ದು, ಆತ್ಮಹತ್ಯೆಯಲ್ಲ ಕೊಲೆ ಎಂಬುದು ಪತ್ತೆಯಾಗಿದೆ. ಅಪ್ರಾಪ್ತ ಯುವಕ ಪ್ರಭುಧ್ಯಾಳ ಪರ್ಸ್‌ನಿಂದ ಕೇವಲ 2000 ರೂ. ಹಣವನ್ನು ಕದ್ದಿರುವುದೇ ಈ ಕೊಲೆಗೆ ಕಾರಣ ಎಂಬುದು ಮತ್ತೊಂದು ಶಾಕಿಂಗ್ ವಿಚಾರವಾಗಿದೆ. ಈಗ ಅಂತಹ ನೂರಾರು  2000 ರೂ. ನೋಟುಗಳನ್ನು ಕೊಡುತ್ತೇವೆ ಮಗಳನ್ನು ಬದುಕಿಸಿಕೊಡು ಎಂದರೂ ಪ್ರಭುಧ್ಯಾಳನ್ನು ಬದುಕಿಸಲು ಯಾರಿಂದಲೂ ಸಾಧ್ಯವಿಲ್ಲದಂತಾಗಿದೆ.

ಪ್ರಭುಧ್ಯಾಳ ಕೊಲೆಯ ಘಟನೆ ಬಿಚ್ಚಿಟ್ಟ ಪೊಲೀಸರು: ಸುಬ್ರಹ್ಮಣ್ಯಪುರದಲ್ಲಿ ಕೊಲೆಯಾದ ಯುವತಿ ಪ್ರಭುಧ್ಯಾ ಸ್ವತಃ ಆಕೆಯ ತಮ್ಮನ ಸ್ನೇಹಿತನಿಂದಲೇ ಕೊಲೆಯಾಗಿದ್ದಾಳೆ. ಮನೆಯ ಬಳಿ ಆಟವಾಡುವಾಗ ಯುವತಿ ಪ್ರಭುಧ್ಯಾಳ ತಮ್ಮನ ಕನ್ನಡಕವನ್ನು ಆತನ ಸ್ನೇಹಿತ ಒಡೆದು ಹಾಕಿದ್ದನು. ಆಗ ನೀನು ನನಗೆ ಕನ್ನಡಕ ರಿಪೇರಿ ಮಾಡಿಸಿಕೊಡು, ಇಲ್ಲವೆಂದರೆ ಹೊಸ ಕನ್ನಡಕ ಕೊಡಿಸಬೇಕು. ಇಲ್ಲವೆಂದರೆ ನಿಮ್ಮ ಅಪ್ಪ ಅಮ್ಮನಿಗೆ ಹೇಳುತ್ತೇನೆ ಎಂದು ಬೆದರಿಸಿದ್ದಾನೆ. ಇದರಿಂಬ ಭಯಗೊಂಡ ಪ್ರಭುಧ್ಯಾಳ ತಮ್ಮನ ಸ್ನೇಹಿತ (ಕೊಲೆ ಆರೋಪಿ) ಹಣಕ್ಕಾಗಿ ಪರಿತಪಿಸಿ ಕೊನೆಗೆ ಪ್ರಭುಧ್ಯಾಳ ಪರ್ಸ್‌ನಿಂದ 2000 ರೂ. ಹಣವನ್ನು ಕದ್ದುಕೊಂಡು ಹೋಗಿ ಆಕೆಯ ತಮ್ಮನಿಗೆ ಕೊಟ್ಟಿದ್ದಾನೆ.

ಬೆಂಗಳೂರು ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು; ಗಿಣಿಯಂತೆ ಸಾಕಿದ್ದ ಮಗಳನ್ನು ಯಾರೋ ಕೊಲೆ ಮಾಡಿದ್ದಾರೆ-ತಾಯಿ

ಆದರೆ, ಪ್ರಭುಧ್ಯಾಳ ಪರ್ಸ್‌ನಿಂದ ಆಕೆಯ ತಮ್ಮನ ಸ್ನೇಹಿತ ಹಣ ಕದಿಯುವುದನ್ನು ನೋಡಿದ ಪ್ರಭುಧ್ಯಾ ನಂತರ ಆತನನ್ನು ಕರೆದು ಬೈದಿದ್ದಾಳೆ. ಪುನಃ ಹಣವನ್ನು ವಾಪಸ್ ಕೊಡುವಂತೆ ಕೇಳಿದ್ದಾಳೆ. ಹಣ ವಾಪಾಸು ಕೊಡದಿದ್ದರೇ ನಿಮ್ಮ ಅಪ್ಪ-ಅಮ್ಮಗೆ ಹೇಳ್ತಿನಿ ಎಂದಿದ್ದಳು. ಆದರೆ, ಇದರಿಂದ ಹಣ ಕೊಡಲಾಗದೇ ಒಂದು ದಿನ ಸಮಯ ಕೇಳಿದ್ದಾನೆ. ಇನ್ನು ಪ್ರಭುಧ್ಯಾಳ ತಮ್ಮನೊಂದಿಗೆ ಆಟವಾಡಲು ಪದೇ ಪದೇ ಅವರ ಮನೆಗೆ ಬರುತ್ತಿದ್ದ ಯುವಕನಿಗೆ ಪುನಃ ಹಣ ಕೊಡುವಂತೆ ಕೇಳಿದ್ದಾಳೆ. ಇದರಿಂದ ರೋಸಿ ಹೋಗಿ ಕೊಲೆ ಮಾಡಲು ನಿರ್ಧರಿಸಿದ್ದಾನೆ.

ಅದೊಂದು ದಿನ ಪ್ರಭುಧ್ಯಾಳ ತಮ್ಮ ಮತ್ತು ಅಮ್ಮ ಇಲ್ಲದ ವೇಳೆ ಮನೆಗೆ ಬಂದ ಅಪ್ರಾಪ್ತ ಯುವಕ ಆಕೆಯ ಬಳಿ ಕ್ಷಮೆ ಕೇಳಲು ಪ್ರಭುಧ್ಯಾನ ಕಾಲಿಗೆ ಬಿದ್ದಿದ್ದಾನೆ. ಈ ವೇಳೆ ಪ್ರಭುಧ್ಯಾಳ ಕಾಲನ್ನು ಎಳೆದಿದ್ದಾನೆ. ದಿಢೀರನೇ ಕೆಳಗೆ ಬಿದ್ದ ಪ್ರಭುಧ್ಯಾ ತಲೆಗೆ ಪೆಟ್ಟು ಬಿದ್ದು ಎಚ್ಚರ ತಪ್ಪಿದ್ದಾಳೆ. ಆಗ ಹರಿತವಾದ ಹೊಸ ಬ್ಲೇಡ್‌ನಿಂದ ಪ್ರಭುಧ್ಯಾಳ ಕೈಯನ್ನು ಕೊಯ್ದಿದ್ದಾನೆ. ಜೊತೆಗೆ, ಕುತ್ತಿಗೆ ಭಾಗದಲ್ಲಿಯೂ ಬ್ಲೇಡ್‌ನಿಂದ ಕೊಯ್ದು ಪುನಃ ಆ ಬ್ಲೇಡ್‌ ಅನ್ನು ಪ್ರಭುಧ್ಯಾಳ ಕೈಲಿಟ್ಟು ಪರಾರಿ ಆಗಿದ್ದಾನೆ.

ನಂತರ ಪ್ರಭುಧ್ಯಾಳ ಅಮ್ಮ ಬಂದು ಮನೆಗೆ ನೋಡಿದಾಗ ಕೈ ಕೊಯ್ದುಕೊಂಡ ಸ್ಥಿತಿಯಲ್ಲಿ ಮಗಳು ಸಾವನ್ನಪ್ಪಿದ್ದನ್ನು ಕಂಡು ರೋದಿಸಿದ್ದಾರೆ. ನಂತರ, ಮನೆ ಪರಿಶೀಲಿಸಿದಾದ ಮನೆಯ ಹಿಂಬಾಗಿಲು ತೆರೆದಿತ್ತು. ಮೊದಲು ಮನೆಯೊಳಗೆ ಬಂದಾಗ ಆಕೆಯ ಮೊಬೈಲ್‌ ಇತ್ತು. ಹೊರಗೆ ಹೋಗಿ ಜನರನ್ನು ಕರೆದು ತರುವಷ್ಟರಲ್ಲಿ ಮೊಬೈಲ್ ಇರಲಿಲ್ಲ. ಇದರಿಂದ ಇದು ಕೊಲೆ ಎಂದು ಪ್ರಭುಧ್ಯಾಳ ತಾಯಿ ಪೊಲೀಸರಿಗೆ ದೂರು ನೀಡಿದ್ದಳು. ನಂತರ ತನಿಖೆ ಮಾಡಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

ಬೆಂಗಳೂರಿನ ವಿದ್ಯಾರ್ಥಿನಿ ಪ್ರಬುದ್ಧ ಸಾವಿನ ಪ್ರಕರಣಕ್ಕೆ ಟ್ವಿಸ್ಟ್! ಅಪ್ರಾಪ್ತ ಆರೋಪಿ ಬಂಧನ

ಆತ್ಮಹತ್ಯೆಗೆ ಯತ್ನಿಸಿದ್ದನ್ನೇ ಬಂಡವಾಳ ಮಾಡಿಕೊಂಡಿದ್ದ ಅಪ್ರಾಪ್ತ: ಕೊಲೆಯಾದ ಯುವತಿ ಪ್ರಭುಧ್ಯಾ ಈಗಾಗಲೇ ಒಮ್ಮೆ ಮನೆಯ ವಿಚಾರಕ್ಕೆ ಆತ್ಮಹತ್ಯೆಗೆ ಯತ್ನಿಸಿ ಕೈ ಕೊಯ್ದುಕೊಂಡಿದ್ದಳು. ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಅಪ್ರಾಪ್ತ ಯುವಕ 2000 ರೂ. ಹಣ ಕೇಳಿ ಹಿಂಸೆ ಕೊಡುತ್ತಿದ್ದ ಪ್ರಭುಧ್ಯಾಳನ್ನು ಅದೇ ಜಾಗದಲ್ಲಿ ಬ್ಲೇಡ್‌ನಿಂದ ಕೊಯ್ಯಲು ನಿರ್ಧರಿಸಿದ್ದನು. ತನ್ನ ಯೋಜನೆಯಂದು ಒಬ್ಬಳೇ ಇರುವಾಗ ಮನೆಗೆ ಬಂದು ಕ್ಷಮೆ ಕೇಳುವಂತೆ ನಾಟಕವಾಡಿ ಪ್ರಭುಧ್ಯಾಳ ಕೈ ಹಾಗೂ ಕುತ್ತಿಗೆ ಕೊಯ್ದು ಪರಾರಿ ಆಗಿದ್ದನು. ಇನ್ನು ಕೈ ಕೊಯ್ದಿದ್ದಕ್ಕೆ ತೀವ್ರ ರಕ್ತ ಸ್ರಾವವಾಗಿ ಯುವತಿ ಪ್ರಭುಧ್ಯಾ ಸಾವಿಗೀಡಾಗಿದ್ದಳು. ಈಗ ಕೊಲೆ ಆರೋಪಿ ಅಪ್ರಾಪ್ತ ಯುವಕನ್ನು ಬಂಧಿಸಿದ ಸುಬ್ರಹ್ಮಣ್ಯ ಪುರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

click me!