₹5 ಕೋಟಿ ಮೌಲ್ಯದ ಸೈಟಿನ ಒಡೆಯನನ್ನು ಫ್ರೆಂಡ್‌ಶಿಪ್ ಹೆಸರಲ್ಲಿ ಕೊಲೆಗೈದ ರಿಯಲ್ ಎಸ್ಟೇಟ್ ಉದ್ಯಮಿಗಳು!

By Sathish Kumar KH  |  First Published Jan 16, 2025, 6:50 PM IST

ಬೆಂಗಳೂರಿನ ಜಯನಗರದಲ್ಲಿ 5 ಕೋಟಿ ರೂ. ಮೌಲ್ಯದ ಸೈಟ್‌ನ ಒಡೆಯನಾಗಿದ್ದ ವೈದ್ಯ ದಂಪತಿಯ ಮಗ ಆನಂದ್‌ನನ್ನು ರಿಯಲ್ ಎಸ್ಟೇಟ್ ಉದ್ಯಮದ ಕೆಲ ದುರುಳರು ಕೊಲೆಗೈದು ಕಾವೇರಿ ನದಿಗೆ ಎಸೆದಿದ್ದಾರೆ. ಈ ಘಟನೆ 6 ತಿಂಗಳ ನಂತರ ಬೆಳಕಿಗೆ ಬಂದಿದ್ದು, ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.


ವರದಿ- ಕಿರಣ್.ಕೆ.ಎನ್. ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು

ಬೆಂಗಳೂರು (ಜ.16): ಸಿಲಿಕಾನ್ ಸಿಟಿ ಬೆಂಗಳೂರಿನ ಜಯನಗರದಲ್ಲಿ ಸುಮಾರು 5 ಕೋಟಿ ರೂ. ಮೌಲ್ಯದ ಸೈಟ್‌ನಲ್ಲಿ ವಾಸವಾಗಿದ್ದ ವೈದ್ಯ ದಂಪತಿ ಅಕಾಲಿಕ ಸಾವಿಗೀಡಾಗುತ್ತಾರೆ. ಅವರಿಗಿದ್ದ ಒಬ್ಬನೇ ಒಬ್ಬ ಅವಿವಾಹಿತ ಮಗನ ಸ್ನೇಹ ಬೆಳೆಸಿದ ರಿಯಲ್ ಎಸ್ಟೇಟ್ ಉದ್ಯಮದ ಕೆಲವು ದುರುಳರು, ಕೇವಲ 3 ತಿಂಗಳಲ್ಲಿ ಆತನನ್ನು ಕೊಲೆ ಮಾಡಿ ಅನಾಥ ಶವವಾಗಿ ಕಾವೇರಿ ನದಿಗೆ ಬೀಸಾಡುತ್ತಾರೆ. ಈ ಘಟನೆ ನಡೆದು 6 ತಿಂಗಳ ನಂತರ ಪೊಲೀಸರಿಗೆ ಕೊಲೆಯ ವಿಚಾರ ಗೊತ್ತಾಗಿದೆ.

Tap to resize

Latest Videos

ತಮಿಳುನಾಡಿನಿಂದ ಬಂದ ಸೋಮಸುಂದರ್ ಅವರು ಬೆಂಗಳೂರಿನಲ್ಲಿ ವೈದ್ಯ ವೃತ್ತಿ ಮಾಡುತ್ತಾ ನೆಲೆಸಿರುತ್ತಾರೆ. ಅವರು ಜಯಲಕ್ಷ್ಮಿ ಎನ್ನುವ ವೈದ್ಯೆಯನ್ನು ಮದುವೆಯಾಗಿ ಜಯನಗರ 7ನೇ ಹಂತದಲ್ಲಿ 30x40 ಅಳತೆಯ ನಿವೇಶನ ಖರೀದಿಸಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಾರೆ. ಅವರಿಗೆ ಇಬ್ಬರು ಮಕ್ಕಳಿರುತ್ತಾರೆ. ಹಿರಿಯ ಮಗಳು ಸುಮಾ ಮತ್ತು ಕಿರಿಯ ಮಗ ಆನಂದ್‌ ಇರುತ್ತಾರೆ. ಸುಖವಾಗಿ ಸಂಸಾರ ನಡೆಯುತ್ತಿರುತ್ತದೆ. ಆದರೆ, ಮಗಳನ್ನು ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿದ ನಂತರ ಆನಂದ್‌ಗೆ ಮದುವೆ ಮಾಡುವಷ್ಟರಲ್ಲಿ ಇಬ್ಬರೂ ಅನಾರೋಗ್ಯದಿಂದ ಸಾವನ್ನಪ್ಪುತ್ತಾರೆ. ಆದರೆ, ತಮ್ಮ ಮಗನಿಗೆ ಒಂದು ಕೆಲಸ ಅಂತಾ ಏನೂ ಮಾಡದೇ ಆತನಿಗಾಗಿ ಒಂದಿಷ್ಟು ಹಣ ಹಾಗೂ ಕೋಟ್ಯಾಂತರ ಬೆಲೆ ಬಾಳುವ ಸೈಟ್‌ನಲ್ಲಿ ಚಿಕ್ಕ ಮನೆಯನ್ನು ಬಿಟ್ಟು ಹೋಗಿದ್ದರು.

ತಂದೆ-ತಾಯಿ ಕಳೆದುಕೊಂಡಿದ್ದ ಆನಂದ್‌ಗೆ ಅಕ್ಕ ಸುಮಾ ಮಾತ್ರ ನೆರವಾಗಿದ್ದಳು. ಆದರೆ, ಗಂಡನ ಮನೆಯಲ್ಲಿದ್ದ ಅಕ್ಕ ಸುಮಾ ಕೂಡ ಅನಾರೋಗ್ಯದ ಕಾರಣ ಇತ್ತೀಚೆಗೆ ತೀರಿ ಹೋಗುತ್ತಾರೆ. ಆಗ ಆನಂದ್ ಒಬ್ಬಂಟಿಯಾಗಿ ಅಪ್ಪ ಕೂಡಿಟ್ಟ ಎಲ್ಲ ಹಣವನ್ನು ಖರ್ಚು ಮಾಡಿಕೊಳ್ಳುತ್ತಾನೆ. ನಂತರ, ತನ್ನ ಖರ್ಚಿಗೆ ಹಾಗೂ ಊಟಕ್ಕೂ ಗತಿಯಿಲ್ಲದೇ ಪರದಾಡುವ ಸ್ಥಿತಿ ಎದುರಾಗುತ್ತದೆ. ಆಗ ತನ್ನ ಮನೆಯನ್ನೇ ಮಾರಾಟ ಮಾಡಲು ಮುಂದಾಗುತ್ತಾನೆ. ಪೊಲೀಸರ ಮಾಹಿತಿ ಪ್ರಕಾರ ಆನಂದ್ ಕೂಡ ವೈದ್ಯ ಎಂದು ಹೇಳಲಾಗುತ್ತಿದ್ದರೂ, ಮತ್ತೊಂದು ಮಾಹಿತಿ ಪ್ರಕಾರ ಆತ ಕೇವಲ 3ನೇ ತರಗತಿ ಓದಿದ್ದ ಎಂದು ತಿಳಿದುಬಂದಿದೆ. ಮೊದಲೇ ಮುಗ್ದನ ರೀತಿ ಇದ್ದ ಆನಂದ್ ಒಬ್ಬಂಟಿಯಾಗಿದ್ದು, ಆತನ ಅಮಾಯಾಕತೆಯನ್ನು ದುರುಪಯೋಗ ಪಡಿಸಿಕೊಳ್ಳಲು ಕೆಲವರು ಕಾಯುತ್ತಿದ್ದರು.

ಆನಂದ್ ಒಬ್ಬಂಟಿ ಎಂಬುದು ಯಾವಾಗ ಗೊತ್ತಾಯಿತೋ ಆಗ ರಿಯಲ್ ಎಸ್ಟೇಟ್ ಖದೀಮರ ಕಣ್ಣು ಆನಂದ್ ಮನೆಯ ಮೇಲೆ ಬಿದ್ದಿತ್ತು. ಬೆಂಗಳೂರಿನ ಜಯನಗರದಲ್ಲಿ 30x40 ಸೈಟ್ ಬೆಲೆಯೇ 4-5 ಕೋಟಿ ಬಾಳುತ್ತದೆ. ಆನಂದ್‌ ಯಾವಾಗ ಮನೆ ಹಾಗೂ ಸೈಟ್ ಮಾರಾಟ ಮಾಡಬೇಕು ಎಂದು ನಿರ್ಧರಿಸುತ್ತಾನೆಯೋ ಆಗ ರಿಯಲ್ ಎಸ್ಟೇಟ್ ಖದೀಮರು ಎಂಟ್ರಿ ಕೊಡುತ್ತಾರೆ. ಆನಂದ್‌ಗೆ ಯಾರೂ ಇಲ್ಲ, ಆತನಿಗೆ ಏನಾದರೂ ಯಾರೂ ಕೇಳುವುವವರಿಲ್ಲ ಎಂದು ಆತನ ಮನೆಯನ್ನು ಕಿತ್ತುಕೊಳ್ಳಲು ಪ್ಲಾನ್ ಮಾಡುತ್ತಾರೆ. ರಿಯಲ್‌ ಎಸ್ಟೇಟ್ ಉದ್ಯಮದ 3 ಖದೀಮರು ಆನಂದ್‌ಗೆ ಮನೆ ಮಾರಾ ಮಾಡಿಸುವುದಾಗಿ ಹೇಳಿ ಆತನ ಮನೆಗೆ, ಊಟ-ತಿಂಡಿ ತಂದು ಕೊಡುತ್ತಾ ಸ್ನೇಹ ಬೆಳೆಸಿಕೊಳ್ಳುತ್ತಾರೆ. ನಂತರ ರೆಸ್ಟೋರೆಂಟ್, ರೆಸಾರ್ಟ್ ಹಾಗೂ ದೇಶದಾದ್ಯಂತ ಟ್ರಿಪ್‌ಗೆ ಆನಂದ್‌ನನ್ನು ಕರೆದುಕೊಂಡು ಹೋಗುತ್ತಾರೆ. ಆನಂದ್ ಖುಷಿಯಾಗಿದ್ದನು. 

ಇದನ್ನೂ ಓದಿ: ಬೆಂಗಳೂರು ಮತ್ತೊಬ್ಬ ಟೆಕ್ಕಿ ಸಾವು; ಮಾವನ ಕಾಮದಾಟಕ್ಕೆ ಬಲಿಯಾದ ಮದುವೆಯಾಗದ ಸೊಸೆ!

ಈ ಖದೀಮರು ಆನಂದ್‌ನ ಸೈಟ್ ಅನ್ನು 90 ಲಕ್ಷ ರೂ.ಗೆ ಮಾರಾಟ ಮಾಡಿಸುವ ಆಫರ್ ತರುತ್ತಾರೆ. ಇದಕ್ಕೆ ಆನಂದ್ ಕೂಡ ಒಪ್ಪಿಕೊಳ್ಳುತ್ತಾನೆ. ಆಗ ರಿಯಲ್ ಎಸ್ಟೇಟ್ ಏಜೆಂಟ್‌ಗಳು ಸೈಟ್ ಮಾರಾಟ ಮಾಡಿದ ಆನಂದ್‌ಗೆ 45 ಲಕ್ಷ ರೂ. ಹಣವನ್ನೂ ಕೊಡುತ್ತಾರೆ. ಆದರೆ, ಹಣ ಮಾತ್ರ ಆನಂದ್‌ನ ಕೈ ಸೇರುವುದಿಲ್ಲ. ಎಲ್ಲ ಹಣವನ್ನು ಇಟ್ಟುಕೊಂಡ ಆನಂದನ ಸ್ನೇಹಿತರು ಆತನನ್ನು 2024ರ ಜೂನ್ 19ರಂದು ಒಂದು ತಿಂಗಳ ಕಾಲ ಪ್ರವಾಸಕ್ಕೆಂದು ಕರೆದುಕೊಂಡು ಹೋಗಿ, ಆ ಸಮಯದಲ್ಲಿ ಮನೆ ಡೆಮಾಲಿಶ್ ಮಾಡಿಸಲು ಒಪ್ಪಿಗೆಯನ್ನೂ ಕೊಟ್ಟಿರುತ್ತಾರೆ. ಇವರು ಟ್ರಿಪ್‌ಗೆ ಹೋಗುತ್ತಿದ್ದಂತೆ ಆನಂದನ ಮನೆ ಒಡೆಯುವ ಕಾರ್ಯ ಆರಂಭವಾಗುತ್ತದೆ. ಇತ್ತ ಆನಂದ್ 3 ಜನ ಫ್ರೆಂಡ್ಸ್ ಜೊತೆ ಗೋವಾ ,ಕೇರಳ, ಮಡಕೇರಿ, ಮೈಸೂರು ಪ್ಯಾಲೇಸ್ ಅಂತ ಸುತ್ತಾಡುತ್ತಾ ಕಾಲ ಕಳೆಯುತ್ತಿದ್ದನು. ಈ ಹಂತಕರು ಕ್ಲೋಸ್ ಫ್ರಂಡ್ಸ್ ರೀತಿ ಪೋಟೋ ತೆಗೆಸಿಕೊಂಡಿದ್ದರು. ಸ್ವತಃ ಆನಂದ್ ಮಾತ್ರವಲ್ಲ ಯಾರಿಗೂ ಅನುಮಾನ ಬರದಂತೆ ಆನಂದನನ್ನು ಕರೆದುಕೊಂಡು ಸತ್ತಾಡಿದ್ದರು.

ಮೈಸೂರಿನ ಖಾಸಗಿ ಲಾಡ್ಜ್ ನಲ್ಲಿದ್ದ ಹಂತಕರು 2024ರ ಜುಲೈ 9ರ, ರಾತ್ರಿ 2.30ಕ್ಕೆ ಆನಂದ್ ಹಠ ಮಾಡಿದ್ದಕ್ಕೆ ಬೆಂಗಳೂರಿಗೆ ಹೋಗೋಣಾ ಅಂತ ಹೊರಗಡೆ ಕರೆದುಕೊಂಡು ಬರುತ್ತಾರೆ. ಆನಂದ್‌ಗೆ ಮನೆ ಡ್ಯಾಮಾಲಿಷನ್ ಮಾಡಿದ್ದಾರೆ ಎಂಬ ಸುಳಿವು ಹೇಗೋ ಸಿಕ್ಕಿತ್ತು. ಕೇವಲ 45 ಲಕ್ಷ ರೂ. ಕೊಟ್ಟು ಮನೆ ಡ್ಯಾಮಾಲಿಷನ್ ಮಾಡೋಕೆ ನಾನು ಬಿಡಲ್ಲ. ಪೂರ್ತಿ ಹಣ ಕೊಟ್ಟರೆ ಮಾತ್ರ ಮನೆ ಡ್ಯಾಮಾಲಿಷನ್‌ಗೆ ಬಿಡೋದು ಅನ್ನೋ ಮಾತನಾಡುತ್ತಿದ್ದನು. ಇದರಿಂದ ಸ್ವಲ್ಪ ವಿಚಲಿತರಾಗಿದ್ದ ಗೆಳೆಯರ ರೂಪದಲ್ಲಿದ್ದ ಹಂತಕರು ಮೈಸೂರಿನ ಇಲವಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಆರ್.ಎಸ್ ಡ್ಯಾಮಿನ ಸಾಗರಕಟ್ಟೆ ಬ್ರಿಡ್ಜ್ ಬಳಿ, ಕಾರಿನ ಮುಂದಿನ ಸೀಟಿನಲ್ಲಿ ಕುಳಿತ್ತಿದ್ದ ಆನಂದ್ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿ, ನೀರಿಗೆ ಬೀಸಾಡಿ ಬಂದಿದ್ದಾರೆ. 2 ದಿನಗಳ ಬಳಿಕ ಆನಂದ್ ಮೃತ ದೇಹ ಮೇಲೆ ತೆಲಿ ಬಂದಿದೆ. ಅದನ್ನು ನೋಡಿದ ಇಲವಾಲ ಪೊಲೀಸರು ಯುಡಿಆರ್ ಮಾಡಿ ಅಪರಿಚಿತ ಶವ ಅಂತ ಮಣ್ಣು ಮಾಡಿದ್ದಾರೆ. ಆದರೆ, ಆನಂದ್ ಡಿಎಎನ್‌ಎ ಮಾತ್ರ ತೆಗೆದಿಟ್ಟಿದ್ದರು.

ಆದರೆ, ಆನಂದ್‌ಗೆ ಇನ್ನೂ ಸಂಬಂಧಿಕರು ತಮಿಳುನಾಡಿನಲ್ಲಿ ಜೀವಂತವಾಗಿದ್ದರು. ಆನಂದನ ತಾಯಿ ಜಯಲಕ್ಷ್ಮಿ ಸಹೋದರ ತುಮಿಳುನಾಡು ಮೂಲದ ಮಾವ ರಘುಪತಿ ಹಾಗೂ ಅವರ ಪತ್ನಿ ಕೃಷ್ಣ ಬಾಯಿ ದಂಪತಿ ಆನಂದ್ ಜೊತೆ ಪ್ರತಿನಿತ್ಯ ಮಾತಾಡುತ್ತಿದ್ದರು. ಆನಂದ್ ಕೊಲೆಯಾದ ಬಳಿಕ ಪೋನ್ ಸ್ವೀಚ್ ಆಫ್ ಆಗಿತ್ತು. ಆನಂದ್ ಸಂಪರ್ಕಕ್ಕೆ ಸಿಗೋದಿಲ್ಲ. ಕೊನೆಗೆ ಬೆಂಗಳೂರಿಗೆ ಆನಂದ್ ಹುಡುಕಿಕೊಂಡು ಬಂದವರು ಬನಶಂಕರಿ ಪೊಲೀಸ್ ಠಾಣೆಗೆ ಕಂಪ್ಲೇಟ್ ಕೊಡುತ್ತಾರೆ. ಮಿಸಿಂಗ್ ಕಂಪ್ಲೇಟ್ ದಾಖಲಿಸಿದ ಬನಶಂಕರಿ ಪೊಲೀಸರು ಸ್ವಲ್ಪ ಹುಡುಕಾಟ ನಡೆಸಿ, ಆತ ಸಿಗಲಿಲ್ಲವೆಂದು ಸುಮ್ಮನಾಗುತ್ತಾರೆ. ಆಗ ವಕೀಲರ ಮೂಲಕ ಕರ್ನಾಟಕ ಆನಂದನ ಮಾವ ರಘುಪರಿ ಹೈಕೋರ್ಟ್ ಮೆಟ್ಟಿಲೇರಿ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಲ್ಲಿಸುತ್ತಾರೆ. 

ಇದನ್ನೂ ಓದಿ: Bengaluru: 6 ವರ್ಷದ ಬಾಲಕಿಯ ರೇಪ್‌ & ಮರ್ಡರ್‌, ದಾರುಣ ಘಟನೆಗೆ ಸಾಕ್ಷಿಯಾದ ರಾಜಧಾನಿ!

ಅರ್ಜಿ ವಿಚಾರಣೆ ನಡೆದು ಹೈಕೋರ್ಟ್ ಆನಂದ್ ಹುಡುಕಿ ತರುವಂತೆ ಬನಶಂಕರಿ ಪೊಲೀಸರಿಗೆ ಆದೇಶ ಮಾಡುತ್ತದೆ. ಆಗ ಮತ್ತೆ ಬನಶಂಕರಿ ಪೊಲೀಸರು ಆನಂದ್ ಗಾಗಿ ಹುಡುಕಾಟ ಆರಂಭಿಸುತ್ತಾರೆ. ಬೆಂಗಳೂರು ನಗರದ ದಕ್ಷಿಣ ವಿಭಾಗ ಡಿಸಿಪಿ ಲೋಕೇಶ್ ಬಿ. ಮಾರ್ಗದರ್ಶನದಲ್ಲಿ, ಎಸಿಪಿ ನಾರಾಯಾಣ್ ಸ್ವಾಮಿ, ಬನಶಂಕರಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಕೊಟ್ರೇಶಿ ಹಾಗೂ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಪ್ರವೀಣ್ ಹೊಸೂರ ತಂಡ ಕೇಸ್ ತನಿಖೆ ಆರಂಭಿಸುತ್ತದೆ. ಪೊಲೀಸರು ಆನಂದ್ ಪೂರ್ವಾಪರ ತಿಳಿದುಕೊಳ್ಳುತ್ತಾ, ಟೆಕ್ನಿಕಲ್ ಎವಿಡೆನ್ಸ್ ಮೂಲಕ ತನಿಖೆ ಕೈಗೊಂಡಾಗ ಆನಂದ್ ಜೊತೆಗಿದ್ದ 3 ಸ್ನೇಹಿತರ ಸುಳಿವು ಸಿಗುತ್ತದೆ. ಇವರನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡಿದರೂ ಪೊಲೀಸರಿಗೆ ಸಣ್ಣ ಸುಳಿವೂ ಸಿದಂತೆ ಯಾಮಾರಿಸುತ್ತಿರುತ್ತಾರೆ. ಆನಂದ್ ತಮಿಳುನಾಡಿನಲ್ಲಿ, ಅಲ್ಲಿ ಇಲ್ಲಿ, ಇದ್ದಾನೆ ಎನ್ನುತ್ತಿದ್ದವರು, ಒಮ್ಮೆ ಪೊಲೀಸರ ತನಿಖೆ ವೇಳೆ ಒಬ್ಬ ಆರೋಪಿ ಆನಂದ್‌ನನ್ನು ಮೈಸೂರಿನಲ್ಲಿ ಬಿಟ್ಟು ಬಂದಿದ್ದಾಗಿ ಹೇಳುತ್ತಾನೆ. ಆಗ ಪೊಲೀಸರು ತಮ್ಮ ಸ್ಟೈಲ್‌ನಲ್ಲಿ ರುಬ್ಬಲು ಶುರು ಮಾಡಿದಾಗ ಆತನನ್ನು ಕೊಲೆ ಮಾಡಿದ ವಿಚಾರ ಬಾಯಿ ಬಿಡುತ್ತಾರೆ.

ಆನಂದನ ಜೊತೆಗಿದ್ದವರೇ ಕೊಲೆ ಮಾಡಿದ ಆರೋಪಿಗಳೆಂದು ತಿಳಿದಾಗ ಅವರನ್ನು ಮೈಸೂರಿಗೆ ಕರೆದುಕೊಂಡು ಹೋಗು ಸ್ಥಳ ಮಹಜರ್ ಮಾಡುತ್ತಾರೆ. ಮೈಸೂರು ಸುತ್ತಮುತ್ತ ಚಾಮುಂಡಿ ಬೆಟ್ಟ, ಮಂಡ್ಯ ಸೇರಿದಂತೆ ಕಳೆದ 6 ತಿಂಗಳಲ್ಲಿ ಸಂಭವಿಸಿ ಅಸಹಜ ಸಾವು ಪ್ರಕರಣಗಳನ್ನು ಹುಡುಕುತ್ತಾರೆ. ನಂತರ, ಪಿಎಸ್‌ಐ ಪ್ರವೀಣ್ ಹೊಸೂರ ತನ್ನ ಎಲ್ಲಾ ಬ್ಯಾಚ್ ಮೆಂಟ್ ಸಂಪರ್ಕದಿಂದ ಆನಂದ್ ಕೇಸ್ ಟ್ರೆಸ್ ಮಾಡಲು ಯತ್ನಿಸಿದಾಗ, ಮೈಸೂರು ಜಿಲ್ಲೆಯ  ಇಲವಾಲ ಠಾಣಾ ವ್ಯಾಪ್ತಿಯಲ್ಲಿ ಆನಂದ್ ಶವ ಸಿಕ್ಕಿದೆ ಎಂಬುದು ಗೊತ್ತಾಗುತ್ತದೆ. ಜೊತೆಗೆ, ಯುಡಿಆರ್ ಕೇಸ್ ಮಾಡಿ ಅಪರಿಚಿತ ಶವ ಅಂತ ಮಣ್ಣು ಮಾಡಿದ ವಿಷಯ ತಿಳಿಯುತ್ತದೆ.

ಇದನ್ನೂ ಓದಿ: ಬಿಜೆಪಿ ಮುಖಂಡ ಸೇರಿ 15 ಜನರಿಗೆ ವಂಚನೆ: 14 ಲಕ್ಷ ಪಂಗನಾಮ

ತಮಿಳುನಾಡಿನಿಂದ ಬೆಂಗಳೂರಿಗೆ ಬಂದ ಆನಂದ್ ಸಾವಿನ ವಿಷಯ ಕೇಳಿದ ಅತ್ತೆ ಮಾವ ಕುಸಿದು ಹೋಗುತ್ತಾರೆ. ಕಳೆದ 6 ತಿಂಗಳ ಹಿಂದಿನ ಕೊಲೆ ರಹಸ್ಯವನ್ನು ಬೇಧಿಸಿದ ಬನಶಂಕರಿ ಪೊಲೀಸರು ನಿಟ್ಟೂಸಿರು ಬಿಟ್ಟರೆ, ಮಗನಂತಿದ್ದ ಆನಂದ್  ಕಳೆದುಕೊಂಡ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ. ಕೇವಲ ನಿವೇಶನಕ್ಕಾಗಿ ಆನಂದ್ ಕೊಲೆಗೈದ ಆರೋಪಿಗಳು ಜೈಲು ಸೇರಿದ್ದಾರೆ. ಆನಂದ್ ಕೊಲೆ ಹಿಂದೆ ರಿಯಲ್ ಎಸ್ಟೇಟ್ ಕಳ್ಳರ ಸುಪಾರಿ ಕಹಾನಿ ಇದೆ. ಆನಂದ್ ಕೊಲೆ ಮಾಡಲು ಮೊದಲೇ ಸುಪಾರಿ ಪ್ಲಾನ್ ಮಾಡಿ ಮೈಸೂರು ಕಡೆ ಕರೆದುಕೊಂಡು ಹೋಗಲಾಗಿತ್ತು. ಪೊಲೀಸರು ಸಾಕ್ಷ್ಯ ಕಲೆ ಹಾಕುತ್ತಾ, ತನಿಖೆ ಮುಂದುವರೆಸಿದ್ದಾರೆ.

ಒಟ್ಟಾರೆ ಬೆಂಗಳೂರು ಎಂಬ ಮಾಯಾನಗರಿಯಲ್ಲಿ ಮನೆ, ಸೈಟ್ ಮಾರಾಟ, ರೌಡಿಸಂ, ಭೂಮಾಫಿಯಾ, ಸೈಟ್ ಮಾಫಿಯಾ, ರಿಯಲ್ ಎಸ್ಟೇಟ್‌ಗಾಗಿ ಎಷ್ಟೋ ಕೊಲೆಗಳು ನಡೆದು ಹೋಗಿವೆ. ಇವುಗಳ ಬಗ್ಗೆ ಎಚ್ಚರವಹಿಸೋದು ಒಳ್ಳೆಯದು. ತನ್ನ ಪಿತ್ರಾರ್ಜಿತ ಆಸ್ತಿಯನ್ನು ಮಾರಾಟ ಮಾಡಲು ಹೋದ ಮುಗ್ಧ, ಅಮಾಯಕ ಆನಂದ್ ಹತ್ಯೆಯಾಗಿ ಹೋಗಿದ್ದು, ದುರಂತವೇ ಸರಿ.

click me!