
ಬೆಂಗಳೂರು(ಅ.11): ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಸಾದಹಳ್ಳಿ ಸಮೀಪ ಆಯೋಜಿಸಿದ್ದ ರೇವ್ ಪಾರ್ಟಿ ಮೇಲೆ ಸಿಸಿಬಿ ದಾಳಿ ನಡೆದು ತಿಂಗಳು ಕಳೆದರೂ ವಿಲ್ಲಾ ಮಾಲಿಕ ಮಾತ್ರ ಪತ್ತೆಯಾಗದಿರುವುದು ಹಾಗೂ ಠಾಣೆಯಲ್ಲಿ ಪ್ರಮುಖ ಆರೋಪಿಗೆ ಸೇರಿದ ಮೊಬೈಲ್ ಬದಲಾವಣೆಯ ರಹಸ್ಯ ಬಯಲಾಗದೆ ಈಗ ಪೊಲೀಸರ ಮೇಲೆ ಅನುಮಾನ ಮೂಡಿದೆ.
ಸೆ.9ರಂದು ಸಾದಹಳ್ಳಿಯ ಅನ್ವರ್ ಲೇಔಟ್‌ಲ್ಲಿರುವ ಶ್ರೀನಿವಾಸ್ ಸುಬ್ರಹ್ಮಣ್ಯ ಒಡೆತನದ ವಿಲ್ಲಾದಲ್ಲಿ ನಡೆದಿದ್ದ ರೇವ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಬಳ್ಳಾರಿ ಜಿಲ್ಲೆ ಉದ್ಯಮಿಗಳ ಮಕ್ಕಳು ಸೇರಿದಂತೆ ಎಂಟು ಮಂದಿಯನ್ನು ಬಂಧಿಸಿದ ಸಿಸಿಬಿ, ವಿದೇಶದ ನಾಲ್ವರು ಸೇರಿದಂತೆ 7 ಮಂದಿ ಯುವತಿಯರನ್ನು ರಕ್ಷಿಸಿದ್ದರು. ಈ ದಾಳಿ ವೇಳೆ ವಿಲ್ಲಾ ಮಾಲಿಕ ಶ್ರೀನಿವಾಸ್ ಸುಬ್ರಹ್ಮಣ್ಯ, ಪಾರ್ಟಿ ಆಯೋಜಕರಾದ ಅರ್ಜುನ್ ಹಾಗೂ ರಾಹುಲ್ ನಾಪತ್ತೆಯಾಗಿದ್ದರು ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿತ್ತು.
ಗೋಬಿ ತಿನ್ಲಿಲ್ಲ ಅಂತಾ ಲಟ್ಟಣಿಗೆಯಲ್ಲಿ ಅಜ್ಜಿಗೆ ಕೊಟ್ಟ ಏಟು, 6 ವರ್ಷದ ನಂತ್ರ ಮೊಮ್ಮಗನಿಗೆ ತೆರೆದ ಜೈಲು ಗೇಟು!
ಆದರೆ ಈ ದಾಳಿ ನಡೆದ ತಿಂಗಳು ಕಳೆದರೂ ಪ್ರಮುಖ ಆರೋಪಿಗಳು ಪತ್ತೆಯಾಗಿಲ್ಲ. ಅಲ್ಲದೆ ದಾಳಿ ವೇಳೆ ವಶಕ್ಕೆ ಪಡೆಯಲಾಗಿದ್ದ ಪ್ರಮುಖ ಆರೋಪಿ ಅಂಕಿತ್ ಜೈನ್‌ನ ಐಫೋನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆಯಲ್ಲಿ ರಾತ್ರೋರಾತ್ರಿ ಬದಲಾಗಿತ್ತು ಎಂಬ ಆರೋಪ ಕೇಳಿ ಬಂದಿದೆ.
ಅಂಕಿತ್ ಮೊಬೈಲ್‌ನಲ್ಲಿ ಇದ್ದ ರಹಸ್ಯವೇನು?
ಬಳ್ಳಾರಿ ಜಿಲ್ಲೆಯ ಉದ್ಯಮಿ ಅಂಕಿತ್ ಜೈನ್, ದುಬೈನಲ್ಲಿ ನೆಲೆಸಿದ್ದಾನೆ. ರಾಜ್ಯ ಹಾಗೂ ಹೊರ ರಾಜ್ಯಗಳ ರಾಜಕೀಯ ಹಾಗೂ ಚಲನಚಿತ್ರ ರಂಗದ ಕೆಲವರ ಜತೆ ಜೈನ್ ಸ್ನೇಹವಿದ್ದು, ಅದ್ಧೂರಿ ನೈಟ್ ಪಾರ್ಟಿಗಳ ಆಯೋಜನೆಯಲ್ಲಿ ಜೈನ್ ಹೆಸರುವಾಸಿಯಾಗಿದ್ದ. ಸೆ.9ರಂದು ವಿಲ್ಲಾದ ರೇವ್ ಪಾರ್ಟಿಗೆ ಜೈನ್ ಪಾಲ್ಗೊಳ್ಳುವ ಮಾಹಿತಿಯನ್ನು ಸಿಸಿಬಿಗೆ ಆತನ ವಿರೋಧಿಗಳೇ ನೀಡಿದ್ದರು ಎಂಬ ಮಾತುಗಳು ಕೇಳಿ ಬಂದಿವೆ.
ಈ ಮಾಹಿತಿ ಆಧರಿಸಿ ದಾಳಿ ನಡೆಸಿದ ಸಿಸಿಬಿ, ಜೈನ್ ಬಳಿಕ ಐಫೋನನ್ನು ಜಪ್ತಿ ಮಾಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಪೊಲೀಸರ ಸುಪರ್ದಿಗೆ ನೀಡಿದ್ದರು. ಆದರೆ ಠಾಣೆಯಲ್ಲಿ ಆತನ ಮೊಬೈಲ್ ಅದಲು ಬದಲಾಗಿತ್ತು. ದಾಳಿ ವೇಳೆ ಪತ್ತೆಯಾಗಿದ್ದ ಮೊಬೈಲ್ ಬದಲಿಗೆ ಅದೇ ಕಂಪನಿ ಮಾದರಿಯ ಅದೇ ಬಣ್ಣದ ಮೊಬೈಲನ್ನು ಇಡಲಾಗಿತ್ತು. ಈ ಬಗ್ಗೆ ಆಕ್ಷೇಪಿಸಿದ ಸಿಸಿಬಿ, ಮೊಬೈಲ್ ಬದಲಾವಣೆ ಕುರಿತು ಆಯುಕ್ತರಿಗೆ ವರದಿ ಸಲ್ಲಿಸಿದ್ದರು ಎಂದು ತಿಳಿದು ಬಂದಿದೆ.
ಈ ಬೆಳವಣಿಗೆ ಹಿನ್ನಲೆಯಲ್ಲಿ ಅಂಕಿತ್ ಜೈನ್ ಮೊಬೈಲ್ ಬದಲಾವಣೆಗೆ ಕಾರಣವೇನು? ಆ ಮೊಬೈಲ್‌ನಲ್ಲಿ ಡಾಟಾ ನಾಶ ಮಾಡಲು ಕಾರಣವೇನು? ಆ ಮೊಬೈಲ್‌ನಲ್ಲಿದ್ದ ಅಂಥ ಮಹತ್ವದ ರಹಸ್ಯವೇನು ಎಂಬ ಪ್ರಶ್ನೆಗಳು ಮೂಡಿವೆ. ರಾಜ್ಯದ ಕೆಲ ರಾಜಕಾರಣಿಗಳು ಹಾಗೂ ಚಲನಚಿತ್ರ ರಂಗದ ಪ್ರಮುಖರ ಜತೆ ಜೈನ್‌ಗೆ ಸಂಪರ್ಕ ಇತ್ತು. ಈ ಸ್ನೇಹ ಸಂಬಂಧ ಬಗ್ಗೆ ಕೆಲವು ಮಾಹಿತಿ ಬಹಿರಂಗವಾಗುವ ಭೀತಿಯಿಂದ ಮೊಬೈಲ್ ಬದಲಾಯಿಸಲಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.
ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣ; ಹತ್ಯೆ ಬಗ್ಗೆ ಹಂತಕನೊಂದಿಗೆ ಕಾಂಗ್ರೆಸ್ ಮುಖಂಡ ಮಾತುಕತೆ!
ಡ್ರಗ್ಸ್ ಕೇಸಿನ ನಟಿಯರ ಗೆಳಯ ವಿಲ್ಲಾ ಮಾಲೀಕ
ಇನ್ನು ಈ ಪ್ರಕರಣದಲ್ಲಿ ವಿಲ್ಲಾ ಮಾಲಿಕ ಶ್ರೀನಿವಾಸ್ ಸುಬ್ರಹ್ಮಣ್ಯ, ಅರ್ಜುನ್ ಹಾಗೂ ರಾಹುಲ್ ನಾಪತ್ತೆಯಾಗಿದ್ದಾರೆ. ಕಳೆದ ವರ್ಷದ ಕನ್ನಡ ಚಲನಚಿತ್ರ ರಂಗದ ಇಬ್ಬರು ಖ್ಯಾತ ನಟಿಯರು ಬಂಧನವಾಗಿದ್ದ ಡ್ರಗ್‌್ಸ ಪ್ರಕರಣದಲ್ಲಿ ಆರೋಪಿಯಾಗಿ ಸುಬ್ರಹ್ಮಣ್ಯ ಜೈಲು ಸೇರಿದ್ದ. ಬಳಿಕ ಜಾಮೀನು ಪಡೆದು ಹೊರಬಂದ ಆತ ಮತ್ತೆ ಪೇಜ್ ತ್ರಿ ಹಾಗೂ ರೇವ್ ಪಾರ್ಟಿ ಆಯೋಜನೆಗೆ ತನ್ನ ಐಷರಾಮಿ ವಿಲ್ಲಾದಲ್ಲಿ ಅವಕಾಶ ಮಾಡಿಕೊಡುತ್ತಿದ್ದ ಎಂದು ಪೊಲೀಸ್ ಮೂಲಗಳು ಹೇಳಿವೆ.
ಸಾದಹಳ್ಳಿ ಸಮೀಪ ರೇವ್ ಪಾರ್ಟಿ ನಡೆದಿದ್ದ ವಿಲ್ಲಾವನ್ನು ಮುಟ್ಟುಗೋಲು ಹಾಕಲಾಗಿದೆ. ತಪ್ಪಿಸಿಕೊಂಡಿರುವ ಆರೋಪಿಗಳಿಗೆ ತನಿಖೆ ನಡೆದಿದೆ ಅಂತ ಜಂಟಿ ಪೊಲೀಸ್ ಆಯುಕ್ತ (ಅಪರಾಧ) ರಮಣ್ ಗುಪ್ತಾ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ