
ಬೆಂಗಳೂರು (ಫೆ.21) : ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಕಪಾಳ ಮೋಕ್ಷ ಮಾಡಿ ಜೀವ ಬೆದರಿಕೆ ಹಾಕಿರುವುದಾಗಿ ತಾಯಿಯೊಬ್ಬರು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿರುವ ತಮ್ಮ ಪುತ್ರನ ವಿರುದ್ಧವೇ ಕೆ.ಆರ್.ಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕು ಹಣಬೆ ಗ್ರಾಮದ ಮಂಗಳಮ್ಮ ನೀಡಿದ ದೂರಿನ ಮೇರೆಗೆ ಆಕೆಯ ಪುತ್ರ ಪಿಎಸ್‌ಐ ಮಂಜುನಾಥ, ಇವರ ಗೆಳತಿ ಬಸವಜ್ಯೋತಿ, ಈಕೆಯ ಸಹೋದರ ಬಸವಪ್ರಭು ವಿರುದ್ಧ ಬಿಎನ್‌ಎಸ್ ಕಲಂ 118(1), 126(2), 3(5), 351(2), 351(3), 352 ಅಡಿ ಎಫ್‌ಐಆರ್ ದಾಖಲಿಸಲಾಗಿದೆ. ಮೂವರು ಆರೋಪಿಗಳಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಅನೈತಿಕ ಸಂಬಂಧಕ್ಕೆ ಬಲಿಯಾದ ಕುಟುಂಬ: ಗಂಡ ಕುಣಿಕೆಪಾಲು, ಹೆಂಡತಿ ಜೈಲುಪಾಲು; ಮಕ್ಕಳೆರಡು ಬೀದಿಪಾಲು
ದೂರಿನ ವಿವರ: ಮಂಗಳಮ್ಮ ಅವರು ನೀಡಿದ ದೂರಿನಲ್ಲಿ ತನಗೆ ಪುತ್ರ ಮಂಜುನಾಥ ಮತ್ತು ಇಬ್ಬರು ಹೆಣ್ಣಮಕ್ಕಳು ಇದ್ದಾರೆ. ಪುತ್ರ ಮಂಜುನಾಥ್ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಂಜುನಾಥ್‌ಗೆ 2011ರಲ್ಲಿ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಈ ನಡುವೆ ಪುತ್ರ ಮಂಜುನಾಥ್, ಬಸವಜ್ಯೋತಿ ಎಂಬ ಯುವತಿ ಜತೆಗೆ ಸಂಬಂಧ ಹೊಂದಿದ್ದು, ಒಂದು ವರ್ಷದ ಹಿಂದೆ ಈ ವಿಚಾರ ನನಗೆ ತಿಳಿದಿತ್ತು. ಈ ಸಂಬಂಧ ಎಷ್ಟೇ ಬುದ್ಧಿವಾದ ಹೇಳಿದರೂ ಪುತ್ರ ಆಕೆಯ ಸಹವಾಸ ಬಿಟ್ಟಿಲ್ಲ. ಬಸವ ಜ್ಯೋತಿಗೂ ಕರೆ ಮಾಡಿ, ಪುತ್ರನಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಹೀಗಾಗಿ ಆತನ ಸಹವಾಸ ಬಿಟ್ಟು ಬಿಡು ಎಂದು ಬುದ್ಧಿ ಹೇಳಿದರೂ ಆಕೆ ಕೇಳಲಿಲ್ಲ ಎಂದು ವಿವರಿಸಿದ್ದಾರೆ.
ಇದನ್ನೂ ಓದಿ: ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತು : ಮಗುವನ್ನು ಕೊಂದು ನೇಣಿಗೆ ಶರಣಾದ ಗೃಹಿಣಿ!
ಪುತ್ರ ಸೇರಿ ಮೂವರಿಂದ ಹಲ್ಲೆ
ಫೆ.16ರಂದು ಬೆಳಗ್ಗೆ ನಾನು ಮತ್ತು ನನ್ನ ಇಬ್ಬರು ಹೆಣ್ಣು ಮಕ್ಕಳು ಬಸವಜ್ಯೋತಿ ಮನೆಗೆ ತೆರಳಿ ತಮ್ಮ ಮಗನ ಸಹವಾಸ ಬಿಟ್ಟು ಬಿಡುವಂತೆ ಮನವಿ ಮಾಡಿದೆವು. ಈ ವೇಳೆ ಬಸವಜ್ಯೋತಿ ನನ್ನ ಪುತ್ರ ಮಂಜುನಾಥ್‌ಗೆ ಕರೆ ಮಾಡಿ ಮನೆಗೆ ಕರೆಸಿಕೊಂಡಳು. ಈ ವೇಳೆ ಪುತ್ರ ‘ನೀವು ಇಲ್ಲಿಗೇಕೆ ಬಂದಿದ್ದೀರಿ’ ಎಂದು ನನ್ನ ಬಲ ಕೆನ್ನೆಗೆ ಹೊಡೆದ. ಬಿಡಿಸಲು ಮುಂದಾದ ನನ್ನ ಇಬ್ಬರು ಹೆಣ್ಣು ಮಕ್ಕಳ ಮೇಲೂ ಹಲ್ಲೆ ಮಾಡಿದ. ಅಷ್ಟರಲ್ಲಿ ಬಸವಜ್ಯೋತಿ ನನ್ನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ, ತಲೆಯ ಜುಟ್ಟು ಹಿಡಿದು ಹಲ್ಲೆ ಮಾಡಿದಳು. ಆಕೆಯ ಸಹೋದರ ಬಸವಪ್ರಭು ಸಹ ನಮ್ಮ ಮೇಲೆ ಹಲ್ಲೆ ಮಾಡಿದ. ಮತ್ತೆ ಇಲ್ಲಿಗೆ ಬಂದರೆ, ಹೊಡೆದು ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಹೀಗಾಗಿ ನಮ್ಮ ಮೇಲೆ ಹಲ್ಲೆ ಮಾಡಿದ ಮೂವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮಂಗಳಮ್ಮ ದೂರಿನಲ್ಲಿ ಮನವಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ