
ಬೆಂಗಳೂರು: ನಾಗರಿಕರ ಸುರಕ್ಷತೆಗಾಗಿ ಕಾವಲಿನಲ್ಲಿರಬೇಕಾದ ಕೆಲ ಪೊಲೀಸ್ ಸಿಬ್ಬಂದಿಯ ಕಳ್ಳಾಟಗಳು ನಿರಂತರವಾಗಿ ಬಯಲಾಗುತ್ತಿದ್ದು, ಇಲಾಖೆಯ ಗೌರವಕ್ಕೆ ಗಂಭೀರ ಧಕ್ಕೆ ತಂದಿವೆ. ಸಿದ್ದಾಪುರ ದರೋಡೆ ಪ್ರಕರಣದಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಅಣ್ಣಪ್ಪ ನಾಯಕ್ ಬಂಧನವಾಗಿರುವುದು ಮರೆಸುವ ಮುನ್ನವೇ, ಇದೀಗ ಸೈಬರ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಜೆ.ಬಿ. ಉಲ್ಲಾ ಎಂಬಾತನಿಂದ ಲಕ್ಷಾಂತರ ರೂಪಾಯಿ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಆರೋಪಿಯನ್ನು ವಿಚಾರಣೆಗಾಗಿಯೇ ಕರೆದುಕೊಂಡು ಬಂದಿದ್ದಾಗ ಈ ಘಟನೆ ಸಂಭವಿಸಿರುವುದು ಆಶ್ಚರ್ಯಕರ ಸಂಗತಿ.
ಸೈಬರ್ ಅಪರಾಧ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿ, ವಿಚಾರಣೆಗೆ ಕರೆದೊಯ್ಯುವ ವೇಳೆಗೆ ತನ್ನ ಕಾರಿನಲ್ಲಿ 11 ಲಕ್ಷ ರೂಪಾಯಿ ಇರುವ ಬ್ಯಾಗ್ ಇಟ್ಟಿದ್ದ. ವಿಚಾರಣೆಯ ನಂತರ ಆತನನ್ನು ಜೈಲಿಗೆ ಕಳಿಸಲಾಯಿತು. ನಂತರ ಜಾಮೀನು ಪಡೆದು ಆತ ಹೊರಬಂದಾಗ, ಕಾರಿನಲ್ಲಿದ್ದ ಹಣದ ಬ್ಯಾಗ್ ನಾಪತ್ತೆಯಾಗಿರುವುದು ಅವನ ಗಮನಕ್ಕೆ ಬಂದಿತು. ಆರೋಪಿ ತಕ್ಷಣವೇ ಸೈಬರ್ ಠಾಣೆಯ ಸಿಬ್ಬಂದಿಯವರ ಗಮನಕ್ಕೆ ಈ ವಿಚಾರ ತಂದಾಗ, ಅಧಿಕಾರಿಗಳು ಮೊದಲಿಗೆ ಗಾಬರಿಗೊಂಡರು ಬಳಿಕ ಸಿಸಿಟಿವಿ ಚಿತ್ರೀಕರಣವನ್ನು ಪರಿಶೀಲಿಸಿದರು. ಈ ಪರಿಶೀಲನೆಯಲ್ಲಿ ಹೆಡ್ ಕಾನ್ಸ್‌ಟೇಬಲ್ ಜೆ.ಬಿ. ಉಲ್ಲಾ ಕಾರಿನಲ್ಲಿದ್ದ 11 ಲಕ್ಷ ರೂಪಾಯಿ ಹಣದ ಬ್ಯಾಗ್‌ನ್ನು ತೆಗೆದುಕೊಂಡು ಹೋಗಿರುವುದು ದೃಢಪಟ್ಟಿತು.
ಸಿಸಿಟಿವಿ ದೃಶ್ಯಾವಳಿಯಲ್ಲಿ ಜೆಬಿ ಉಲ್ಲಾ ಆರೋಪಿಯ ಕಾರಿನತ್ತ ಹೋಗಿ, ಬ್ಯಾಗ್‌ನ್ನು ಎತ್ತಿಕೊಂಡು ಆರಾಮವಾಗಿ ಹೋಗಿರುವುದು ಸೆರೆಯಾಗಿದೆ. ಹಣ ಕದ್ದ ನಂತರ ತನಗೇನೂ ಗೊತ್ತಿಲ್ಲ ಎನ್ನುವಂತೆ ಹಲವು ದಿನಗಳಿಂದ ಸಾಮಾನ್ಯವಾಗಿ ಕೆಲಸಕ್ಕೆ ಬರುತ್ತಿದ್ದುದೂ ಗಮನಾರ್ಹ. ಘಟನೆಯ ಬಗ್ಗೆ ಸಿಸಿಬಿ ಡಿಸಿಪಿ ರಾಜಾ ಇಮಾಮ್ ಖಾಸಿಂ ಅವರಿಗೆ ದೂರು ಸಲ್ಲಿಸಲಾಯಿತು. ಸೈಬರ್ ಪೊಲೀಸರು ಜೆಬಿ ಉಲ್ಲಾ ಅವರ ಮನೆಗೆ ಸರ್ಚ್ ಮಾಡಲು ತೆರಳಿದಾಗ, ಆತ ಮನೆಯ ಒಳಬಿಡದೆ ಗಲಾಟೆ ಮಾಡಿದ್ದಾನೆಂದು ತಿಳಿದುಬಂದಿದೆ.
ಪೊಲೀಸರು ಮನೆಯ ಒಳ ಭಾಗ ಪರಿಶೀಲಿಸಿದಾಗ, ಮಲಗುವ ಕೋಣೆಯ ಬೆಡ್ ಕೆಳಗೆ ಲಕ್ಷಾಂತರ ರೂ. ಹಣವನ್ನು ಜೋಡಿಸಿ ಇಟ್ಟಿದ್ದು ಪತ್ತೆಯಾಯಿತು. ಕದ್ದ ಹಣದಿಂದಲೇ ತನ್ನ ಪತ್ನಿಗೆ ಆಭರಣಗಳನ್ನು ಕೊಟ್ಟಿರುವುದು ಕೂಡಾ ತನಿಖೆಯಲ್ಲಿ ಬಹಿರಂಗವಾಗಿದೆ. ಕದ್ದ ಹಣದಲ್ಲಿ ಸುಮಾರು ಎರಡು ಲಕ್ಷ ರೂಪಾಯಿ ಮಾತ್ರ ವಾಪಸ್ ನೀಡಿದ್ದಾನೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಘಟನೆ ನಗರದ ಪೊಲೀಸರನ್ನೇ ತಲೆ ತಗ್ಗಿಸುವಂತೆ ಮಾಡಿದೆ. ಇಲಾಖೆಯ ಗೌರವದ ಬಗ್ಗೆ ಗಂಭೀರ ಪ್ರಶ್ನೆ ಎದ್ದಿದೆ. ಇದಕ್ಕೂ ಮುನ್ನ ಸಿದ್ದಾಪುರ ದರೋಡೆ ಪ್ರಕರಣದಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಅಣ್ಣಪ್ಪ ನಾಯಕ್ ಬಂಧಿತನಾಗಿದ್ದ. ಜೆಪಿ ನಗರದಲ್ಲಿ ಸೀನಿಯರ್ ಸಿಟಿಜನ್ ಬಳಿ ಹಣ ಪಡೆದ ಆರೋಪ, ಬೆಳ್ಳಂದೂರು ಪೊಲೀಸ್ ಠಾಣೆಯ ಮೇಲೆ ಬಂದಿದ್ದ ಮಾರಣಾಂತಿಕ ಪ್ರಕರಣದಲ್ಲಿ ಹಣ ಪಡೆದ ಆರೋಪ ಇವೆಲ್ಲವೂ ಇಲಾಖೆಯೊಳಗಿನ ಶಿಸ್ತು ಕೊರತೆ ಸ್ಪಷ್ಟಪಡಿಸುತ್ತಿವೆ.
ಇಷ್ಟೆಲ್ಲ ನಡೆದರೂ ಸೈಬರ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಜೆಬಿ ಉಲ್ಲಾ ಮೇಲಿನ ಕಳ್ಳತನದ ದೂರು, ಹಾಗೂ ಪ್ರಕರಣ ಮುಚ್ಚಿಹಾಕಲು ಕೆಲ ಸಿಬ್ಬಂದಿ ನಡೆಸಿದ ಯತ್ನಗಳು ಪೊಲೀಸರ ಮೇಲಿನ ನಂಬಿಕೆಗೆ ಗಂಭೀರ ಧಕ್ಕೆ ತಂದಿವೆ. ನಗರದ ಜನರು ಮತ್ತು ನಾಗರಿಕ ಸಂಘಟನೆಗಳು ಈಗ ಗೃಹ ಇಲಾಖೆ ಹಾಗೂ ಪೊಲೀಸ್ ಹಿರಿಯಾಧಿಕಾರಿಗಳವರೆಗೂ ಗಂಭೀರ ಪ್ರಶ್ನೆಗಳನ್ನು ಕೇಳುವಂತಾಗಿದೆ.
ಪೊಲೀಸ್ ಇಲಾಖೆಯ ಮೇಲೆ ಸಾರ್ವಜನಿಕರ ನಂಬಿಕೆ ಕುಂದದೆ ಇರಬೇಕಾದರೆ, ಇಂತಹ ಪ್ರಕರಣಗಳಿಗೆ ಕಠಿಣ ಮತ್ತು ತಕ್ಷಣದ ಕ್ರಮ ಅವಶ್ಯಕವಾಗಿದೆ. ಇಲಾಖೆ ಒಳಗಿನ ಕಂತ್ರಿಗಳನ್ನು ಹೊರಹಾಕದೇ ಬಿಟ್ಟರೆ, ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಗಂಭೀರ ಪ್ರಶ್ನೆಯಲ್ಲೇ ಉಳಿಯುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ