ಕೊನೆಗೂ ನಾಸಿಕ್‌ನಿಂದ ಮಕ್ಕಳನ್ನು ಕರೆತಂದು ತಂದೆ ಮುಂದೆ ಹಾಜರ್‌

By Kannadaprabha NewsFirst Published Aug 20, 2022, 8:00 AM IST
Highlights

ಮಕ್ಕಳಿಗಾಗಿ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದ ತಂದೆ, ಆ.22ಕ್ಕೆ ಪ್ರಕರಣ ಮುಂದೂಡಿಕೆ

ಬೆಂಗಳೂರು(ಆ.20):  ನಗರದಲ್ಲಿನ ಗಂಡನ ಮನೆ ತೊರೆದು ಮಹಾರಾಷ್ಟ್ರದ ನಾಸಿಕ್‌ನಲ್ಲಿ ನೆಲೆಸಿದ್ದ ಮಹಿಳೆಯ ಸುಪರ್ದಿಯಲ್ಲಿದ್ದ ಇಬ್ಬರು ಹೆಣ್ಣು ಮಕ್ಕಳನ್ನು ಹೈಕೋರ್ಟ್‌ ಮುಂದೆ ಹಾಜರುಪಡಿಸುವಲ್ಲಿ ನಗರದ ಮಾರತ್‌ಹಳ್ಳಿ ಠಾಣಾ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. ಪತ್ನಿ ಸೀತಾ ತನ್ನ ಅಪ್ರಾಪ್ತ ಹೆಣ್ಣು ಮಕ್ಕಳಿಬ್ಬರನ್ನು ಅಕ್ರಮವಾಗಿ ಕರೆದೊಯ್ದು ನಾಸಿಕ್‌ನಲ್ಲಿ ನೆಲೆಸಿದ್ದಾರೆ. ಮಕ್ಕಳನ್ನು ನೋಡಲು ಅವಕಾಶ ನೀಡುತ್ತಿಲ್ಲ. ಹಾಗಾಗಿ ಮಕ್ಕಳನ್ನು ತನ್ನ ಸುಪರ್ದಿಗೆ ನೀಡಲು ಪತ್ನಿಗೆ ಆದೇಶಿಸುವಂತೆ ಕೋರಿ ನಗರದ ಕರಿಯಮ್ಮನ ಅಗ್ರಹಾರ ಬಡಾವಣೆ ನಿವಾಸಿಯಾದ ರವಿ (ದಂಪತಿ ಹೆಸರು ಬದಲಿಸಲಾಗಿದೆ) ಹೈಕೋರ್ಟ್‌ಗೆ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದರು.

ಗೃಹ ಇಲಾಖೆಗೆ ತಾಕೀತು ಮಾಡಿದ್ದ ಕೋರ್ಟ್‌:

ಹೈಕೋರ್ಟ್‌ ಹಲವು ಬಾರಿ ಸೂಚನೆ ನೀಡಿ ಸಾಕಷ್ಟು ಕಾಲಾವಕಾಶ ಕಲ್ಪಿಸಿದ್ದರೂ ಮತ್ತು ನಾಸಿಕ್‌ ಪೊಲೀಸರ ಮೂಲಕ ಸಮನ್ಸ್‌ ಜಾರಿ ಮಾಡಿದ್ದರೂ ತಾಯಿ ಮಾತ್ರ ಮಕ್ಕಳನ್ನು ಕೋರ್ಟ್‌ಗೆ ಹಾಜರುಪಡಿಸಿರಲಿಲ್ಲ, ಇದಲ್ಲದೇ ಒಂದು ಬಾರಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದೇನೆ ಎಂದು ಸುಳ್ಳು ಮಾಹಿತಿ ನೀಡಿ ಹೈಕೋರ್ಚ್‌ಗೆ ದಿಕ್ಕು ತಪ್ಪಿಸಿದ್ದರು. ಮತ್ತೊಂದು ಬಾರಿ ಶಾಲೆಯಲ್ಲಿ ಪೋಷಕರ ಸಭೆಗೆ ಹಾಜರಾಗಬೇಕಾದ ಕಾರಣ ನ್ಯಾಯಾಲಯಕ್ಕೆ ಬರಲಾಗದು ಎಂದು ವಾಟ್ಸ್‌ ಆ್ಯಪ್‌ ಸಂದೇಶ ಕಳುಹಿಸಿದ್ದರು. ಮಹಿಳೆಯ ಈ ನಡೆಯಿಂದ ಬೇಸತ್ತ ಹೈಕೋರ್ಟ್‌, ನಾಸಿಕ್‌ ಪೊಲೀಸ್‌ ಆಯುಕ್ತರ ಮೂಲಕ ಆ.18ರಂದು ಮಗು ಮತ್ತು ತಾಯಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು ಎಂದು ರಾಜ್ಯ ಗೃಹ ಇಲಾಖೆ, ನಗರ ಪೊಲೀಸ್‌ ಆಯುಕ್ತರು, ಮಾರತಹಳ್ಳಿ ಪೊಲೀಸ್‌ ಠಾಣಾ ಇನ್ಸ್‌ಪೆಕ್ಟರ್‌ ಮತ್ತು ವೈಟ್‌ ಫೀಲ್ಡ್‌ ವಿಭಾಗದ ಆಯುಕ್ತರಿಗೆ ಆ.4ರಂದು ತಾಕೀತು ಮಾಡಿತ್ತು.

ಬೆಂಗಳೂರು: ಸುಪ್ರೀಂನಲ್ಲೇ ವಾರ್ಡ್‌ ವಿಂಗಡಣೆ ಬಗ್ಗೆ ಸ್ಪಷ್ಟನೆ ಪಡೆಯಿರಿ, ಹೈಕೋರ್ಟ್‌

ವಿಚಾರಣೆ ಆ.22ಕ್ಕೆ ಮುಂದೂಡಿಕೆ:

ಹೈಕೋರ್ಟ್‌ ಸೂಚನೆಯಂತೆ ನಾಸಿಕ್‌ಗೆ ತೆರಳಿದ ಮಾರತಹಳ್ಳಿ ಠಾಣಾ ಪೊಲೀಸರು, ಮಕ್ಕಳೊಂದಿಗೆ ಕೋರ್ಟ್‌ಗೆ ಹಾಜರಾಗುವಂತೆ ಸೀತಾ ಅವರಿಗೆ ಸೂಚಿಸಿದ್ದರು. ಅಂತಿಮವಾಗಿ ಗುರುವಾರ ನಡೆದ ವಿಚಾರಣೆ ವೇಳೆ ಇಬ್ಬರು ಹೆಣ್ಣು ಮಕ್ಕಳನ್ನೂ ಹೈಕೋರ್ಟ್‌ಗೆ ಹಾಜರುಪಡಿಸಿದರು. ತಾಯಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿಚಾರಣೆಗೆ ಹಾಜರಾಗಿದ್ದರು.

ಈ ಎಲ್ಲಾ ಪ್ರಕ್ರಿಯೆ ದಾಖಲಿಸಿಕೊಂಡ ಹಿರಿಯ ನ್ಯಾಯಮೂರ್ತಿ ಬಿ.ವೀರಪ್ಪ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ, ಮೂರು ದಿನ ಕಾಲ ಮಕ್ಕಳನ್ನು ತಂದೆಯ ಸುಪರ್ದಿಗೆ ನೀಡಿ ವಿಚಾರಣೆಯನ್ನು ಆ.22ಕ್ಕೆ ಮುಂದೂಡಿತು. ಅಂದು ತಾಯಿ ಸಹ ಕೋರ್ಟ್‌ಗೆ ಖುದ್ದು ಹಾಜರಾಗಬೇಕು ಎಂದು ನಿರ್ದೇಶಿಸಿತು.
 

click me!