10 ಮಂದಿ ಆರೋಪಿಗಳನ್ನು ಬಂಧಿಸಿದ ಚಿಕ್ಕಜಾಲ ಠಾಣೆ ಪೊಲೀಸರು
ಬೆಂಗಳೂರು(ಆ.20): ಹಂದಿ ಸಾಕಾಣಿಕೆ ಫಾರ್ಮ್‌ಗೆ ನುಗ್ಗಿ ಮಾಲೀಕರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಗೈದು 80 ಹಂದಿಗಳನ್ನು ಕದ್ದು ಪರಾರಿಯಾಗಿದ್ದ ಪ್ರಕರಣ ಸಂಬಂಧ 10 ಮಂದಿ ಆರೋಪಿಗಳನ್ನು ಚಿಕ್ಕಜಾಲ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಯಚೂರು ಮೂಲದ ಶಂಕರ್ (22), ಅಂಬಣ್ಣ (21), ಪರಶುರಾಮ (25), ಬಸವರಾಜು (29), ಗದಗ ಮೂಲದ ಅಶೋಕ (21), ಬೆಳಗಾವಿ ಮೂಲದ ಅಡಿವೆಪ್ಪ (22), ಫಕೀರಪ್ಪ ನಾಗಪ್ಪ ಚಿಪ್ಪಲಕಟ್ಟಿ(31), ಶಂಕರ್ ನಾಗಪ್ಪ ಚಿಪ್ಪಲಕಟಿ (27), ರಾಜಾನುಕುಂಟೆಯ ಮಂಜುನಾಥ (33) ಹಾಗೂ ಚನ್ನರಾಯಪಟ್ಟಣದ ಕಿರಣ್ (28) ಬಂಧಿತರಾಗಿದ್ದಾರೆ. ಆರೋಪಿಗಳಿಂದ 20 ಲಕ್ಷ ರು. ಮೌಲ್ಯದ ಹಂದಿಗಳು ಹಾಗೂ 28 ಸಾವಿರ ರು. ನಗದು, ಬ್ಯಾಂಕ್ ಖಾತೆಯಲ್ಲಿದ್ದ 21 ಸಾವಿರ ರು. ಕೃತ್ಯಕ್ಕೆ ಬಳಸಿದ್ದ ಎರಡು ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗೋಡೌನ್‌ನಿಂದ 17 ಲಕ್ಷ ರೂಪಾಯಿ ಮೌಲ್ಯದ ಕ್ಯಾಡ್ಬರಿ ಚಾಕೊಲೇಟ್ ಕಳ್ಳತನ..!
ಎಚ್.ಆರ್.ಸಂದೀಪ್ ಎಂಬುವವರು ಹುಣಸಮಾರನಹಳ್ಳಿಯಲ್ಲಿ ಹಂದಿ ಸಾಕಾಣಿಕೆ ಮಾಡುತ್ತಿದ್ದಾರೆ. ಜುಲೈ 16ರ ಮುಂಜಾನೆ 3 ಗಂಟೆ ಸುಮಾರಿಗೆ ಎರಡು ವಾಹನಗಳಲ್ಲಿ ಬಂದಿರುವ ಆರೋಪಿಗಳು, 80 ಹಂದಿಗಳನ್ನು ಕದ್ದೊಯಲು ಮುಂದಾಗಿದ್ದಾರೆ. ಈ ವೇಳೆ ಎಚ್ಚರಗೊಂಡ ಸಂದೀಪ್ ಹಾಗೂ ಅವರ ತಂದೆ ರಾಮಕೃಷ್ಣಪ್ಪ ಅವರು ಆರೋಪಿಗಳನ್ನು ಹಿಡಿಯಲು ಮುಂದಾಗಿದ್ದಾರೆ. ಈ ವೇಳೆ ಆರೋಪಿಗಳು ಮಾರಕಾಸ್ತ್ರಗಳಿಂದ ಇಬ್ಬರ ಮೇಲೂ ಹಲ್ಲೆಗೈದು ಹಂದಿಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳ ಬಂಧನದಿಂದ ದೊಡ್ಡಬಳ್ಳಾಪುರದ ಎರಡು, ಸೋಲದೇವನಹಳ್ಳಿ, ಮಾಗಡಿ ಹಾಗೂ ಚಿಕ್ಕಜಾಲ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ತಲಾ ಒಂದು ಸೇರಿ ಒಟ್ಟು ಐದು ಪ್ರಕರಣಗಳು ಪತ್ತೆಯಾಗಿವೆ ಎಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕದ್ದ ಹಂದಿ ಬಚ್ಚಿಡಲು ಗೋಡೌನ್ !
ಆರೋಪಿಗಳು ಕದ್ದ ಹಂದಿಗಳನ್ನು ಹಾಸನ ಮೂಲದ ಹಂದಿ ವ್ಯಾಪಾರಿ ಕಿರಣ್ ಬಳಿ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದರು. ಇವು ಕದ್ದಿರುವ ಹಂದಿಗಳು ಎಂದು ಗೊತ್ತಿದ್ದರೂ ಆರೋಪಿ ಕಿರಣ್ ಹಂದಿ ಖರೀದಿಸಿ ಹಾಸನ, ಕೊಡಗು ಜಿಲ್ಲೆಯ ವಿವಿಧೆಡೆ ಮಾರಾಟ ಮಾಡುತ್ತಿದ್ದ. ಆರೋಪಿಗಳು ಕದ್ದು ತರುವ ಹಂದಿಗಳನ್ನು ಬಚ್ಚಿಟ್ಟು ಮಾರಾಟ ಮಾಡಲು ಚನ್ನರಾಯಪಟ್ಟಣದಲ್ಲಿ ಗೋದಾಮು ನಿರ್ಮಿಸಿದ್ದ ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ.