
ಬೆಂಗಳೂರು (ಜ.13): ಸಿಲಿಕಾನ್ ಸಿಟಿಯಲ್ಲಿ ಬೆಲೆಬಾಳುವ ಮೊಬೈಲ್ ಅಥವಾ ಚಿನ್ನಾಭರಣ ಕದಿಯುವ ಕಳ್ಳರ ಬಗ್ಗೆ ಕೇಳಿದ್ದೇವೆ. ಆದರೆ, ಇಲ್ಲೊಬ್ಬ ವಿಚಿತ್ರ ಕಳ್ಳನಿಗೆ ಕೇವಲ ಬ್ರಾಂಡೆಡ್ ಶೂಗಳೇ ಟಾರ್ಗೆಟ್. ಶೂಗಳ ಸರಣಿ ಕಳ್ಳತನ ಎಸಗುತ್ತಿದ್ದಾನೆ. ಜ್ಞಾನಭಾರತಿ ಮತ್ತು ಅನ್ನಪೂರ್ಣೇಶ್ವರಿ ನಗರ ಸೇರಿದಂತೆ ಹಲವು ಏರಿಯಾಗಳಲ್ಲಿ ಈ 'ಶೂ ಕಳ್ಳ' ಅಂಕಲ್ ಹಾವಳಿ ಹೆಚ್ಚಾಗಿದೆ.
ಈ ಖತರ್ನಾಕ್ ಕಳ್ಳನ ಕಾರ್ಯವೈಖರಿ ಅಚ್ಚರಿ ಮೂಡಿಸುವಂತಿದೆ. ವಯಸ್ಸಾದವನಂತೆ ಕಾಣುವ ಈ ಅಂಕಲ್, ರಾತ್ರಿ ವೇಳೆ ಅಪಾರ್ಟ್ಮೆಂಟ್ ಮತ್ತು ಮನೆಗಳ ಕಾಂಪೌಂಡ್ ಹಾರಿ ಒಳ ನುಗ್ಗುತ್ತಾನೆ. ಮುಖಕ್ಕೆ ಮಾಸ್ಕ್ ಹಾಗೂ ತಲೆಗೆ ಮಂಕಿ ಕ್ಯಾಪ್ ಧರಿಸಿ ಬರುವ ಈತ, ಮನೆ ಮುಂದೆ ಬಿಟ್ಟಿರುವ ಬ್ರಾಂಡೆಡ್ ಮತ್ತು ಬೆಲೆಬಾಳುವ ಶೂಗಳನ್ನೇ ಆರಿಸಿ ಕದ್ದು ಪರಾರಿಯಾಗುತ್ತಿದ್ದಾನೆ.
ಬೆಳಗಿನ ಜಾವ 3 ಗಂಟೆಗೆ ಸರಿಯಾಗಿ ಎಂಟ್ರಿ!
ಜನರು ಗಾಢ ನಿದ್ರೆಯಲ್ಲಿರುವ ಸಮಯವನ್ನೇ ಈ ಕಳ್ಳ ಬಂಡವಾಳ ಮಾಡಿಕೊಂಡಿದ್ದಾನೆ. ಸರಿಯಾಗಿ ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಇವನ ಕೈಚಳಕ ಶುರುವಾಗುತ್ತದೆ. ಸದ್ದಿಲ್ಲದೆ ಅಪಾರ್ಟ್ಮೆಂಟ್ ಮೆಟ್ಟಿಲುಗಳ ಬಳಿ ಬಂದು ಕ್ಷಣಾರ್ಧದಲ್ಲಿ ಶೂಗಳನ್ನು ಚೀಲಕ್ಕೆ ತುಂಬಿಕೊಂಡು ಎಸ್ಕೇಪ್ ಆಗುತ್ತಾನೆ. ಈತನ ಈ ಕೃತ್ಯಗಳು ಅಪಾರ್ಟ್ಮೆಂಟ್ ಬಳಿಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ.
ಹೊರವಲಯದ ಬಡಾವಣೆಗಳಲ್ಲಿಯೂ ಶೂ ಕಳ್ಳನ ಹಾವಳಿ
ಕೇವಲ ನಗರದ ಮಧ್ಯಭಾಗವಷ್ಟೇ ಅಲ್ಲದೆ, ಬೆಂಗಳೂರಿನ ಹೊರವಲಯದ ಬಡಾವಣೆಗಳಿಗೂ ಈ ಶೂ ಕಳ್ಳ ಲಗ್ಗೆ ಇಟ್ಟಿದ್ದಾನೆ. ಕೆಂಗೇರಿ, ಮಾದನಾಯಕನಹಳ್ಳಿ ಹಾಗೂ ಅನ್ನಪೂರ್ಣೇಶ್ವರಿ ನಗರ ವ್ಯಾಪ್ತಿಯಲ್ಲಿ ಈತನ ಹಾವಳಿ ಹೆಚ್ಚಾಗಿದ್ದು, ನಿವಾಸಿಗಳು ತಮ್ಮ ಶೂಗಳನ್ನು ಹೊರಗೆ ಬಿಡಲು ಯೋಚಿಸುವಂತಾಗಿದೆ.
ಕಳ್ಳನ ಪತ್ತೆಗೆ ಪೊಲೀಸರ ಬಲೆ
ಸದ್ಯ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಅನ್ನಪೂರ್ಣೇಶ್ವರಿ ನಗರ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಮಂಕಿ ಕ್ಯಾಪ್ ಧರಿಸಿರುವುದರಿಂದ ಈತನ ಮುಖ ಸ್ಪಷ್ಟವಾಗಿ ಕಾಣುತ್ತಿಲ್ಲವಾದರೂ, ದೇಹದ ಚಲನವಲನದ ಆಧಾರದ ಮೇಲೆ ಹಳೆಯ ಕಳ್ಳರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ